Thursday, April 10, 2014

ತೆಂಕುತಿಟ್ಟು ಯಕ್ಷಗಾನದಲ್ಲಿ ನಡೆಯುತ್ತಿರುವ ಬದಲಾವಣೆಗಳ ಬಗ್ಗೆ ಒಂದು ಅನಿಸಿಕೆ !

ಯಕ್ಷಗಾನ ಮೂಲತಃ ಜನಪದ ಕಲೆಯೇ ಆಗಿದ್ದರೂ ಸಾಗುತ್ತಾ ಸಾಗುತ್ತಾ ಕಾಲ ಕಳೆದಂತೆ ಹಲವಾರು
ಬೆಳವಣಿಗೆಗಳು ಮತ್ತು ಬದಲಾವಣೆಗಳು ನಡೆದು ಆವಿಷ್ಕಾರಗಳು ಉಂಟಾಗಿವೆ. ಇತ್ತೀಚೆಗೆ ಯಕ್ಷಗಾನಕ್ಕೆ ಶಾಸ್ತ್ರೀಯ ಕಲೆಯ ಸ್ಥಾನಮಾನ ನೀಡಬೇಕೆಂದು ಹಲವಾರು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ ಎನ್ನುವುದು ನನಗೆ ತಿಳಿದ ವಿಚಾರ. ಯಕ್ಷಗಾನದಲ್ಲಿ ಮೇಲ್ನೋಟಕ್ಕೆ ಕಾಣುವಂತಹ ಹಲವಾರು ಅಂಶಗಳನ್ನು ನಾವು ಗಮನಿಸಿದಾಗ ಯಕ್ಷಗಾನಕ್ಕೆ ಒಂದು ಅನಿಶ್ಚಿತವಾದಂತಹ ಚೌಕಟ್ಟಂತೂ ಖಂಡಿತಾ ಇದೆ ಎಂಬುದನ್ನು ತಿಳಿಯಬಹುದು, ಯಾಕೆಂದರೆ ಯಕ್ಷಗಾನೀಯ ಮತ್ತು ನಾಟಕೀಯ ಎನ್ನುವಂತಹಾ ವಿಭಾಗ ಮಾಡಲು ಸಾಧ್ಯವಿದ್ದಲ್ಲಿ, ಅದು ಯಕ್ಷಗಾನದ್ದಲ್ಲ ಎನ್ನುವಾಗ ಯಕ್ಷಗಾನದ್ದು ಇನ್ನೊಂದಿದೆ ಎಂಬ ಅರ್ಥವಲ್ಲವೇ ?. ಹಾಗಿದ್ದಲಿ ಅದು ಹೇಗೆ ಎಂಬುದನ್ನು ಬಲ್ಲವರಿಂದ ತಿಳಿದು ಹೀಗಿದ್ದಿರಬಹುದು ಎಂಬ ಊಹೆಯನ್ನಂತೂ ಮಾಡಬಹುದು. ರಾಜವೇಷವನ್ನೇ ನಾವು ಮಾದರಿಯನ್ನಾಗಿ ಇಟ್ಟುಕೊಂಡೆವು ಎಂದಾದಲ್ಲಿ ಆ ವೇಷದ ಆಯವನ್ನು ಗಮನಿಸಿದಾಗ ಯಕ್ಷಗಾನೀಯವಾದ ವೇಷ ಹೀಗಿರಬೇಕು ಎಂಬಂತೆ ಊಹಿಸಬಹುದು. ಇತರ ವೇಷಗಳನ್ನು ಅದೇ ವೇಷದ ಮಾದರಿಯಲ್ಲಿ ಸಿದ್ಧಪಡಿಸಬಹುದು, ಇತರ ವೇಷಗಳ ಸ್ವರೂಪವನ್ನು ಊಹಿಸುವಲ್ಲಿ ಈ ಮಾದರಿ ಸಹಾಯಕವಾದೀತು. ವೇಷದ ಮುಖವರ್ಣಿಕೆ, ಆಭರಣ, ದಗಲೆಗಳು ಇತ್ಯಾದಿಗಳ ವಿವರವನ್ನು ಪಕ್ಕಕ್ಕಿಡೋಣ. ಪೂರ್ವರಂಗ ಯಕ್ಷಗಾನದ ಪಾಠಶಾಲೆ ಎನ್ನುವುದನ್ನು ಸರ್ವರೂ ಅಂಗೀಕರಿಸತಕ್ಕಂತಹಾ ವಿಚಾರ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ಯಕ್ಷಗಾನದ ಚೌಕಟ್ಟನ್ನು ನಿರ್ಮಿಸುವುದು ಹೇಗೆ ಎಂಬ ಪ್ರಶ್ನೆಗೆ ಪೂರ್ವರಂಗವೇ ಉತ್ತರ ಕೊಡಬಲ್ಲದು ಅನ್ನಿಸುತ್ತದೆ.
ಪೂರ್ವರಂಗದಲ್ಲಿ ನಾನಾ ವೇಶಗಳ ಮಾದರಿಗಳು ಪ್ರಸ್ತುತವಾಗುವುದನ್ನು ಗಮನಿಸಬಹುದು. ಕ್ಲಾವಿದನೋರ್ವ ಕೋಡಂಗಿ ಪಾತ್ರದಿಂದ ತೊಡಗಿ ಬಣ್ಣದ ವೇಶದವರೆಗೆ ನಾನಾ ಹಂತಗಳಲ್ಲಿ ಬೆಳೆಯುತ್ತಾನೆ. ಹಿಮ್ಮೇಳ ವಾದಕರಿಗೂ ಸಹ ಪೂರ್ವರಂಗವನ್ನೇ ಮಾದರಿಯನ್ನಾಗಿಸಿಕೊಂಡು ಚೌಕಟ್ಟನ್ನು ನಿರ್ಮಿಸಬಹುದು, ನಾನು ಉಲ್ಲೇಖಿಸುವ ಚೌಕಟ್ಟು ಎಂದರೆ ಯಕ್ಷಗಾನವನ್ನು ಯಕ್ಷಗಾನವೇ ಆಗಿ ಉಳಿಸಲು ಮಾಡಬೇಕಾದಂತಹ ಪ್ರಯತ್ನ ಎಂದರ್ಥ. ಇನ್ನು ಕೆಲವೊಮ್ಮೆ ರಂಗದಲ್ಲಿ ನಡೆಯುವ ಪ್ರಕ್ರಿಯೆಗಳು ಪ್ರೇಕ್ಷಕನಿಗೆ ಬೇಸರವನ್ನು ತರಿಸಿದಲ್ಲಿ ಕಥೆಯಲ್ಲಿ ಪ್ರೇಕ್ಷಕನ ಮನಸ್ಸನ್ನು ಹಿದಿದಿಟ್ಟುಕೊಳ್ಳುವಲ್ಲಿ ವಿಫಲವಾದಾಗ ಆ ಸಂಗತಿಗಳನ್ನು ವಿಮರ್ಶಿಸಿ ಸರಿಪಡಿಸಿಕೊಳ್ಳದಿದ್ದಲ್ಲಿ ಆ ಸಂಗತಿಗಳು ಮುಂದುವರಿದಲ್ಲಿ ರಂಗಭೂಮಿಗೆ(ಯಕ್ಷಗಾನದ) ಉಂಟಾಗಬಹುದಾದ ಹಿನ್ನಡೆಗಳ ಬಗ್ಗೆ ಕಲಾವಿದ ಯೋಚಿಸಬೇಕಾಗುತ್ತದೆ.

ಈ ಸಂದರ್ಭದಲ್ಲಿ ಇತ್ತೀಚೆಗೆ ನಾನು ನೋಡಿದ ಪ್ರಸಂಗದ ಬಳಿಕ ಮನಸ್ಸಿನಲ್ಲಿ ಮೂಡಿದಕೆಲವು ಸಂಶಯಗಳನ್ನು ಉಲ್ಲೇಖಿಸಬಯಸುತ್ತೇನೆ
೧. ಯಕ್ಷಗಾನ ಅನೇಕ ಪದ್ಯಗಳು ಕೇವಲ ಕೆಲವು ಒಂದೆರಡು ಸಾಲಿನ ಪದ್ಯಗಳಾಗಿರುತ್ತವೆ ಅವುಗಳನ್ನು ಎರಡಕ್ಕಿಂತ ಹೆಚ್ಚು ಬಾರಿ ಪುನರಾವರ್ತಿಸಬೇಕಾದ ಅವಶ್ಯಕತೆ ಇದೆಯೇ ?
2. ತೆಂಕುತಿಟ್ಟಿ ಗೆ ಬಡಗುತಿಟ್ಟಿನಿಂದ ಹರಿದುಬಂದಿರುವ ಚಾಲೂ ಕುಣಿತದ ವಿಪರೀತ ಪ್ರಯೋಗ ಯಾಕೋ ತೀರಾ ಅತಿಯಾಗಿಯೇ ಬಳಕೆಯಾಗುತ್ತಿದೆ ಅನ್ನಿಸಿತು, ಒಂದು ಸರಳ ಪದ್ಯವನ್ನು ೧೫ ನಿಮಿಷಗಳ ವರೆಗೂ ನರ್ತಿಸುವಂತಹಾ ಅವಶ್ಯಕತೆ ಇದೆಯೇ ? ಯಕ್ಷಗಾನದಲ್ಲಿ ಕೇವಲ ನೃತ್ಯಮಾತ್ರ ಮಾಧ್ಯಮವಲ್ಲ ಮಾತುಗಾರಿಕೆಯೂ ಭಾವಪ್ರಕಟಣೆಗೆ,ಕಥಾಸಂವಹನಕ್ಕೆ ಒಂದು ಪ್ರಧಾನ ಮಾಧ್ಯಮವಾಗಿ ಬಳಕೆಯಾಗುತ್ತದೆಯಾದ್ದರಿಂದ, ಮಾತುಗಾರಿಕೆಯನ್ನು ತೀರಾ ಕಡೆಗಣಿಸಿ ಕೇವಲ ನೃತ್ಯಕ್ಕೇ ಪ್ರಾಧಾನ್ಯತೆ ಕೊಡುವಂತಹಾ ಕ್ರಮ ಎಷ್ಟರಮಟ್ಟಿಗೆ ಸರಿ ಮತ್ತು ಸ್ವೀಕಾರಾರ್ಹ ? ತೆಂಕುತಿಟ್ಟಿನ ಯಕ್ಷಗಾನದಲ್ಲಿ ನನಗೆ ತಿಳಿದಂತೆ ನೃತ್ಯಕ್ರಮಗಳು ಅಷ್ಟೇನೂ ವ್ಯಾಪಕವಾಗಿ ಬಿನ್ನವಾಗಿಲ್ಲ ಮತ್ತು ನಿಖರವಾಗಿ ಗುರುತಿಸಲ್ಪಡುವಂತಹ ವೈವಿಧ್ಯತೆಗಳಿಲ್ಲ. ಕೆಲವು ಮೂಲ ಹೆಜ್ಜೆಗಳನ್ನೇ ಎಲ್ಲಾ ತಾಳಗಳಿಗೆ ಅಳವಡಿಸಿ ನರ್ತಿಸಲಾಗುತ್ತದೆ. ಪದ್ಯಾಭಿನಯದ ಜತೆಗೆ ನರ್ತನ ಮಿಳಿತವಾದಾಗ ಆ ಸಂದರ್ಭದ ಭಾವ ಪ್ರಕಟೀಕರಣ ಮತ್ತು ಕಥಾ ಪ್ರಸಾರವೇ ಬಹುಮುಖ್ಯವಾಗುತ್ತದೆ ಮತ್ತು ಮನರಂಜನೆ ಮತ್ತಿನ ಸ್ಥಾನದಲ್ಲಿ ನಿಲ್ಲುತ್ತದೆ, ನೃತ್ಯದ ಸೀಮಿತ ವ್ಯಾಪ್ತಿ ಕೆಲವೊಮ್ಮೆ ನಮ್ಮ ಗಮನಕ್ಕೆ ಬಂದರೂ ಈ ಕೊರತೆಯನ್ನು ಉಳಿದೆರಡು ಅಂಶಗಳು ಸರಿದೂಗಿಸುತ್ತದೆ. ನೃತ್ಯವನ್ನೇ ಪ್ರಧಾನವಾಗಿಸಿ ಪರಿಧಿಯನ್ನು ಮೀರಿ ನೃತ್ಯದ ಪುನರಾವರ್ತನೆ ನಡೆದಾಗ ಪ್ರೇಕ್ಷಕನ ಸಹನೆಯೂ ಕೆಡಲಾರದೇ ? ನೃತ್ಯಕ್ಕೂ, ಪದ್ಯಕ್ಕೂ, ಕಥೆಗೂ ಸಂಬಂಧವೇ ಕಡಿದು ಹೋಗಿ ಕಥೆಯ ಚಲನೆಗೆ ಭಂಗವುಂಟಾಗುವುದಿಲ್ಲವೇ. ಸಾಮಾನ್ಯ ಪ್ರೇಕ್ಷಕನಾದ ನನ್ನಿಂದಲೇ ಇಂತಹಾ ಯೋಚನೆಗಳು ಹರಿದು ಬರುತ್ತಿವೆ ಎಂದಾದರೆ ಬಹುಷಹ ಕಲಾವಿದರು ಈ ನಿಟ್ಟಿನಲ್ಲಿ ತಮ್ಮನ್ನು ತಾವು ಒರೆಗೆ ಹಚ್ಚಿಕೊಳ್ಳುವುದು ಉಚಿತವಲ್ಲವೇ ?. ಬಡಗುತಿಟ್ಟಿನಿಂದ ತೆಂಕುತಿಟ್ಟಿಗೆ ಬಂದಿರುವ ಪಾತ್ರಧಾರಿಗಳೂ ತೆಂಕಿನ ಸೂಕ್ಷ್ಮಗಳನ್ನು ಅರಿತುಕೊಂಡು ಈ ನಿಟ್ಟಿನಲ್ಲಿ ಯೋಚಿಸಬೇಕೆನಿಸುತ್ತದೆ.
3. ಇನ್ನು ಸ್ತ್ರೀವೇಶಗಳ ಸೌಮ್ಯ ಪದ್ಯಗಳಿಗೂ ಸಹ ಚೆಂಡೆ ವಾದನ ಬೇಕೆ ? ಮದ್ದಳೆಯ ಸೂಕ್ಷ್ಮವಾದ ನುಡಿತಗಳನ್ನು ಚೆಂಡೆಯ ಜತೆಗೆ ಬಾರಿಸುವಾಗ ಕೇಳುವುದಿಲ್ಲ ಆದ್ದರಿಂದ ಚೆಂಡೆಯ ಜತೆ ಮದ್ದಲೆಯನ್ನು ಒತ್ತುವಾದ್ಯವಾಗಿ ಬಳಸಲಾಗುತ್ತದೆ,ಚೆಂಡೆಯ ಜತೆಗೆ ಕೇವಲ ಇಡಿ ಪೆಟ್ಟುಗಳನ್ನು ಮಾತ್ರ ಬಾರಿಸುವ ಕ್ರಮ. ಚೆಂಡೆ ವಾದಕರೂ ಮದ್ದಳೆ ವಾದಕರೂ ಪರಸ್ಪರ ಹೊಂದಾಣಿಕೆಯಿಂದ ಏಕಮನಸ್ಕರಾದಾಗ ಹೊಮ್ಮಬಹುದಾದ ಪ್ರದರ್ಶನ ಅತ್ಯುತ್ಕೃಷ್ಟವಾಗಿರುತ್ತದೆ. ಭಾಗವತರ ಪದ್ಯವನ್ನು ಮತ್ತಷ್ಟು ಅಲಂಕರಿಸಬೇಕಾದದ್ದು ಚೆಂಡೆ ಮದ್ದಳೆ ವಾದಕರ ಧರ್ಮ ಮತ್ತು ಅದರಿಂದಾಗಿ ಪ್ರದರ್ಶನಕ್ಕೆ ಮತ್ತಷ್ಟು ಕಳೆ ಕಟ್ಟುತ್ತದೆ. ಹಳೆಯ ಧ್ವನಿಸುರುಳಿಗಳನ್ನು ಆಲಿಸಿದಾಗ ಈ ಬಗ್ಗೆ ಪ್ರಮಾಣಗಳು ಗೋಚರಿಸುತ್ತವೆ, ಕೆಲವೊಮ್ಮೆ ಚೆಂಡೆಯ ಇರುವಿಕೆಯೇ ನಮಗೆ ಗೊತ್ತಾಗದಂತಿರುತ್ತದೆ ಕೇವಲ ಬಿಡಿತ ಮುಕ್ತಾಯಗಳ ಸಂದರ್ಭದಲ್ಲಿ ಭೋರ್ಗರೆದು ಧುಮ್ಮಿಕ್ಕುವ  ಜಲಪಾತದ ಗಂಭೀರತೆಯಂತೆ ಚೆಂಡೆಯ ನಾದ ಮೆರೆಯುತ್ತದೆ. ಮೇಳದ ಮದ್ದಳೆವಾದಕನಿಗೂ, ಮದ್ದಳೆಯ ನಾದವನ್ನು ಆಲಿಸಲು ಕುತೂಹಲಿಗರಾಗಿರುವ ಬೆರಳೆಣಿಕೆಯ ಪ್ರೇಕ್ಷಕರ ಮನತಣಿಯುವುದಕ್ಕೋಸ್ಕರವಾದರೂ ಸ್ತ್ರೀಪಾತ್ರಗಳ ಪದ್ಯಕ್ಕೆ, ಕರುಣಾರಸದ ಪದ್ಯಗಳಿಗೆ ಮದ್ದಳೆ ಮಾತ್ರ ಬಾರಿಸುವತ್ತ ಗಮನ ಹರಿಸಬೇಕು.

4. ಇನ್ನು ನಾಟಕೀಯ ವೇಶಗಳ ಬಗ್ಗೆ ಹಲವಾರು ವಿಚಾರಗೋಷ್ಟಿಗಳು ಕಮ್ಮಟಗಳು ನಡೆದಿವೆ. ಕಲಾವಿದರು ನಾಟಕೀಯ ವೇಶಗಳನ್ನು ಸಾಧ್ಯವಾದಷ್ಟು ಕಡಿಮೆಗೊಳಿಸಿದಲ್ಲಿ ಯಕ್ಷಗಾನದ ಸ್ವರೂಪ ಉಳಿದುಕೊಳ್ಳಬಹುದೇನೋ?

ಯಕ್ಷಗಾನಕ್ಕೆ ಬೇಕಾಗಿರುವುದು ಯಕ್ಷಗಾನದ ಚೌಕಟ್ಟಿನಲ್ಲಿದ್ದುಕೊಂಡು ಸೃಜನಶೀಲತೆ. ಒಂದು ಪಾತ್ರವನ್ನು ಹಲವು ರೀತಿಯಲ್ಲಿ ಪ್ರಸ್ತುತ ಪಡಿಸುವತ್ತ ಕಲಾವಿದರು ಗಮನಹರಿಸಬೇಕು. ಆ ನಿಟ್ಟಿನಲ್ಲಿ ಹಿರಿಯರ ಆಶೀರ್ವಾದ, ಮಾರ್ಗದರ್ಶನಗಳು ಸದಾ ಅಗತ್ಯ. ಸೃಜನಶೀಲತೆ ಸಾಧ್ಯವಿಲ್ಲವಾದಲ್ಲಿ ಕಲಾವಿದ ರಂಗದಲ್ಲಿ ಸಮಯ ವಿನಿಯೋಗ ಮಾಡದೇ ಕಥೆಯನ್ನು ಮುಂದುವರಿಸುವತ್ತ ಗಮನ ಹರಿಸಿದರೂ ಪ್ರದರ್ಶನ ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ. ಇದಂತೂ ಖಂಡಿತಾ ಸಾಧ್ಯವಿದೆ, ಕಲಾವಿದ ಪಾತ್ರವನ್ನು ಮೆರೆಸಬೇಕೇ ಹೊರತು ತನ್ನನ್ನು ತಾನು ಮೆರೆಸಬಾರದು , ಪಾತ್ರ ಮೆರೆದರೆ ಕಲಾವಿದನೇ ಮೆರೆದಂತೆ ಮತ್ತು ಅಂತಹ ಹಲವಾರು ಕಲಾವಿದರು ಶಾಶ್ವತವಾಗಿ ಜನಮಾನಸದಲ್ಲಿ ನೆಲೆಯಾಗಿಲ್ಲವೇ ? ಶಾಲಾ ವಾರ್ಷಿಕೋತ್ಸವಕ್ಕೆಂದು ಯಕ್ಷಗಾನದ ಬಗ್ಗೆ ಆಗಷ್ಟೇ ಅರಿತುಕೊಳ್ಳುತ್ತಿರುವ ಪುಟಾಣಿಗಳೂ ಕೆಲವೊಮ್ಮೆ ಅದ್ಭುತವಾಗಿ ಪ್ರದರ್ಶನಗಳನ್ನು ಕೊಡುವುದನ್ನು ನಾವು ಗಮನಿಸಬಹುದು. ಕಂಠಸ್ಥಮಾಡಿ ಒಪ್ಪಿಸುವ ಸಂಭಾಷಣೆಗಳೇ ಆದರೂ ಕಲಾವಿದ ಪಾತ್ರವಾಗಿ ಮಾತನಾಡಿದರೆ, ಸಂಭಾಷಣೆಯನ್ನು ಸೀಮಿತವಾಗಿರಿಸಿ ಪರಿಣಾಮಕಾರಿಯಾಗಿ ಉಪಯೋಗಿಸಿದಲ್ಲಿ ಪ್ರೇಕ್ಷಕನ ಮನಸ್ಸು ಕಥೆಯಲ್ಲಿ ನೆಡುವುದರಲ್ಲಿ ಸಂಶಯವಿಲ್ಲ. 

Video: Madhusoodana Alewooraya
ಬಲಿಪ ಭಾಗವತರ ಮಾತುಗಳನ್ನು ಕೇಳಿದಲ್ಲಿ ನಾನು ಹೆಸರಿಸಿದ ಅಂಶಗಳಿಗೆ ಸಾಮೀಪ್ಯತೆಯನ್ನು ಕಾಣಬಹುದು...
ಯಕ್ಷಗಾನಕ್ಕೆ ಬೇಕಾಗಿರುವುದು ಸನ್ನಿವೇಶ ನಿರ್ಮಾಣದ ಸೂಕ್ಷ್ಮಗಳ ತಿಳುವಳಿಗೆ ಮತ್ತು ಅಗಾಧವಾದ ಕಲ್ಪನಾ ಸಾಮರ್ಥ್ಯ. ಯಕ್ಷಗಾನ ಇತರ ಕಲೆಗಳ ಮಟ್ಟಕ್ಕೆ ಬೆಳೆದು ನಿಲ್ಲಲಿ ಎನ್ನುವ ಹಾರೈಕೆಯೊಂದಿಗೆ ಈ ಬರಹ, ಇದರಿಂದಾಗಿ ಯಾರ ಮನಸಿಗಾದರೂ ನೋವಾದಲ್ಲಿ ಕ್ಷಮೆಯಿರಲಿ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಆದ್ದರಿಂದ ಇದನ್ನು ಒಪ್ಪುವ , ಬಿಡುವ ನಿರ್ಧಾರ ಓದುಗನಿಗೆ ಸೇರಿದ್ದು.

12 comments:

Unknown said...

ಬಹಳ ಶ್ಲಾಘನೀಯ. ಯಕ್ಷಗಾನದಲ್ಲಿ ಇಂತಹ ಗಂಭೀರ ಚಿಂತನೆಗಳ ಆವಶ್ಯಕತೆ ಇದೆ.
ಅದು ಕಾರ್ಯಗತಗೊಳಿಸಲು ಆಗುತ್ತದೋ ಬಿಡುತ್ತದೋ ಅಂತೂ ನಮ್ಮನ್ನು ನಾವು ಚಿಂತನೆಗೆ ಹಚ್ಚಿಕೊಂಡು, ನಮ್ಮಲ್ಲೇ ನಾವು ಚರ್ಚಿಸುವುದರಿಂದ ಕೊನೇ ಪಕ್ಷ ಯಕ್ಷಗಾನ ಪ್ರೇಕ್ಷಕರಲ್ಲಿ ಅರಿವು ಮೂಡಿಸಲಾದರೂ ಉಪಯೋಗಕ್ಕೆ ಬರುತ್ತದೆ ಈ ವ್ಯಾಪಕವಾದ ಚರ್ಚೆಗಳು.

ನನ್ನ ವೈಯಕ್ತಿಕ ಅನಿಸಿಕೆಗಳು ಈ ರೀತಿ ಇವೆ.

ಯಕ್ಷಗಾನ ಅನೇಕ ಪದ್ಯಗಳು ಕೇವಲ ಕೆಲವು ಒಂದೆರಡು ಸಾಲಿನ ಪದ್ಯಗಳಾಗಿರುತ್ತವೆ ಅವುಗಳನ್ನು ಎರಡಕ್ಕಿಂತ ಹೆಚ್ಚು ಬಾರಿ ಪುನರಾವರ್ತಿಸಬೇಕಾದ ಅವಶ್ಯಕತೆ ಇದೆಯೇ? - ಇದು ಬಡಗಿನ ಪ್ರಭಾವ. ಬಡಗಿನಲ್ಲಿ ಅದು ಅದ್ಭುತ ಪ್ರಸಿದ್ಧಿಯನ್ನು ಪಡೆದ ಕಾರಣ, ಮತ್ತು ಸ್ಪರ್ಧೆಯಲ್ಲಿ ಉಳಿಯಬೇಕಾದ ಅನಿವಾರ್ಯತೆಯಿಂದ ಸೃಷ್ಠಿಗೊಂಡವುಗಳು. ಈಗ ಅದು ಬಹಳ ಬೇರೂರಿ ಬಿಟ್ಟು ಇನ್ನು ಇದರ ಬದಲಾವಣೆ ಹೇಗೆಯೋ?

ತೆಂಕುತಿಟ್ಟಿ ಗೆ ಬಡಗುತಿಟ್ಟಿನಿಂದ ಹರಿದುಬಂದಿರುವ ಚಾಲೂ ಕುಣಿತದ ವಿಪರೀತ ಪ್ರಯೋಗ ಯಾಕೋ ತೀರಾ ಅತಿಯಾಗಿಯೇ ಬಳಕೆಯಾಗುತ್ತಿದೆ ಅನ್ನಿಸಿತು - ಮೇಲಿನದ್ದೇ ಉತ್ತರ. ಒಂದಿಪ್ಪತ್ತು ವರುಷಗಳ ಹಿಂದೆ, ತೆಂಕಿನಲ್ಲಿ ಕೇವಲ ವೀರರಸದ್ದು ಮಾತ್ರ ಚೆನ್ನಾಗಿ ಆಗುತ್ತದೆ, ಶೃಂಗಾರ, ಕರುಣ, ಭಕ್ತಿ ಎಲ್ಲ ಅಷ್ಟಕ್ಕಷ್ಟೆ ಎಂಬ ಭಾವ ಇತ್ತು, ಆಗ ಈ ಚಾಲು ಕುಣಿತ, ನಾಟಕೀಯ ಹಾವಭಾವ ಎಲ್ಲವೂ ಬಂತು.

ಇನ್ನು ಸ್ತ್ರೀವೇಷಗಳ ಸೌಮ್ಯ ಪದ್ಯಗಳಿಗೂ ಸಹ ಚೆಂಡೆ ವಾದನ ಬೇಕೆ? - ಮೊದಲೆಲ್ಲ ಸೌಮ್ಯ ಪದಗಳ ಸಮಯದಲ್ಲಿ, ಚೆಂಡೆ ವಾದನದ ಕ್ರಮವೇ ಇರಲಿಲ್ಲ, ಈಗ ಪ್ರಧಾನ ಮದ್ದಳೆಗಾರ ಒಬ್ಬನನ್ನು ಬಿಟ್ಟರೆ, ಉಳಿದ ಮದ್ದಳೆಗಾರರ ಮದ್ದಳೆಯನ್ನು ಕೇಳಿ ಆನಂದಿಸುವುದು ಬಿಡಿ, ಬಹಳ ಕಿರಿಕಿರಿಯಾಗುತ್ತದೆ, ಆದ ಕಾರಣ ಪ್ರಧಾನ ಮದ್ದಳೆವಾದಕ, ಚೆಂಡೆ ನುಡಿಸುತ್ತಾನೆ. ಒಂದೆರಡು ಪದಗಳ ಬಳಿಕ ಏರು ಪದಗಳು ಇರುತ್ತವೆ, ಅದಕ್ಕೆ ಮದ್ದಳೆಗೆ ಆತ ಬದಲಾಯಿಸುವುದಿಲ್ಲ. ಇದು ಓರ್ವ ಮದ್ದಳೆಗಾರರು ನನಗೆ ಹೇಳಿದ ವಿಚಾರ.

ತೆಂಕುತಿಟ್ಟಿನ ಯಕ್ಷಗಾನದಲ್ಲಿ ನನಗೆ ತಿಳಿದಂತೆ ನೃತ್ಯಕ್ರಮಗಳು ಅಷ್ಟೇನೂ ವ್ಯಾಪಕವಾಗಿ ಬಿನ್ನವಾಗಿಲ್ಲ ಮತ್ತು ನಿಖರವಾಗಿ ಗುರುತಿಸಲ್ಪಡುವಂತಹ ವೈವಿಧ್ಯತೆಗಳಿಲ್ಲ. - ಬೇರೆಲ್ಲಾ ತಿಟ್ಟುಗಳಿಗಿಂತ ತೆಂಕಿನಲ್ಲಿ ವೈಷಿಷ್ಠ್ಯತೆಗಳು ಅಧಿಕ, ಅದು ಬಣ್ಣಗಾರಿಕೆಯಲ್ಲಾಗಿರಬಹುದು, ವೇಷಭೂಷಣದಲ್ಲಾಗಿರಬಹುದು ಯಾ ನೃತ್ಯ ವೈವಿಧ್ಯತೆಯಲ್ಲಾಗಿರಬಹುದು. ನೃತ್ಯಕ್ರಮಗಳಲ್ಲಿ ಬಹಳಷ್ಟು ವೈವಿಧ್ಯತೆ ಇದೆ. ಈಗಿನ ಕಲಾವಿದರು ಅದನ್ನು ಕಲಿಯುತ್ತಿಲ್ಲ. ಮತ್ತೆ ಇನ್ನೊಂದು ವೈವಿಧ್ಯತೆಗಳು ಸ್ವಯಂ ಕೃಷಿಯಿಂದ, ಸಾಧನೆಯಿಂದ ಬರುವಂತಹುದು. ಈಗ ಸಾಧನೆಯೂ, ಸ್ವಯಂ ಕೃಷಿಯೂ ಬಹಳ ಕಡಿಮೆಯಾಗಿದೆ.

ಇನ್ನು ನಾಟಕೀಯ ವೇಶಗಳ ಬಗ್ಗೆ ಹಲವಾರು ವಿಚಾರಗೋಷ್ಟಿಗಳು ಕಮ್ಮಟಗಳು ನಡೆದಿವೆ. ಕಲಾವಿದರು ನಾಟಕೀಯ ವೇಶಗಳನ್ನು ಸಾಧ್ಯವಾದಷ್ಟು ಕಡಿಮೆಗೊಳಿಸಿದಲ್ಲಿ ಯಕ್ಷಗಾನದ ಸ್ವರೂಪ ಉಳಿದುಕೊಳ್ಳಬಹುದೇನೋ? - ಕೆಲವೊಮ್ಮೆ ಕಲಾವಿದರು ತಮ್ಮ ಅನುಕೂಲಕ್ಕೆ ನಾಟಕೀಯ ವೇಷದ ಮೊರೆ ಹೋಗುತ್ತಾರೆ. ಕಣಜದಲ್ಲಿ ಡಾ. ಮೋಹನ್ ಕುಂಟಾರು ಈ ಬಗ್ಗೆ ಒಂದು ಸಣ್ಣ ಘಟನೆಯ ವಿವರವನ್ನೂ ಕೊಟ್ಟಿದ್ದಾರೆ. ಇದನ್ನು ಓದಿರಿ. (ಯಕ್ಷಗಾನ ಮೇಳಗಳು ದೀಪಾವಳಿಗೆ ಗೆಜ್ಜೆ ಕಟ್ಟಿ ವೃಷಭ ಮಾಸ ಹತ್ತರ ಪತ್ತನಾಜೆ ಯಂದು ಗೆಜ್ಜೆ ಬಿಚ್ಚುವವರೆಗಿನ ಆರು ತಿಂಗಳು ನಿರಂತರ ಪ್ರದರ್ಶನವನ್ನು ಕೊಡುತ್ತವೆ. ಈ ಆರು ತಿಂಗಳ ಅವಧಿಯ ಹವಾಮಾನಕ್ಕೆ ಅನುಗುಣವಾಗಿ ಕೆಲವು ಕಲಾವಿದರು ವೇಷ ವಿಧಾನದಲ್ಲಿ ಬದಲಾವಣೆ ಮಾಡಿಕೊಂಡಿರುವುದನ್ನು ಕೂಡಾ ಇಲ್ಲಿ ಉಲ್ಲೇಖಿಸಬಹುದು. ಮಕರಾಕ್ಷ ಕಾಳಗ ಪ್ರಸಂಗವು ವೇಗದ ನಡೆಯುಳ್ಳದ್ದೂ, ಸಾಮಾನ್ಯವಾಗಿ ಈ ಪ್ರಸಂಗ ಮೇಳಗಳಲ್ಲಿ ಪ್ರಯೋಗಗೊಳ್ಳುವುದು ಬೆಳಗಿನ ಜಾವದಲ್ಲಿ. ದೀಪಾವಳಿಯ ನಂತರ ಶಿವರಾತ್ರಿಯವರೆಗೂ ವಿಪರೀತ ಚಳಿ ಇರುವುದರಿಂದ ಮಕರಾಕ್ಷನ ಪಾತ್ರವನ್ನು ಕಲಾವಿದ ರೊಬ್ಬರು ಯಕ್ಷಗಾನದ ಸಂಪ್ರದಾಯದಲ್ಲೇ ಕಿರೀಟ ಧರಿಸಿ ಮಾಡುತ್ತಿದ್ದರು. ಆದರೆ ಅದೇ ಪಾತ್ರಧಾರಿ ಬೇಸಗೆಯ ಸೆಕೆಯ ದಿನಗಳಲ್ಲಿ ಮೈಬಿಟ್ಟ ನಾಟಕೀಯವಾದ ಮಕರಾಕ್ಷನ ವೇಷವನ್ನು ಧರಿಸುತ್ತಿದ್ದರು. ವೇಷ ವಿಧಾನದ ಈ ಬದಲಾವಣೆ ಯಕ್ಷಗಾನದ ಚೌಕಟ್ಟಿನ ನೆಲೆಯಿಂದ ಯೋಚಿಸಿ ರೂಪಿಸಿದ್ದಲ್ಲ. ತನ್ನ ವೈಯಕ್ತಿಕ ಹಾಗೂ ದೈಹಿಕ ಆರೋಗ್ಯದ ದೃಷ್ಟಿಯಿಂದ, ಹವಾಮಾನಕ್ಕೆ ಅನುಗುಣವಾಗಿ ರೂಪಿಸಿದ್ದಾರೆನ್ನುವುದು ಇಲ್ಲಿ ಮನನೀಯ. ಅನೇಕ ವೇಳೆ ವೇಷಧಾರಿಯು ಪ್ರಯೋಗದ ಸ್ಥಳಕ್ಕೆ ವಿಳಂಬವಾಗಿ ಬಂದು ವೇಷಧಾರಣೆಗೆ ಬೇಕಷ್ಟು ಸಮಯ ಇಲ್ಲದೆ ಇದ್ದಾಗ ನಾಟಕೀಯದಂತಹ ಸರಳ ವೇಷಕ್ಕೆ ಮೊರೆ ಹೋಗುವುದೂ ಉಂಟು.)

chanakya said...

ಓದಿ ತುಂಬಾ ಖುಷಿ ಆಯ್ತು ನಿಮ್ಮ ಭಾವನೆ ನನ್ನ ಪ್ರಣಾಮ.
ಇಂತಿ ನಿಮ್ಮ ಸುಧಾಕರ ಜೈನ್

Unknown said...

ಹೌದು....ಅನಿಸಿಕೆಯಲ್ಲಿ ಹೇಳಿದಂತೆ.....ಪದ್ಯಗಳ ಸಾಲುಗಳ.....ಪುನರುಚ್ಚಾರ...ಹಾಗೂ.....ವಿಪರೀತ ಚಾಲು...ಕುಣಿತಗಳು.....ಒಮ್ಮೆ- ಇನ್ನೊಮ್ಮೆ.....ಕೇಳಲು..ನೋಡಲು....ಚಂದ......ಅವುಗಳೇ...ಪುನರಾವರ್ತನೆಯಾಗುತ್ತಿದ್ದರೆ...ಪ್ರದರ್ಶನ...ತನ್ನ.....Popularity.....ಯನ್ನು ಕಳೆದುಕೊಳ್ಳುವ.....ಸಾಧ್ಯತೆ...ಹೆಚ್ಚು..... ಅಂಥಹ ಪ್ರದರ್ಶನ..ಹೆಚ್ಚು ಬಾಳುವುದಿಲ್ಲ...ಎಂಬುದು ನನ್ನ ಅನಿಸಿಕೆ......
ಓ....ಚೆನ್ನಾಗಿದೆ...ಇದು..ಇನ್ನೂ...ಬೇಕಿತ್ತು....ಎನ್ನುವಲ್ಲಿಗೆ.....ಅದು ಮುಕ್ತಾಯಗೊಂಡರೆ....ಆಗ...ಮತ್ತೊಮ್ಮೆ...ಕಾಣಬೇಕೆನ್ನುವ ಮನಸ್ಥಿತಿಯಲ್ಲಿ...ಪ್ರೇಕ್ಷಕ...ನನ್ನು ...ಉಳಿಸಿಕೊಂಳ್ಳುತ್ತದೆ....(ಅದಕ್ಕಾಗಿಯೇ..ಯಕ್ಷಗಾನದ ಹಾಡುಗಳು.....1-2 ಗೆರೆಗಳ ಪದ್ಯಗಳಾಗಿರುವುದು..ಇರಬಹುದು..)
"ಇನ್ನೂ...ಇರಬೇಕಿತ್ತು" .....ಎನ್ನುವ.....ಮನಸ್ಥಿತಿಯಲ್ಲಿ... ...ಪ್ರೇಕ್ಷಕನನ್ನು ...ಉಳಿಸಿಕೊಳ್ಳುವ ಜವಾಬ್ದಾರಿ......ಪ್ರದರ್ಶನಕ್ಕೆ ಇರಬೇಕು... ಎನ್ನುವುದು ನನ್ನ ನಂಬಿಕೆ......

Anonymous said...

ನನಗೂ ನೀವು ಮಂಡಿಸಿದ ವಿಷಯಗಳ ಬಗ್ಗೆ ಹೆಚ್ಚು ಕಮ್ಮಿ ಅಂಥದೇ ಅಭಿಪ್ರಾಯಗಳಿವೆ. ಹಾಗಾದರೆ ಯಕ್ಷಗಾನ ಪರಿಣಿತರಿಗೆ ಇದೆಲ್ಲ ಅರ್ಥವಾಗುವುದಿಲ್ಲವೇ? ಬಹುಶ ಆಗುತ್ತದೆ. ಆದರೂ ಯಾಕೆ ಈ ಆಭಾಸಗಳನ್ನು ಮುಂದುವರಿಸಿಕೊಂಡು (ಅನೇಕ ಬಾರಿ ಬೆಳೆಸಿಕೊಂಡು) ಹೋಗುತ್ತಾರೆ? ನನ್ನ ಅಂದಾಜಿನ ಮಟ್ಟಿಗೆ, ಬಹಳಷ್ಟು ಪ್ರೇಕ್ಷಕರು ಇವುಗಳನ್ನು ಇಷ್ಟಪಡುತ್ತಾರೆ. ಆದ್ದರಿಂದ 'ಆಟ ರೈಸಲು' ಇವೆಲ್ಲ ಅನಿವಾರ್ಯ ಎಂಬ ನಿರ್ಧಾರಕ್ಕೆ ಅವರು ಬಂದಿರಬೇಕು - ಮುರಲಿ

Lanabhat said...

ರಂಗನಾಥರ ಅಭಿಪ್ರಾಯಕ್ಕೆ ಸ್ವಾಗತ, ನಿಮ್ಮ ಮತ್ತು ನನ್ನ ಅಭಿಪ್ರಾಯಗಳಲ್ಲಿ ತುಸು ವ್ಯತ್ಯಾಸಗಳಿರುವುದನ್ನು ನಾವು ಹಿಂದೆಯೇ ಅನೇಕ ಬಾರಿ ಚರ್ಚಿಸುವ ಸಂದರ್ಭಗಳಲ್ಲಿ ಕಂಡಿರುತ್ತೇವೆ.

ನನ್ನ ಪ್ರಕಾರ ಇತ್ತೀಚೆಗೆ ಬೆಂಗಳೂರಿಗೆ ಬಂದಿದ್ದ ಮೇಳದಲ್ಲಿ ಅತ್ಯುತ್ತಮವಾದ ಹಿಮ್ಮೇಳ ಕಲಾವಿದರಿದ್ದಾರೆ, ಮದ್ದಳೆ ವಾದಕರೂ ಚೆನ್ನಾಗಿಯೇ ನುಡಿಸುವವರಾದ್ದರಿಂದ ಅವರ ಕೈಚಳಕವನ್ನು ಉಪಯೋಗಿಸಿಕೊಳ್ಳಬೇಕಾಗಿತ್ತು ಎನ್ನುವ ಕಾಳಜಿಯಷ್ಟೆ. ಮತ್ತೆ ಮೇಳ ಎಂದ ಮೇಲೆ ಎಲ್ಲಾ ರೀತಿಯ ಎಲ್ಲಾ ಸ್ಥರದ ಕಲಾವಿದರು ಇದ್ದೇ ಇರುತ್ತಾರಲ್ಲವೇ ? ಮುಖ್ಯ ಮದ್ದಳೆಗಾರರು ಚೆಂಡೆ ಬಾರಿಸುತ್ತಾರೆ ಎಂಬುದು ಎಷ್ಟರಮಟ್ಟಿಗೆ ಸರಿ ? ಪಾತ್ರಧಾರಿಯೋರ್ವ ಚೆನ್ನಾಗಿ ಕುಣಿಯುವುದಿಲ್ಲ ಎನ್ನುವ ಮಾತ್ರಕ್ಕೆ ಇನ್ನೊಬ್ಬ ಪಾತ್ರಧಾರಿ ಆ ಸಂದರ್ಭದಲ್ಲಿ ನರ್ತಿಸುವ ಕ್ರಮವೇನೂ ಇಲ್ಲವಲ್ಲ(ದಯವಿಟ್ಟು ಈ ವಾಕ್ಯವನ್ನು ಧನಾತ್ಮಕವಾಗಿ ಯೋಚಿಸಿ) ಮದ್ದಳೆ ಮಾತ್ರ ಇದ್ದಾಗ ಸಹಜವಾಗಿಯೆ ರಸಾಭಿವ್ಯಕ್ತಿಯಲ್ಲಿ ಭಾಗವತನಿಗೆ ಉಪಯೋಗವಾಗುವುದಿಲ್ಲವೇ ? ಚೆಂಡೆಯ ಉದ್ದೇಶವೇ ವೀರ ಮತ್ತು ರೌದ್ರ ರಸಗಳ ಪರಿಣಾಮಕಾರಿ ಸಂವಹನವಲ್ಲವೇ ?

ತೆಂಕುತಿಟ್ಟಿನ ನರ್ತನಕ್ರಮಗಳಲ್ಲಿ ವೈವಿಧ್ಯತೆ ಇರುವ ವಿಚಾರ ನನಗೆ ಅರಿವಿಲ್ಲ ಆದರೆ ಅನೇಕ ಕ್ರಮಗಳು ಮಾತ್ರ ತೆಂಕುತಿಟ್ಟಿನಲ್ಲಿರುವುದು ಹೆಮ್ಮೆಯ ವಿಚಾರವೇ (ಉದಾ: ಹನುಮಂತನ ಪೊರಪ್ಪಾಟು, ಬಣ್ಣದವೇಶದ ಕ್ರಮಗಲು ಇತ್ಯಾದಿ ಇತ್ಯಾದಿ)

ನೀವು ಹೇಳಿರುವ ಇತರ ಅಂಶಗಳು ಸಮ್ಮತವೇ ಆದರೆ ಆ ವಿಷಯಗಳಲ್ಲಿ ತೆಂಕುತಿಟ್ಟು ತನ್ನತನವನು ಉಳಿಸಿಕೊಳ್ಳಬೇಕು ಎನ್ನುವ ಕಾಳಜಿಯಷ್ಟೇ. ಇಲ್ಲವಾದಲ್ಲಿ ಮುಂದಿನ ಯಕ್ಷಗಾನದ ಬೆಳವಣಿಗೆ ತೆಂಕು ಮತ್ತು ಬಡಗು ತಿಟ್ಟುಗಳ ಅಳಿವು ಮತ್ತು ಯಕ್ಷಗಾನದಲ್ಲಿ ಒಂದೇ ತಿಟ್ಟು ರೂಪುಗೊಳ್ಳಬಹುದು.

Unknown said...

ನಿಮ್ಮ ಆ ಮಾತನ್ನು ನಾನು ಪೂರ್ಣವಾಗಿ ಒಪ್ಪಿಕೊಳ್ಳುತ್ತೇನೆ. (ಮದ್ದಳೆ ವಾದಕರೂ ಚೆನ್ನಾಗಿಯೇ ನುಡಿಸುವವರಾದ್ದರಿಂದ ಅವರ ಕೈಚಳಕವನ್ನು ಉಪಯೋಗಿಸಿಕೊಳ್ಳಬೇಕಾಗಿತ್ತು ಎನ್ನುವ ಕಾಳಜಿಯಷ್ಟೆ)

(ಮತ್ತೆ ಮೇಳ ಎಂದ ಮೇಲೆ ಎಲ್ಲಾ ರೀತಿಯ ಎಲ್ಲಾ ಸ್ಥರದ ಕಲಾವಿದರು ಇದ್ದೇ ಇರುತ್ತಾರಲ್ಲವೇ ? ಮುಖ್ಯ ಮದ್ದಳೆಗಾರರು ಚೆಂಡೆ ಬಾರಿಸುತ್ತಾರೆ ಎಂಬುದು ಎಷ್ಟರಮಟ್ಟಿಗೆ ಸರಿ?). ಇಲ್ಲಿ ಕೇವಲ ಕಲೆಯ ದೃಷ್ಟಿಕೋನದಿಂದ ಮಾತ್ರ ಗಮನಿಸಿದರೆ ನೀವು ಹೇಳಿದ್ದು ಸರಿ. ಆದರೆ ಮೇಳಗಳಲ್ಲಿ ಇತ್ತೀಚೆಗೆ ಒಳ್ಳೆಯ ಕಲಾವಿದರ ಕೊರತೆ ಇದೆ, ಮತ್ತು ಇರುವ ಕಲಾವಿದರನ್ನು ಹೇಗಾದರೂ ಮಾಡಿ ಉಳಿಸಿಕೊಳ್ಳುವ ದುರ್ದೆಶೆ ಇದೆ. ಸ್ತ್ರೀ ವೇಷವೇ ಆದರೂ ಮದ್ದಳೆವಾದಕ ಸರಿಯಾಗಿ ನುಡಿಸುವದಿಲ್ಲವೆಂಬಾಗ ಆತ ಮುಖ್ಯ ಮದ್ದಳೆಗಾರನ ನೆರವನ್ನು ಅಪೇಕ್ಷಿಸುತ್ತಾನೆ. ಯಾವಾಗ ಯಾವುದು ಪ್ರಾಮುಖ್ಯ ಆವಾಗಲೆಲ್ಲಾ ಮುಖ್ಯ ಮದ್ದಳೆಗಾರನೇ ಚೆಂಡೆ ಮತ್ತು ಮದ್ದಳೆ ಎಅರಡರಲ್ಲೂ ಬದಲಾಯಿಸುತ್ತಾ ಇದ್ದರೆ ೨ನೇ ಮದ್ದಳೆಗಾರನಿಗೆ ಅದು ಸರಿ ಬರದೇ ಮೇಳವನ್ನೇ ತೊರೆಯುವ ಅಪಾಯವಿದೆ. ಇದು ನಾನು ವೈಯಕ್ತಿಕವಾಗಿ ಕಂಡದ್ದು ಮತ್ತು ಓರ್ವ ೨ನೇ ಮದ್ದಳೆಗಾರ ಬಾಯಿ ಬಿಟ್ಟು ನನ್ನಲ್ಲಿ ಈ ರೀತಿ ಹೇಳಿದ್ದಾನೆ, "ಅವರಿಗೆ ಎಲ್ಲಾ ಅವರೇ ಬಡಿಯಬೇಕೆಂಬ ಉತ್ಸಾಹ, ಸ್ತ್ರೀ ವೇಷ ಬರುವಾಗ ಮದ್ದಳೆಗೆ ಬರ್ತಾರೆ, ಆಗ ನನ್ನನ್ನು ಚೆಂಡೆಗೆ ಕಳಿಸ್ತಾರೆ, ಕಿರೀಟ, ಬಣ್ಣ ಬರುವಾಗ ಚೆಂಡೆಗೆ ಹೋಗ್ತಾರೆ ಆಗ ನಾನು ಒತ್ತು ಮದ್ದಳೆಗಾರನಾಗಿ ಇರಬೇಕು. ತಾನೇ ಮೆರೆಯಬೇಕು ಎನ್ನುವ ಕೆಟ್ಟ ಮನಸ್ಸು" ಅಂತಿದ್ದ. ಆಡಳಿತಾತ್ಮಕ, ವ್ಯಾವಹಾರಿಕವಾಗಿಯೂ ಇದನ್ನು ನೋಡಬೇಕಾಗುತ್ತದೆ.

ಒಟ್ಟಾರೆಯಾಗಿ ಇಂತಹ ಚರ್ಚೆಗಳಲ್ಲಿ, ನಾನು ಸರಿ ಯಾ ತಪ್ಪು, ನೀವು ತಪ್ಪು ಯಾ ಸರಿ ಎನ್ನುವುದಕ್ಕಿಂತಲೂ ಕಲೆಯ ಕಾಳಜಿಯಷ್ಟೇ ಸರಿ. ಅಂತೂ ಯಕ್ಷಗಾನ ಉಳಿಯಲಿ, ಬೆಳೆಯಲಿ ಮತ್ತು ಬೆಳಗಲಿ ಎಂಬುದೇ ತುಂಬು ಮನದ ಆಶಯ.

Unknown said...

ಇವೆಲ್ಲಾ ಚರ್ಚೆ ಆಗುತ್ತದೆಯೇ ಹೊರತು ಇದರಿಂದ ಹೆಚ್ಚಿನದ್ದೇನೂ ಉಪಯೋಗವಿಲ್ಲ. ಕೇವಲ ಭಕ್ತಿ ಮತ್ತು ಜ್ಞಾನ ಪ್ರಧಾನವಾಗಿರದೇ ಅಥವಾ ಆರಾಧನೆ ಮಾತ್ರವಲ್ಲದೇ ರಂಜನೆಯನ್ನು ಯಕ್ಷಗಾನ ಒಳಗೊಂಡಿರುವುದರಿಂದ ಜನರ ರಂಜನೆಯನ್ನು ಗಮನದಲ್ಲಿಟ್ಟುಕೊಂಡು ಆಟ ನಡೆಸುತ್ತಾರೆ. ಮತ್ತೆ ೭೦% ಜನರು ಅದನ್ನು ಓಲೈಸುತ್ತಲೂ ಇದ್ದಾರೆ. ಲಾಕ್ಷಣಿಕ ಗ್ರಂಥ ಇಲ್ಲದೇ ಇರುವ ಕಾರಣ ವಿಮರ್ಶೆ ಶಾಲಾ ಮಾಸ್ತರರ ತರಹ ಮಾಡಲಾಗದು. ಇದು ನನ್ನ ಅಭಿಪ್ರಾಯ.

Lanabhat said...

ಮೋಹನ ಚಂದ್ರರ ಅಭಿಪ್ರಾಯಗಳಿಗೆ ಧನ್ಯವಾದಗಳು, ಹೌದು ಬಹುಷಃ ಈ ಸೂಕ್ಷ್ಮವನ್ನು ಕಡೆಗಣಿಸುವುದರಿಂದ ಉಂಟಾಗುತ್ತಿರುವ ಋಣಾತ್ಮಕ ಪರಿಣಾಮವನ್ನು ಕಲಾವಿದರು ಮನಗಾಣಬೇಕು. ಪಾತ್ರಧಾರಿಗಳೂ ವಿಪರೀತವಾಗಿ ಕುಣಿದ ಬಳಿಕ ದಣಿವುಂಟಾಗಿ ಅವರ ಮಾತುಗಾರಿಕೆಯ ಮೇಲೆ ಪರಿಣಾಮವುಂಟಾಗುತ್ತದೆ.

Lanabhat said...

ಮುರಲಿಯವರ ಅಲೋಚನೆಗಳಿಗೂ ಧನ್ಯವಾದಗಳು. ಪ್ರೇಕ್ಷಕರು ಯಕ್ಷಗಾನವನ್ನು ಯಕ್ಷಗಾನವಾಗಿಯೇ ಆಸ್ವಾದಿಸುವತ್ತ ಗಮನ ಹರಿಸಬೇಕಾಗಿದೆ, ಸಿನಿಮಾ ಮಾಧ್ಯಮ, ನಾಟಕ ಇವುಗಳಿಗಿಂತ ಯಕ್ಷಗಾನ ಭಿನ್ನ ಎನ್ನುವುದನ್ನು ಅರಿತುಕೊಳ್ಳಬೇಕು. ಸಮಕಾಲೀನ ಕಲೆಗಳ ಜತೆಗೆ ಯಕ್ಷಗಾನವನ್ನು ಮಿಳಿತಗೊಳಿಸುವ ಪ್ರಯತ್ನ ಬೇಕೇ ? ಅದರ ಅವಶ್ಯಕತೆ ಇಲ್ಲವೆಂದೇ ನನ್ನ ಅನ್ನಿಸಿಕೆ. ಇದರಿಂದಾಗಿ ಆಟ ರೈಸುತ್ತದೆಯೋ ಇಲ್ಲವೋ ಗೊತ್ತಿಲ್ಲ ಆದರೆ ಕೆಲವು ಅಭಿಮಾನಿಗಳು ಆರಾಧಿಸುವ ಕಲಾವಿದ ರೈಸುತ್ತಾನೆ ಎನ್ನುವುದು ಅವರ ಅನಿಸಿಕೆ ಇರಬಹುದು. ಜತೆಗೆ ಶಿಳ್ಳು ಚಪ್ಪಾಳೆಗಳ ಭೋರ್ಗರೆತ ಪ್ರಾರಂಭವಾದಾಗ ಕಲಾವಿದನಿಗೆ ಇನ್ನೂ ಹೆಚ್ಚಿನ ಹುಮ್ಮಸ್ಸುಂಟಾಗುವುದು. ಅಭಿಮಾನ ಎನ್ನುವುದು ವೈಯಕ್ತಿಕವಾಗಿ ಹತ್ತಿರದಲ್ಲಿರುವ ಕಲಾವಿದನ ಮೇಲೆ ಕೇಂದ್ರೀಕೃತವಾಗುವುದು ಸಹಜವೇ ಆಗಿದ್ದರೂ ಕಲಾವಿದ ತನ್ನ ಮೌಲ್ಯಮಾಪನ ತಾನೇ ಸದಾ ಮಾಡಿಕೊಳ್ಳುವುದು ಉತ್ತಮ.

ನಿಮ್ಮ ಅಭಿಪ್ರಾಯ