ನಮ್ಮ ಕಂಪೆನಿಯಲ್ಲಿ 2012 ರ ನವೆಂಬರ್ ಡಿಸೆಂಬರ್ ತಿಂಗಳಿನಲ್ಲಿ ಐಪಿ ಎಲ್ ಮಾದರಿಯ ಕ್ರಿಕೆಟ್ ಪಂದ್ಯಾವಳಿಯನ್ನು ಅಯೋಜಿಸಲಾಗಿತ್ತು. ಆಟಗಾರರ ಕೌಶಲದ ಅಳತೆಯ ಮೂಲಕ ಎ,ಬಿ ಮತ್ತು ಸಿ ವಿಭಾಗಗಳನ್ನು ರಚಿಸಿ, ವಿವಿಧ ತಂಡಗಳ ಮಾಲಕರನ್ನು ನಿರ್ಧರಿಸಿ ಅವರು ಆಟಗಾರರನ್ನು ಹರಾಜಿನಲ್ಲಿ ಕೊಳ್ಳುವ ಮೂಲಕ ತಂಡಗಳನ್ನು ರಚಿಸಿದ್ದರು.
ನಮ್ಮ ತಂಡ ಟೈಟನ್ಸ್, ಪಂದ್ಯಾವಳಿಯ ಪ್ರಾರಂಭಕ್ಕೆ ಮೊದಲು ಒಂದು ತಿಂಗಳಿರುವಂತೆಯೇ ನಮ್ಮ ಅಭ್ಯಾಸ ಪ್ರಾರಂಭವಾಗಿತ್ತು , ನನ್ನ ಕಛೇರಿಯ ಹಿಂಬದಿಯಲ್ಲಿ ಯಾವುದೋ ರಿಯಲ್ ಎಸ್ಟೇಟ್ ಏಜೆನ್ಸಿ ಖರೀದಿಸಿ, ತಡೆಗೋಡೆ ಕಟ್ಟಿ ಇರಿಸಿದ್ದ ಎಕರೆಗಟ್ಟಲೆ ಖಾಲಿಜಾಗದಲ್ಲೇ ನಮ್ಮ ಅಭ್ಯಾಸ. ದಿನಂಪ್ರತಿ ಬೆಳಗ್ಗೆ ೭ರಿಂದ ಒಂಭತ್ತರವರೆಗೆ ನಮ್ಮ ಕಫ್ತಾನ ಪ್ರದೀಪ್ ನೇತೃತ್ವದಲ್ಲಿ ಅವಿರತ ಶ್ರಮವಹಿಸಿ ನಮ್ಮನ್ನು ನಾವು ಸಿದ್ಧಗೊಳಿಸಿದ್ದೆವು. ನಮ್ಮ ಕಠಿಣ ಪರಿಶ್ರಮದ ಹೊರತಾಗಿಯೂ ನಾವು ಮೂರರಲ್ಲಿ ಒಂದೇ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದೆವು, ಪರವಾಗಿಲ್ಲ ಬಿಡಿ, ಈಗ ಕಿಟ್ಟಿಗೂ ಕ್ರಿಕೆಟ್ ಅಭ್ಯಾಸಕ್ಕೂ ಏನು ಸಂಬಂಧವಪ್ಪಾ ಎನ್ನುವ ಪ್ರಶ್ನೆ ನಿಮ್ಮ ತಲೆಯಲ್ಲಿ ಹೊಕ್ಕಿರಬಹುದು, ಹೇಳುತ್ತೇನೆ ಕೇಳಿ.
ಒಂದು ದಿನ ಅಭ್ಯಾಸ ಮುಗಿಸಿ ನಾನು ಮನೆಗೆ ಹಿಂದಿರುಗುತ್ತಿದ್ದಾಗ, ಪುಟ್ಟ ಕಿಟ್ಟಿ ನನ್ನ ಕಣ್ಣಿಗೆ ಕಾಣಿಸಿದ್ದ, ನಮ್ಮ ಕಂಪೆನಿಯಿಂದ ಬಂದು ಶಾಂತಿಪುರದ ರಸ್ತೆಗೆ ತಿರುಗುವ ಮೂಲೆಯ ಸೈಟ್ ನಲ್ಲಿ ಗುಜರಿ ಅಂಗಡಿಯೊಂದಿದೆ, ಆ ಗುಜರಿ ಅಂಗಡಿಯ ಮುಂದೆ ಒಂದು ನಾಯಿಯನ್ನು ಸದಾ ಕಟ್ಟಿ ಹಾಕಲಾಗಿರುತ್ತದೆ, ರಸ್ತೆಯಲ್ಲಿ ಯಾರು ಏನೇ ಮಾಡಿದರೂ ಆ ನಾಯಿಗೆ ಸಂಬಂಧವೇ ಇಲ್ಲವೆಂಬಂತೆ ಸುಮ್ಮನಿದ್ದು ಬಿಡುತ್ತದೆ, ತನ್ನ ಜಾತಿಬಾಂಧವರನ್ನು ಕಂಡರೆ ಮಾತ್ರ ಅದಕ್ಕೆ ತನ್ನ ಜಾತಿಯ ನೆನಪಾಗಿ ತುಸು ಬೊಗಳಿ ಸುಮ್ಮನಾಗುತ್ತದೆ, ಯಾವತ್ತಿನಂತೆ ಇಂದೂ ನಾಯಿಯ ಇರುವಿಕೆಯನ್ನು ಖಚಿತಪಡಿಸಿ ನನ್ನ ಬೈಕ್ ನ್ನು ಎಡಕ್ಕೆ ತಿರುಗಿಸಿ ಸ್ವಲ್ಪ ಮುಂದೆ ಬರುವಷ್ಟರಲ್ಲಿ ಬೆಕ್ಕಿನ ಮರಿಯ ಕೂಗು ನನ್ನ ಕಿವಿಗಳನ್ನು ಅಪ್ಪಳಿಸಿದ್ದೇ ನನ್ನ ಅಂತರಾತ್ಮ ಜಾಗೃತವಾಗಿತ್ತು. ಕಣ್ಣುಗಳು ಸುತ್ತ ಮುತ್ತ ಹುಡುಕತೊಡಗಿದವು. ಬೈಕ್ ನಿಲ್ಲಿಸಿ ಶಬ್ದ ಯಾವ ಕಡೆಯಿಂದ ಬರುತ್ತಿದೆ ಎಂದು ಗಮನಿಸಿದೆ, ಬೆಳಗಿನ ಜಾವ ೯, ಬೆರಳೆಣಿಕೆಯಷ್ಟು ಮಂದಿ ರಸ್ತೆಯಲ್ಲಿ ನಡೆದಾಡುತ್ತಿದ್ದರು. ೨ ಮುದ್ದಾದ ಬೆಕ್ಕಿನ ಮರಿಗಳು ರಸ್ತೆಯ ಪಕ್ಕದ ಲಂಟಾನ ಪೊದೆಯೊಳಗಿಂದ ಕುಪ್ಪಳಿಸಿ ಈಚೆಗೆ ಬಂದವು, ಎರಡರ ಮೈಮೇಲೆಯೂ ಚಿರತೆಯ ಮರಿಗಳಂತೆಯೇ ಚುಕ್ಕಿಗಳು, ಸಹಜಾತರೆಂಬುದರಲ್ಲಿ ಸಂದೇಹವಿಲ್ಲ. ಬೈಕ್ ನ್ನು ಅದರ ಕಾಲಮೇಲೆ(ಸ್ಟಾಂಡ್) ನಿಲ್ಲಿಸಿ ಮೆಲ್ಲನೆ ಮರಿಗಳ ಹತ್ತಿರ ಬಂದೆ, ಅವುಗಳನ್ನು ಹಿಡಿಯುವ ಪ್ರಯತ್ನ ಮಾಡುತ್ತಿದ್ದಂತೆಯೇ ಎರಡೂ ಮತ್ತೆ ಪೊದೆಯೊಳಕ್ಕೆ ಸೇರಿಕೊಂಡವು. ಯಾರಾದರೂ ನನ್ನನ್ನು ಗಮನಿಸುತ್ತಿದ್ದಾರೆಯೇ ಎಂಬ ಪರಿವೆಯೂ ಇಲ್ಲದೆ ಮರಿಗಳು ಪೊದೆಯಿಂದ ಹೊರಬರುವುದನ್ನೇ ಕಾಯುತ್ತಾ ಕುಳಿತೆ. ನಿಸ್ಸಂಶಯವಾಗಿ ಯಾರೋ ಪುಣ್ಯಾತ್ಮರು ತಂದು ಮರಿಗಳನ್ನು ಇಲ್ಲಿ ಬಿಟ್ಟು ಹೋಗಿದ್ದಾರೆ, ಬೀದಿ ನಾಯಿಗಳು ಸದಾ ಓಡಾಡುವ ಜಾಗ ಬೇರೆ ಮರಿಗಳನ್ನು ಕಂಡರಂತೂ ಕಥೆ ಮುಗಿದಂತೆಯೇ. ಅಷ್ಟರಲ್ಲಿ ಕಿಟ್ಟಿ ಪೊದೆಯಿಂದ ಹೊರಗೆ ಬಂದ ನನ್ನ ಕೈಯಲ್ಲಿ ಬಂಧಿಯಾಗಿದ್ದ, ಯಾವುದೇ ಪ್ರತಿರೋಧವಿಲ್ಲದೆ(ಕಚ್ಚದೆ,ಪರಚದೆ) ನನಗೆ ಶರಣಾಗಿದ್ದ. ಹಿಡಿದದ್ದಾಯಿತು ಇನ್ನು ಮನೆಗೆ ಕೊಂಡೊಯ್ಯುವುದೆಂತು ನನ್ನ ತಲೆ ಸ್ವಲ್ಪ ಬಿಸಿಯಾಯಿತು. ನನ್ನ ಕ್ಯಾಮರಾ ಖರೀದಿಸಿದಾಗ ಸಿಕ್ಕಿದ್ದ ಚೀಲದಲ್ಲಿ ಕುಡಿಯುವುದಕ್ಕಾಗಿ ನೀರಿನ ಬಾಟಲಿಯನ್ನು ಹಾಕಿ ತಂದಿದ್ದೆ. ಅದೇ ಚೀಲದಲ್ಲಿ ಕಿಟ್ಟಿಯನ್ನು ತುಂಬಿಸಿ ಕೊಂಡೊಯ್ಯುವ ನಿರ್ಧಾರ ಮಾಡಿ ಅವನನ್ನು ಚೀಲದೊಳಗೆ ಕುಳ್ಳಿರಿಸಿದೆ. ಕಿಟ್ಟಿಯ ಕಿರುಚಾಟ ಮುಗಿಲು ಮುಟ್ಟಿತ್ತು, ಅಗಲ ಬಾಯಿಯ ಚೀಲದ ಬಾಯನ್ನು ಒಂದು ಕೈಯಿಂದ ಮುಚ್ಚಿ ಮತ್ತೊಂದು ಕೈಯಲ್ಲಿ ಬೈಕ್ ಚಲಾಯಿಸುತ್ತಾ ಹೊಂಡಗಳನ್ನು ಹಾರಿ,ಕಿಟ್ಟಿಯ ತಲೆ ಹೊರಬರುತ್ತಿದ್ದಂತೆ ಮೆಲ್ಲನೆ ನೋವಾಗದಂತೆ ಒಳಗೆ ತುರುಕುತ್ತಾ, ಹೇಗೋ ಮನೆಗೆ ತಲುಪಿದೆ. ಚೀಲವನ್ನು ಕೆಳಗಿರಿಸುತ್ತಿದ್ದಂತೆಯೇ ಹೊರಬಂದ ಕಿಟ್ಟಿ ಚೀರಾಡುತ್ತಾ ಮನೆಯಿಡೀ ಓಡಾಡ ತೊಡಗಿದ.
ಅಮ್ಮನಿಗೆ ಸಾಕುಪ್ರಾಣಿಗಳೆಂದರೆ ಇಷ್ಟವೇ, ಆದರೆ ಅವು ತನ್ನ ಮೈಮೇಲೆ ಏರಿದರೆ ಮಾತ್ರ ಅಸಹ್ಯ. ಕಿಟ್ಟಿಗೆ ಹಾಲೆರೆದು ತಟ್ಟೆಯ ಬಳಿ ಬಿಡುತ್ತಿದ್ದಂತೆಯೇ ಕ್ಷಣಮಾತ್ರದಲ್ಲಿ ಹಾಲು ಕುಡಿದು ಮತ್ತೆ ಪುನಃ ಮನೆಯೆಲ್ಲಾ ಓಡಾಡತೊಡಗಿದ. ಆತನ ರೋದನ ಮತ್ತೆ ಮುಂದುವರಿದಿತ್ತು. ಸಂಜೆಯಾಗುವಷ್ಟರಲ್ಲಿ ಕಿಟ್ಟಿ ಶಾಂತನಾಗಿ ನಮ್ಮ ಮನೆಯವನಾಗಿಬಿಟ್ಟ.
ಮೊದಮೊದಲು ಕಿಟ್ಟಿ ಗೆ ಶೌಚದ್ದೇ ದೊಡ್ಡ ಸಮಸ್ಯೆಯಾಗಿತ್ತು, ಆತನಿಗೆಂದು ಮರಳಿನ ರಾಶಿಯನ್ನು ತಂದು ಡಿಟಿ ಎಚ್ ನ ಬಾಣಲೆಯಲ್ಲಿ ಹಾಕಿ, ಪ್ರತೀಬಾರಿ ಆತನಿಗೆ ಬಹಿರ್ದೆಸೆಗೆ ಹೋಗಬೇಕಾದಾಗ ಮರಳಿನ ಮೇಲೆ ಬಿಟ್ಟು ಅಭ್ಯಾಸ ಮಾಡಿಸಿದೆವು. ಪದೇ ಪದೇ ತೆರಳಿ ಮರಳೆಲ್ಲಾ ಹಾಳಾದಾಗ ಮತ್ತೆ ಮರಳು ತುಂಬಿಸಿಡುವ ಕೆಲಸ ಬಹಳ ತ್ರಾಸದಾಯಕವಾಗಿದ್ದುದ್ದರಿಂದ ಆತನನ್ನು ಮನೆಯಿಂದ ಹೊರಗೆ ಖಾಲಿ ಜಾಗದಲ್ಲಿ ಬಿಡಲಾರಂಭಿಸಿದೆವು, ನಾವು ಧೈರ್ಯಕ್ಕೆ ಜತೆಗೆ ನಿಂತಲ್ಲಿ, ಮಣ್ಣಿನಲ್ಲಿ ಹೊಂಡತೋಡಿ, ನಾಯಿಗಳ ಓಡಾಟವಿಲ್ಲವೆಂದು ಖಚಿತಪಡಿಸಿ, ದೇಹವನ್ನು ಹಿಗ್ಗಿಸಿ ನಮ್ಮ ಇರುವಿಕೆಯನ್ನು ನಗಣ್ಯವಾಗಿಸಿ ಮುಗಿಸಿ ಹೊಂಡಮುಚ್ಚಿ ಬರುತ್ತಿದ್ದ.ಒಮ್ಮೊಮ್ಮೆ ಬಾತ್ ರೂಮ್ ಒಳಗಡೆ ಮೂಲೆಯಲ್ಲಿ ಮೂತ್ರವಿಸರ್ಜಿಸುತ್ತಿದ್ದ. ಆತನ ಹೊಟ್ಟೆ ಸರಿ ಇಲ್ಲದಿದ್ದಾಗಲೆಲ್ಲ ರಾತ್ರಿವೇಳೆ ನಮ್ಮ ಡೋರ್ ಮ್ಯಾಟ್ ಕೊಳಕಾಗಿರುತ್ತಿತ್ತು , ಕೆಲವೊಮ್ಮೆ ರಾತ್ರಿವೇಳೆ ಡೋರ್ ಮ್ಯಾಟ್ ಗಳನ್ನು ತೆಗೆದಿರಿಸಿದ್ದೂ ಇದೆ. ಅಂತೂ ಇಂತೂ ಕಿಟ್ಟಿ ಕೊನೆಗೂ ದೊಡ್ಡವನಾದ, ಸ್ವಚ್ಛವಾದ ಅಭ್ಯಾಸಗಳನ್ನು ಮೈಗೂಡಿಸಿಕೊಂಡ.
ಕಿಟ್ಟಿ ಸಣ್ಣವನಾಗಿದ್ದಾಗ ತಡೆರಹಿತವಾಗಿ, ಬೆಂಗಳೂರಿನ ವಾಹನ ಸವಾರರು ಹಾರ್ನ್ ಬಾರಿಸಿದಂತೆ ಮೇವ್ ಮೇವ್ ಎಂದು ಕೂಗುತ್ತಿದ್ದ. ಎಷ್ಟು ಹಾಲುಣಿಸಿದರೂ ಭೀಮನ ಹೊಟ್ಟೆಗೆ ಕಾಸಿನ ಮಜ್ಜಿಗೆಯಂತೆ ಭಾಸವಾಗುತ್ತಿತ್ತು. ಕೇವಲ ಹಾಲನ್ನು ಮಾತ್ರ ಕುಡಿಯುತ್ತಿದ್ದ ,ಹಾಲಿನ ಜತೆಗೆ ಬೆರೆಸಿದ ಅನ್ನ ತಟ್ಟೆಯಲ್ಲೇ ಉಳಿದುಬಿಡುತ್ತಿತ್ತು. ಕೆಲವೊಮ್ಮೆ ಯಾಕಪ್ಪಾ ಈರೀತಿ ಅಳುತ್ತಿದ್ದಾನೆ ಎನ್ನಿಸುತ್ತಿತ್ತು. ಮುಗ್ಧವಾಗಿ ನಮ್ಮ ಮುಖವನ್ನೇ ನೋಡಿ ಮೇವ್ ಮೇವ್ ಎಂದು ಕೂಗುತ್ತಿದ್ದ ಕಿಟ್ಟಿಯ ಮುಖ ಸಣ್ಣ ಮಕ್ಕಳಂತೆಯೇ ಕಾಣಿಸುತ್ತಿತ್ತು. ಸಂಜೆಯ ವೇಳೆಯಲ್ಲಿ ಒಮ್ಮೊಮ್ಮೆ ಚೆಂಡಿನ ಜತೆಗೆ ಆಟವಾಡತೊಡಗಿದರೆ ಘಂಟೆಗಟ್ಟಲೆ ಚೆಂಡನ್ನು ಉರುಳಿಸುತ್ತಾ ಅದರ ಜತೆ ಸಣ್ಣ ಮಕ್ಕಳಂತೆಯೇ ಆಟವಾಡುತ್ತಿದ್ದ.
ಬರಬರುತ್ತಾ ಕಿಟ್ಟಿಯ ಸ್ವಭಾವದಲ್ಲಿ ಪರಿವರ್ತನೆ ಕಾಣಲಾರಂಭಿಸಿತು, ಆತನ ಕಿರುಚಾಟ ಕಡಿಮೆಯಾಯಿತು, ಮನೆಯಿಂದ ಹೊರಹೋಗಬೇಕಾಗಿದ್ದಲ್ಲಿ ಬಾಗಿಲ ಬಳಿಗೆ ಬಂದು ಚಿಲಕವನ್ನೇ ನೋಡಿ ಮೇವ್ ಮೇವ್ ಎನ್ನುತ್ತಿದ್ದ. ಹಾಗೆ ಹೊರಗಡೆಯಿಂದ ಬಂದು ಬಾಗಿಲ ಬಳಿ ನಿಂತು ನಮ್ಮನ್ನು ಕೂಗಿ ಕರೆದು ಬಾಗಿಲು ತೆರೆಸುತ್ತಿದ್ದ, ಮುಂದಿನ ಬಾಗಿಲನ್ನು ತೆರೆಯಲು ಯಾರೂ ಬರದಿದ್ದಲ್ಲಿ ನಮ್ಮ ಅಪಾರ್ಟ್ ಮೆಂಟ್ ಬ್ಲಾಕ್ ಗೆ ಒಂದು ಸುತ್ತು ಬಂದು ಹಿಂದಿನ ಬಾಗಿಲಿನ ಬಳಿ ಬಂದು ಕೂಗುತ್ತಿದ್ದ. ಹಾಲು ಬೇಕಾದಲ್ಲಿ ನಮ್ಮಲ್ಲಿ ಯಾರಾದರೂ ನಿಂತಿದ್ದವರ ಕಾಲುಗಳಿಗೆ ಪದೇ ಪದೇ ಸುತ್ತಿ ಸುತ್ತಿ ಸುಳಿದು ಕೂಗುತ್ತಿದ್ದ. ಆತನ ಊಟದ ಬಟ್ಟಲ ಬಳಿಯಲ್ಲಿ ಕಸದ ಬುಟ್ಟಿ ಇದೆ. ಅದೇ ಆತನ ಸಿಂಹಾಸನ, ಅದರ ಮೇಲೆ ಹತ್ತಿ ಕುಳಿತು ಅಡಿಗೆ ಮನೆಯಲ್ಲಿ ಅಮ್ಮ ನ ಮುಖ ನೋಡಿ ಕೂಗಿ ಕರೆಯುತ್ತಿದ್ದ. ಎಲ್ಲದಕ್ಕಿಂತ ಮುಖ್ಯವಾಗಿ ಆತನ ಅಳು ನಿಂತಿತ್ತು, ಬೇಕಾದಾಗ ಮಾತ್ರ ಕೂಗುತ್ತಿದ್ದ. ಉಳಿದ ಸಮಯದಲ್ಲಿ ಹಗಲು ಪುಸ್ತಕದ ಮೇಲೋ, ಪೇಪರ್ ಮೇಲೋ ಅಥವಾ ನನ್ನ ಬ್ಯಾಗ್ ನ ಮೇಲೋ ಬಿದ್ದು ನಿದ್ದೆ ಮಾಡುತ್ತಿದ್ದ, ರಾತ್ರಿವೇಳೆ ಹೊರಗಡೆ ತಿರುಗಾಡುತ್ತಿದ್ದ. ಒಂದೆರಡು ಬಾರಿ ಇಲಿ ಹಿಡಿದು ಮನೆಯೊಳಕ್ಕೆ ತಂದು ಬಿಟ್ಟಿದ್ದ , ಬೈದು ಹೊರಗಟ್ಟಿದ ಬಳಿಕ ಮನೆಯ ಹೊರಗೆ ಎರಡು ಅಪಾರ್ಟ್ ಮೆಂಟ್ ಗಳ ನಡುವೆ ವೆಂಟಿಲೇಷನ್ ಗಾಗಿ ಬಿಟ್ಟಿದ್ದ ಜಾಗದಲ್ಲಿ ಇಟ್ಟು ತಿನ್ನುತ್ತಿದ್ದ.
ಕಿಟ್ಟಿಗೂ ಅಮ್ಮನಿಗೂ ಅದೆಂತಹಾ ಬಾಂಧವ್ಯ ಬೆಳೆಯಿತೆಂದರೆ ಬೆಕ್ಕು ಮೈಮೇಲೆ ಹತ್ತಿದರೆ ದೂರ ತಳ್ಳುತ್ತಿದ್ದ ಅಮ್ಮನ ಮಡಿಲ ಮೇಲೆ ಕಿಟ್ಟಿ ಬಂದು ಕುಳಿತುಕೊಳ್ಳುತ್ತಿದ್ದರೆ ಅಮ್ಮ ನಯವಾಗಿ ಅದರ ಮೈ ಸವರಿ ಮಾತನಾಡಿಸುತ್ತಿದ್ದರೆ ಮೇವ್ ಎಂದು ಪ್ರತಿಸ್ಪಂದಿಸುತ್ತಿದ್ದ.ಅಮ್ಮ ಚಾಪೆ ಮೇಲೆ ಮಲಗಿದ್ದಲ್ಲಿ ಅಮ್ಮನಿಗೆ ತಾಗಿ ಅಮ್ಮನ ಸೀರೆಯ ಮೇಲೆ ಕಿಟ್ಟಿ ಮಲಗುತ್ತಾನೆ. ಕಿಟ್ಟಿ ಕೂಗಿದ ತಕ್ಷಣ ಅಮ್ಮ ಅವನಿಗೆ ಹಾಲೆರೆದು ತಲೆಸವರಿ ಮುದ್ದಿನಿಂದ ಮಾತನಾಡುತ್ತಾಳೆ. ಅಮ್ಮ ಒಮ್ಮೊಮ್ಮೆ ಅವನನ್ನೆತ್ತಿ ಮಕ್ಕಳಂತೆ ಎತ್ತಿಕೊಳ್ಳುವುದೂ ಇದೆ.
ಕಿಟ್ಟಿಯನ್ನು ಯಾರೂ ಎತ್ತಿಕೊಂಡು ಮುದ್ದು ಮಾಡುವಂತಿಲ್ಲ, ಅಮ್ಮನ ಹೊರತಾಗಿ, ನಮ್ಮ ಮನೆಯಲ್ಲಿ ಬೇರೆ ಯಾರ ಸ್ಪರ್ಶವೂ ಅವನಿಗೆ ಇಷ್ಟವಾಗುವುದಿಲ್ಲ, ಅವರ ಕೈಯಿಂದ ಜಿಗಿದು ಕಿಟ್ಟಿ ಗೊಣಗುತ್ತಾ ನಡೆಯುತ್ತಾನೆ. ಹಾಲೆರೆಯುವುದಕ್ಕೆ ಯಾರಾದರೂ ಅಡ್ಡಿಯಿಲ್ಲ.
ಕಿಟ್ಟಿ ನಮ್ಮ ಕುಟುಂಬದ ಸದಸ್ಯನಂತೆಯೇ ನಮ್ಮ ಮನಸ್ಸಿನಲ್ಲಿ ಬೆರೆತಿದ್ದಾನೆ, ಕಿಟ್ಟಿಯ ಕಾರಣದಿಂದಾಗಿ ನಾವು ಮನೆ ಖಾಲಿ ಬಿಟ್ಟು ಬೀಗ ಹಾಕಿ ದಿನಗಟ್ಟಲೆ ಹೋಗುವುದಿಲ್ಲ, ಆತನನ್ನು ನೋಡಿಕೊಳ್ಳುವುದಕ್ಕೆ ಯಾರಾದರೂ ಇರುತ್ತೇವೆ. ಮನೆಯಿಂದ ಹೊರಹೋದವರು ವಾಪಾಸು ಬಂದ ತಕ್ಷಣ ಕೇಳುವುದು ಕಿಟ್ಟಿ ಎಲ್ಲಿದ್ದಾನೆ ಎಂದು, ನಾವು ಮನೆಗೆ ಬರುವಾಗ ಕೆಲವೊಮ್ಮೆ ಸ್ವಾಗತಕ್ಕೆ ಕಿಟ್ಟಿ ಇದುರಾಗುತ್ತಾನೆ. ಆತನ ಆಟ, ಮಂಗಾಟ, ಹಠ, ಪ್ರೀತಿಗೆ ಮನೆಯಲ್ಲಿನ ಎಲ್ಲರೂ ಸೋಲುತ್ತಾರೆ. ಕಿಟ್ಟಿ ಬೆಕ್ಕಾದರೂ ನಮ್ಮ ಮನೆಯವನೇ ಆಗಿದ್ದಾನೆ, ನಮ್ಮ ಮೊಗದಲ್ಲಿ, ಮನಸ್ಸಿನಲ್ಲಿ ನಗುವನ್ನು ಅರಳಿಸಿದ್ದಾನೆ, ನಮ್ಮ ಜತೆಗೆ ಬೆರೆತು ಮನಸ್ಸು ಹಗುರಾಗುವಂತೆ ಮಾಡಿದ್ದಾನೆ, ಮನಸ್ಸಿನ ಎಷ್ಟೋ ಚಿಂತೆಗಳು, ಸಮಸ್ಯೆಗಳು ಆತನ ಆಟದ ಮುಂದೆ, ಮುಗ್ಧ ನೋಟದ ಮುಂದೆ ಮರೆತುಹೋಗುತ್ತವೆ.
ಹಲವು ಮನೆಗಳಲ್ಲೂ ಇಂತಹಾ ಕಿಟ್ಟಿಯರು ಇರುತ್ತಾರೆ, ಅವರಿಂದಾಗಿ ನಮಗರಿವಿಲ್ಲದೆಯೇ ಅದೆಷ್ಟು ಬಾರಿ ನಮ್ಮ ಮುಖದಲ್ಲಿ ನಗುವರಳಿದೆ. ಸಾಕು ಪ್ರಾಣಿಗಳು ನಮ್ಮನ್ನು ಅದೆಷ್ಟು ಹೊಂದಿಕೊಂಡಿರುತ್ತವೆ ,
ಕೆಲವೊಮ್ಮೆ ನಮ್ಮ ಅನುಪಸ್ತಿಯಲ್ಲಿ ಆಹಾರ ಸೇವನೆಗೂ ಅವು ಮುಂದಾಗುವುದಿಲ್ಲ, ನಮಗೇನಾದರೂ ಅಸೌಖ್ಯವುಂಟಾದಲ್ಲಿ, ನೋವಾಗಿದ್ದಲ್ಲಿ ಅವುಗಳೂ ಭಾವನಾತ್ಮಕವಾಗಿ ಸ್ಪಂದಿಸುತ್ತವೆ.
ಇವೆಲ್ಲವನ್ನು ಅನುಭವಿಸಬೇಕೆಂದಿದ್ದರೆ ನಮಗೂ ಪ್ರಾಣಿಗಳ ಮೇಲೆ ಪ್ರೀತಿ, ಅನುಕಂಪ, ಗೌರವಗಳಿರಬೇಕು, ಆಗಲೇ ಬದುಕು ಸಾರ್ಥಕ.
No comments:
Post a Comment