Monday, December 30, 2013

ಅಲೆತ್ತೂರು ಹಬ್ಬ - ಯಕ್ಷಗಾನದ ನಂಟು ಬಲಗೊಂಡ ನೆನಪುಗಳು ಹಾಗೂ ಮಯ್ಯರ ಯಕ್ಷಗಾನ ಪ್ರೇಮ

ಮನುಷ್ಯ ಸಂಘಜೀವಿ ಆತನಿಗೆ ಇತರರ ಪ್ರೀತಿ, ವಿಶ್ವಾಸ,ಬಲ, ಸಹಕಾರಗಳು ಅತ್ಯಗತ್ಯ. ಒಗ್ಗಟ್ಟಿನಲ್ಲಿ ಬಲವಿದೆ ಈ ಮಾತುಗಳು ಅಕ್ಷರಶಃ ಸತ್ಯ ಎಂದು ಗೋಚರಿಸುವುದು ಅಲೆತ್ತೂರು ಹಬ್ಬದಲ್ಲಿ.
ನನ್ನ ಮಿತ್ರನಾ(ರಾ)ದ ಪ್ರೀತಿಯಿಂದ ನಚ್ಚು(ನರಸಿಂಹ ಮಯ್ಯ) ಈ ವ್ಯಕ್ತಿಯ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೇ, ಪ್ರತೀ ವರ್ಷ ಉತ್ಸಾಹಿ ತರುಣರನ್ನು ಒಟ್ಟು ಸೇರಿಸಿ ಯಕ್ಷಗಾನ ನಡೆಸುವುದು ಸುಲಭದ ಮಾತೇನೂ ಅಲ್ಲ, ಯಕ್ಷಗಾನ ಸಂಘಟನೆ ಎನ್ನುವುದು ಅತ್ಯಂತ ಕ್ಲಿಷ್ಟಕರವಾದ , ಸೂಕ್ಷ್ಮವಾದಂತಹ ಕೆಲಸ. ಹಲವಾರು ಮಂದಿ ಕಲಾವಿದರನ್ನು ಜತೆಗೆ ಸೇರಿಸಿ ಎಲ್ಲರೂ ಒಬ್ಬರಿಗೊಬ್ಬರು ಹೊಂದಿಕೊಂಡು ಯಾವುದೇ ಮನಃಕಶಾಯಳಿಲ್ಲದೆ ಒಂದು ಪ್ರದರ್ಶನವನ್ನು ಏರ್ಪಡಿಸುವಂತೆ ಮಾಡುವುದು ಎಷ್ಟು ಕಷ್ಟ ಎನ್ನುವ ವಿಷಯ ಯಕ್ಷಗಾನವನ್ನು ಸಂಘಟಿಸಿದ ಪ್ರತಿಯೊಬ್ಬರಿಗೂ ಅಥವಾ ಯಕ್ಷಗಾನದ ಬಗ್ಗೆ ತುಸು ಹಿನ್ನೆಲೆಯುಳ್ಳ ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ. ಅಂತಹದರಲ್ಲಿ ಸತತವಾಗಿ ಕಳೆದ ೬ ವರ್ಷಗಳಿಂದ ಯಕ್ಷಗಾನ ಪ್ರದರ್ಶನವನ್ನು ಏರ್ಪಡಿಸುತ್ತಿರುವ ಅಲೆತ್ತೂರು ಮಯ್ಯ ಬಳಗದವರ ಪ್ರಯತ್ನವನ್ನು ಮೆಚ್ಚಬೇಕಾದದ್ದೆ. ಎಸ್.ವಿ.ಎಸ್ ಕಾಲೇಜಿನಲ್ಲಿ ಆರಂಭಗೊಂಡ ನಮ್ಮ ಸ್ನೇಹ ಮುಂದೆ ಬಂಟ್ವಾಳದ ಮಹಾಲಿಂಗೇಶ್ವರ ಹವ್ಯಾಸಿ ಯಕ್ಷಗಾನ ಮಂಡಳಿಯ ಮೂಲಕ ಮುಂದುವರೆಯಿತು. ಬಳಿಕ ೨೦೦೮ ರಲ್ಲಿ ನರಸಿಂಹ ಮಯ್ಯ ಅವರು ತಮ್ಮ ಬಂಧುಗಳ ಮತ್ತು ಸಹೃದಯಿ ಕಲಾಪ್ರೋತ್ಸಾಹಕರ ನೆರವಿನಿಂದ ಹುಟ್ಟು ಹಾಕಿದ ಸಂಘಟನೆಯೇ ಹವ್ಯಾಸಿ ಯಕ್ಷಗಾನ ಕಲಾ ಸಂಘ ಅಲೆತ್ತೂರು.ನೋಡ ನೋಡುತ್ತಿದ್ದಂತೆಯೇ ೬ ವರ್ಷಗಳು ಹಿಂದೆ ಸರಿದಿವೆ ಮಾತ್ರವಲ್ಲ ೬ ಪ್ರದರ್ಶನಗಳು ನಡೆದಿವೆ ಮತ್ತು ಇತರ ಕಡೆಗಳಲ್ಲಿ ನಮ್ಮ ತಂಡದ ಕಲಾವಿದರು ಪ್ರದರ್ಶನಗಳನ್ನು ನೀಡಿದ್ದಾರೆ.  ನಮ್ಮ ಈ ಸಂಘಕ್ಕೆ ಗುರುಸ್ಥಾನದಲ್ಲಿ ನಿಂತವರು ಭಾಗವತರೂ ವೇಷಧಾರಿಗಳೂ ಆದಂತಹ ಉಂಡೆಮನೆ ಕೃಷ್ಣ ಭಟ್ಟರು ಮತ್ತು ಭಾಗವತರಾದಂತಹ ಪುರುಷೋತ್ತಮ ಭಟ್ಟರು. ಕುಶಲವರ ಕಾಳಗ-2008, ವೀರಮಣಿ ಕಾಳಗ-2009, ಸುದರ್ಶನ ಗರ್ವಭಂಗ-2010, ಏಕಾದಶೀ ದೇವಿ ಮಹಾತ್ಮೆ-2011, ಸುದರ್ಶನ ಗರ್ವಭಂಗ-ಕಾರ್ತವೀರ್ಯಾರ್ಜುನ-2012, ಶುಂಭವಧೆ-2013, ಭಾರ್ಗವ ವಿಜಯ-ಇಂದ್ರಜಿತು ಕಾಳಗ-2013 ಈ ವರೆಗೆ ನಾವು ಪ್ರದರ್ಶಿಸಿದ ಪ್ರದರ್ಶನಗಳು, ಇಲ್ಲಿ ನೆನಪಿಗೋಸ್ಕರ ಹೆಸರಿಸುತ್ತಿದ್ದೇನೆ.


ಎಸ್ ವಿ ಎಸ್ ಕಾಲೇಜಿನಲ್ಲಿ ಉಪಾನ್ಯಾಸಕರಾದ ಪಾಂಡುರಂಗ ರಾವ್, ನಾಗವೇಣಿ ಮಂಚಿ ಮತ್ತು ಶಿವಣ್ಣ ಪ್ರಭು ಅವರುಗಳ ನಿರ್ದೇಶನದಲ್ಲಿ ನಡೆಯುತ್ತಿದ್ದ ಯಕ್ಷಗಾನ ತರಗತಿಗಳಲ್ಲಿ ಭಾಗವಹಿಸುತ್ತಿದ್ದ ನಮಗೆ ಗುರುಗಳಾಗಿ ಬೋಳಂತೂರು ವಿಠಲ ಶೆಟ್ಟರು ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರ ಶಿಷ್ಯೆಯಾದ ಸುಮಂಗಲಾ ಐತಾಳ್ ಇವರು ನಾಟ್ಯಗಾರಿಕೆಯಲ್ಲಿ ಮತ್ತು ಯಕ್ಷಗಾನದ ರಂಗ ತಂತ್ರಗಳ ಬಗ್ಗೆ ತರಬೇತಿಯನ್ನು ನೀಡಿ ನಮ್ಮನ್ನು ಯಕ್ಷಗಾನ ಪ್ರದರ್ಶನಕ್ಕೆ ಅಣಿಗೊಳಿಸುತ್ತಿದ್ದರು. ಸುಮಂಗಲಾ ಐತಾಳ್ ಇವರು ಸ್ವತಃ ಎಸ್ ವಿ ಎಸ್ ಕಾಲೇಜ್ ನಲ್ಲಿ ಕಲಿತು ಧರ್ಮಸ್ಠಳ ಮಂಜುನಾಥೇಶ್ವರ ಕಾಲೇಜ್ ನಲ್ಲಿ ನಡೆಯುತ್ತಿದ್ದ ಯಕ್ಷಗಾನ ಸ್ಪರ್ಧೆಯಲ್ಲಿ ತನ್ನ ಕೃಷ್ಣನ ಪಾತ್ರಕ್ಕೆ ಪ್ರಥಮ ಬಹುಮಾನವನ್ನು ಗಳಿಸಿದ್ದರು ಮಾತ್ರವಲ್ಲ ನಮ್ಮ ಕಾಲೇಜ್ ನ ತಂಡಕ್ಕೂ ಬಹುಮಾನ ದೊರೆಯುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದರು.


ಹೀಗೆ ಕಾಲೇಜಿನಲ್ಲಿ ನಡೆಯುತ್ತಿದ್ದ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಮ್ಮ ಯಕ್ಷಗಾನ ಪ್ರದರ್ಶನ ಪ್ರಮುಖ ಕಾರ್ಯಕ್ರಮವಾಗಿ ಪ್ರದರ್ಶಿಸಲ್ಪಡುತ್ತಿತ್ತು. ಯಕ್ಷಗಾನದ ನಾದ ಸದಾ ಪರಿಸರದಲ್ಲಿ ಗುಂಯ್ಗುಡುತ್ತಿರುವ ಬಂಟ್ವಾಳದಲ್ಲಿ ಯಕ್ಷಗಾನಕ್ಕೆ ಪ್ರಾಮುಖ್ಯತೆಯನ್ನು ನೀಡಿ ಯಕ್ಷಗಾನ ಕಲೆಯಲ್ಲಿ ಯುವಕ, ಯುವತಿಯರನ್ನು ತೊಡಗಿಸಿ ಅವರ ಸರ್ವತೋಮುಖ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತಿರುವ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜು, ವಿದ್ಯಾಗಿರಿ ಬಂಟ್ವಾಳ ಇಲ್ಲಿನ ಪ್ರಾಧ್ಯಾಪಕರು ಮತ್ತು ಆಡಳಿತ ಮಂಡಳಿಯ ಸದಸ್ಯರೆಲ್ಲರೂ ಸ್ತುತ್ಯರ್ಹರು. ಇದೇ ಕಾಲೇಜಿನಲ್ಲಿ ಕಲಿತು ಯಕ್ಷಗಾನ ರಂಗದಲ್ಲಿ ಹವ್ಯಾಸಿಗಳಾಗಿ ತೊಡಗಿಸಿಕೊಂಡಿರುವ ನಮ್ಮ ತಂಡದ ಮತ್ತೀರ್ವ ಕಲಾವಿದರು ಗಣೇಶ ಹೆಗ್ಗಡೆ ಮತ್ತು ಶ್ರೀಕಾಂತ ಸೋಮಯಾಜಿ. ಬಹುಮುಖ ಪ್ರತಿಭೆಯ ಕಲಾವಿದ ಗಣೇಶ ಪುಂಡು ವೇಶಕ್ಕೆ ಹೇಳಿ ಮಾಡಿಸಿದಂತಹ ಅಂಗ ಸೌಷ್ಟವದಿಂದ ಲಾಲಿತ್ಯಪೂರ್ಣವಾದಂತಹ ನಾಟ್ಯಗಾರಿಕೆಯಿಂದ ಪಾತ್ರಕ್ಕೆ ನ್ಯಾಯವನ್ನೊದಗಿಸಬಲ್ಲಂತಹಾ ಕಲಾವಿದ. ಇನ್ನು ಶ್ರೀಕಾಂತ ಸೋಮಯಾಜಿ ಸದಾ ಅಧ್ಯಯನ ಶೀಲತೆಯಿಂದ ಅಂತರ್ಜಾಲ ಮಾಧ್ಯಮವನ್ನು ಸಂಪೂರ್ಣವಾಗಿ ಬಳಸಿಕೊಂಡು ಯಕ್ಷಗಾನದ ವೇಷಗಾರಿಕೆಯ,ಅರ್ಥಗಾರಿಕೆಯ, ಕುಣಿತದ ವಿವಿಧ ಸಾಧ್ಯತೆಗಳನ್ನು ರಂಗದ ಮೇಲೆ  ಆವಿಶ್ಕರಿಸಬಲ್ಲ ಸಮರ್ಥ ಕಲಾವಿದ. ತನ್ನ ಬೀಸುನಡೆಗಳಿಂದ, ಮಾತಿನ ಧಾಟಿಯಿಂದ, ಪಾತ್ರದ ಭಾವನೆಗಳನ್ನು ಸಮರ್ಥವಾಗಿ ಬಿಂಬಿಸುವ ಮೂಲಕ ಪಾತ್ರವನ್ನು ಪುನಃ ಜೀವಂತಗೊಳಿಸಬಲ್ಲ ಕಲಾವಿದ ಎಂದರೂ ತಪ್ಪಾಗಲಾರದು. ಶ್ರೀಕಾಂತನ ಇಂದ್ರಜಿತು, ಏಕಾದಶೀ ದೇವಿಮಹಾತ್ಮೆಯ ಮುರಾಸುರ, ರಕ್ತಬೀಜ ಮುಂತಾದಂತಹ ರಾಜವೇಷದ ಪಾತ್ರಗಳಿಗೆ ಯಾರನ್ನೂ ಅನುಕರಿಸದೇ ತನ್ನದೇ ಆದ ಛಾಪು ಮೂಡುವಂತೆ ಅಭಿನಯಿಸುತ್ತಿರುವುದು ನಿಜಕ್ಕೂ ಅಭಿನಂದನಾರ್ಹ. ಇನ್ನು ನಮ್ಮ ಸಂಘಟನೆಯ ಹರಿಕಾರ ನರಸಿಂಹ ಮಯ್ಯ , ಯಾವುದೇ ಪಾತ್ರಕ್ಕೂ ಸೈ, ಪುಂಡುವೇಷಕ್ಕೆ ಪೂರಕವಾಗಬಲ್ಲ ಮೈಕಟ್ಟಿರುವುದರಿಂದ ಅನಾಯಾಸವಾಗಿ ಮಯ್ಯರು ಧೀಂಗಿಣ ಹಾಕುವ ಸಾಮರ್ಥವನ್ನು ಹೊಂದಿದ್ದು ದಣಿವರಿಯದೆ ರಂಗದ ಮೇಲೆ ಕೆಲಸ ಮಾಡುವ ಸಮರ್ಥರು. ರಾಜವೇಷದ ಗಾಂಭೀರ್ಯದ ನಡೆಯನ್ನು ನರಸಿಂಹ ಮಯ್ಯ ಕರಗತಗೊಳಿಸಿಕೊಂಡಿದ್ದಾರೆ. ಹವ್ಯಾಸಿ ಕಲಾವಿದರಲ್ಲಿ ಪುಂಡುವೇಶವನ್ನು ಸಮರ್ಥವಾಗಿ ಮಯ್ಯರು ನಿಭಾಯಿಸಬಲ್ಲವರು. ಅಗತ್ಯಬಿದ್ದಾಗ ಎಡೆವೇಶಗಳಿಗೂ ಮಯ್ಯರು ತಯಾರು. ಮಾತ್ರವಲ್ಲ ನಮ್ಮ ಸಂಘದ ಇತರ ವೇಷಧಾರಿಗಳಿಗೆ ನಾಟ್ಯ ತರಬೇತಿ ಹಾಗೂ ರಂಗತಂತ್ರಗಳನ್ನು ಹೇಳಿಕೊಡುತ್ತಿರುವವರು ಮಯ್ಯರು.


ಮಯ್ಯರ ತಂದೆ, ತಾಯಿ, ಅಣ್ಣ ಗಿರೀಶ್ ಹಾಗೂ ತಮ್ಮ ಶರತ್ ಮತ್ತು ಬಂಧುಗಳ, ತ್ಯಾಗ, ಪ್ರೀತಿ ಮತ್ತು ಅತಿಥಿ ಸತ್ಕಾರದ ವೈಖರಿ ಮತ್ತು ಯಕ್ಷಗಾನದ ಮೇಲಣ ಪ್ರೀತಿಯನ್ನು ಕಂಡಾಗ ಮನಸ್ಸು ಉಲ್ಲಸಿತವಾಗುತ್ತದೆ ಮಾತ್ರವಲ್ಲ ತನ್ನಿಂತಾನೆ ಮಯ್ಯರ ಅಭಿಮಾನಿಯಾಗುತ್ತದೆ. ಎಲ್ಲರನ್ನೂ ತಮ್ಮ ಮನೆಯವರಂತೇ ಪ್ರೀತಿಯಿಂದ ಕಾಣುವ ಸ್ವಭಾವ ಮಯ್ಯರ ಮನೆಯವರನ್ನು ಇತರರಿಂದ ವಿಭಿನ್ನವಾಗಿಸಿ ಅವರನ್ನು ಸರ್ವಜನ ಪ್ರಿಯರನ್ನಾಗಿಸುತ್ತದೆ. ಬೇಸರಿಕೆ, ಉದಾಸನ ತೋರದೆ ಎಲ್ಲವನ್ನೂ ಉತ್ಸಾಹದಿಂದ ನಿರ್ವಹಿಸುವ ಮಯ್ಯರಬೈಲು, ಅಲೆತ್ತೂರಿನ ತರುಣ ಬಳಗದ ಸರ್ವ ಯುವಕರೂ ಈ ನಿಟ್ಟಿನಲ್ಲಿ ಪ್ರಶಂಸಾರ್ಹರು. ನಾ ಕಾರಂತರೂ ಒಂದು ಬಾರಿ ನಮ್ಮಲ್ಲಿ ಅತಿಥಿ ಕಲಾವಿದರಾಗಿ ಬಂದು ಶ್ರೀಹರಿಯ ಪಾತ್ರವನ್ನು ನಿರ್ವಹಿಸಿದ್ದರು ಅವರ ಜತೆಗೆ ಪಾತ್ರಮಾಡುವ ಸದವಕಾಶ ನಮಗೆ ಲಭಿಸಿತ್ತು.



ಅಲೆತ್ತೂರು ಹಬ್ಬ ಪ್ರತೀ ವರ್ಷ ನಾವೆಲ್ಲ ಡಿಸೆಂಬರ್ ತಿಂಗಳು ಬರುವುದನ್ನೇ ಕಾಯುವಂತೆ ಮಾಡಿದೆ ಎಂದರೆ ತಪ್ಪಾಗಲಾರದೇನೋ. ನಮ್ಮ ಹೊಸವರ್ಷದ ಆಚರಣೆ ಯಕ್ಷಗಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯ ಮೂಲಕ ಅರ್ಥಪೂರ್ಣವಾಗಿ ನಡೆಯುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು. ನಾವೂ ಯಕ್ಷಗಾನ ಕಲಾವಿದರು ಎಂಬಂತಹ ಜಂಭದ ಮಾತುಗಳಲ್ಲ, ಯಕ್ಷಗಾನಕ್ಕಾಗಿ ನಮ್ಮದೂ ಕಿಂಚಿತ್ ಮಾತ್ರದ ಅಳಿಲ ಸೇವೆ ಅಷ್ಟೆ. ಯಕ್ಷಗಾನದ ನಾದ ಕಿವಿಗಳಲ್ಲಿ ಗುಂಯ್ಗುಡುತ್ತಿದ್ದರೆ ಮನದಲ್ಲೇನೋ ಒಂದು ರೀತಿಯ ಆನಂದ, ಯಕ್ಷಗಾನ ಕಲಾವಿದರ ಜತೆಗಿನ ಒಡನಾಟ ಮತ್ತು ಅವರ ಜತೆಗಿನ ಮಾತುಕಥೆ ಅವರ ಹಾವಭಾವಗಳನ್ನು ಗಮನಿಸುವುದು ನಮಗೆ ಸಂತೋಷದ ವಿಷಯ. ನಮ್ಮ ನಾಡಿನ ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿಯುವ, ಪುರಾಣಗಳಲ್ಲಿನ ನೀತಿ, ಮೌಲ್ಯ, ಕಥೆಗಳನ್ನು ಬೌಧ್ದಿಕವಾಗಿ ಬೋಧಿಸುವ ಸಾಮರ್ಥವಿರುವ ಕಲೆ ಯಕ್ಷಗಾನ, ದೇಹದ ಜತೆಗೆ ಬುದ್ಧಿಗೂ ಇಲ್ಲಿದೆ ಕೆಲಸ. ಮನರಂಜನೆಯೇ ಕೇಂದ್ರವೆಂದು ಕಂಡರೂ ಸಂಗೀತ, ವಾದನ, ನೃತ್ಯ, ಸಾಹಿತ್ಯಗಳಿಂದ ಸಮೃದ್ಧವಾಗಿ ಸೀಮಾತೀತವಾಗಿ ಕಲ್ಪನಾಲೋಕದಲ್ಲಿ ವಿಹರಿಸುವ ಅವಕಾಶ ಯಕ್ಷಗಾನದಲ್ಲಿದೆ, ಪರಂಪರೆಯ ಕ್ರಮಗಳನ್ನು ಬಿಡದೆ ಹೊಸತನ್ನು ಆವಿಶ್ಕರಿಸಿಕೊಳ್ಳಬಲ್ಲ ವಿಪುಲ ಅವಕಾಶಗಳೂ ಇವೆ. ಯಕ್ಷಗಾನದ ಅಮಲು ಒಂದು ಬಾರಿ ಹಿಡಿದರೆ ಮತ್ತೆ ಅದೇ ನಮ್ಮನ್ನು ಅದರತ್ತ ಎಳೆಯುತ್ತದೆ. ನರಸಿಂಹ ಮಯ್ಯರ ಬಂಧುಗಳಾದ ಸುರೇಶ ಉಪಾಧ್ಯರೇ ಇದಕ್ಕೆ ಸಾಕ್ಷಿ ಕಳೆದ ಬಾರಿ ಹೆಗಲಿಗೆ ಕ್ಯಾಮರಾ ಸಿಕ್ಕಿಸಿ ಬೆಂಗಳೂರಿನಿಂದ ಬಂದಿದ್ದ ಅವರು ಈ ಬಾರಿ ತಮ್ಮ ತಮ್ಮ ಹರೀಶ್ ಉಪಾಧ್ಯರನ್ನೂ ಜತೆಗೆ ಕರೆದುಕೊಂಡು ಬಂದು ನಮ್ಮ ಛಾಯಾಚಿತ್ರಗಳನ್ನು ಸಾಕ್ಷಾತ್ಕರಿಸಿ ನೀಡಿದ್ದಾರೆ.

ಮತ್ತೆ ಎಲ್ಲರ ಜತೆ ಬೆರೆಯುವುದಕ್ಕೆ ಇನ್ನೊಂದು ವರುಷ ಕಾಯಬೇಕು, . ಮಯ್ಯರಬೈಲಿನ ಸ್ನೇಹಿತರ,ಬಂಧುಗಳ ಪ್ರೀತಿ, ವಿಶ್ವಾಸ, ಸ್ನೇಹ ನಿರಂತರವಾಗಿ ಹೀಗೆಯೇ ಇರಲಿ ಎಲ್ಲ ಯುವಕ ಸಂಘದವರಿಗೂ ಆದರ್ಶವಾಗಿ ಇಂತಹಾ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ ಎಂಬ ಬಯಕೆಯೊಂದಿಗೆ.
ಲನಾಭಟ್ಟ...

Sunday, November 17, 2013

ಬಾಹ್ಯಾಕಾಶದಲ್ಲಿಲ್ಲ ಗ್ರ್ಯಾವಿಟಿ...

ಭೂಮಿ ಎಂಬುದು ಈ ಬ್ರಹ್ಮಾಂಡದಲ್ಲಿ ಜೀವ ವ್ಯವಸ್ಥೆಯನ್ನು ಪೋಷಿಸಬಲ್ಲ ಏಕೈಕ ಗ್ರಹ. ಇನ್ಯಾವುದೇ ಗ್ರಹದಲ್ಲಿ ಈ ತೆರನಾದಂತಹ ರಚನಾತ್ಮಕ ಸಂರಕ್ಷಣಾ ವ್ಯವಸ್ಥೆಯಿಲ್ಲ. ಭೂಮಿಯ ಗುರುತ್ವಾಕರ್ಷಣಾ ಬಲ ನಮ್ಮನ್ನು ಭೂಮಿಯಮೇಲೆ

ಹಿಡಿದಿಡುತ್ತಿದೆ, ಗುರುತ್ವಾಕರ್ಷಣಾ ಬಲವಿಲ್ಲದೇ ಇರುತ್ತಿದ್ದಲ್ಲಿ ನಾವೆಲ್ಲಾ ಹಾರಾಡಿಕೊಂಡು ಭೂಮಿಯಿಂದ ಹೊರಗೇ ಯಾವುದೋ ಕಡೆಗೆ ಹೋಗಿ ಬಿಡುವಂತಾಗುತ್ತಿತ್ತು. ಇತ್ತೀಚೆಗೆ ಬಿಡುಗಡೆಯಾದಂತಹ ಆಂಗ್ಲಭಾಷೆಯ ಚಿತ್ರ ಗ್ರಾವಿಟಿ,

ಭೂಮಿಯಿಂದ ಅಂತರಿಕ್ಷಕ್ಕೆ ಕಳುಹಲ್ಪಟ್ಟ ಗಗನಯಾತ್ರಿಗಳು ಭೂಮಿಯಿಂದ ಸಹಸ್ರಾರು ಮೈಲು ದೂರದಲ್ಲಿ ಗುರುತ್ವ ರಹಿತವಾಗಿ ಅಂತರಿಕ್ಷದಲ್ಲಿ ಕಾರ್ಯನಿರ್ವಹಿಸುವ ರೀತಿಯನ್ನು ಅದ್ಭುತವಾಗಿ ಚಿತ್ರಿಸಲಾಗಿದೆ. ತಾವು ನಿರ್ವಹಿಸುತ್ತಿರುವ

ಬಾಹ್ಯಾಕಾಶಕೇಂದ್ರದಲ್ಲಿ ಉಂಟಾದ ಸಮಸ್ಯೆಯನ್ನು ಸರಿಪಡಿಸಲು ಯತ್ನಿಸುತ್ತಿರುವ ಸಂದರ್ಭದಲ್ಲಿ ಅನಿರೀಕ್ಷಿತವಾಗಿ ರಷ್ಯನ್ನರು ಸ್ಫೋಟಿಸಿದ ಉಪಗ್ರಹದ ತುಂಡುಗಳು ಬಂದು ಬಡಿದಾಗ ಬಾಹ್ಯಾಕಾಶಕೇಂದ್ರ ಛಿದ್ರವಾಗುತ್ತದೆ ಜತೆಗೆ ಗಗನ ಯಾತ್ರಿಗಳ

ನೌಕೆಯೂ ಸಹ ನಾಶವಾಗುತ್ತದೆ. ಈರ್ವರು ಗಗನಯಾತ್ರಿಗಳು ಮಾತ್ರ ಸ್ಫೋಟದಿಂದ ಪಾರಾಗುತ್ತಾರೆ. ಆದರೆ ಭೂಮಿಗೆ ಹಿಂದಿರುಗಬೇಕಾದರೆ ಅಂತರಿಕ್ಷದಲ್ಲೇ ಮತ್ತೊಂದು ಬಾಹ್ಯಾಕಾಶ ಕೇಂದ್ರಕ್ಕೆ ಅವರು ತೆರಳಬೇಕಾದಂತಹ ಸಾಹಸಕ್ಕ್ಕೆ ಮುಂದಾಗಬೇಕಾಗುತ್ತದೆ, ಇಲ್ಲವಾದಲ್ಲಿ ಅವರ ಗಗನಯಾನಿ ದಿರಿಸಿನಲ್ಲಿ ಆಮ್ಲಜನಕ ಮುಗಿದ ತಕ್ಷಣ ಅವರೀರ್ವರ ಬದುಕೂ ಅಂತ್ಯವಾಗುತ್ತದೆ. ಈ ಎಲ್ಲಾ ಸನ್ನಿವೇಷಗಳನ್ನೂ ಅತ್ಯಂತ ಅದ್ಭುತವಾಗಿ ಮೂಡಿಬರುವಂತೆ ಮಾಡಿದ್ದಾರೆ ನಿರ್ದೇಶಕ ಆಲ್ಫೋನ್ಸೋ ಕ್ಯುಅರಾನ್ ಅವರು.ಗಗನಯಾತ್ರಿಯಾಗಬೇಕೆಂಬುದು ಅಲ್ಫಾನ್ಸೋ ಅವರ ಕನಸಾಗಿತ್ತಂತೆ. ಈ ಚಿತ್ರದ ಮೂಲಕ ತಮ್ಮ ಕನಸನ್ನು ನನಸಾಗಿಸಿದಂತಹ ಸಾರ್ಥಕತೆ ಅವರಿಗಿರಬಹುದು. ಅತ್ಯಂತ ಅದ್ಭುತವಾದ ವೈಜ್ನಾನಿಕ ಕಾಲ್ಪನಿಕ ಚಿತ್ರವೆಂಬ ನೆಗಳ್ತೆಗೆ ಗ್ರಾವಿಟಿ ಪಾತ್ರವಾಗಿ imdb ತಾಣದಲ್ಲಿ ಈಗಾಗಲೇ ಹಲವಾರು ಮಂದಿ ಅದ್ಭುತವಾದಂತಹ ಮೆಚ್ಚುಗೆಗಳನ್ನು ವ್ಯಕ್ತಪಡಿಸಿ ತಮ್ಮ ಅಹಿಪ್ರಾಯಗಳನ್ನು ತಿಳಿಸಿದ್ದಾರೆ. ಗಗನಯಾತ್ರಿಗಳ ಜತೆಗೆ ನೀವೂ ಅಂತರಿಕ್ಷಯಾತ್ರೆಗೆ ತೆರಳಿ ಸಾಹಸ ಮಾಡಬೇಕೇ ಹಾಗಿದ್ದಲ್ಲಿ ಇಂದೇ ೩ಡಿ ಯಲ್ಲಿ ಗ್ರಾವಿಟಿ ಚಿತ್ರ ವೀಕ್ಷಿಸಿ. ನಿಮ್ಮ ಅನುಭವ ತಿಳಿಸಿ.

Wednesday, October 2, 2013

Rahul's Doll...

Rahul and Sonia go to a toy shop to buy a doll for Rahul,
First, they see a NaMo doll -> and Sonia asks "Ye doll le le beta ?"
Rahul says crying: Nahi ma ye sab utla bolta hai , nahi nahi ye vala nahi chahiye !
Sonia: OK beta ro mat doosra doll le ley nge.
Next they see a MaMo doll and Sonia asks
Beta ye doll chalega ?
Rahul happily : Hna maa ye doll achcha hai, jo bolta hnoo sunta hai, jo bolta hnoo karta hai... ye theek hai.

Friday, May 31, 2013

ನಮ್ಮ ಕಿಟ್ಟಿ...

 ಶಾಂತಿಪುರದ ಆ ರಸ್ತೆಗೂ ನನಗೂ ಬಹಳಷ್ಟು ನಂಟು, ಹಿಂದೊಮ್ಮೆ ಅಹೋರಾತ್ರಿ, ಮಧ್ಯ ದಾರಿಯಲ್ಲಿ ಬಿದ್ದು ನಮ್ಮ ಹೊಟ್ಟೆಯಲ್ಲಿ ಅಂತ್ಯವಾದ ಅನಾನಾಸೊಂದರ ಬಗ್ಗೆ ನನ್ನ ಬ್ಲಾಗ್ ನಲ್ಲಿ ಬರೆದಿದ್ದೆ. ಈ ಬಾರಿ ನಮ್ಮ ಮನೆಯ ಪ್ರೀತಿಯ ಸದಸ್ಯ ಕಿಟ್ಟಿ ಯ ಬಗ್ಗೆ ಹೇಳಹೊರಟಿದ್ದೇನೆ. ಹೌದು ಅಲ್ಲೇ, ಅನಾನಾಸು ಬಿದ್ದ ಜಾಗಕ್ಕಿಂತ ಮತ್ತೆ ೧೦ ಮೀಟರ್ ಹಿಂದಿನ ಪೊದೆಯೊಂದರಲ್ಲಿ ಕಿಟ್ಟಿ ನನ್ನ ಕಣ್ಣಿಗೆ ಬಿದ್ದದ್ದು.

ನಮ್ಮ ಕಂಪೆನಿಯಲ್ಲಿ 2012 ರ ನವೆಂಬರ್ ಡಿಸೆಂಬರ್ ತಿಂಗಳಿನಲ್ಲಿ ಐಪಿ ಎಲ್ ಮಾದರಿಯ ಕ್ರಿಕೆಟ್ ಪಂದ್ಯಾವಳಿಯನ್ನು ಅಯೋಜಿಸಲಾಗಿತ್ತು. ಆಟಗಾರರ ಕೌಶಲದ ಅಳತೆಯ ಮೂಲಕ ಎ,ಬಿ ಮತ್ತು ಸಿ ವಿಭಾಗಗಳನ್ನು ರಚಿಸಿ, ವಿವಿಧ ತಂಡಗಳ ಮಾಲಕರನ್ನು ನಿರ್ಧರಿಸಿ ಅವರು ಆಟಗಾರರನ್ನು ಹರಾಜಿನಲ್ಲಿ ಕೊಳ್ಳುವ ಮೂಲಕ ತಂಡಗಳನ್ನು ರಚಿಸಿದ್ದರು.

ನಮ್ಮ ತಂಡ ಟೈಟನ್ಸ್, ಪಂದ್ಯಾವಳಿಯ ಪ್ರಾರಂಭಕ್ಕೆ ಮೊದಲು ಒಂದು ತಿಂಗಳಿರುವಂತೆಯೇ ನಮ್ಮ ಅಭ್ಯಾಸ ಪ್ರಾರಂಭವಾಗಿತ್ತು , ನನ್ನ ಕಛೇರಿಯ ಹಿಂಬದಿಯಲ್ಲಿ ಯಾವುದೋ ರಿಯಲ್ ಎಸ್ಟೇಟ್ ಏಜೆನ್ಸಿ ಖರೀದಿಸಿ, ತಡೆಗೋಡೆ ಕಟ್ಟಿ ಇರಿಸಿದ್ದ ಎಕರೆಗಟ್ಟಲೆ ಖಾಲಿಜಾಗದಲ್ಲೇ ನಮ್ಮ ಅಭ್ಯಾಸ. ದಿನಂಪ್ರತಿ ಬೆಳಗ್ಗೆ ೭ರಿಂದ ಒಂಭತ್ತರವರೆಗೆ ನಮ್ಮ ಕಫ್ತಾನ ಪ್ರದೀಪ್ ನೇತೃತ್ವದಲ್ಲಿ ಅವಿರತ ಶ್ರಮವಹಿಸಿ ನಮ್ಮನ್ನು ನಾವು ಸಿದ್ಧಗೊಳಿಸಿದ್ದೆವು. ನಮ್ಮ ಕಠಿಣ ಪರಿಶ್ರಮದ ಹೊರತಾಗಿಯೂ ನಾವು ಮೂರರಲ್ಲಿ ಒಂದೇ ಪಂದ್ಯವನ್ನು ಗೆಲ್ಲುವಲ್ಲಿ ಯಶಸ್ವಿಯಾಗಿದ್ದೆವು, ಪರವಾಗಿಲ್ಲ ಬಿಡಿ, ಈಗ ಕಿಟ್ಟಿಗೂ ಕ್ರಿಕೆಟ್ ಅಭ್ಯಾಸಕ್ಕೂ ಏನು ಸಂಬಂಧವಪ್ಪಾ ಎನ್ನುವ ಪ್ರಶ್ನೆ ನಿಮ್ಮ ತಲೆಯಲ್ಲಿ ಹೊಕ್ಕಿರಬಹುದು, ಹೇಳುತ್ತೇನೆ ಕೇಳಿ.

ಒಂದು ದಿನ ಅಭ್ಯಾಸ ಮುಗಿಸಿ ನಾನು ಮನೆಗೆ ಹಿಂದಿರುಗುತ್ತಿದ್ದಾಗ, ಪುಟ್ಟ ಕಿಟ್ಟಿ ನನ್ನ ಕಣ್ಣಿಗೆ ಕಾಣಿಸಿದ್ದ, ನಮ್ಮ ಕಂಪೆನಿಯಿಂದ ಬಂದು ಶಾಂತಿಪುರದ ರಸ್ತೆಗೆ ತಿರುಗುವ ಮೂಲೆಯ ಸೈಟ್ ನಲ್ಲಿ ಗುಜರಿ ಅಂಗಡಿಯೊಂದಿದೆ, ಆ ಗುಜರಿ ಅಂಗಡಿಯ ಮುಂದೆ ಒಂದು ನಾಯಿಯನ್ನು ಸದಾ ಕಟ್ಟಿ ಹಾಕಲಾಗಿರುತ್ತದೆ, ರಸ್ತೆಯಲ್ಲಿ ಯಾರು ಏನೇ ಮಾಡಿದರೂ ಆ ನಾಯಿಗೆ ಸಂಬಂಧವೇ ಇಲ್ಲವೆಂಬಂತೆ ಸುಮ್ಮನಿದ್ದು ಬಿಡುತ್ತದೆ, ತನ್ನ ಜಾತಿಬಾಂಧವರನ್ನು ಕಂಡರೆ ಮಾತ್ರ ಅದಕ್ಕೆ ತನ್ನ ಜಾತಿಯ ನೆನಪಾಗಿ ತುಸು ಬೊಗಳಿ ಸುಮ್ಮನಾಗುತ್ತದೆ, ಯಾವತ್ತಿನಂತೆ ಇಂದೂ ನಾಯಿಯ ಇರುವಿಕೆಯನ್ನು ಖಚಿತಪಡಿಸಿ ನನ್ನ ಬೈಕ್ ನ್ನು ಎಡಕ್ಕೆ ತಿರುಗಿಸಿ ಸ್ವಲ್ಪ ಮುಂದೆ ಬರುವಷ್ಟರಲ್ಲಿ ಬೆಕ್ಕಿನ ಮರಿಯ ಕೂಗು ನನ್ನ ಕಿವಿಗಳನ್ನು ಅಪ್ಪಳಿಸಿದ್ದೇ ನನ್ನ ಅಂತರಾತ್ಮ ಜಾಗೃತವಾಗಿತ್ತು. ಕಣ್ಣುಗಳು ಸುತ್ತ ಮುತ್ತ ಹುಡುಕತೊಡಗಿದವು. ಬೈಕ್ ನಿಲ್ಲಿಸಿ ಶಬ್ದ ಯಾವ ಕಡೆಯಿಂದ ಬರುತ್ತಿದೆ ಎಂದು ಗಮನಿಸಿದೆ, ಬೆಳಗಿನ ಜಾವ ೯, ಬೆರಳೆಣಿಕೆಯಷ್ಟು ಮಂದಿ ರಸ್ತೆಯಲ್ಲಿ ನಡೆದಾಡುತ್ತಿದ್ದರು. ೨ ಮುದ್ದಾದ ಬೆಕ್ಕಿನ ಮರಿಗಳು ರಸ್ತೆಯ ಪಕ್ಕದ ಲಂಟಾನ ಪೊದೆಯೊಳಗಿಂದ ಕುಪ್ಪಳಿಸಿ ಈಚೆಗೆ ಬಂದವು, ಎರಡರ ಮೈಮೇಲೆಯೂ ಚಿರತೆಯ ಮರಿಗಳಂತೆಯೇ ಚುಕ್ಕಿಗಳು, ಸಹಜಾತರೆಂಬುದರಲ್ಲಿ ಸಂದೇಹವಿಲ್ಲ. ಬೈಕ್ ನ್ನು ಅದರ ಕಾಲಮೇಲೆ(ಸ್ಟಾಂಡ್) ನಿಲ್ಲಿಸಿ ಮೆಲ್ಲನೆ ಮರಿಗಳ ಹತ್ತಿರ ಬಂದೆ, ಅವುಗಳನ್ನು ಹಿಡಿಯುವ ಪ್ರಯತ್ನ ಮಾಡುತ್ತಿದ್ದಂತೆಯೇ ಎರಡೂ ಮತ್ತೆ ಪೊದೆಯೊಳಕ್ಕೆ ಸೇರಿಕೊಂಡವು. ಯಾರಾದರೂ ನನ್ನನ್ನು ಗಮನಿಸುತ್ತಿದ್ದಾರೆಯೇ ಎಂಬ ಪರಿವೆಯೂ ಇಲ್ಲದೆ ಮರಿಗಳು ಪೊದೆಯಿಂದ ಹೊರಬರುವುದನ್ನೇ ಕಾಯುತ್ತಾ ಕುಳಿತೆ. ನಿಸ್ಸಂಶಯವಾಗಿ ಯಾರೋ ಪುಣ್ಯಾತ್ಮರು ತಂದು ಮರಿಗಳನ್ನು ಇಲ್ಲಿ ಬಿಟ್ಟು ಹೋಗಿದ್ದಾರೆ, ಬೀದಿ ನಾಯಿಗಳು ಸದಾ ಓಡಾಡುವ ಜಾಗ ಬೇರೆ ಮರಿಗಳನ್ನು ಕಂಡರಂತೂ ಕಥೆ ಮುಗಿದಂತೆಯೇ. ಅಷ್ಟರಲ್ಲಿ ಕಿಟ್ಟಿ ಪೊದೆಯಿಂದ ಹೊರಗೆ ಬಂದ ನನ್ನ ಕೈಯಲ್ಲಿ ಬಂಧಿಯಾಗಿದ್ದ, ಯಾವುದೇ ಪ್ರತಿರೋಧವಿಲ್ಲದೆ(ಕಚ್ಚದೆ,ಪರಚದೆ) ನನಗೆ ಶರಣಾಗಿದ್ದ. ಹಿಡಿದದ್ದಾಯಿತು ಇನ್ನು ಮನೆಗೆ ಕೊಂಡೊಯ್ಯುವುದೆಂತು ನನ್ನ ತಲೆ ಸ್ವಲ್ಪ ಬಿಸಿಯಾಯಿತು. ನನ್ನ ಕ್ಯಾಮರಾ ಖರೀದಿಸಿದಾಗ ಸಿಕ್ಕಿದ್ದ ಚೀಲದಲ್ಲಿ ಕುಡಿಯುವುದಕ್ಕಾಗಿ ನೀರಿನ ಬಾಟಲಿಯನ್ನು ಹಾಕಿ ತಂದಿದ್ದೆ. ಅದೇ ಚೀಲದಲ್ಲಿ ಕಿಟ್ಟಿಯನ್ನು ತುಂಬಿಸಿ ಕೊಂಡೊಯ್ಯುವ ನಿರ್ಧಾರ ಮಾಡಿ ಅವನನ್ನು ಚೀಲದೊಳಗೆ ಕುಳ್ಳಿರಿಸಿದೆ. ಕಿಟ್ಟಿಯ ಕಿರುಚಾಟ ಮುಗಿಲು ಮುಟ್ಟಿತ್ತು, ಅಗಲ ಬಾಯಿಯ ಚೀಲದ ಬಾಯನ್ನು ಒಂದು ಕೈಯಿಂದ ಮುಚ್ಚಿ   ಮತ್ತೊಂದು ಕೈಯಲ್ಲಿ ಬೈಕ್ ಚಲಾಯಿಸುತ್ತಾ ಹೊಂಡಗಳನ್ನು ಹಾರಿ,ಕಿಟ್ಟಿಯ ತಲೆ ಹೊರಬರುತ್ತಿದ್ದಂತೆ ಮೆಲ್ಲನೆ ನೋವಾಗದಂತೆ ಒಳಗೆ ತುರುಕುತ್ತಾ, ಹೇಗೋ ಮನೆಗೆ ತಲುಪಿದೆ. ಚೀಲವನ್ನು ಕೆಳಗಿರಿಸುತ್ತಿದ್ದಂತೆಯೇ ಹೊರಬಂದ ಕಿಟ್ಟಿ ಚೀರಾಡುತ್ತಾ ಮನೆಯಿಡೀ ಓಡಾಡ ತೊಡಗಿದ.







ಅಮ್ಮನಿಗೆ ಸಾಕುಪ್ರಾಣಿಗಳೆಂದರೆ ಇಷ್ಟವೇ, ಆದರೆ ಅವು ತನ್ನ ಮೈಮೇಲೆ ಏರಿದರೆ ಮಾತ್ರ ಅಸಹ್ಯ. ಕಿಟ್ಟಿಗೆ ಹಾಲೆರೆದು ತಟ್ಟೆಯ ಬಳಿ ಬಿಡುತ್ತಿದ್ದಂತೆಯೇ ಕ್ಷಣಮಾತ್ರದಲ್ಲಿ ಹಾಲು ಕುಡಿದು ಮತ್ತೆ ಪುನಃ ಮನೆಯೆಲ್ಲಾ ಓಡಾಡತೊಡಗಿದ. ಆತನ ರೋದನ ಮತ್ತೆ ಮುಂದುವರಿದಿತ್ತು. ಸಂಜೆಯಾಗುವಷ್ಟರಲ್ಲಿ ಕಿಟ್ಟಿ ಶಾಂತನಾಗಿ ನಮ್ಮ ಮನೆಯವನಾಗಿಬಿಟ್ಟ.

ಮೊದಮೊದಲು ಕಿಟ್ಟಿ ಗೆ ಶೌಚದ್ದೇ ದೊಡ್ಡ ಸಮಸ್ಯೆಯಾಗಿತ್ತು, ಆತನಿಗೆಂದು ಮರಳಿನ ರಾಶಿಯನ್ನು ತಂದು ಡಿಟಿ ಎಚ್ ನ ಬಾಣಲೆಯಲ್ಲಿ ಹಾಕಿ, ಪ್ರತೀಬಾರಿ ಆತನಿಗೆ ಬಹಿರ್ದೆಸೆಗೆ ಹೋಗಬೇಕಾದಾಗ ಮರಳಿನ ಮೇಲೆ ಬಿಟ್ಟು ಅಭ್ಯಾಸ ಮಾಡಿಸಿದೆವು. ಪದೇ ಪದೇ ತೆರಳಿ ಮರಳೆಲ್ಲಾ ಹಾಳಾದಾಗ ಮತ್ತೆ ಮರಳು ತುಂಬಿಸಿಡುವ ಕೆಲಸ ಬಹಳ ತ್ರಾಸದಾಯಕವಾಗಿದ್ದುದ್ದರಿಂದ ಆತನನ್ನು ಮನೆಯಿಂದ ಹೊರಗೆ ಖಾಲಿ ಜಾಗದಲ್ಲಿ ಬಿಡಲಾರಂಭಿಸಿದೆವು, ನಾವು ಧೈರ್ಯಕ್ಕೆ ಜತೆಗೆ ನಿಂತಲ್ಲಿ, ಮಣ್ಣಿನಲ್ಲಿ ಹೊಂಡತೋಡಿ, ನಾಯಿಗಳ ಓಡಾಟವಿಲ್ಲವೆಂದು ಖಚಿತಪಡಿಸಿ, ದೇಹವನ್ನು ಹಿಗ್ಗಿಸಿ ನಮ್ಮ ಇರುವಿಕೆಯನ್ನು ನಗಣ್ಯವಾಗಿಸಿ ಮುಗಿಸಿ ಹೊಂಡಮುಚ್ಚಿ ಬರುತ್ತಿದ್ದ.ಒಮ್ಮೊಮ್ಮೆ ಬಾತ್ ರೂಮ್ ಒಳಗಡೆ ಮೂಲೆಯಲ್ಲಿ ಮೂತ್ರವಿಸರ್ಜಿಸುತ್ತಿದ್ದ. ಆತನ ಹೊಟ್ಟೆ ಸರಿ ಇಲ್ಲದಿದ್ದಾಗಲೆಲ್ಲ ರಾತ್ರಿವೇಳೆ ನಮ್ಮ ಡೋರ್ ಮ್ಯಾಟ್ ಕೊಳಕಾಗಿರುತ್ತಿತ್ತು , ಕೆಲವೊಮ್ಮೆ ರಾತ್ರಿವೇಳೆ ಡೋರ್ ಮ್ಯಾಟ್ ಗಳನ್ನು ತೆಗೆದಿರಿಸಿದ್ದೂ ಇದೆ. ಅಂತೂ ಇಂತೂ ಕಿಟ್ಟಿ ಕೊನೆಗೂ ದೊಡ್ಡವನಾದ, ಸ್ವಚ್ಛವಾದ ಅಭ್ಯಾಸಗಳನ್ನು ಮೈಗೂಡಿಸಿಕೊಂಡ.

ಕಿಟ್ಟಿ ಸಣ್ಣವನಾಗಿದ್ದಾಗ ತಡೆರಹಿತವಾಗಿ, ಬೆಂಗಳೂರಿನ ವಾಹನ ಸವಾರರು ಹಾರ್ನ್ ಬಾರಿಸಿದಂತೆ ಮೇವ್ ಮೇವ್ ಎಂದು ಕೂಗುತ್ತಿದ್ದ. ಎಷ್ಟು ಹಾಲುಣಿಸಿದರೂ ಭೀಮನ ಹೊಟ್ಟೆಗೆ ಕಾಸಿನ ಮಜ್ಜಿಗೆಯಂತೆ ಭಾಸವಾಗುತ್ತಿತ್ತು. ಕೇವಲ ಹಾಲನ್ನು ಮಾತ್ರ ಕುಡಿಯುತ್ತಿದ್ದ ,ಹಾಲಿನ ಜತೆಗೆ ಬೆರೆಸಿದ ಅನ್ನ ತಟ್ಟೆಯಲ್ಲೇ ಉಳಿದುಬಿಡುತ್ತಿತ್ತು. ಕೆಲವೊಮ್ಮೆ ಯಾಕಪ್ಪಾ ಈರೀತಿ ಅಳುತ್ತಿದ್ದಾನೆ ಎನ್ನಿಸುತ್ತಿತ್ತು. ಮುಗ್ಧವಾಗಿ ನಮ್ಮ ಮುಖವನ್ನೇ ನೋಡಿ ಮೇವ್ ಮೇವ್ ಎಂದು ಕೂಗುತ್ತಿದ್ದ ಕಿಟ್ಟಿಯ ಮುಖ ಸಣ್ಣ ಮಕ್ಕಳಂತೆಯೇ ಕಾಣಿಸುತ್ತಿತ್ತು. ಸಂಜೆಯ ವೇಳೆಯಲ್ಲಿ ಒಮ್ಮೊಮ್ಮೆ ಚೆಂಡಿನ ಜತೆಗೆ ಆಟವಾಡತೊಡಗಿದರೆ ಘಂಟೆಗಟ್ಟಲೆ ಚೆಂಡನ್ನು ಉರುಳಿಸುತ್ತಾ ಅದರ ಜತೆ ಸಣ್ಣ ಮಕ್ಕಳಂತೆಯೇ ಆಟವಾಡುತ್ತಿದ್ದ.

ಬರಬರುತ್ತಾ ಕಿಟ್ಟಿಯ ಸ್ವಭಾವದಲ್ಲಿ ಪರಿವರ್ತನೆ ಕಾಣಲಾರಂಭಿಸಿತು, ಆತನ ಕಿರುಚಾಟ ಕಡಿಮೆಯಾಯಿತು, ಮನೆಯಿಂದ ಹೊರಹೋಗಬೇಕಾಗಿದ್ದಲ್ಲಿ ಬಾಗಿಲ ಬಳಿಗೆ ಬಂದು ಚಿಲಕವನ್ನೇ ನೋಡಿ ಮೇವ್ ಮೇವ್ ಎನ್ನುತ್ತಿದ್ದ. ಹಾಗೆ ಹೊರಗಡೆಯಿಂದ ಬಂದು ಬಾಗಿಲ ಬಳಿ ನಿಂತು ನಮ್ಮನ್ನು ಕೂಗಿ ಕರೆದು ಬಾಗಿಲು ತೆರೆಸುತ್ತಿದ್ದ, ಮುಂದಿನ ಬಾಗಿಲನ್ನು ತೆರೆಯಲು ಯಾರೂ ಬರದಿದ್ದಲ್ಲಿ ನಮ್ಮ ಅಪಾರ್ಟ್  ಮೆಂಟ್ ಬ್ಲಾಕ್  ಗೆ ಒಂದು ಸುತ್ತು ಬಂದು ಹಿಂದಿನ ಬಾಗಿಲಿನ ಬಳಿ ಬಂದು ಕೂಗುತ್ತಿದ್ದ.  ಹಾಲು ಬೇಕಾದಲ್ಲಿ ನಮ್ಮಲ್ಲಿ ಯಾರಾದರೂ ನಿಂತಿದ್ದವರ ಕಾಲುಗಳಿಗೆ ಪದೇ ಪದೇ ಸುತ್ತಿ ಸುತ್ತಿ ಸುಳಿದು ಕೂಗುತ್ತಿದ್ದ. ಆತನ ಊಟದ ಬಟ್ಟಲ ಬಳಿಯಲ್ಲಿ ಕಸದ ಬುಟ್ಟಿ ಇದೆ. ಅದೇ ಆತನ ಸಿಂಹಾಸನ, ಅದರ ಮೇಲೆ ಹತ್ತಿ ಕುಳಿತು ಅಡಿಗೆ ಮನೆಯಲ್ಲಿ ಅಮ್ಮ ನ ಮುಖ ನೋಡಿ ಕೂಗಿ ಕರೆಯುತ್ತಿದ್ದ. ಎಲ್ಲದಕ್ಕಿಂತ ಮುಖ್ಯವಾಗಿ ಆತನ ಅಳು ನಿಂತಿತ್ತು, ಬೇಕಾದಾಗ ಮಾತ್ರ ಕೂಗುತ್ತಿದ್ದ. ಉಳಿದ ಸಮಯದಲ್ಲಿ ಹಗಲು ಪುಸ್ತಕದ ಮೇಲೋ, ಪೇಪರ್ ಮೇಲೋ ಅಥವಾ ನನ್ನ ಬ್ಯಾಗ್ ನ ಮೇಲೋ ಬಿದ್ದು ನಿದ್ದೆ ಮಾಡುತ್ತಿದ್ದ, ರಾತ್ರಿವೇಳೆ ಹೊರಗಡೆ ತಿರುಗಾಡುತ್ತಿದ್ದ. ಒಂದೆರಡು ಬಾರಿ ಇಲಿ ಹಿಡಿದು ಮನೆಯೊಳಕ್ಕೆ ತಂದು ಬಿಟ್ಟಿದ್ದ , ಬೈದು ಹೊರಗಟ್ಟಿದ ಬಳಿಕ ಮನೆಯ ಹೊರಗೆ ಎರಡು ಅಪಾರ್ಟ್ ಮೆಂಟ್ ಗಳ ನಡುವೆ ವೆಂಟಿಲೇಷನ್ ಗಾಗಿ ಬಿಟ್ಟಿದ್ದ ಜಾಗದಲ್ಲಿ ಇಟ್ಟು ತಿನ್ನುತ್ತಿದ್ದ.

ಕಿಟ್ಟಿಗೂ ಅಮ್ಮನಿಗೂ ಅದೆಂತಹಾ ಬಾಂಧವ್ಯ ಬೆಳೆಯಿತೆಂದರೆ ಬೆಕ್ಕು ಮೈಮೇಲೆ ಹತ್ತಿದರೆ ದೂರ ತಳ್ಳುತ್ತಿದ್ದ ಅಮ್ಮನ ಮಡಿಲ ಮೇಲೆ ಕಿಟ್ಟಿ ಬಂದು ಕುಳಿತುಕೊಳ್ಳುತ್ತಿದ್ದರೆ ಅಮ್ಮ ನಯವಾಗಿ ಅದರ ಮೈ ಸವರಿ ಮಾತನಾಡಿಸುತ್ತಿದ್ದರೆ ಮೇವ್ ಎಂದು ಪ್ರತಿಸ್ಪಂದಿಸುತ್ತಿದ್ದ.ಅಮ್ಮ ಚಾಪೆ ಮೇಲೆ ಮಲಗಿದ್ದಲ್ಲಿ ಅಮ್ಮನಿಗೆ ತಾಗಿ ಅಮ್ಮನ ಸೀರೆಯ ಮೇಲೆ ಕಿಟ್ಟಿ ಮಲಗುತ್ತಾನೆ. ಕಿಟ್ಟಿ ಕೂಗಿದ ತಕ್ಷಣ ಅಮ್ಮ ಅವನಿಗೆ ಹಾಲೆರೆದು ತಲೆಸವರಿ ಮುದ್ದಿನಿಂದ ಮಾತನಾಡುತ್ತಾಳೆ. ಅಮ್ಮ ಒಮ್ಮೊಮ್ಮೆ ಅವನನ್ನೆತ್ತಿ ಮಕ್ಕಳಂತೆ ಎತ್ತಿಕೊಳ್ಳುವುದೂ ಇದೆ.







ಕಿಟ್ಟಿಯನ್ನು ಯಾರೂ ಎತ್ತಿಕೊಂಡು ಮುದ್ದು ಮಾಡುವಂತಿಲ್ಲ, ಅಮ್ಮನ ಹೊರತಾಗಿ, ನಮ್ಮ ಮನೆಯಲ್ಲಿ ಬೇರೆ ಯಾರ ಸ್ಪರ್ಶವೂ ಅವನಿಗೆ ಇಷ್ಟವಾಗುವುದಿಲ್ಲ, ಅವರ ಕೈಯಿಂದ ಜಿಗಿದು ಕಿಟ್ಟಿ ಗೊಣಗುತ್ತಾ ನಡೆಯುತ್ತಾನೆ. ಹಾಲೆರೆಯುವುದಕ್ಕೆ ಯಾರಾದರೂ ಅಡ್ಡಿಯಿಲ್ಲ.
ಕಿಟ್ಟಿ ನಮ್ಮ ಕುಟುಂಬದ ಸದಸ್ಯನಂತೆಯೇ ನಮ್ಮ ಮನಸ್ಸಿನಲ್ಲಿ ಬೆರೆತಿದ್ದಾನೆ, ಕಿಟ್ಟಿಯ ಕಾರಣದಿಂದಾಗಿ ನಾವು ಮನೆ ಖಾಲಿ ಬಿಟ್ಟು ಬೀಗ ಹಾಕಿ ದಿನಗಟ್ಟಲೆ ಹೋಗುವುದಿಲ್ಲ, ಆತನನ್ನು ನೋಡಿಕೊಳ್ಳುವುದಕ್ಕೆ ಯಾರಾದರೂ ಇರುತ್ತೇವೆ. ಮನೆಯಿಂದ ಹೊರಹೋದವರು ವಾಪಾಸು ಬಂದ ತಕ್ಷಣ ಕೇಳುವುದು ಕಿಟ್ಟಿ ಎಲ್ಲಿದ್ದಾನೆ ಎಂದು, ನಾವು ಮನೆಗೆ ಬರುವಾಗ ಕೆಲವೊಮ್ಮೆ ಸ್ವಾಗತಕ್ಕೆ ಕಿಟ್ಟಿ ಇದುರಾಗುತ್ತಾನೆ. ಆತನ ಆಟ, ಮಂಗಾಟ, ಹಠ, ಪ್ರೀತಿಗೆ ಮನೆಯಲ್ಲಿನ ಎಲ್ಲರೂ ಸೋಲುತ್ತಾರೆ. ಕಿಟ್ಟಿ ಬೆಕ್ಕಾದರೂ ನಮ್ಮ ಮನೆಯವನೇ ಆಗಿದ್ದಾನೆ, ನಮ್ಮ ಮೊಗದಲ್ಲಿ, ಮನಸ್ಸಿನಲ್ಲಿ ನಗುವನ್ನು ಅರಳಿಸಿದ್ದಾನೆ, ನಮ್ಮ ಜತೆಗೆ ಬೆರೆತು ಮನಸ್ಸು ಹಗುರಾಗುವಂತೆ ಮಾಡಿದ್ದಾನೆ, ಮನಸ್ಸಿನ ಎಷ್ಟೋ ಚಿಂತೆಗಳು, ಸಮಸ್ಯೆಗಳು ಆತನ ಆಟದ ಮುಂದೆ, ಮುಗ್ಧ ನೋಟದ ಮುಂದೆ ಮರೆತುಹೋಗುತ್ತವೆ.






ಹಲವು ಮನೆಗಳಲ್ಲೂ ಇಂತಹಾ ಕಿಟ್ಟಿಯರು ಇರುತ್ತಾರೆ, ಅವರಿಂದಾಗಿ ನಮಗರಿವಿಲ್ಲದೆಯೇ ಅದೆಷ್ಟು ಬಾರಿ ನಮ್ಮ ಮುಖದಲ್ಲಿ ನಗುವರಳಿದೆ. ಸಾಕು ಪ್ರಾಣಿಗಳು ನಮ್ಮನ್ನು ಅದೆಷ್ಟು ಹೊಂದಿಕೊಂಡಿರುತ್ತವೆ ,
ಕೆಲವೊಮ್ಮೆ ನಮ್ಮ ಅನುಪಸ್ತಿಯಲ್ಲಿ ಆಹಾರ ಸೇವನೆಗೂ ಅವು ಮುಂದಾಗುವುದಿಲ್ಲ, ನಮಗೇನಾದರೂ ಅಸೌಖ್ಯವುಂಟಾದಲ್ಲಿ, ನೋವಾಗಿದ್ದಲ್ಲಿ ಅವುಗಳೂ ಭಾವನಾತ್ಮಕವಾಗಿ ಸ್ಪಂದಿಸುತ್ತವೆ.
ಇವೆಲ್ಲವನ್ನು ಅನುಭವಿಸಬೇಕೆಂದಿದ್ದರೆ ನಮಗೂ ಪ್ರಾಣಿಗಳ ಮೇಲೆ ಪ್ರೀತಿ, ಅನುಕಂಪ, ಗೌರವಗಳಿರಬೇಕು, ಆಗಲೇ ಬದುಕು ಸಾರ್ಥಕ.

Tuesday, May 14, 2013

ಪುಟ್ಟ ಕರು



ನಾನು ಅದೆಷ್ಟೋ ಛಾಯಾ ಚಿತ್ರಗಳನ್ನು ತೆಗೆದಿರಬಹುದು ಆದರೆ ನನ್ನನ್ನು ಮತ್ತೆ ಮತ್ತೆ ಮತ್ತೆ ಮತ್ತೆ ತನ್ನೆಡೆಗೆ ಯಾವತ್ತೂ ಸೆಳೆಯುತ್ತಿರುವುದು ಈ ಮುದ್ದು ಕರುವಿನ ಚಿತ್ರ. ಅದರ ಕಣ್ಣುಗಳಲ್ಲಿನ ಭಾವ,ಅದರ ಮೈಮೇಲಿನ ಚಿತ್ತಾರದಂತೆ ಗೋಚರಿಸುವ ಬಿಳಿಯ ಮಚ್ಚೆಗಳು, ಕಿವಿಯರಳಿಸಿ ನನ್ನನ್ನೇ ಗಮನಿಸುತ್ತಿದ್ದ ಆ ಕ್ಷಣಗಳು ಎಂದೆಂದಿದಗೂ ಹಸಿರಾಗಿ ದಾಖಲುಗೊಂಡಿವೆ.  ಆ ಕರು ಎಲ್ಲಿದೆಯೋ,ಹೇಗಿದೆಯೋ? ಇದೆಯೋ ಇಲ್ಲವೋ ಹಲವಾರು ಬಾರಿ ನನಗೆ ಹೀಗನ್ನಿಸಿದ್ದುಂಟು  . ಈ ಕರುವಿನ ಕಣ್ಣುಗಳ್ಲ್ಲಲ್ಲಿ, ಅದೆಷ್ಟು ಪ್ರಶ್ನೆಗಳು  ಉತ್ತರಕ್ಕಾಗಿ ಕಾಯುತ್ತಿವೆ ಅನ್ನಿಸಿದ್ದುಂಟು. ನಮಗೂ ಮೂಕಪ್ರಾಣಿಗಳಿಗೂ ಎನೋ ಒಂದು ನಂಟಿದೆ ಎಂಬುದಂತೂ ಸತ್ಯ.
ಮಾಂಸಾಹಾರಿಗಳು ಮುಂದಿನ ಬಾರಿ ತಟ್ಟೆಯಲ್ಲಿರುವುದನ್ನು ಬಾಯಿಯಲ್ಲಿರಿಸುವ ಮೊದಲು ಸ್ವಲ್ಪ ಯೋಚಿಸಿ, ನಿಮಗೇನೂ ಅನ್ನಿಸುವುದಿಲ್ಲವೇ ?

Sunday, March 24, 2013

ಸಾರ್ಥಕ್ಯ

೩೫ ವರ್ಷಗಳಿಂದ ತಮ್ಮ ಉಸಿರಲ್ಲಿ ಉಸಿರಿನಂತೆ ಬೆರೆತಿದ್ದ ಅಂಗಡಿಯಿಂದ ಹೊರಗೆ ಬಂದ ಭಟ್ಟರು ಕೊನೆಯ ಬಾರಿಗೆ ಎಂಬಂತೆ ಹಿಂತಿರುಗಿ ನೋಡಿ ದೀರ್ಘವಾದ ಉಸಿರೊಂದನ್ನು ಬಿಟ್ಟರು.ಅವರು ತಮ್ಮ ತಂದೆಯಿಂದ ಬಂದಿದ್ದ ವಹಿವಾಟನ್ನು ಸರಸ್ವತೀ ಸೇವೆ ಎಂಬುದಾಗಿ ಭಾವಿಸಿ ಪುಸ್ತಕದ ಮಳಿಗೆಯನ್ನು ನಡೆಸುತ್ತ ಬಂದಿದ್ದರು. ಭಾರೀ ಎಂಬಂತೆ ದೊಡ್ಡದಲ್ಲವಾದರೂ ಸಣ್ಣದೂ ಅಲ್ಲವೆಂಬಂತೆ, ನಗರದ ತುಸು ಹೊರಗೆ ಚೆನ್ನಾಗಿ ವ್ಯವಹಾರ ಬೆಳೆದು ನಿಂತಿತ್ತು. ತಮ್ಮ ಗೆಳೆಯ ದಿನೇಶ ಕಾಮತರ ದೂರದ ಸಂಬಂಧಿಯೊಬ್ಬ ಭಟ್ಟರ ಮಳಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ.

ಭಟ್ಟರ ಧರ್ಮಪತ್ನಿ ಭಾರತಿ ಸದ್ಗುಣಿ, ಸರಳ ವ್ಯಕ್ತಿತ್ವದ ನಗುಮುಖದಿಂದ ಎಲ್ಲರನ್ನೂ ಆದರದಿಂದ , ಪ್ರೀತಿಯಿಂದ ಕಾಣುತಿದ್ದರು. ಈರ್ವರು ಮಕ್ಕಳನ್ನು ಪಡೆದಿದ್ದ ದಂಪತಿ, ಮಗಳನ್ನು ವಿವಾಹ ಮಾಡಿ ಕೊಟ್ಟಿದ್ದರು, ಮಗ ಒಳ್ಳೆಯ ವಿದ್ಯಾಭ್ಯಾಸವನ್ನು ಪಡೆದು, ವಿದೇಶದಲ್ಲಿ ಉದ್ಯೋಗದಲ್ಲಿದ್ದ.

ಬೀದಿಗಿಳಿದು, ಪ್ರತಿದಿನವೂ ತಮ್ಮ ಬಜಾಜ್ ಸ್ಕೂಟರನ್ನು ನಿಲ್ಲಿಸುತ್ತಿದ್ದ ಮರದ ಬುಡಕ್ಕೆ ಬಂದ ಭಟ್ಟರು ಸ್ಕೂಟರ್ ಹತ್ತಿ ಮನೆಗೆ ಹೊರಟರು.
ನಗರದಿಂದ ಹೊರಕ್ಕೆ ಬಂದು ತಮ್ಮ ಗ್ರಾಮದೆಡೆಗೆ ತಿರುಗಿ ಕಚ್ಚಾ ರಸ್ತೆಯಲ್ಲಿ ನಿಧಾನವಾಗಿ ಸ್ಕೂಟರ್ ಚಲಾಯಿಸಿಕೊಂಡು ಹತ್ತು ವರ್ಷಗಳ ಹಿಂದಿದ್ದ ತಮ್ಮ ಊರಿಗೂ ಇಂದಿರುವ ತಮ್ಮ ಊರಿಗೂ ಕಾಣುವ ವ್ಯತ್ಯಾಸಗಳನ್ನು ಯೋಚಿಸುತ್ತಾ ತಮ್ಮ ಮನೆಯ ಅಂಗಳವನ್ನು ತಲುಪಿದರು
ಶ್ರೀರಾಮನ ಆದರ್ಶಗಳನ್ನು ಬಾಳಿನಲ್ಲಿ ಅಳವಡಿಸಿಕೊಂಡಿದ್ದ ಹಿರಿಯರು ಭಟ್ಟರ ಊರನ್ನು ಶ್ರೀರಾಮಪುರವೆಂದು ಕರೆಯಲು ಪ್ರಾರಂಭಿಸಿದ್ದರಂತೆ. ಹಳ್ಳಿಯಲ್ಲಿ ಪುರಾತನವಾದ ಶ್ರೀರಾಮ ಮಂದಿರವೊಂದಿತ್ತು, ಊರ ಮಂದಿ ಶ್ರದ್ಧಾ ಭಕ್ತಿಯಿಂದ ಶ್ರೀರಾಮನನ್ನು ನಂಬಿಕೊಂಡು ಬಂದಿದ್ದರು.
ಪ್ರತೀ ಹಳ್ಳಿಯಂತೆ ಅಂಚೆ ಕಛೇರಿ, ಶಾಲೆ , ನಾಲ್ಕಾರು ಅಂಗಡಿಗಳು ಹಾಗೂ ಸದಾ ಶುದ್ಧವಾದ ಸ್ಫಟಿಕ ಜಲದಿಂದ ತುಂಬಿಕೊಂಡು ಊರ ಕಳೆಯನ್ನು ಹೆಚ್ಚಿಸಿದ್ದ ಕೆರೆಯೂ ಇತ್ತು. ಊರಿನಲ್ಲೊಂದು ಗ್ರಂಥಾಲಯವನ್ನು ಸ್ಥಾಪಿಸಬೇಕೆಂಬ ಭಟ್ಟರ ಆಸೆ ಅವರನ್ನು ತಿಳಿದಿದ್ದ ಎಲ್ಲರಿಗೂ ಅರಿವಿತ್ತು. ಭಟ್ಟರು ಯಾರಲ್ಲೂ ಈ ಬಗ್ಗೆ ಗಹನವಾಗಿ ಹೇಳಿಕೊಂಡಿರದಿದ್ದರೂ ಒಮ್ಮೊಮ್ಮೆ ಮಾತಿನ ಮಧ್ಯೆ ಈ ವಿಷಯ ನುಸುಳಿಬಿಡುತ್ತಿತ್ತು.

ಮನೆಗೆ ಬಂದವರೇ ಆರಾಮ ಕುರ್ಚಿಯಲ್ಲಿ ಕುಳಿತು ಗಹನವಾದ ಯೋಚನೆಯಲ್ಲಿ ಮುಳುಗಿದರು. ಮಧ್ಯಾಹ್ನವಾಗುವುದರ ಮುಂಚೆಯೇ ಮರಳಿಬಂದಿದ್ದ ಭಟ್ಟರನ್ನು ಕಂಡ ಅವರ ಪತ್ನಿ ಆಶ್ಚರ್ಯಗೊಂಡರೂ ಏನನ್ನೂ ಕೇಳದೆ ಬಾಯಾರಿಕೆಗೆ ತಣ್ಣಗಿನ ಮಜ್ಜಿಗೆ ನೀರನ್ನು ತಂದು ಕೊಟ್ಟು ಮತ್ತೆ ತಮ್ಮ ದೈನಂದಿನ ಕೆಲಸದಲ್ಲಿ ತಲ್ಲೀನರಾದರು. ಭಟ್ಟರು ಆ ದಿನ ರಾತ್ರಿ ಕುಳಿತು ಪತ್ರವೊಂದನ್ನು ಬರೆಯುತ್ತಿದ್ದರು, ಅವರ ಪತ್ನಿ ಕುತೂಹಲದಿಂದ ಬಳಿಬಂದು ಭಟ್ಟರು ಪತ್ರ ಕೊನೆಗೊಳಿಸುವವರೆಗೆ ಜತೆಗೆ ಕುಳಿತಿದ್ದರು.

ಆರು ತಿಂಗಳ ಬಳಿಕ ಭಟ್ಟರ ಊರಿನಲ್ಲಿ ಗ್ರಂಥಾಲಯದ ಉದ್ಘಾಟನೆ ನಡೆಯಿತು, ಭಟ್ಟರ ಸಂಗ್ರಹದಲ್ಲಿದ್ದ ನೂರಾರು ಪುಸ್ತಕಗಳು ಗ್ರಂಥಾಲಯದ ಕಪಾಟುಗಳಲ್ಲಿ ಆನಂದವಾಗಿ ನಗುತ್ತಿದ್ದಂತೆ ಕಂಡುಬರುತ್ತಿತ್ತು. ಭಟ್ಟರ ಪತ್ನಿ ಮಗ ಹಾಗೂ ಮಗಳು ತಮ್ಮದೇ ಮನೆಯ ಕಾರ್ಯಕ್ರಮದಂತೆ ಸಂಭ್ರಮದಿಂದ ಉಸ್ತುವಾರಿ ವಹಿಸಿಕೊಂಡು ಪಾಲ್ಗೊಂಡರು. ಭಟ್ಟರ ಪುಸ್ತಕಾಲಯದಲ್ಲಿ ಕೆಲಸ ಮಾಡುತ್ತಿದ್ದ ದಿನೇಶ ಕಾಮತರ ಸಂಬಂಧಿ ಗ್ರಂಥಪಾಲಕರಾಗಿ ನೇಮಕಗೊಂಡಿದ್ದರು. ಸರ್ಕಾರದಿಂದ ಗ್ರಂಥಾಲಯಕ್ಕಾಗಿ ೫೦ ಸಾವಿರ ರೂ ಧನಸಹಾಯ ದೊರಕಿತ್ತು. ಕೆಲವು ವರುಷಗಳ ಹಿಂದೆ ಭಟ್ಟರು ಶ್ರೀರಾಮಪುರದ ಶಾಲೆಯ ಬಳಿ ೫ ಸೆಂಟ್ಸ್ ಜಾಗವನ್ನು ಖರೀದಿಸಿದ್ದರು. ನಗರದಲ್ಲಿದ್ದ ಭಟ್ಟರ ಪುಸ್ತಕ ಮಳಿಗೆಯನ್ನು ಮಾರಾಟ ಮಾಡಿ ಬಂದಿದ್ದ ಹಣದಿಂದ ಗ್ರಂಥಾಲಯದ ಕಟ್ಟದ ನಿರ್ಮಾಣ ಮಾಡಲಾಗಿತ್ತು. ಭಟ್ಟರ ಮಗ ಉಳಿದ ಇನ್ನಿತರ ವೆಚ್ಚಗಳನ್ನು ನಿರ್ವಹಿಸಿದ್ದರು.

ಭಟ್ಟರು ಆದಿನ ಬರೆದ ಕಾಗದವನ್ನು ಅವರ ಪತ್ನಿ ಮರುದಿನ ಅಂಚೆಯಲ್ಲಿ ಕಳುಹಿಸಿದ್ದರು. ಕೆಲವಾರು ಅಮೂಲ್ಯವಾದ ಪುಸ್ತಕಗಳನ್ನು ಗ್ರಂಥಾಲಯಕ್ಕಾಗಿ ಕಳಿಸಿಕೊಡುವಂತೆ ಪ್ರಕಾಶಕರೋರ್ವರಿಗೆ ಭಟ್ಟರು ಹೇಳಿ ಕಳುಹಿಸಿದ್ದ ಪತ್ರವದು. ೩ ತಿಂಗಳ ಬಳಿಕ ಪುಸ್ತಕಗಳನ್ನು ಸಂಗ್ರಹಿಸಿ ಭಟ್ಟರ ವಿಳಾಸಕ್ಕೆ ಪ್ರಕಾಶಕರು ಕಳುಹಿಸಿಕೊಟ್ಟಿದ್ದರು.

ಗ್ರಂಥಾಲಯದ ಗೋಡೆಯ ಮೇಲೆ ತೂಗುಹಾಕಲ್ಪಟ್ಟಿದ್ದ ಭಟ್ಟರ ಚಿತ್ರಪಟಕ್ಕೆ ಹೂಹಾರ ಹಾಕಲಾಗಿತ್ತು. ನೆರೆದಿದ್ದ ಊರಿನ ಹಿರಿಯರ ಮಕ್ಕಳ ಹೆಂಗಳೆಯರ ಸಂತಸವನ್ನು ಕಂಡ ಭಟ್ಟರು ತಮ್ಮ ಕನಸು ನನಸಾದ ಸಾರ್ಥಕತೆಯಿಂದ ಧನ್ಯತೆಯ ಮಂದಹಾಸವನ್ನು ಬೀರುತ್ತಿದ್ದಂತೆ ಕಂಡುಬಂತು.

Wednesday, March 6, 2013

ಹಾಚಿ ಎಂಬ ಶ್ವಾನದ ಕಥೆ

ನೀವು ಸಾಕು ಪ್ರಾಣಿಗಳನ್ನು ಅದರಲ್ಲೂ ಶ್ವಾನ ಪ್ರಿಯರಾಗಿದ್ದಲ್ಲಿ ನೋಡಲೇಬೇಕಾದಂತಹ ಅತ್ಯಂತ ಅದ್ಭುತ ಚಿತ್ರ ಹಾಚಿ ಎ ಡಾಗ್ಸ್ ಟೇಲ್( ಹಾಚಿ ಎಂಬ ಶ್ವಾನದ ಕಥೆ). ಈ ಕಥೆಯು ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ಚಿತ್ರಿಸಲಾಗಿದ್ದು, ಮನಕಲಕುವಂತಹಾ ಸಂಭಾಷಣೆ, ಭಾವನಾತ್ಮಕ ಅಭಿನಯ ಹಾಗೂ ಸನ್ನಿವೇಶಗಳಿಂದ ಕೂಡಿ ಐ ಎಮ್ ಡಿ ಬಿ(www.imdb.com) ಪುಟದಲ್ಲಿ ೮ ಅಂಕಗಳನ್ನು ಗಳಿಸಿರುವುದು ಈ ಚಿತ್ರ ಎಷ್ಟು ಪರಿಣಾಮಕಾರಿಯಾಗಿದೆ ಎಂದು ತೋರಿಸುತ್ತದೆ.

ಈ ಕಥೆಯ ಪೂರ್ವಾರ್ಧ ಹಾಚಿ ಮತ್ತು ಅದರ ಯಜಮಾನನ ನಡುವಿನ ಪ್ರೀತಿಯನ್ನು ಸಮರ್ಪಕವಾಗಿ ತೋರಿಸಿದರೆ, ಅನಿರೀಕ್ಷಿತವಾದ ತಿರುವಿನಿಂದಾಗಿ ಚಿತ್ರದ ಎರಡನೇ ಭಾಗ ಅದ್ಭುತವಾಗಿ ಮೂಡಿಬರುತ್ತದೆ.
ಚಿತ್ರವೀಕ್ಷಿಸುತ್ತಾ ಮುಂದೆ ಸಾಗುತ್ತಿದ್ದಂತೆ ಒಂದೊಮ್ಮೆಗೆ, ಚಿತ್ರದ ಕಥೆ ಸಪ್ಪೆಯೋ ಎಂಬ ಸಂದೇಹ ನನ್ನನ್ನು ಕಾಡತೊಡಗಿತು ಆದರೆ ಕೆಲವೇ ನಿಮಿಷಗಳಲ್ಲಿ ಆ ಸಂದೇಹ ನಿವಾರಣೆಯಾಗಲ್ಪಟ್ಟಿತು.

ಈ ಚಿತ್ರದಲ್ಲಿ ಶಿಲ್ಪಾ ಶೆಟ್ಟಿಗೆ ಹಿಂದೊಮ್ಮೆ ಮುತ್ತಿಟ್ಟು (ಕು)ಖ್ಯಾತರಾದ ರಿಚರ್ಡ್ ಗೆರೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಮಾತ್ರವಲ್ಲ, ಪ್ರೊಫೆಸರ್ ಪಾತ್ರವನ್ನು ಸಮರ್ಪಕವಾಗಿ ನಿಭಾಯಿಸಿದ್ದಾರೆ.
ಅಕೀಟಾ ಎಂಬ ಜಪಾನ್ ತಳಿಯ ನಾಯಿಮರಿಯೊಂದು ರೈಲ್ವೇ ಸ್ಟೇಷನ್ ನಲ್ಲಿ ಅನಿರೀಕ್ಷಿತವಾಗಿ ಪ್ರೊಫೆಸರ್ ಅವರಿಗೆ ಸಿಗುತ್ತದೆ. ಮುದ್ದಾದ ನಾಯಿಮರಿಯ ವಾರಸುದಾರರು ಯಾರೆಂದು ಹುಡುಕುವ ಪ್ರೊಫೆಸರ್ ರವರ ಪ್ರಯತ್ನ ಯಶಸ್ವಿಯಾಗದಿದ್ದಾಗ ನಾಯಿಮರಿಯನ್ನು ಸಾಕುವುದಕ್ಕಾಗಿ ಮುಂದೆಬಂದವರಿಗೆ ದತ್ತು ಕೊಡುವುದು ಎಂದು ಪ್ರೊಫೆಸರ್ ಹಾಗೂ ಅವರ ಪತ್ನಿ ತೀರ್ಮಾನಿಸುತ್ತಾರೆ. ಪ್ರೊಫೆಸರ್ ರವರಿಗಂತೂ ನಾಯಿಮರಿ ಬಹಳಷ್ಟು ಅಚ್ಚುಮೆಚ್ಚಿನದ್ದಾಗಿರುತ್ತದೆ, ಆದರೆ ಅವರ ಪತ್ನಿಗೆ ನಾಯಿಮರಿ ಅವರ ಮನೆಯಲ್ಲಿರುವುದು ಎಳ್ಳಷ್ಟೂ ಇಷ್ಟವಿರುವುದಿಲ್ಲ.  ನಾಯಿಮರಿ ಮತ್ತು ಪ್ರೊಫೆಸರ್ ರ ಆತ್ಮೀಯತೆಯನ್ನು ಕಂಡು ಪ್ರೊಫೆಸರ್ ನಾಯಿಮರಿಯ ಜತೆಗೆ ಮಕ್ಕಳಂತೆ ಆಟವಾಡುತ್ತಾ ಸಂತೋಷವಾಗಿರುವುದನ್ನು ಕಂಡ ಅವರ ಪತ್ನಿ ನಾಯಿಮರಿಯನ್ನು ತಮ್ಮ ಕುಟುಂಬದಲ್ಲಿ ಸೇರಿಸಿಕೊಳ್ಳುವುದಕ್ಕೆ ಒಪ್ಪಿಗೆಯನ್ನು ನೀಡುತ್ತಾರೆ.
ಮುಂದೆ ನಾಯಿಮರಿ ಬೆಳೆದು ದೊಡ್ಡದಾಗುತ್ತದೆ. ಪ್ರೊಫೆಸರ್ ಜತೆಗೆ ದಿನವೂ ಬೆಳಗ್ಗೆ ಅವರು ಕಾಲೇಜಿಗೆ ತೆರಳುವ ವೇಳೆಯಲ್ಲಿ ರೈಲ್ವೇಸ್ಟೇಷನ್ ತನಕ ಬರುವುದು ಹಾಗೂ ಅವರು ಸಂಜೆ ಮರಳುವ ಹೊತ್ತಿನಲ್ಲಿ ಪುನಃ ಬಂದು ಅವರಿಗಾಗಿ ಕಾದು ಅವರ ಜತೆ ಆಟವಾಡುತ್ತಾ ಮನೆಗೆ ಮರಳುವ ಪರಿಪಾಠವನ್ನು ಬೆಳೆಸಿಕೊಳ್ಳುತ್ತದೆ. ಮುಂದೆ ಪ್ರೊಫೆಸರ್ ಮಗಳಿಗೆ ಮದುವೆ ನೆರವೇರುತ್ತದೆ ಹಾಚಿಯೂ ಮದುವೆಯ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತದೆ.
ಮುಂದೆ ಚಿತ್ರದಲ್ಲಿನ ಅನೀರೀಕ್ಷಿತ ತಿರುವಿನಿಂದಾಗಿ ಕೊನೆಯವರೆಗೆ ಹಾಚಿ ನಮ್ಮನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತದೆ.
ನನಗಂತೂ ಎಂದೆಂದೂ ಮರೆಯಲಾಗದ ಚಿತ್ರವಾಗಿ ಹಾಚಿಯ ಕಥೆ ಮನಃಪಟಲದಲ್ಲಿ ನೆಲೆಗೊಂಡಿದೆ.
ನೀವೂ ನೋಡಿ ಏನನ್ನಿಸಿತು ಹೇಳಿ....

Click here to download Hachi a Dog's tale via torrent.

ನಿಮ್ಮ ಅಭಿಪ್ರಾಯ