Thursday, September 20, 2012

ದಾನವ...

ರೇಶಿಮೆಯ ಹುಳ ಬಹಳ
ನಾಜೂಕಿನಲಿ ಹೆಣೆದ
ಮನೆಯ ಮಾನವ ಕದ್ದು
ಸೀರೆ ನೇಯ್ದ

ಜೇನುಹುಳ ಸುಳಿಸುಳಿದು
ಮೈಲು ಗಟ್ಟಲೆಯಲೆದು
ಜತನದಲಿ ಕಾಯ್ದಿಟ್ಟ
ಮಧುವ ಕುಡಿದ

ಬಿಸಿಲು ಮಳೆ ಚಳಿಗಾಳಿಗಂಜದೇ
ಎದೆಯೆತ್ತಿ
ಬೃಹದ್ಗಾತ್ರದಲಿ ಬೆಳೆದ
ವೃಕ್ಷಗಳ ಸವರಿದ

ಘೋರವ್ಯಾಘ್ರವೆ ಬರಲಿ
ಕ್ರೂರ ಕರಡಿಯೆ ಇರಲಿ
ಗುರಿನೋಡಿ ಬಡಿದು
ಚಿರನಿದ್ರೆಯಲಿ ನೆಲಕೊರಗಿಸಿದ

ತನ್ನಕಾಲನೆ ಕೊಡಲಿಯಲಿ ಕಡಿವ
ಕಡುಮೂರ್ಖ ತಾನಾಗಿ
ಪ್ರಕೃತಿ ಸಂತುಲನವ
ಹಾಳ್ಗೆಡಹಿದ

ಸುತ್ತ ಧಗಧಗಿಸುವ ಬೆಂಕಿಯಲಿ, ತಂಪೆರೆವ
ಯಂತ್ರಗಳ ತಂತ್ರ  ನಿಲುವುದುಂಟೇ
ಹೊಳೆವ ನಾಣ್ಯವೆ ಇರಲಿ, ಗರಿಗರಿಯ ನೋಟಿರಲಿ,
ಅಸುವ ನೀಗಲು  ಹಸಿವೆ ತಿನಲಪ್ಪುದೇ ?





No comments:

ನಿಮ್ಮ ಅಭಿಪ್ರಾಯ