Thursday, September 4, 2014

ಪದ್ಯ ಪುರಾಣ ಮತ್ತು ಶಿ(She) ಎಂಬ ಐಕಾನು

ಪದ್ಯ ಪುರಾಣ
---------------------
ಒಮ್ಮೊಮ್ಮೆ ಹೀಗೆ ಲಹರಿಯಲ್ಲಿದ್ದಾಗ ನಾನು ಹಾಡುವ ಪರಿಪಾಠವನ್ನು ಬೆಳೆಸಿಕೊಂಡಿದ್ದೇನೆ(ನನ್ನ ಮಟ್ಟಿಗೆ ನಾನು ಹಾಡುವುದೇ ಆದರೆ ಇತರರಿಗೂ ಅದೇ ಅನುಭವವಾಗುತ್ತದೋ ಇಲ್ಲವೋ ಎನ್ನುವ ಪ್ರಶ್ನೆ ಕೇಳುವ ಸಾಹಸಕ್ಕೆ ನಾನು ಕೈ ಹಾಕುವುದಿಲ್ಲ) , ಮುಖ್ಯವಾಗಿ ಪ್ರಸಿದ್ಧ ಭಾಗವತರ ಧಾಟಿಯಲ್ಲಿ ಹಾಡುತ್ತಿರುವೆ ಎಂದು ಭಾವಿಸಿ ಹಾಡುವ ಮರುಳು, ಹಾಡಿದಾಗ ಸಿಗುವ ಧನ್ಯತಾ ಭಾವವೇ ನನಗೆ ಮುಖ್ಯ ಹೊರತು ಬೇರೇನಲ್ಲ .
ಹಾಡಿ ಅಲ್ಲಿಗೇ ಮುಗಿಸಿದರೆ ಹಾಡುತ್ತಿರುವುದು ಸರಿಯಾಗಿದೆಯೋ ಇಲ್ಲವೋ ಎನ್ನುವ ಬಗ್ಗೆ ತಿಳಿಯಬೇಕಲ್ಲ, ಹಾಗಾಗಿ ಅಭಿಪ್ರಾಯ ಸಂಗ್ರಹವೂ ನನ್ನ ಪಾಲಿಗೆ ಅಷ್ಟೇ ಮುಖ್ಯ.
ಅಭಿಪ್ರಾಯ ಕೇಳುವುದಾದರೂ ಯಾರಲ್ಲಿ ಇದ್ದಾಳಲ್ಲ ನನ್ನವಳು ಅವಳಲ್ಲೇ ಯಾವತ್ತೂ ಪದ್ಯ ಹಾಡಿದ ಬಳಿಕ ಹುಬ್ಬು ಹಾರಿಸಿ ಒಂದು ನೋಟ ಹರಿಸಿ "ಹೇಗೆ ಒಳ್ಳೇದಾಯ್ತ ?" ಅಂತ ಒಂದು ಮುಗುಳ್ನಗೆ ಬೀರುವುದು , ಅವಳಾದರೋ ಸ್ವಲ್ಪ ಯೋಚಿಸಿದವಳಂತೆ ಮಾಡಿ "ಈ ಸಲದ್ದು ಅಷ್ಟು ಒಳ್ಳೆದಾಗ್ಲಿಲ್ಲ ಸ್ವಲ್ಪ ಕಿರುಚುವುದು ಕಡಿಮೆ ಮಾಡಿ ಮೆತ್ತಗೆ ಹೇಳಿದ್ರೆ ಇನ್ನೂ ಚೆನ್ನಾಗಿರ್ತಿತ್ತು ಮೊನ್ನೆ ಹೇಳಿದ್ರಲ್ಲ ಅದು ಒಳ್ಳೆಯದಾಗಿದೆ" ಎನ್ನುವುದು, "ಮೊನ್ನೆಯದ್ದು ಚೆನ್ನಾಗಿತ್ತ ನೀನು ಹೇಳಲೇ ಇಲ್ಲವಲ್ಲ" ಎಂದರೆ, "ಇವತ್ತು ಹಾಡಿದ್ದನ್ನು ಕೇಳಿದ ಮೇಲಲ್ಲವೇ ಮೊನ್ನೆಯದ್ದು ಚೆನ್ನಾಗಿತ್ತು ಅನ್ನಿಸುವುದು" ಅನ್ನಬೇಕೆ. ಏನೇ ಇರಲಿ ನನ್ನ ಸಾಹಸದೆದುರು ಹಿಮಾಲಯ ಪರ್ವತವೇ ಅಡ್ಡ ನಿಂತರೂ ನಾನು ಕದಲುವವನಲ್ಲ ಎಂಬ ದೃಢ ನಿರ್ಧಾರದಿಂದ ಮರಳಿ ಯತ್ನವ ಮಾಡು ಎನ್ನುವಂತೆ ಮತ್ತೆ ತೊಡಗಿಕೊಳ್ಳುವ ಆಸಾಮಿ ನಾನು.
ಎಲ್ಲೋ ಕೇಳಿದ ಒಂದು ಮಾತು ನೆನಪಾಯಿತು "ಉಗುಳಿ ಉಗುಳಿ ರೋಗ , ಬೊಗಳಿ ಬೊಗಳಿ ರಾಗ" ಸರಿ ಪ್ರಾಕ್ಟೀಸ್ ಮೇಕ್ಸ್ ಮ್ಯಾನ್ ಪರ್ಫೆಕ್ಟ್ ಎಂದು ಅಭ್ಯಾಸವನ್ನು ಮತ್ತಷ್ಟು ಹೆಚ್ಚಿಸಿದೆ, ರಾತ್ರಿ ಮಲಗಿದಾಗಲೂ ಮೆಲ್ಲಗೆ ಪದ್ಯಗಳನ್ನು ಹಾಡತೊಡಗಿದೆ, ಒಂದನೇ ದಿನ ನನ್ನವಳ ಪ್ರತಿಕ್ರಿಯೆ ಏನೂ ಇರಲಿಲ್ಲ.
ಎರಡನೇ ದಿನ ಮಲಗಿದ್ದವ ಏನೋ ಯೋಚಿಸುತ್ತಿದ್ದೆ, ನನ್ನವಳು ಕರೆದು "ಏನ್ರೀ ಇವತ್ತು ಪದ್ಯ ಹೇಳ್ಲಿಕ್ಕಿಲ್ವಾ ಅಂತ ನೆನಪಿಸಬೇಕೇ ? !" ಹ್ನೆ ! ಎಲಾ ಇವಳೇ , ಹ ಹ , ನನ್ನ ಹಾಡುಗಾರಿಕೆಯ ಸ್ವಾರಸ್ಯ ಇವಳಿಗೆ ಈಗಲಾದರೂ ಅರ್ಥವಾಯಿತಲ್ಲ, ಒಳ್ಳೆಯದಾಯಿತು" ಎಂದುಕೊಂಡು ಉತ್ಸಾಹದಿಂದ ಗುನುಗುನಿಸಿದೆ.
ಮೂರನೆಯ ದಿನ ನನ್ನಾಕೆ ನಿಜವಾಗಲೂ ನನ್ನ ಹಾಡುಗಾರಿಕೆಯ ಅಭಿಮಾನಿಯಾಗಿದ್ದಾಳೋ ಇಲ್ಲವೋ ಎನ್ನುವುದನ್ನು ಪರೀಕ್ಷಿಸಬೇಕೆಂಬ ಉದ್ದೇಶದಿಂದ ಉದ್ದೇಶಪೂರ್ವಕವಾಗಿಯೇ ಸುಮ್ಮನಿದ್ದೆ. ನನ್ನವಳು ಮೆಲ್ಲನೇ ಕರೆದಳು "ರೀ, ಪದ್ಯ ಹೇಳ್ರೀ" , "ಹೆ ಹೆ ಹೆ, ನನಗಂತೂ ಬಹಳ ಸಂತೋಷವಾಯಿತು, ಈಗಲಾದರೂ ನನ್ನ ನಿಜವಾದ ಪ್ರತಿಭೆ ಇವಳಿಗೆ ಅರ್ಥವಾಯಿತಲ್ಲಾ " ಎಂದುಕೊಂಡು ಹಾಡತೊಡಗಿದೆ. ಕೆಲವಾರು ಹಾಡುಗಳನ್ನು ಹಾಡಿ ನಿಲ್ಲಿಸಿದೆ, ಅಷ್ಟರಲ್ಲಿ "ಎಂತಕ್ಕೆ ನಿಲ್ಲಿಸಿದ್ದು ಹಾಡಿ, ಹಾಡಿ" ಎಂದಳು. ನನಗಂತೂ ಅತ್ಯಾಶ್ಚರ್ಯವಾಗಿತ್ತು, ಛಂಗನೇ ಎದ್ದು ಕುಳಿತು ಉತ್ಸಾದಿಂದ,ಸಂತೋಷದಿಂಡ ಕೇಳಿದೆ "ಏ ... ಆಷ್ಟೂ ಒಳ್ಳೆಯದಾಗ್ತದ ಮಾರಾಯ್ತಿ ನಾನು ಹಾಡುವುದು, ಒಳ್ಳೆ ಸುಧಾರಣೆ ಆಗಿದೆ ಅಲ್ವಾ ಈಗ ನನ್ನ ಹಾಡುಗಾರಿಕೆಯಲ್ಲಿ ಹ್ನೇ ? ?" ಎಂದು...
ಅವಳಿಗೆ ನಿದ್ದೆ ಕಣ್ಣಿಗೆ ಹಿಡಿಯುತ್ತಾ ಇತ್ತೆಂದು ಕಾಣುತ್ತದೆ
"ಹಾಗೇನೂ ಇಲ್ಲ, ಕೇಳ್ತಾ ಇದ್ರೆ ಬೇಗ ನಿದ್ದೆ ಬರ್ತದೆ ಹಾಗೆ ಹೇಳಿದ್ದು, ನನಗೆ ನಿದ್ದೆ ಬರುವ ತನಕ ಹೇಳ್ತಾ ಇರಿ ಆಯ್ತ" ಎನ್ನಬೇಕೆ !!!
---------------------------------------------------

ನನ್ನ ಗಣಕದ ಪರದೆಯ ಮೇಲೆ ಕಣ್ಣಾಡಿಸುತ್ತಿದ್ದ ಮಡದೀಮಣಿ, ಒಮ್ಮೆಯೇ ಆಶ್ಚರ್ಯ ತುಂಬಿದ ಅನುಮಾನದ ದನಿಯಿಂದ "ಏನ್ರೀ ಇದು ?!!" ಎಂದು ಸ್ವಾತಂತ್ರ್ಯ ದಿನಾಚರಣೆಯನ್ನು ನೆನಪಿಸುವಂತೆ ಗದರಿಸಬೇಕೇ ?

"ಎಂತದ್ದೇ ನಿನ್ನದ್ದು ?" ಎನ್ನುತ್ತಾ ಕೊರಳೆತ್ತಿ ನೋಡಿದೆ , "ಏನಿದು "She" ಐಕಾನು, ಎಂತ ಉಂಟು ಇದ್ರಲ್ಲಿ ?" ಎಂದು ಗುಡುಗಿದಳು

"ಹ್ನೇ ! ಎಂತ ಶೀ ಐಕಾನು ಮಾರಾಯ್ತಿ ಏನಿದ್ರು "ಯು" ಐಕಾನೇ ಇರಬೇಕಿತ್ತಲ್ಲ, "ಶಿ" ಉಂಟಾ ! ಅಷ್ಟೊಂದು ಐಕಾನುಗಳ ನಡುವೆ ಇದೇ ನಿನ್ನ ಕಣ್ಣಿಗೆ ಬೀಳಬೇಕೆ" ಎಂದೆ.
ನನ್ನ ಡೆಸ್ಕ್ ಟಾಪ್ ಮೇಲೆ ನೂರಾರು ಐಕಾನ್ ಗಳು ಮುಕ್ತಿಗೋಸ್ಕರ ಕಾಯುತ್ತಾ ಕುಳಿತಿರುತ್ತವೆ, ಡೆಸ್ಕ್ ಟಾಪ್ ನಲ್ಲಿ ಇನ್ನು ಜಾಗ ಇಲ್ಲ ಎಂದಾದ ಮೇಲೆ ಎಲ್ಲಕ್ಕೂ ಒಮ್ಮೆಯೇ ಮುಕ್ತಿ ಕಲ್ಪಿಸುವ ಅಭ್ಯಾಸ ನನ್ನದು , ನನಗೂ ನೆನಪಿಲ್ಲ ಇದೆಂತ ಐಕಾನಪ್ಪ ಎಂದು ತಲೆ ಕೆರೆದುಕೊಂಡೆ.

ನನಗೂ ಕುತೂಹಲ ಉಂಟಾಯಿತು ಇದ್ಯಾವ "ಶಿ" ನನ್ನ ಗಣಕದಲ್ಲಿ ಕುಳಿತಿದೆ ಎಂದು

" ಧೈರ್ಯಮಾಡಿ ತೆರೆದು ನೋಡು, ನನಗೂ ನೆನಪಿಲ್ಲ ಎಂತಾಂತ ನೋಡುವ" ಎಂದೆ

ಮೌಸು ಮಹಾರಾಯನ ಹೃದಯಸ್ಥಂಭನವಾಗುವಂತೆಯೇ ಎರಡು ಬಾರಿ ಕ್ಲಿಕ್ಕಿಸಿದಳು.... !! ನಾನು ಬಂದದ್ದೆಲ್ಲಾ ಬರಲಿ ಗೋವಿಂದನ ದಯವಿರಲಿ ಎಂದು ತಯಾರಾದೆ ...

ಯಾವಾಗಲೋ ಗಡಿಬಿಡಿಯಲ್ಲಿ ಎಲ್ಲಿಂದಲೋ ಡೌನ್ ಲೋಡ್ ಮಾಡಿದ್ದ ಶೇಣಿಯವರ ನಗುಮುಖದ ಭಾವಚಿತ್ರ ಪ್ರಕಟವಾಯಿತು, ನನ್ನ ತಲೆ ಉಳಿಯಿತು... 

----------------------------------------

No comments:

ನಿಮ್ಮ ಅಭಿಪ್ರಾಯ