ಬಿಟ್ಟ ಕಣ್ಣು ಬಿಟ್ಟಂತೆ, ಮುಚ್ಚುವುದಿಲ್ಲ
ತುಟಿ ತೆರೆಯುವುದಿಲ್ಲ ಮಾತ ಹರಿವಿಲ್ಲ
ತಂಗಾಳಿಗೆ ಮುಂದೆ ಇಳಿದ ಕುರುಳು ಹಾರುವುದಿಲ್ಲ
ನಗುವಿಲ್ಲ, ಅಳುವಿಲ್ಲ, ಕೋಪ ತಾಪದ ಕಷ್ಟವಿಲ್ಲ
ಸೋನೆಯಲಿ ನೆನೆದರೆ ನೀನು ತಳಮಳವು ಎನಗಿಲ್ಲ
ಬೆಚ್ಚಗಿನ ಕಂಬಳಿಯ ಹೊದಿಕೆ ಬೇಕಿಲ್ಲ
ಆಸೆಗಳ ಬೆಟ್ಟದ ಮೇಲೆ ಮನೆಯ ಕಟ್ಟಿಲ್ಲ
ತರತರದ ಒಡವೆ ವಸ್ತ್ರಗಳ ಗೊಡವೆ ನಿನಗಿಲ್ಲ
ಕಂಬನಿಯ ಹನಿ ನಿನ್ನ ಅಕ್ಷಿಯಲಿ ಕಾಣಲಿಲ್ಲ
ಸುಖದ ಹಂಬಲವಿಲ್ಲ ದುಃಖದಲೆಯಿಲ್ಲ
ಸದಾ ಮೊರೆವ ಸಾಗರದ ಅಲೆಯ ತೆರದಿ
ನಿತ್ಯನಿರಂತರ ಭಾವದಂತೆ ನೀನು
ಬಂಧನದ ಬದುಕಲ್ಲ, ನಿತ್ಯ ಸಂಘರ್ಷವಿಲ್ಲ
ಮಾತನಾಡದ ಮೂಕ ಜೀವ
ಹಿಂದೆ ಮುಂದಿನ ಕಾಲ ಭೇದವಿಲ್ಲ
ಸಾಗರವ ಸೇರ್ವ ನದಿ ಹಾದಿಯಂತೆ ನೀನು
ಸ್ಫೂರ್ತಿಸೆಲೆ ಜೀವಕಲೆ, ಜೀವದಾತ್ಮ ನೀನು
ಚಿತ್ರವೊಂದೇ ನಿನದು ನೋಟಗಳು ಮಾತ್ರ ಬೇರೆ
ಹಲವು ತೆರನಾದ ಬಣ್ಣ ಕಾಂಬುದೆನಗೆ
ಬೇರೆ ಎಲ್ಲರಿಗೆ ಮಾತ್ರನೀ ಬರಿಯ ಮಣ್ಣಬೊಂಬೆ...
No comments:
Post a Comment