Thursday, April 10, 2014

ತೆಂಕುತಿಟ್ಟು ಯಕ್ಷಗಾನದಲ್ಲಿ ನಡೆಯುತ್ತಿರುವ ಬದಲಾವಣೆಗಳ ಬಗ್ಗೆ ಒಂದು ಅನಿಸಿಕೆ !


ಯಕ್ಷಗಾನ ಮೂಲತಃ ಜನಪದ ಕಲೆಯೇ ಆಗಿದ್ದರೂ ಸಾಗುತ್ತಾ ಸಾಗುತ್ತಾ ಕಾಲ ಕಳೆದಂತೆ ಹಲವಾರು
ಬೆಳವಣಿಗೆಗಳು ಮತ್ತು ಬದಲಾವಣೆಗಳು ನಡೆದು ಆವಿಷ್ಕಾರಗಳು ಉಂಟಾಗಿವೆ. ಇತ್ತೀಚೆಗೆ ಯಕ್ಷಗಾನಕ್ಕೆ ಶಾಸ್ತ್ರೀಯ ಕಲೆಯ ಸ್ಥಾನಮಾನ ನೀಡಬೇಕೆಂದು ಹಲವಾರು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ ಎನ್ನುವುದು ನನಗೆ ತಿಳಿದ ವಿಚಾರ. ಯಕ್ಷಗಾನದಲ್ಲಿ ಮೇಲ್ನೋಟಕ್ಕೆ ಕಾಣುವಂತಹ ಹಲವಾರು ಅಂಶಗಳನ್ನು ನಾವು ಗಮನಿಸಿದಾಗ ಯಕ್ಷಗಾನಕ್ಕೆ ಒಂದು ಅನಿಶ್ಚಿತವಾದಂತಹ ಚೌಕಟ್ಟಂತೂ ಖಂಡಿತಾ ಇದೆ ಎಂಬುದನ್ನು ತಿಳಿಯಬಹುದು, ಯಾಕೆಂದರೆ ಯಕ್ಷಗಾನೀಯ ಮತ್ತು ನಾಟಕೀಯ ಎನ್ನುವಂತಹಾ ವಿಭಾಗ ಮಾಡಲು ಸಾಧ್ಯವಿದ್ದಲ್ಲಿ, ಅದು ಯಕ್ಷಗಾನದ್ದಲ್ಲ ಎನ್ನುವಾಗ ಯಕ್ಷಗಾನದ್ದು ಇನ್ನೊಂದಿದೆ ಎಂಬ ಅರ್ಥವಲ್ಲವೇ ?. ಹಾಗಿದ್ದಲಿ ಅದು ಹೇಗೆ ಎಂಬುದನ್ನು ಬಲ್ಲವರಿಂದ ತಿಳಿದು ಹೀಗಿದ್ದಿರಬಹುದು ಎಂಬ ಊಹೆಯನ್ನಂತೂ ಮಾಡಬಹುದು. ರಾಜವೇಷವನ್ನೇ ನಾವು ಮಾದರಿಯನ್ನಾಗಿ ಇಟ್ಟುಕೊಂಡೆವು ಎಂದಾದಲ್ಲಿ ಆ ವೇಷದ ಆಯವನ್ನು ಗಮನಿಸಿದಾಗ ಯಕ್ಷಗಾನೀಯವಾದ ವೇಷ ಹೀಗಿರಬೇಕು ಎಂಬಂತೆ ಊಹಿಸಬಹುದು. ಇತರ ವೇಷಗಳನ್ನು ಅದೇ ವೇಷದ ಮಾದರಿಯಲ್ಲಿ ಸಿದ್ಧಪಡಿಸಬಹುದು, ಇತರ ವೇಷಗಳ ಸ್ವರೂಪವನ್ನು ಊಹಿಸುವಲ್ಲಿ ಈ ಮಾದರಿ ಸಹಾಯಕವಾದೀತು. ವೇಷದ ಮುಖವರ್ಣಿಕೆ, ಆಭರಣ, ದಗಲೆಗಳು ಇತ್ಯಾದಿಗಳ ವಿವರವನ್ನು ಪಕ್ಕಕ್ಕಿಡೋಣ. ಪೂರ್ವರಂಗ ಯಕ್ಷಗಾನದ ಪಾಠಶಾಲೆ ಎನ್ನುವುದನ್ನು ಸರ್ವರೂ ಅಂಗೀಕರಿಸತಕ್ಕಂತಹಾ ವಿಚಾರ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ಯಕ್ಷಗಾನದ ಚೌಕಟ್ಟನ್ನು ನಿರ್ಮಿಸುವುದು ಹೇಗೆ ಎಂಬ ಪ್ರಶ್ನೆಗೆ ಪೂರ್ವರಂಗವೇ ಉತ್ತರ ಕೊಡಬಲ್ಲದು ಅನ್ನಿಸುತ್ತದೆ.
ಪೂರ್ವರಂಗದಲ್ಲಿ ನಾನಾ ವೇಶಗಳ ಮಾದರಿಗಳು ಪ್ರಸ್ತುತವಾಗುವುದನ್ನು ಗಮನಿಸಬಹುದು. ಕ್ಲಾವಿದನೋರ್ವ ಕೋಡಂಗಿ ಪಾತ್ರದಿಂದ ತೊಡಗಿ ಬಣ್ಣದ ವೇಶದವರೆಗೆ ನಾನಾ ಹಂತಗಳಲ್ಲಿ ಬೆಳೆಯುತ್ತಾನೆ. ಹಿಮ್ಮೇಳ ವಾದಕರಿಗೂ ಸಹ ಪೂರ್ವರಂಗವನ್ನೇ ಮಾದರಿಯನ್ನಾಗಿಸಿಕೊಂಡು ಚೌಕಟ್ಟನ್ನು ನಿರ್ಮಿಸಬಹುದು, ನಾನು ಉಲ್ಲೇಖಿಸುವ ಚೌಕಟ್ಟು ಎಂದರೆ ಯಕ್ಷಗಾನವನ್ನು ಯಕ್ಷಗಾನವೇ ಆಗಿ ಉಳಿಸಲು ಮಾಡಬೇಕಾದಂತಹ ಪ್ರಯತ್ನ ಎಂದರ್ಥ. ಇನ್ನು ಕೆಲವೊಮ್ಮೆ ರಂಗದಲ್ಲಿ ನಡೆಯುವ ಪ್ರಕ್ರಿಯೆಗಳು ಪ್ರೇಕ್ಷಕನಿಗೆ ಬೇಸರವನ್ನು ತರಿಸಿದಲ್ಲಿ ಕಥೆಯಲ್ಲಿ ಪ್ರೇಕ್ಷಕನ ಮನಸ್ಸನ್ನು ಹಿದಿದಿಟ್ಟುಕೊಳ್ಳುವಲ್ಲಿ ವಿಫಲವಾದಾಗ ಆ ಸಂಗತಿಗಳನ್ನು ವಿಮರ್ಶಿಸಿ ಸರಿಪಡಿಸಿಕೊಳ್ಳದಿದ್ದಲ್ಲಿ ಆ ಸಂಗತಿಗಳು ಮುಂದುವರಿದಲ್ಲಿ ರಂಗಭೂಮಿಗೆ(ಯಕ್ಷಗಾನದ) ಉಂಟಾಗಬಹುದಾದ ಹಿನ್ನಡೆಗಳ ಬಗ್ಗೆ ಕಲಾವಿದ ಯೋಚಿಸಬೇಕಾಗುತ್ತದೆ.

ಈ ಸಂದರ್ಭದಲ್ಲಿ ಇತ್ತೀಚೆಗೆ ನಾನು ನೋಡಿದ ಪ್ರಸಂಗದ ಬಳಿಕ ಮನಸ್ಸಿನಲ್ಲಿ ಮೂಡಿದಕೆಲವು ಸಂಶಯಗಳನ್ನು ಉಲ್ಲೇಖಿಸಬಯಸುತ್ತೇನೆ
೧. ಯಕ್ಷಗಾನ ಅನೇಕ ಪದ್ಯಗಳು ಕೇವಲ ಕೆಲವು ಒಂದೆರಡು ಸಾಲಿನ ಪದ್ಯಗಳಾಗಿರುತ್ತವೆ ಅವುಗಳನ್ನು ಎರಡಕ್ಕಿಂತ ಹೆಚ್ಚು ಬಾರಿ ಪುನರಾವರ್ತಿಸಬೇಕಾದ ಅವಶ್ಯಕತೆ ಇದೆಯೇ ?
2. ತೆಂಕುತಿಟ್ಟಿ ಗೆ ಬಡಗುತಿಟ್ಟಿನಿಂದ ಹರಿದುಬಂದಿರುವ ಚಾಲೂ ಕುಣಿತದ ವಿಪರೀತ ಪ್ರಯೋಗ ಯಾಕೋ ತೀರಾ ಅತಿಯಾಗಿಯೇ ಬಳಕೆಯಾಗುತ್ತಿದೆ ಅನ್ನಿಸಿತು, ಒಂದು ಸರಳ ಪದ್ಯವನ್ನು ೧೫ ನಿಮಿಷಗಳ ವರೆಗೂ ನರ್ತಿಸುವಂತಹಾ ಅವಶ್ಯಕತೆ ಇದೆಯೇ ? ಯಕ್ಷಗಾನದಲ್ಲಿ ಕೇವಲ ನೃತ್ಯಮಾತ್ರ ಮಾಧ್ಯಮವಲ್ಲ ಮಾತುಗಾರಿಕೆಯೂ ಭಾವಪ್ರಕಟಣೆಗೆ,ಕಥಾಸಂವಹನಕ್ಕೆ ಒಂದು ಪ್ರಧಾನ ಮಾಧ್ಯಮವಾಗಿ ಬಳಕೆಯಾಗುತ್ತದೆಯಾದ್ದರಿಂದ, ಮಾತುಗಾರಿಕೆಯನ್ನು ತೀರಾ ಕಡೆಗಣಿಸಿ ಕೇವಲ ನೃತ್ಯಕ್ಕೇ ಪ್ರಾಧಾನ್ಯತೆ ಕೊಡುವಂತಹಾ ಕ್ರಮ ಎಷ್ಟರಮಟ್ಟಿಗೆ ಸರಿ ಮತ್ತು ಸ್ವೀಕಾರಾರ್ಹ ? ತೆಂಕುತಿಟ್ಟಿನ ಯಕ್ಷಗಾನದಲ್ಲಿ ನನಗೆ ತಿಳಿದಂತೆ ನೃತ್ಯಕ್ರಮಗಳು ಅಷ್ಟೇನೂ ವ್ಯಾಪಕವಾಗಿ ಬಿನ್ನವಾಗಿಲ್ಲ ಮತ್ತು ನಿಖರವಾಗಿ ಗುರುತಿಸಲ್ಪಡುವಂತಹ ವೈವಿಧ್ಯತೆಗಳಿಲ್ಲ. ಕೆಲವು ಮೂಲ ಹೆಜ್ಜೆಗಳನ್ನೇ ಎಲ್ಲಾ ತಾಳಗಳಿಗೆ ಅಳವಡಿಸಿ ನರ್ತಿಸಲಾಗುತ್ತದೆ. ಪದ್ಯಾಭಿನಯದ ಜತೆಗೆ ನರ್ತನ ಮಿಳಿತವಾದಾಗ ಆ ಸಂದರ್ಭದ ಭಾವ ಪ್ರಕಟೀಕರಣ ಮತ್ತು ಕಥಾ ಪ್ರಸಾರವೇ ಬಹುಮುಖ್ಯವಾಗುತ್ತದೆ ಮತ್ತು ಮನರಂಜನೆ ಮತ್ತಿನ ಸ್ಥಾನದಲ್ಲಿ ನಿಲ್ಲುತ್ತದೆ, ನೃತ್ಯದ ಸೀಮಿತ ವ್ಯಾಪ್ತಿ ಕೆಲವೊಮ್ಮೆ ನಮ್ಮ ಗಮನಕ್ಕೆ ಬಂದರೂ ಈ ಕೊರತೆಯನ್ನು ಉಳಿದೆರಡು ಅಂಶಗಳು ಸರಿದೂಗಿಸುತ್ತದೆ. ನೃತ್ಯವನ್ನೇ ಪ್ರಧಾನವಾಗಿಸಿ ಪರಿಧಿಯನ್ನು ಮೀರಿ ನೃತ್ಯದ ಪುನರಾವರ್ತನೆ ನಡೆದಾಗ ಪ್ರೇಕ್ಷಕನ ಸಹನೆಯೂ ಕೆಡಲಾರದೇ ? ನೃತ್ಯಕ್ಕೂ, ಪದ್ಯಕ್ಕೂ, ಕಥೆಗೂ ಸಂಬಂಧವೇ ಕಡಿದು ಹೋಗಿ ಕಥೆಯ ಚಲನೆಗೆ ಭಂಗವುಂಟಾಗುವುದಿಲ್ಲವೇ. ಸಾಮಾನ್ಯ ಪ್ರೇಕ್ಷಕನಾದ ನನ್ನಿಂದಲೇ ಇಂತಹಾ ಯೋಚನೆಗಳು ಹರಿದು ಬರುತ್ತಿವೆ ಎಂದಾದರೆ ಬಹುಷಹ ಕಲಾವಿದರು ಈ ನಿಟ್ಟಿನಲ್ಲಿ ತಮ್ಮನ್ನು ತಾವು ಒರೆಗೆ ಹಚ್ಚಿಕೊಳ್ಳುವುದು ಉಚಿತವಲ್ಲವೇ ?. ಬಡಗುತಿಟ್ಟಿನಿಂದ ತೆಂಕುತಿಟ್ಟಿಗೆ ಬಂದಿರುವ ಪಾತ್ರಧಾರಿಗಳೂ ತೆಂಕಿನ ಸೂಕ್ಷ್ಮಗಳನ್ನು ಅರಿತುಕೊಂಡು ಈ ನಿಟ್ಟಿನಲ್ಲಿ ಯೋಚಿಸಬೇಕೆನಿಸುತ್ತದೆ.
3. ಇನ್ನು ಸ್ತ್ರೀವೇಶಗಳ ಸೌಮ್ಯ ಪದ್ಯಗಳಿಗೂ ಸಹ ಚೆಂಡೆ ವಾದನ ಬೇಕೆ ? ಮದ್ದಳೆಯ ಸೂಕ್ಷ್ಮವಾದ ನುಡಿತಗಳನ್ನು ಚೆಂಡೆಯ ಜತೆಗೆ ಬಾರಿಸುವಾಗ ಕೇಳುವುದಿಲ್ಲ ಆದ್ದರಿಂದ ಚೆಂಡೆಯ ಜತೆ ಮದ್ದಲೆಯನ್ನು ಒತ್ತುವಾದ್ಯವಾಗಿ ಬಳಸಲಾಗುತ್ತದೆ,ಚೆಂಡೆಯ ಜತೆಗೆ ಕೇವಲ ಇಡಿ ಪೆಟ್ಟುಗಳನ್ನು ಮಾತ್ರ ಬಾರಿಸುವ ಕ್ರಮ. ಚೆಂಡೆ ವಾದಕರೂ ಮದ್ದಳೆ ವಾದಕರೂ ಪರಸ್ಪರ ಹೊಂದಾಣಿಕೆಯಿಂದ ಏಕಮನಸ್ಕರಾದಾಗ ಹೊಮ್ಮಬಹುದಾದ ಪ್ರದರ್ಶನ ಅತ್ಯುತ್ಕೃಷ್ಟವಾಗಿರುತ್ತದೆ. ಭಾಗವತರ ಪದ್ಯವನ್ನು ಮತ್ತಷ್ಟು ಅಲಂಕರಿಸಬೇಕಾದದ್ದು ಚೆಂಡೆ ಮದ್ದಳೆ ವಾದಕರ ಧರ್ಮ ಮತ್ತು ಅದರಿಂದಾಗಿ ಪ್ರದರ್ಶನಕ್ಕೆ ಮತ್ತಷ್ಟು ಕಳೆ ಕಟ್ಟುತ್ತದೆ. ಹಳೆಯ ಧ್ವನಿಸುರುಳಿಗಳನ್ನು ಆಲಿಸಿದಾಗ ಈ ಬಗ್ಗೆ ಪ್ರಮಾಣಗಳು ಗೋಚರಿಸುತ್ತವೆ, ಕೆಲವೊಮ್ಮೆ ಚೆಂಡೆಯ ಇರುವಿಕೆಯೇ ನಮಗೆ ಗೊತ್ತಾಗದಂತಿರುತ್ತದೆ ಕೇವಲ ಬಿಡಿತ ಮುಕ್ತಾಯಗಳ ಸಂದರ್ಭದಲ್ಲಿ ಭೋರ್ಗರೆದು ಧುಮ್ಮಿಕ್ಕುವ  ಜಲಪಾತದ ಗಂಭೀರತೆಯಂತೆ ಚೆಂಡೆಯ ನಾದ ಮೆರೆಯುತ್ತದೆ. ಮೇಳದ ಮದ್ದಳೆವಾದಕನಿಗೂ, ಮದ್ದಳೆಯ ನಾದವನ್ನು ಆಲಿಸಲು ಕುತೂಹಲಿಗರಾಗಿರುವ ಬೆರಳೆಣಿಕೆಯ ಪ್ರೇಕ್ಷಕರ ಮನತಣಿಯುವುದಕ್ಕೋಸ್ಕರವಾದರೂ ಸ್ತ್ರೀಪಾತ್ರಗಳ ಪದ್ಯಕ್ಕೆ, ಕರುಣಾರಸದ ಪದ್ಯಗಳಿಗೆ ಮದ್ದಳೆ ಮಾತ್ರ ಬಾರಿಸುವತ್ತ ಗಮನ ಹರಿಸಬೇಕು.

4. ಇನ್ನು ನಾಟಕೀಯ ವೇಶಗಳ ಬಗ್ಗೆ ಹಲವಾರು ವಿಚಾರಗೋಷ್ಟಿಗಳು ಕಮ್ಮಟಗಳು ನಡೆದಿವೆ. ಕಲಾವಿದರು ನಾಟಕೀಯ ವೇಶಗಳನ್ನು ಸಾಧ್ಯವಾದಷ್ಟು ಕಡಿಮೆಗೊಳಿಸಿದಲ್ಲಿ ಯಕ್ಷಗಾನದ ಸ್ವರೂಪ ಉಳಿದುಕೊಳ್ಳಬಹುದೇನೋ?

ಯಕ್ಷಗಾನಕ್ಕೆ ಬೇಕಾಗಿರುವುದು ಯಕ್ಷಗಾನದ ಚೌಕಟ್ಟಿನಲ್ಲಿದ್ದುಕೊಂಡು ಸೃಜನಶೀಲತೆ. ಒಂದು ಪಾತ್ರವನ್ನು ಹಲವು ರೀತಿಯಲ್ಲಿ ಪ್ರಸ್ತುತ ಪಡಿಸುವತ್ತ ಕಲಾವಿದರು ಗಮನಹರಿಸಬೇಕು. ಆ ನಿಟ್ಟಿನಲ್ಲಿ ಹಿರಿಯರ ಆಶೀರ್ವಾದ, ಮಾರ್ಗದರ್ಶನಗಳು ಸದಾ ಅಗತ್ಯ. ಸೃಜನಶೀಲತೆ ಸಾಧ್ಯವಿಲ್ಲವಾದಲ್ಲಿ ಕಲಾವಿದ ರಂಗದಲ್ಲಿ ಸಮಯ ವಿನಿಯೋಗ ಮಾಡದೇ ಕಥೆಯನ್ನು ಮುಂದುವರಿಸುವತ್ತ ಗಮನ ಹರಿಸಿದರೂ ಪ್ರದರ್ಶನ ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ. ಇದಂತೂ ಖಂಡಿತಾ ಸಾಧ್ಯವಿದೆ, ಕಲಾವಿದ ಪಾತ್ರವನ್ನು ಮೆರೆಸಬೇಕೇ ಹೊರತು ತನ್ನನ್ನು ತಾನು ಮೆರೆಸಬಾರದು , ಪಾತ್ರ ಮೆರೆದರೆ ಕಲಾವಿದನೇ ಮೆರೆದಂತೆ ಮತ್ತು ಅಂತಹ ಹಲವಾರು ಕಲಾವಿದರು ಶಾಶ್ವತವಾಗಿ ಜನಮಾನಸದಲ್ಲಿ ನೆಲೆಯಾಗಿಲ್ಲವೇ ? ಶಾಲಾ ವಾರ್ಷಿಕೋತ್ಸವಕ್ಕೆಂದು ಯಕ್ಷಗಾನದ ಬಗ್ಗೆ ಆಗಷ್ಟೇ ಅರಿತುಕೊಳ್ಳುತ್ತಿರುವ ಪುಟಾಣಿಗಳೂ ಕೆಲವೊಮ್ಮೆ ಅದ್ಭುತವಾಗಿ ಪ್ರದರ್ಶನಗಳನ್ನು ಕೊಡುವುದನ್ನು ನಾವು ಗಮನಿಸಬಹುದು. ಕಂಠಸ್ಥಮಾಡಿ ಒಪ್ಪಿಸುವ ಸಂಭಾಷಣೆಗಳೇ ಆದರೂ ಕಲಾವಿದ ಪಾತ್ರವಾಗಿ ಮಾತನಾಡಿದರೆ, ಸಂಭಾಷಣೆಯನ್ನು ಸೀಮಿತವಾಗಿರಿಸಿ ಪರಿಣಾಮಕಾರಿಯಾಗಿ ಉಪಯೋಗಿಸಿದಲ್ಲಿ ಪ್ರೇಕ್ಷಕನ ಮನಸ್ಸು ಕಥೆಯಲ್ಲಿ ನೆಡುವುದರಲ್ಲಿ ಸಂಶಯವಿಲ್ಲ. 

Video: Madhusoodana Alewooraya
ಬಲಿಪ ಭಾಗವತರ ಮಾತುಗಳನ್ನು ಕೇಳಿದಲ್ಲಿ ನಾನು ಹೆಸರಿಸಿದ ಅಂಶಗಳಿಗೆ ಸಾಮೀಪ್ಯತೆಯನ್ನು ಕಾಣಬಹುದು...
ಯಕ್ಷಗಾನಕ್ಕೆ ಬೇಕಾಗಿರುವುದು ಸನ್ನಿವೇಶ ನಿರ್ಮಾಣದ ಸೂಕ್ಷ್ಮಗಳ ತಿಳುವಳಿಗೆ ಮತ್ತು ಅಗಾಧವಾದ ಕಲ್ಪನಾ ಸಾಮರ್ಥ್ಯ. ಯಕ್ಷಗಾನ ಇತರ ಕಲೆಗಳ ಮಟ್ಟಕ್ಕೆ ಬೆಳೆದು ನಿಲ್ಲಲಿ ಎನ್ನುವ ಹಾರೈಕೆಯೊಂದಿಗೆ ಈ ಬರಹ, ಇದರಿಂದಾಗಿ ಯಾರ ಮನಸಿಗಾದರೂ ನೋವಾದಲ್ಲಿ ಕ್ಷಮೆಯಿರಲಿ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಆದ್ದರಿಂದ ಇದನ್ನು ಒಪ್ಪುವ , ಬಿಡುವ ನಿರ್ಧಾರ ಓದುಗನಿಗೆ ಸೇರಿದ್ದು.

ನಿಮ್ಮ ಅಭಿಪ್ರಾಯ