Saturday, November 3, 2007

ನಿನ್ನ ನೆನಪಿನ ಹುಣ್ಣಿಮೆ...


ನಿನ್ನೆ ಹುಣ್ಣಿಮೆ
ಮಾಸಕ್ಕೊಮ್ಮೆ ಎಂದಲ್ಲ
ಅಂದೂ ಹುಣ್ಣಿಮೆ
ಅದಂತೂ ಕೇವಲ ಸಂಯೋಗ

ನಿನ್ನೆ ನಾನೂ ಇದ್ದೆ,ನೀನೂ
ಆದರೆ ಬಳಿಯಲ್ಲಲ್ಲವಲ್ಲ
ನನ್ನ ಜತೆ ನೀನಿದ್ದೆ ಪ್ರತಿಕ್ಷಣವೂ
ನೆನಪುಗಳ ಜತೆ ಕಚಗುಳಿಯಿಡುತ್ತಾ

ಕ್ಷೀರ ಪಥದಂತೆ ಬೆಳದಿಂಗಳು
ಕಂಡದ್ದು ನಿನ್ನ ಸೀರೆ ಸೆರಗು
ಮುಂಗುರುಳ ಹೊರಳಿಸುವ ತಂಗಾಳಿ
ನಿನ್ನೆಯೂ ನಿನ್ನ ಕೇಳಿ ಹೋದ

ಶಶಿಯೂ ನೀ ಬಾರದ್ದ ಕಂಡು
ಮುನಿಸಿ ಹೋದ ಮುಖ ಬಾಡಿಸಿ
ಎಲ್ಲಯ್ಯ ನಿನ್ನವಳು ಎಂದವನು
ನುಗ್ಗಿದ್ದು ಮೋಡಗಳ ಮರೆಗೆ

ಹೇ ನಿನ್ನದೇ ಮುಂಗುರುಳು..ಭ್ರಾಂತಿ
ನೆರಳು,ಹಸಿರು ಹುಲ್ಲಿನದು ಕಂಡದ್ದು ಕಪ್ಪು
ಪ್ರತಿಯೊಂದು ಎಲೆ ಹೊಳೆದಾಗ
ನಿನ್ನದ್ದೇ ಮುಖ ಕಂಡದ್ದು ನನಗೆ ಆಹ

ಗೆಜ್ಜೆ ಶಬ್ದವೇ ಕಿವಿಯಲ್ಲಿ ಕಂಪಿಸಿದ್ದು
ಎಲ್ಲಿಂದ ಗಜ್ಜೆ ಹಸಿರು ಮಿಡತೆ ಮೀಸೆ ಕುಣಿಸಿತ್ತು
ಮೇಘ ಕಿವಿ ಹರಿವಂತೆ ಕೂಗಿದ್ದನಂತೆ,ನನಗೆ ಕೇಳಿರಲಿಲ್ಲ
ನಾನಿದ್ದೆನಲ್ಲ ನಿನ್ನ ನೆನಪ ಹೂ ರಾಶಿಯೊಳಗೆ

ತಂಗಾಳಿ ಸೋಕಿದರೆ ನಿನ್ನದೇ ಸ್ಪರ್ಶ
ಸಾಕು ಆತ್ಮಕ್ಕೆ ಏನಿಲ್ಲ ನಿನಗಿಂತ ಮೇಲಿನದು
ನಿನ್ನ ಅನುಭೂತಿ ಎಲ್ಲೆಲ್ಲೂ ನಿನ್ನ
ಪ್ರೀತಿಯ ಕಂಪು ಇಬ್ಬನಿಯ ತಂಪು

ನನ್ನ ಉಸಿರಿನ ವೇಗ ಅದಕ್ಕೂ ನಿನ್ನ ನೆನಪು
ನಿನ್ನ ಉಸಿರನ್ನೇ ಹುಡುಕುತ್ತಿತ್ತು
ಸಿಗಲಿಲ್ಲವಂತೆ ಅದಕ್ಕೂ
ಆಮೆಲೇನು ದೊಡ್ಡದೊಂದು ನಿಟ್ಟುಸಿರು

ಧೋ ಎಂದು ಸುರಿಯಿತು
ನಿನ್ನ ನೆನಹುಗಳ ಹನಿಮಳೆ
ತೋಯಿಸದೆ ತೋಯಿಸಿತು
ಚಿತ್ತವನ್ನು ಒಂದಿಷ್ಟೂ ಬಿಡದೆ

ನೆನಪಿನಲ್ಲೆ ಹುಡುಕಿತ್ತು ಮನಸ್ಸು ನಿನ್ನ ಇರವನ್ನು
ಹುಡುಕಲಿಲ್ಲ ನೀನೆ ಇದ್ದೆಯಂತೆ ಎಲ್ಲಾ ಕಡೆ
ಕಣಕಣಕು ನಿನ್ನದೇ ನೆನಪಂತೆ
ನಾನು ಹೇಳಿದ್ದಲ್ಲ ನಿಜ ನಂಬೇ !

ಹಾಗೆ ನಿನ್ನೆ ಚಂದ್ರನಿಗೆ ಹುಣ್ಣಿಮೆ
ನನಗೆ ಇಂದೂ ಅದರೆ ಚಂದ್ರನಂತಲ್ಲ
ತಾರೆಗಳ ಲೆಖ್ಖ ಚಂದ್ರನಿಗಾದರೂ ಇದ್ದೀತು
ನೆನಪುಗಳ ಲೆಖ್ಖ ಅಬ್ಬಬ್ಬ ಕಷ್ಟ ಕಷ್ಟ

ಲನಾ ನವೆಂಬರ್ ೩ ೨೦೦೭

1 comment:

ಸುಶ್ರುತ ದೊಡ್ಡೇರಿ said...

ಲನಾ, ನಮಸ್ಕಾರ . ಹೇಗಿದ್ದೀರಿ?

ನಿಮಗೆ ಗೊತ್ತಿರೋ ಹಾಗೆ, ನಾವೆಲ್ಲ ಎಷ್ಟೋ ಕಾಲದಿಂದ ಅಂತರ್ಜಾಲದಲ್ಲಿ ಬರೀತಿದೀವಿ, ಓದ್ತಿದೀವಿ, ಪ್ರತಿಕ್ರಿಯಿಸಿಕೊಳ್ತಿದೀವಿ, ಮೇಲ್-ಸ್ಕ್ರಾಪ್-ಚಾಟ್ ಮಾಡ್ಕೊಳ್ತಿದೀವಿ.. ಆದ್ರೆ ನಮ್ಮಲ್ಲಿ ಬಹಳಷ್ಟು ಜನ ಪರಸ್ಪರ ಪರಿಚಯ ಮಾಡಿಕೊಂಡಿಲ್ಲ, ಮುಖತಃ ಭೇಟಿ ಆಗಿಲ್ಲ. ಇರಾದೆ ಇದ್ರೂ ಅದು ಸಾಧ್ಯ ಆಗಿಲ್ಲ!

ಇಂತಿದ್ದಾಗ, ನವ ಪ್ರಕಾಶನ ಸಂಸ್ಥೆ ’ಪ್ರಣತಿ’, ಅಂತರ್ಜಾಲದಲ್ಲಿ ಕನ್ನಡ ಬಳಸುವ ಮತ್ತು ಓದುವ ಎಲ್ಲರನ್ನು ಒಂದೆಡೆ ಸೇರಿಸುವ ಈ ಕಾರ್ಯಕ್ಕೆ ಮುಂದಾಗಿದೆ. ನಾಡಿದ್ದು ಭಾನುವಾರ ನಾವೆಲ್ಲ ಪರಸ್ಪರ ಭೇಟಿಯಾಗುವ ಅವಕಾಶ ಒದಗಿ ಬಂದಿದೆ.

ಡೇಟು: ೧೬ ಮಾರ್ಚ್ ೨೦೦೮
ಟೈಮು: ಇಳಿಸಂಜೆ ನಾಲ್ಕು
ಪ್ಲೇಸು: ಇಂಡಿಯನ್ ಇನ್‍ಸ್ಟಿಟ್ಯೂಟ್ ಆಫ್ ವರ್ಲ್ಡ್ ಕಲ್ಚರ್‌, ಬಸವನಗುಡಿ, ಬೆಂಗಳೂರು

ಆವತ್ತು ನಮ್ಮೊಂದಿಗೆ, ಕನ್ನಡದ ಮೊದಲ ಅಂತರ್ಜಾಲ ತಾಣದ ರೂವಾರಿ ಡಾ| ಯು.ಬಿ. ಪವನಜ, ’ದಟ್ಸ್ ಕನ್ನಡ’ದ ಸಂಪಾದಕ ಎಸ್.ಕೆ. ಶ್ಯಾಮಸುಂದರ್, ’ಸಂಪದ’ದ ಹರಿಪ್ರಸಾದ್ ನಾಡಿಗ್, ’ಕೆಂಡಸಂಪಿಗೆ’ಯ ಅಬ್ದುಲ್ ರಶೀದ್ ಸಹ ಇರ್ತಾರೆ, ಮಾತಾಡ್ತಾರೆ.

ಎಲ್ಲರೊಂದಿಗೆ ಒಂದು ಸಂಜೆ ಕಳೆಯುವ ಖುಶಿಗೆ ನೀವೂ ಪಾಲುದಾರರಾಗಿ ಅಂತ, ’ಪ್ರಣತಿ’ಯ ಪರವಾಗಿ ಪ್ರೀತಿಯಿಂದ ಆಹ್ವಾನಿಸುತ್ತಿದ್ದೇನೆ. ಈ ಕಾರ್ಯಕ್ರಮದ ಬಗ್ಗೆ ನಿಮ್ಮ ಸ್ನೇಹಿತರಿಗೂ ತಿಳಿಸಿ. ಅವರನ್ನೂ ಕರೆದುಕೊಂಡು ಬನ್ನಿ.

ಅಲ್ಲಿ ಸಿಗೋಣ,
ಇಂತಿ,

ಸುಶ್ರುತ ದೊಡ್ಡೇರಿ

ನಿಮ್ಮ ಅಭಿಪ್ರಾಯ