ಇವುಗಳಲ್ಲಿ ಒಂದೋ ಎರಡೋ ಒಂದೊಂದು ಬಾರಿ ನಮ್ಮ ಬದುಕಿನಲ್ಲಿ ನಡೆಯುವುದು ಸಹಜ, ಹಾಗಾದಾಗಲಂತೂ ದೈನಂದಿನ ದಿನಚರಿಗಳೇ ಅಸ್ತವ್ಯಸ್ತವಾಗುತ್ತವೆ. ಒಮ್ಮೆ ಯೋಚಿಸಿ ಎಲ್ಲವೂ ಒಮ್ಮೆಯೇ ನಡೆದರೆ. ಅಂತಹ ಕಾಲ್ಪನಿಕ ಸನ್ನಿವೇಶ ಸೃಷ್ಟಿಸಿ ನಡೆಯಬಹುದಾದ ಹಾಸ್ಯದ ಅವಲೋಕನ.
---------------------------------- ----------------------------------------
ಎಂತ ಸಾವ್ ನುಸಿ ಮಾರೆ, ಕಚ್ಚುವುದಕ್ಕೆ ನನ್ನ ಮೂಗೇ ಬೇಕಾ ಮಾರಿ. ಹೊದಿಕೆಯೆಳೆದು ಮಲಗಿದ್ರೆ ಬಂದು ಇವಳು ಎಳೆದು ತೆಗೆದ್ಲು, "ರಾಯರು ಆಫೀಸಿಗೆ ಹೋಗುವ ಅಂದಾಜೇನಾದ್ರೂ ಉಂಟಾ ಇವತ್ತು, ಇಲ್ವಾ" "ಎಂತ ಮಾರಾಯ್ತಿ ಮಲಗುವುದಕ್ಕೆ ಬಿಡು, ಅಪೀಸ್ ನಲ್ಲಿ ಬಾಸ್ ತಿಂದೇ ತಲೆ ಎಲ್ಲ ಮುಗ್ದಿದೆ" ಹೊದಕೆಯೆಳೆದು ಮಲಗಿದೆ, "ಘಂಟೆ ಎಂಟೂವರೆಯಾಯ್ತು, ನಂಗೇನು ನಾನು ಕಾಲೇಜಿಗೆ ಹೊರಟೆ" ಅಷ್ಟೇ ಕೇಳಿದ್ದು, ಮತ್ತೂ ಕಾಲು ಘಂಟೆ ನಿದ್ರಾಂಗನೆಯ ಕೇಳಿಯಲಿ ಮಲಗಿದ್ದೆ.
ಎದ್ದು ಹಲ್ಲುಜ್ಜುವುದಕ್ಕೆ ಪೇಸ್ಟ್ ಮುಗಿದಿದೆ, ಪೇಸ್ಟ್ ನ ಕತ್ತು ಕುಯ್ದು ಹೊಟ್ಟೆ ಹಿಚುಕಿ ವಾಂತಿ ಮಾಡಿಸಿ ಕೆಲಸ ಮುಗಿಸಿದೆ. ಇವಳಂತೂ ಸ್ಕ್ಕೂಟಿ ಸ್ಟಾರ್ಟ್ ಮಾಡಿ ಹೊರಟೇ ಹೋಗಿದ್ಲು.
ಎಂತ ಕರ್ಮ ಮಾರೆ ಮದುವೆಯಾದ್ರೂ ಬ್ರಹ್ಮಚಾರಿಯಾದೆ. ಅವಳು ಮಾಡಿಟ್ಟಿದ್ದ ಎಂತದ್ದೋ ರೈಸ್ ಬಾಯೊಳಕ್ಕೆಸೆದು, ಚಹಾ ಹೀರಿ. ಮನೆಯಿಂದ ಹೊರಗೆ ಬರ್ತೇನೆ ಕ್ಯಾಬ್ ನವನ ಸುಳಿವಿಲ್ಲ.
ಪ್ಯಾಂಟ್ ನ ಕಿಸೆಗೆ ತುರುಕಿಸಿದ್ದ ಮೊಬೈಲ್ ಎಳೆದು ಬಲಗಯ್ಯಿಂದ ಎಡಗೈಗೆ ವರ್ಗಾಯಿಸುವಷ್ಟರಲ್ಲಿ ಮೊದಲನೇ ಮಹಡಿಯಿಂದ ಕೆಳಗೆ ಹಾರಿತು.
"ಅಯ್ಯೋ ಪರ್ದೇಸಿ ಪ್ರಾಣ ಬಿಟ್ಟಿತಲ್ಲ ಇನ್ನೂ ಒಂದೇ ಒಂದು ಇಎಮ್ ಐ ಕೂಡಾ ಪಾವತಿ ಮಾಡಿರ್ಲಿಲ್ಲ ಸ್ವಲ್ಪ ದಿನ ತಡಕೊಳೊಕ್ಕಾಗ್ತಿರ್ಲಿಲ್ವ ಈಗಲೇ ಆತ್ಮ ಹತ್ಯೆಗೆ ಹೊರಟಿತಲ್ಲ" ಎಂದು ಹಾಳಾದ ಮೊಬೈಲ್ಗೆ ಬಯ್ಕೊಂಡು, ಕೆಳಗೆ ಬಂದು ತುಂಡು ತುಂಡಾಗಿದ್ದ ಅದರ ಅವಯವಗಳನ್ನೇಲ್ಲಾ ಜೋಡಿಸಿ ಮತ್ತೆ ಜೀವ್ ಉಂಟೋ ಇಲ್ವೋ ಪರೀಕ್ಷಿಸಿದೆ.
ಪುಣ್ಯಾತ್ಮ, ಆಯುಷ್ಯ ಗಟ್ಟಿ ಇತ್ತು, ಸಿಮೆಂಟ್ ನೆಲಕ್ಕೆ ಬಿದ್ದಿದ್ರೂ ಸತ್ತಿರ್ಲಿಲ್ಲ. ಜೈ ನೋಕಿಯಾ, ನಿಮ್ಮ ಕಂಪೆನಿಯ ಶೇರ್ ಮೇಲೆ ಹೋಗ್ಲಿ , ಪರಮಾತ್ಮನಿಗೆ ಅಲ್ಲೇ ಕೈಮುಗಿದೆ.
ಜೀವ ಬಂದ ಮೊಬೈಲ್ ನಕ್ಕು, ಟುಂಯ್ ಟುಂಯ್ ಅನ್ನುತ್ತಾ ನಗುಮೊಗ ಪ್ರದರ್ಶಿಸಿ ಒಟ್ಟಿಗೇ ಕರೆಂಟ್ ಶಾಕ್ ಕೊಟ್ಟಿತು. ಕ್ಯಾಬ್ ನವನ ಹದಿನಾಲ್ಕು ಮಿಸ್ ಕಾಲ್.
ಮಾರಾಯ ಇವತ್ತು ಬಸ್ಸೇ ಗತಿ ಅನ್ನುತ್ತಾ ಹಾಳಾಗಿದ್ದ ಹಾಳಾದ ಬೈಕ್ ನ ಮುಖ ನೋಡಿ ಬಸ್ ಸ್ಟ್ಯಾಂಡ್ ಗೆ ಓಡಿದೆ. ದಿನಾಲೂ ಮೂರು ಮೂರು ಬಸ್ ಒಟ್ಟಿಗೇ ಬರೋದು ಇವತ್ತು ಒಂದೂ ಇಲ್ಲ, ಬಸ್ ಸ್ಟ್ಯಾಂಡ್ ನಲ್ಲಿ ಜನರೆಲ್ಲಾ ಸಾಫ್ಟ್ವೇರ್ ಪ್ರಾಣಿ ಬಂತೆಂದು ಮುಖ ನೋಡ ತೊಡಗಿದರು. ಹಲ್ಕಿರಿದು ನಕ್ಕೆ. ಮುಖ ತಿರುಗಿಸಿಕೊಂಡರು.
ಹದಿನೈದು ನಿಮಿಷ ಬಿಟ್ಟು ಬಸ್ ಬಂತಲ್ಲಾ, ಓ ಬಸ್ಸಿಡೀ ಜನ, ಇನ್ನು ಟಾಪ್ ಮಾತ್ರ ಖಾಲಿ ಅಂತ ನೋಡುತ್ತಿದ್ದೆ, ಹಿಂದಿದ್ದವರು ನೂಕಿ ನೂಕಿ ಬಾಗಿಲಿನ ಬಳಿಯಿದ್ದವ ನಾನು ಬಸ್ಸಿನ ಒಳಗಿದ್ದೆ. ಟಿಕೇಟ್ ಗೆ ದುಡ್ಡು ಕೊಡುವುದಕ್ಕೆ ಪ್ಯಾಂಟ್ ನ ಕಿಸೆಗೆ ಕೈತೂರಿಸುವುದಕ್ಕೂ ಜಾಗ ಇರ್ಲಿಲ್ಲ.
ಗೋಡೆಗೆ ಅಂಟಿಸಿದ್ದ ಪೇಂಟಿಗ್ ನಮುನೆ ಅಂಟಿ ನಿಂತಿದ್ದೆ. ನನ್ನ ಒಂದು ಕಾಲಿನಮೇಲೆ ಯಾರದ್ದೋ ಕಾಲು, ಯಾರದ್ದೋ ಕಾಲಿನ ಮೇಲೆ ನನ್ನ ಮತ್ತೊಂದು ಕಾಲು.
ಇದ್ದ ಬದ್ದ ಸಿಗ್ನಲ್ ಎಲ್ಲಾ ಬಿದ್ದದ್ದೇ, ಇವತ್ತು ಬಾಸ್ ಗೆ ಒಳ್ಳೇ ಚಾನ್ಸ್ ನಾಳಿನಿಂದ ನಿದ್ದೆ ಕಡಿಮೆ ಮಾಡ್ಬೇಕು ಕೆಲಸ ಅಂದುಕೊಂಡೆ. ಅಂತೂ ಇಂತೂ ಸ್ಟಾಪ್ ಬಂದಾಗ ಇದ್ದ ಬಲವೆಲ್ಲಾ ಪ್ರಯೋಗಿಸಿ ನನ್ನ ಸಾಮಾನು ಸರಂಜಾಮುಗಳೆಲ್ಲ ಎಳೆದು ಎಳೆದು ಬಸ್ಸಿನಿಂದ ಹೊರಬಿದ್ದೆ, ಬಾಡಿ ಪಾರ್ಟ್ ಎಲ್ಲಾ ಸರಿಯಾಗಿ ಸ್ವಸ್ಥಾನದಲ್ಲುಂಟಲ್ಲ ಅಂತ ನೋಡಿಕೊಂಡೆ.
ಇನ್ನು ಹೋಗ್ಲಿಕ್ಕೆ ಉಂಟಲ್ಲ ಸುಮಾರು ಒಂದು ಕಿಲೋಮೀಟ್ರು. ಅತ್ಯಂತ ಹೇಟ್ ಮಾಡ್ತಿದ್ದ ಆಟೋವಾಲಾಗಳು ನನ್ನ ಪರಮಾಪ್ತ ಸ್ನೇಹಿತರಾಗುವ ಕಾಲ ಬಂದಿತ್ತು. ಇರುವುದರಲ್ಲಿ ಪಾಪ ತೋರುವ ಆಟೋದವನ ರಥ ಏರಿದೆ.
ಬೇಗ ನನ್ನ ಆಫೀಸ್ ಬುಡಕ್ಕೆ ಬಿಟ್ಟು ಬಿಡು ಮಾರಾಯ. ಅನ್ನುತ್ತಾ ಏರಿ ಕೂತರೆ ಇವನ ಕೆಟ್ಟ ರಥ ಸ್ಟಾರ್ಟೇ ಆಗುದಿಲ್ಲ.
ಅಂತೂ ಇಂತೂ ಅನ್ನದೇಗುಲದ ಎದುರು ಬಂದು ನಿಂತೆ. ಕರ್ಮ ಕರ್ಮ, ಗಡಿಬಿಡಿಯಲ್ಲಿ ಐಡಿ ಕಾರ್ಡು ಮನೆಯಲ್ಲೇ ಬಿಟ್ಟದ್ದು ನೆನಪಾಯಿತು. ಅಂಗಿ ಪ್ಯಾಂಟಿನ ಕಿಸೆಯ ಮೂಲೆಯಿಂದ ಬ್ಯಾಗಿಗಿನ ಮೂಲೆಯವರೆಗೆ ಹುಡುಕಿದರೂ ಪ್ರಯೋಜನ ಆಗ್ಲಿಲ್ಲ. ಸೆಕ್ಯುರಿಟಿ ಗಾರ್ಡ್ ನನ್ನನ್ನು ಟೆರರಿಸ್ಟನ್ನು ನೋಡುವಂತೆ ನೋಡುತ್ತಿದ್ದಾನೆಯೇ ಅನ್ನಿಸತೊಡಗಿತ್ತು.
ಅಗ್ನಿಕೋಟೆಯನ್ನು ದಾಟಿ ಆಫೀಸಿನ ಒಳಗೆ ಹೇಗೋ ಬಂದೆ. ನನ್ನ ದುರದೃಷ್ಟ ಸೀನಿಯರ್ ಗೋಪಾಲನಿಗೆ ಜೋರು ಜ್ವರ ಎಮರ್ಜೆನ್ಸಿ ಲೀವು. ಬಾಸ್ ನನ್ನ ಬರುವಿಕೆಯನ್ನೇ ಕಾಯ್ತಿದ್ರು ಅನ್ನಿಸ್ತದೆ "ಅಂತೂ ಬಂದ್ರಲ್ಲಾ ಬಟ್ರೇ , ಇಲ್ಲಾಂದ್ರೆ ಕಷ್ಟ ಆಗ್ತಿತ್ತಲ್ವಾ" ಅಂದ್ರು. "ಬೆಳಗ್ಗೆ ಏಳುವುದಕ್ಕಿರುವುದಕಿಂತ ಕಷ್ಟ ಬೇರುಂಟೇ ಸಾರ್" ಮನಸಿನಲ್ಲೇ ಅಂದುಕೊಂಡದ್ದು, "ಗುಡ್ ಮಾರ್ನಿಂಗ್ ಸರ್, ನಿನ್ನೆ ಯು ಎಸ್ ರೀಜನ್ ಸೆಕ್ಯುರಿಟಿ ಪ್ಯಾಚ್ ಡಿಪ್ಲಾಯ್ ಮೆಂಟ್ ಪ್ರಾಬ್ಲಮ್ ಇತ್ತು ಸಾರ್, ರಾತ್ರಿ ಮೂರು ಗಂಟೆ ಆಗಿತ್ತು. ಮಲಗುವಾಗ.", "ಹೌದಾ ತೊಂದ್ರೆ ಇಲ್ಲ ಒಂದು ದಿವ್ಸ ಅಲ್ವಾ" ಅಂದ್ರು, "ಎಂತ ಕರ್ಮ ನೋಡುದ, ಕೆಲಸ ನಾವು ಮಾಡುವುದು ನೋಡುವವ ನೋಡುದೇ" ಅಂದುಕೊಂಡೆ . ಲ್ಯಾಪ್ ಟಾಪ್ ಓಪನ್ ಮಾಡಿದೆ, ಎಂತ ಸಾವ ಬೂಟೇ ಆಗುದಿಲ್ಲ. ಸರಿ ರಿಪೇರಿಗೆ ಕಳ್ಸಿದೆ. ಡೆಸ್ಕ್ಟಾಪ್ ಓಪನ್ ಬೂಟ್ ಮಾಡಿದೆ. ದಿನ ಭವಿಷ್ಯ ನೋಡಿದೆ. ಗುರು ಶನಿ ಬುಧ ಮಂಗಳ ಎಲ್ಲ ಅನುಕೂಲರಾಗಿದ್ದಾರೆ , ಜೀವನದಲ್ಲಿ ಸಮಸ್ಯೆಗಳ ಪರಿಹಾರ ಅಂತಿತ್ತು", "ವಾಹ್, ಒಳ್ಳೇ ದಿನದ ಪ್ರಾರಂಭ" ಅಂತ ಈಮೇಲ್ ಓಪನ್ ಮಾಡಿದೆ. "ಟಕ ಟಕ ಟಕ ಟಕ, ನಾಲ್ಕು ಎಸ್ಕಲೇಶನ್ ಈಮೇಲುಗಳು ಬಂದು ಬಿದ್ದವು.
ಬಾಸ್ ನ ಟೇಬಲ್ ಕಡೆ ತಿರುಗುವುದಕ್ಕೆ ಮುಂಚೆಯೇ ಬೆನ್ನ ಹಿಂದೆ ಬಂದು ನಿಂತಿದ್ದಾನೆ, ಬುಧ ಗುರು ಶುಕ್ರ ಮಂಗಳ ಶನಿ ಎಲ್ಲ ಒಟ್ಟಿಗೆ ಬಂದು ನಿಂತ ಹಾಗೆ !!!