Sunday, July 12, 2015

ದೃಷ್ಟಿ

ಒಂದು ಮರವಿದ್ದಲ್ಲಿ, ಒಬ್ಬ ಅದರ ತೊಗಟೆಯನ್ನು ಮುಟ್ಟಿ ಇದು ಬಹಳ ಕಠಿಣವಾಗಿದೆ ಎನ್ನುತ್ತಾನೆ, ಇನ್ನೊಬ್ಬ ಅದರ ಎಲೆಯನ್ನು ನೋಡಿ ಹೂವನ್ನು ನೋಡಿ, ಆಹಾ ಸುಂದರವಾಗಿದೆ ಎನ್ನುತ್ತಾನೆ, ಇನ್ನೊಬ್ಬ ಅದರ ಹಣ್ಣು ತಿಂದು ಕಹಿಯೋ/ಸಿಹಿಯೋ ಎಂದು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸ್ತಾನೆ. ಮತ್ತೊಬ್ಬ ಅದರ ಗೆಲ್ಲಿನ ತುಂಡನ್ನು ಸೌದೆ ಮಾಡಿ, ಓ ಒಳ್ಳೆಯ ಉರುವಲು ಅಥವಾ ಪ್ರಯೋಜನಕ್ಕಿಲ್ಲದ ಮರ ಎನ್ನಬಹುದು. ಅವರವರಿಗೆ ಬೇಕಾದ ಅಂಶವನ್ನು ಅಥವಾ ಗುಣವನ್ನು ಮಾತ್ರ ಗಮಸಿರುತ್ತಾರೆ. ಆದರೆ ಎಲ್ಲಾ ಲಕ್ಷಣಗಳನ್ನು ಯಾರು ಸಂಪೂರ್ಣವಾಗಿ ಗಮನಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದು ಮಾತ್ರ ಸರಿಯಾಗಿರ್ತದೆ. ನಮ್ಮ ಜೀವನವೂ ಹೀಗೇ ಅಲ್ವೇ ?
 ------------------------------------------------
ಓರ್ವ ವ್ಯಕ್ತಿಯನ್ನು ಹೊಗಳುವುದಕ್ಕೆ ಮೊದಲು ಹೆಚ್ಚು ಯೋಚಿಸಬೇಕೆಂದಿಲ್ಲ, ಆದರೆ ಯಾರನ್ನಾದರೂ ದೂಷಿಸಬೇಕೆಂದಿದ್ದರೆ ಸಾವಿರ ಬಾರಿ ಯೋಚಿಸು, ಆ ವ್ಯಕ್ತಿಯಲ್ಲಿ ಹೊಗಳುವಂತಹಾ ಒಂದೂ ಗುಣವಿಲ್ಲದಿದ್ದಲ್ಲಿ ಆ ಮೇಲೆ ದೂಷಿಸು.... 

Sunday, March 15, 2015

ಆತ್ಮಸಂಭಾಷಣೆ೧-ಬದಲಾವಣೆ

ಯಕ್ಷಗಾನ ಕಾರ್ಯಕ್ರಮಕ್ಕೋಸ್ಕರ ಮೈಸೂರಿಗೆ ಹೋಗಿದ್ದೆವು, ಯಕ್ಷಗಾನ ಪ್ರಾರಂಭವಾಗುವುದಕ್ಕೆ ಇನ್ನೂ ಒಂದು ಒಂದೂವರೆ ಘಂಟೆಯಷ್ಟು ಸಮಯಾವಾಕಾಶವಿತ್ತು. ನಮ್ಮ ಜತೆ ಹೊರಟಿದ್ದ ಎರಡನೇ ಗುಂಪು ಬಂದು ಸೇರಿರಲಿಲ್ಲ. ನಾನೂ ಅತ್ಮೀಯರೊಬ್ಬರೂ ಹೀಗೇ ಮಾತನಾಡುತ್ತಿದ್ದೆವು. ಹೀಗೇ ಮಾತನಾಡುತ್ತಿರುವಾಗ ಒಂದು ಮಾತು ಬಂತು ಬಹಳ ಗಾಢವಾಗಿ ಕಾಡಿತು, ಮತ್ತು ಆ ಮಾತಿನಿಂದಾಗಿ ನನ್ನ ಯೋಚನೆಗಳೂ ಈ ರೀತಿ ಹರಿದವು - ದೇವರು ಎಲ್ಲರಿಗೂ ಅವಕಾಶ ಕೊಡ್ತಾನೆ ಆ ಅವಕಾಶ ಸಿಕ್ಕಾಗ ನಾವೇನು ಮಾಡ್ತೇವೆ ಅನ್ನುವುದರ ಮೇಲೆ ನಮ್ಮ ಮುಂದಿನ ಜೀವನ ನಿರ್ಧರಿಸಲ್ಪಡುತ್ತದೆ. ಅವಕಾಶ ಎನ್ನುವುದು ಬಂದಾಗ ಅದನ್ನು ಬಾಚಿಕೊಳ್ಳಬೇಕು. ಮನುಷ್ಯನ ಜೀವನ ಬದಲಾವಣೆಗೆ ಹೊರತಾದುದಲ್ಲ ಆದರೆ ಬದಲಾವಣೆಗೆ ಒಗ್ಗಿಕೊಳ್ಳುವುದನ್ನು ಮಾನಸಿಕವಾಗಿ ನಾವು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಅವಕಾಶ ಸಿಕ್ಕಾಗ ಬದಲಾವಣೆಯೂ ಸ್ವಾಭಾವಿಕವಾಗಿಯೇ ಜತೆಯಾಗುತ್ತದೆ. ಆದರೆ ಇದ್ದ ಜಾಗದಲ್ಲಿ ನಾವು ಅದುವರೆಗೆ ಬೆಳೆಸಿರುವ ನಮ್ಮದೇ ಆದ ಜಗತ್ತು ಮತ್ತೆ ನಮ್ಮನ್ನು ಅಲ್ಲಿಂದ ಕದಲದಂತೆ ಪ್ರೇರೇಪಿಸುತ್ತದೆ. ಬೆಚ್ಚಗಿನ ಗೂಡಿನಂತೆ, ಅಲ್ಲಿ ನಮಗೆ ಲಭ್ಯವಾದ ಸೌಲಭ್ಯಗಳಿಗೆ ಒಗ್ಗಿ ಹೋಗಿರುತ್ತೇವೆ. ಬದಲಾವಣೆಯೆಂದಾಗ ಮುಂದೆದುರಾಗಬಹುದಾದ ಸನ್ನಿವೇಶಗಳ ಬಗೆಗಿನ ಹಿಂಜರಿಕೆಯೇ ವ್ಯಕ್ತಿಯನ್ನು ಮುಂದೆ ಚಲಿಸದಂತೆ ಮಾಡುವುದಕ್ಕೆ ಕಾರಣ ಅನ್ನಿಸುತ್ತದೆ. ಆದರೆ ಬದಲಾವಣೆಗೆ ಹೊರತಾಗಿ ಜಗತ್ತೆಲ್ಲಿದೆ, ಬದಲಾವಣೆಯಿಲ್ಲದಿದ್ದರೆ ಗರ್ಭದಲ್ಲಿರುವ ಜೀವ ಹೊರಬರುವುದಕ್ಕುಂಟೇ, ಕಣ್ತೆರೆದು ಜಗತ್ತಿನಲ್ಲಿ ತನ್ನ ಅಸ್ಥಿತ್ವವನ್ನು ಸ್ಥಾಪಿಸುವುದಕ್ಕುಂಟೇ ? ಮನುಷ್ಯನ ಹೃದ್ಗತವಾದ ಭಯ ನಿವಾರಣೆಯಾದಾಗ ಯಾವುದೇ ಕಾರ್ಯ ಕಷ್ಟಕರವಾಗಲಾರದು. ಬದಲಾವಣೆಯನ್ನು ಸ್ವಾಗತಿಸಿ, ಸಾಧಿಸಬೇಕೆಂಬ ಛಲವಿದ್ದು ಮುನ್ನುಗ್ಗುವವನು ಯಶಸ್ವಿಯಾದಾನು ನಾಳೆ ಇತರರಿಗೆ ಮಾದರಿಯಾದಾನು.

Sunday, February 1, 2015

ನಗೆಟಿವ್ ನೆಗೆಟಿವ್ ನಗೆಟಿವ್ !!!!

ಇವುಗಳಲ್ಲಿ ಒಂದೋ ಎರಡೋ ಒಂದೊಂದು ಬಾರಿ ನಮ್ಮ ಬದುಕಿನಲ್ಲಿ ನಡೆಯುವುದು ಸಹಜ, ಹಾಗಾದಾಗಲಂತೂ ದೈನಂದಿನ ದಿನಚರಿಗಳೇ ಅಸ್ತವ್ಯಸ್ತವಾಗುತ್ತವೆ. ಒಮ್ಮೆ ಯೋಚಿಸಿ ಎಲ್ಲವೂ ಒಮ್ಮೆಯೇ ನಡೆದರೆ. ಅಂತಹ ಕಾಲ್ಪನಿಕ ಸನ್ನಿವೇಶ ಸೃಷ್ಟಿಸಿ ನಡೆಯಬಹುದಾದ ಹಾಸ್ಯದ ಅವಲೋಕನ.
---------------------------------- ----------------------------------------
ಎಂತ ಸಾವ್ ನುಸಿ ಮಾರೆ, ಕಚ್ಚುವುದಕ್ಕೆ ನನ್ನ ಮೂಗೇ ಬೇಕಾ ಮಾರಿ. ಹೊದಿಕೆಯೆಳೆದು ಮಲಗಿದ್ರೆ ಬಂದು ಇವಳು ಎಳೆದು ತೆಗೆದ್ಲು, "ರಾಯರು ಆಫೀಸಿಗೆ ಹೋಗುವ ಅಂದಾಜೇನಾದ್ರೂ ಉಂಟಾ ಇವತ್ತು, ಇಲ್ವಾ" "ಎಂತ ಮಾರಾಯ್ತಿ ಮಲಗುವುದಕ್ಕೆ ಬಿಡು, ಅಪೀಸ್ ನಲ್ಲಿ ಬಾಸ್ ತಿಂದೇ ತಲೆ ಎಲ್ಲ ಮುಗ್ದಿದೆ" ಹೊದಕೆಯೆಳೆದು ಮಲಗಿದೆ, "ಘಂಟೆ ಎಂಟೂವರೆಯಾಯ್ತು,  ನಂಗೇನು ನಾನು ಕಾಲೇಜಿಗೆ ಹೊರಟೆ" ಅಷ್ಟೇ ಕೇಳಿದ್ದು, ಮತ್ತೂ ಕಾಲು ಘಂಟೆ ನಿದ್ರಾಂಗನೆಯ ಕೇಳಿಯಲಿ ಮಲಗಿದ್ದೆ.

ಎದ್ದು ಹಲ್ಲುಜ್ಜುವುದಕ್ಕೆ ಪೇಸ್ಟ್ ಮುಗಿದಿದೆ, ಪೇಸ್ಟ್ ನ ಕತ್ತು ಕುಯ್ದು ಹೊಟ್ಟೆ ಹಿಚುಕಿ ವಾಂತಿ ಮಾಡಿಸಿ ಕೆಲಸ ಮುಗಿಸಿದೆ. ಇವಳಂತೂ ಸ್ಕ್ಕೂಟಿ ಸ್ಟಾರ್ಟ್ ಮಾಡಿ ಹೊರಟೇ ಹೋಗಿದ್ಲು.
ಎಂತ ಕರ್ಮ ಮಾರೆ ಮದುವೆಯಾದ್ರೂ ಬ್ರಹ್ಮಚಾರಿಯಾದೆ. ಅವಳು ಮಾಡಿಟ್ಟಿದ್ದ ಎಂತದ್ದೋ ರೈಸ್ ಬಾಯೊಳಕ್ಕೆಸೆದು, ಚಹಾ ಹೀರಿ. ಮನೆಯಿಂದ ಹೊರಗೆ ಬರ್ತೇನೆ ಕ್ಯಾಬ್ ನವನ ಸುಳಿವಿಲ್ಲ.
ಪ್ಯಾಂಟ್ ನ ಕಿಸೆಗೆ ತುರುಕಿಸಿದ್ದ ಮೊಬೈಲ್ ಎಳೆದು ಬಲಗಯ್ಯಿಂದ ಎಡಗೈಗೆ ವರ್ಗಾಯಿಸುವಷ್ಟರಲ್ಲಿ ಮೊದಲನೇ ಮಹಡಿಯಿಂದ ಕೆಳಗೆ ಹಾರಿತು.
"ಅಯ್ಯೋ ಪರ್ದೇಸಿ ಪ್ರಾಣ ಬಿಟ್ಟಿತಲ್ಲ ಇನ್ನೂ ಒಂದೇ ಒಂದು ಇಎಮ್ ಐ ಕೂಡಾ ಪಾವತಿ ಮಾಡಿರ್ಲಿಲ್ಲ ಸ್ವಲ್ಪ ದಿನ ತಡಕೊಳೊಕ್ಕಾಗ್ತಿರ್ಲಿಲ್ವ ಈಗಲೇ ಆತ್ಮ ಹತ್ಯೆಗೆ ಹೊರಟಿತಲ್ಲ" ಎಂದು ಹಾಳಾದ ಮೊಬೈಲ್ಗೆ ಬಯ್ಕೊಂಡು, ಕೆಳಗೆ ಬಂದು ತುಂಡು ತುಂಡಾಗಿದ್ದ ಅದರ ಅವಯವಗಳನ್ನೇಲ್ಲಾ ಜೋಡಿಸಿ ಮತ್ತೆ ಜೀವ್ ಉಂಟೋ ಇಲ್ವೋ ಪರೀಕ್ಷಿಸಿದೆ.
ಪುಣ್ಯಾತ್ಮ, ಆಯುಷ್ಯ ಗಟ್ಟಿ ಇತ್ತು, ಸಿಮೆಂಟ್ ನೆಲಕ್ಕೆ ಬಿದ್ದಿದ್ರೂ ಸತ್ತಿರ್ಲಿಲ್ಲ. ಜೈ ನೋಕಿಯಾ, ನಿಮ್ಮ ಕಂಪೆನಿಯ ಶೇರ್ ಮೇಲೆ ಹೋಗ್ಲಿ , ಪರಮಾತ್ಮನಿಗೆ ಅಲ್ಲೇ ಕೈಮುಗಿದೆ.
ಜೀವ ಬಂದ ಮೊಬೈಲ್ ನಕ್ಕು, ಟುಂಯ್ ಟುಂಯ್ ಅನ್ನುತ್ತಾ ನಗುಮೊಗ ಪ್ರದರ್ಶಿಸಿ ಒಟ್ಟಿಗೇ ಕರೆಂಟ್ ಶಾಕ್ ಕೊಟ್ಟಿತು. ಕ್ಯಾಬ್ ನವನ ಹದಿನಾಲ್ಕು ಮಿಸ್ ಕಾಲ್.
ಮಾರಾಯ ಇವತ್ತು ಬಸ್ಸೇ ಗತಿ ಅನ್ನುತ್ತಾ ಹಾಳಾಗಿದ್ದ ಹಾಳಾದ ಬೈಕ್ ನ ಮುಖ ನೋಡಿ ಬಸ್ ಸ್ಟ್ಯಾಂಡ್ ಗೆ ಓಡಿದೆ. ದಿನಾಲೂ ಮೂರು ಮೂರು ಬಸ್ ಒಟ್ಟಿಗೇ ಬರೋದು ಇವತ್ತು ಒಂದೂ ಇಲ್ಲ, ಬಸ್ ಸ್ಟ್ಯಾಂಡ್ ನಲ್ಲಿ ಜನರೆಲ್ಲಾ ಸಾಫ್ಟ್ವೇರ್ ಪ್ರಾಣಿ ಬಂತೆಂದು ಮುಖ ನೋಡ ತೊಡಗಿದರು. ಹಲ್ಕಿರಿದು ನಕ್ಕೆ. ಮುಖ ತಿರುಗಿಸಿಕೊಂಡರು. 

ಹದಿನೈದು ನಿಮಿಷ ಬಿಟ್ಟು ಬಸ್ ಬಂತಲ್ಲಾ, ಓ ಬಸ್ಸಿಡೀ ಜನ, ಇನ್ನು ಟಾಪ್ ಮಾತ್ರ ಖಾಲಿ ಅಂತ ನೋಡುತ್ತಿದ್ದೆ, ಹಿಂದಿದ್ದವರು ನೂಕಿ ನೂಕಿ ಬಾಗಿಲಿನ ಬಳಿಯಿದ್ದವ ನಾನು ಬಸ್ಸಿನ ಒಳಗಿದ್ದೆ. ಟಿಕೇಟ್ ಗೆ ದುಡ್ಡು ಕೊಡುವುದಕ್ಕೆ ಪ್ಯಾಂಟ್ ನ ಕಿಸೆಗೆ ಕೈತೂರಿಸುವುದಕ್ಕೂ ಜಾಗ ಇರ್ಲಿಲ್ಲ.
ಗೋಡೆಗೆ ಅಂಟಿಸಿದ್ದ ಪೇಂಟಿಗ್ ನಮುನೆ ಅಂಟಿ ನಿಂತಿದ್ದೆ. ನನ್ನ ಒಂದು ಕಾಲಿನಮೇಲೆ ಯಾರದ್ದೋ ಕಾಲು, ಯಾರದ್ದೋ ಕಾಲಿನ ಮೇಲೆ ನನ್ನ ಮತ್ತೊಂದು ಕಾಲು.

ಇದ್ದ ಬದ್ದ ಸಿಗ್ನಲ್ ಎಲ್ಲಾ ಬಿದ್ದದ್ದೇ, ಇವತ್ತು ಬಾಸ್ ಗೆ ಒಳ್ಳೇ ಚಾನ್ಸ್ ನಾಳಿನಿಂದ ನಿದ್ದೆ ಕಡಿಮೆ ಮಾಡ್ಬೇಕು ಕೆಲಸ ಅಂದುಕೊಂಡೆ. ಅಂತೂ ಇಂತೂ ಸ್ಟಾಪ್ ಬಂದಾಗ ಇದ್ದ ಬಲವೆಲ್ಲಾ ಪ್ರಯೋಗಿಸಿ ನನ್ನ ಸಾಮಾನು ಸರಂಜಾಮುಗಳೆಲ್ಲ ಎಳೆದು ಎಳೆದು ಬಸ್ಸಿನಿಂದ ಹೊರಬಿದ್ದೆ, ಬಾಡಿ ಪಾರ್ಟ್ ಎಲ್ಲಾ ಸರಿಯಾಗಿ ಸ್ವಸ್ಥಾನದಲ್ಲುಂಟಲ್ಲ ಅಂತ ನೋಡಿಕೊಂಡೆ.


ಇನ್ನು ಹೋಗ್ಲಿಕ್ಕೆ ಉಂಟಲ್ಲ ಸುಮಾರು ಒಂದು ಕಿಲೋಮೀಟ್ರು. ಅತ್ಯಂತ ಹೇಟ್ ಮಾಡ್ತಿದ್ದ ಆಟೋವಾಲಾಗಳು ನನ್ನ ಪರಮಾಪ್ತ ಸ್ನೇಹಿತರಾಗುವ ಕಾಲ ಬಂದಿತ್ತು. ಇರುವುದರಲ್ಲಿ ಪಾಪ ತೋರುವ ಆಟೋದವನ ರಥ ಏರಿದೆ.
ಬೇಗ ನನ್ನ ಆಫೀಸ್ ಬುಡಕ್ಕೆ ಬಿಟ್ಟು ಬಿಡು ಮಾರಾಯ. ಅನ್ನುತ್ತಾ ಏರಿ ಕೂತರೆ ಇವನ ಕೆಟ್ಟ ರಥ ಸ್ಟಾರ್ಟೇ ಆಗುದಿಲ್ಲ.

ಅಂತೂ ಇಂತೂ ಅನ್ನದೇಗುಲದ ಎದುರು ಬಂದು ನಿಂತೆ. ಕರ್ಮ ಕರ್ಮ, ಗಡಿಬಿಡಿಯಲ್ಲಿ ಐಡಿ ಕಾರ್ಡು ಮನೆಯಲ್ಲೇ ಬಿಟ್ಟದ್ದು ನೆನಪಾಯಿತು. ಅಂಗಿ ಪ್ಯಾಂಟಿನ ಕಿಸೆಯ ಮೂಲೆಯಿಂದ ಬ್ಯಾಗಿಗಿನ ಮೂಲೆಯವರೆಗೆ ಹುಡುಕಿದರೂ ಪ್ರಯೋಜನ ಆಗ್ಲಿಲ್ಲ. ಸೆಕ್ಯುರಿಟಿ ಗಾರ್ಡ್ ನನ್ನನ್ನು ಟೆರರಿಸ್ಟನ್ನು ನೋಡುವಂತೆ ನೋಡುತ್ತಿದ್ದಾನೆಯೇ ಅನ್ನಿಸತೊಡಗಿತ್ತು.

ಅಗ್ನಿಕೋಟೆಯನ್ನು ದಾಟಿ ಆಫೀಸಿನ ಒಳಗೆ ಹೇಗೋ  ಬಂದೆ. ನನ್ನ ದುರದೃಷ್ಟ ಸೀನಿಯರ್ ಗೋಪಾಲನಿಗೆ ಜೋರು ಜ್ವರ ಎಮರ್ಜೆನ್ಸಿ ಲೀವು. ಬಾಸ್ ನನ್ನ ಬರುವಿಕೆಯನ್ನೇ ಕಾಯ್ತಿದ್ರು ಅನ್ನಿಸ್ತದೆ "ಅಂತೂ ಬಂದ್ರಲ್ಲಾ ಬಟ್ರೇ , ಇಲ್ಲಾಂದ್ರೆ ಕಷ್ಟ ಆಗ್ತಿತ್ತಲ್ವಾ" ಅಂದ್ರು. "ಬೆಳಗ್ಗೆ ಏಳುವುದಕ್ಕಿರುವುದಕಿಂತ ಕಷ್ಟ ಬೇರುಂಟೇ ಸಾರ್" ಮನಸಿನಲ್ಲೇ ಅಂದುಕೊಂಡದ್ದು, "ಗುಡ್ ಮಾರ್ನಿಂಗ್ ಸರ್, ನಿನ್ನೆ ಯು ಎಸ್ ರೀಜನ್ ಸೆಕ್ಯುರಿಟಿ ಪ್ಯಾಚ್ ಡಿಪ್ಲಾಯ್ ಮೆಂಟ್ ಪ್ರಾಬ್ಲಮ್ ಇತ್ತು ಸಾರ್, ರಾತ್ರಿ ಮೂರು ಗಂಟೆ ಆಗಿತ್ತು. ಮಲಗುವಾಗ.", "ಹೌದಾ ತೊಂದ್ರೆ ಇಲ್ಲ ಒಂದು ದಿವ್ಸ ಅಲ್ವಾ" ಅಂದ್ರು, "ಎಂತ ಕರ್ಮ ನೋಡುದ, ಕೆಲಸ ನಾವು ಮಾಡುವುದು ನೋಡುವವ ನೋಡುದೇ" ಅಂದುಕೊಂಡೆ . ಲ್ಯಾಪ್ ಟಾಪ್ ಓಪನ್ ಮಾಡಿದೆ, ಎಂತ ಸಾವ ಬೂಟೇ ಆಗುದಿಲ್ಲ. ಸರಿ ರಿಪೇರಿಗೆ ಕಳ್ಸಿದೆ. ಡೆಸ್ಕ್ಟಾಪ್ ಓಪನ್ ಬೂಟ್ ಮಾಡಿದೆ. ದಿನ ಭವಿಷ್ಯ ನೋಡಿದೆ. ಗುರು ಶನಿ ಬುಧ ಮಂಗಳ ಎಲ್ಲ ಅನುಕೂಲರಾಗಿದ್ದಾರೆ , ಜೀವನದಲ್ಲಿ ಸಮಸ್ಯೆಗಳ ಪರಿಹಾರ ಅಂತಿತ್ತು",  "ವಾಹ್, ಒಳ್ಳೇ ದಿನದ ಪ್ರಾರಂಭ" ಅಂತ ಈಮೇಲ್ ಓಪನ್ ಮಾಡಿದೆ. "ಟಕ ಟಕ ಟಕ ಟಕ, ನಾಲ್ಕು ಎಸ್ಕಲೇಶನ್ ಈಮೇಲುಗಳು ಬಂದು ಬಿದ್ದವು.
ಬಾಸ್ ನ ಟೇಬಲ್ ಕಡೆ ತಿರುಗುವುದಕ್ಕೆ ಮುಂಚೆಯೇ ಬೆನ್ನ ಹಿಂದೆ ಬಂದು ನಿಂತಿದ್ದಾನೆ, ಬುಧ ಗುರು ಶುಕ್ರ ಮಂಗಳ ಶನಿ ಎಲ್ಲ ಒಟ್ಟಿಗೆ ಬಂದು ನಿಂತ ಹಾಗೆ !!!

ಬಹುಬಲ ಧಾರಿಣೀಂ ನಮಾಮಿ ತಾರಿಣೀಂ ರಿಪುದಲ ವಾರಿಣೀಂ ಮಾತರಂ!

ಸಿಂಹದ ಹೊಟ್ಟೆಯಲ್ಲಿ ಜನಿಸಿದ ಸಿಂಹದ ಮರಿಯವಳು. ನಿರ್ಜೀವವಾಗಿ ಮಲಗಿದ್ದ ಸೈನಿಕನ ಮುಖದಲ್ಲಿ ವಿಜಯೋತ್ಸಾಹದ ನಗೆಯಿತ್ತು. ಹನ್ನೊಂದು ವರ್ಷದ ಅಲ್ಕಾ ಕೊನೆಯ ಬಾರಿಗೆ ತಂದೆಯನ್ನು ಬೀಳ್ಕೊಳ್ಳುವ ಹೃದಯ ಕಲಕುವ ಕ್ಷಣ. ದುಃಖದಿಂದ ಬಿದ್ದು ಆಕೆ ಗೋಗರೆಯಲಿಲ್ಲ, ಅಪ್ಪಾ ನನ್ನನ್ನು ಅನಾಥಳನ್ನಾಗಿಸಿ ಹೋದೆಯಾ ಎನ್ನುತ್ತಾ ಮರುಗಲಿಲ್ಲ. ತಲೆಯೆತ್ತಿ ಎದೆ ಎತ್ತರಿಸಿ ಗೂರ್ಖಾ ರೆಜಿಮೆಂಟ್ ನ ಯುದ್ಧಘೋಷ ಮೊಳಗಿಸಿದಳು. ಜತೆಗೇ ನಾಡ ರಕ್ಷಣೆಗೆ ಟೊಂಕ ಕಟ್ಟಿ ಸಹೋದರರಂತೆ ಹೋರಾಡಿದ್ದ ಸೈನಿಕರ ಹೃದಯ ಸುಮ್ಮನಿದ್ದೀತೆ, ಭಾರತವೇ ಎದ್ದಿತು. ದನಿ ಸೇರಿಸಿತು.

ನೆತ್ತರ ಬಿಸಿಯೇರಿ ಹಣೆಯಲ್ಲಿ ಬೆವರೊಡೆಯಿತು, ಕಣ್ಣಲ್ಲಿ ನೀರಿಳಿಯಿತು. ಭಾರತ ಮಾತೆ ಧನ್ಯಳು...


Thursday, September 4, 2014

ಪದ್ಯ ಪುರಾಣ ಮತ್ತು ಶಿ(She) ಎಂಬ ಐಕಾನು

ಪದ್ಯ ಪುರಾಣ
---------------------
ಒಮ್ಮೊಮ್ಮೆ ಹೀಗೆ ಲಹರಿಯಲ್ಲಿದ್ದಾಗ ನಾನು ಹಾಡುವ ಪರಿಪಾಠವನ್ನು ಬೆಳೆಸಿಕೊಂಡಿದ್ದೇನೆ(ನನ್ನ ಮಟ್ಟಿಗೆ ನಾನು ಹಾಡುವುದೇ ಆದರೆ ಇತರರಿಗೂ ಅದೇ ಅನುಭವವಾಗುತ್ತದೋ ಇಲ್ಲವೋ ಎನ್ನುವ ಪ್ರಶ್ನೆ ಕೇಳುವ ಸಾಹಸಕ್ಕೆ ನಾನು ಕೈ ಹಾಕುವುದಿಲ್ಲ) , ಮುಖ್ಯವಾಗಿ ಪ್ರಸಿದ್ಧ ಭಾಗವತರ ಧಾಟಿಯಲ್ಲಿ ಹಾಡುತ್ತಿರುವೆ ಎಂದು ಭಾವಿಸಿ ಹಾಡುವ ಮರುಳು, ಹಾಡಿದಾಗ ಸಿಗುವ ಧನ್ಯತಾ ಭಾವವೇ ನನಗೆ ಮುಖ್ಯ ಹೊರತು ಬೇರೇನಲ್ಲ .
ಹಾಡಿ ಅಲ್ಲಿಗೇ ಮುಗಿಸಿದರೆ ಹಾಡುತ್ತಿರುವುದು ಸರಿಯಾಗಿದೆಯೋ ಇಲ್ಲವೋ ಎನ್ನುವ ಬಗ್ಗೆ ತಿಳಿಯಬೇಕಲ್ಲ, ಹಾಗಾಗಿ ಅಭಿಪ್ರಾಯ ಸಂಗ್ರಹವೂ ನನ್ನ ಪಾಲಿಗೆ ಅಷ್ಟೇ ಮುಖ್ಯ.
ಅಭಿಪ್ರಾಯ ಕೇಳುವುದಾದರೂ ಯಾರಲ್ಲಿ ಇದ್ದಾಳಲ್ಲ ನನ್ನವಳು ಅವಳಲ್ಲೇ ಯಾವತ್ತೂ ಪದ್ಯ ಹಾಡಿದ ಬಳಿಕ ಹುಬ್ಬು ಹಾರಿಸಿ ಒಂದು ನೋಟ ಹರಿಸಿ "ಹೇಗೆ ಒಳ್ಳೇದಾಯ್ತ ?" ಅಂತ ಒಂದು ಮುಗುಳ್ನಗೆ ಬೀರುವುದು , ಅವಳಾದರೋ ಸ್ವಲ್ಪ ಯೋಚಿಸಿದವಳಂತೆ ಮಾಡಿ "ಈ ಸಲದ್ದು ಅಷ್ಟು ಒಳ್ಳೆದಾಗ್ಲಿಲ್ಲ ಸ್ವಲ್ಪ ಕಿರುಚುವುದು ಕಡಿಮೆ ಮಾಡಿ ಮೆತ್ತಗೆ ಹೇಳಿದ್ರೆ ಇನ್ನೂ ಚೆನ್ನಾಗಿರ್ತಿತ್ತು ಮೊನ್ನೆ ಹೇಳಿದ್ರಲ್ಲ ಅದು ಒಳ್ಳೆಯದಾಗಿದೆ" ಎನ್ನುವುದು, "ಮೊನ್ನೆಯದ್ದು ಚೆನ್ನಾಗಿತ್ತ ನೀನು ಹೇಳಲೇ ಇಲ್ಲವಲ್ಲ" ಎಂದರೆ, "ಇವತ್ತು ಹಾಡಿದ್ದನ್ನು ಕೇಳಿದ ಮೇಲಲ್ಲವೇ ಮೊನ್ನೆಯದ್ದು ಚೆನ್ನಾಗಿತ್ತು ಅನ್ನಿಸುವುದು" ಅನ್ನಬೇಕೆ. ಏನೇ ಇರಲಿ ನನ್ನ ಸಾಹಸದೆದುರು ಹಿಮಾಲಯ ಪರ್ವತವೇ ಅಡ್ಡ ನಿಂತರೂ ನಾನು ಕದಲುವವನಲ್ಲ ಎಂಬ ದೃಢ ನಿರ್ಧಾರದಿಂದ ಮರಳಿ ಯತ್ನವ ಮಾಡು ಎನ್ನುವಂತೆ ಮತ್ತೆ ತೊಡಗಿಕೊಳ್ಳುವ ಆಸಾಮಿ ನಾನು.
ಎಲ್ಲೋ ಕೇಳಿದ ಒಂದು ಮಾತು ನೆನಪಾಯಿತು "ಉಗುಳಿ ಉಗುಳಿ ರೋಗ , ಬೊಗಳಿ ಬೊಗಳಿ ರಾಗ" ಸರಿ ಪ್ರಾಕ್ಟೀಸ್ ಮೇಕ್ಸ್ ಮ್ಯಾನ್ ಪರ್ಫೆಕ್ಟ್ ಎಂದು ಅಭ್ಯಾಸವನ್ನು ಮತ್ತಷ್ಟು ಹೆಚ್ಚಿಸಿದೆ, ರಾತ್ರಿ ಮಲಗಿದಾಗಲೂ ಮೆಲ್ಲಗೆ ಪದ್ಯಗಳನ್ನು ಹಾಡತೊಡಗಿದೆ, ಒಂದನೇ ದಿನ ನನ್ನವಳ ಪ್ರತಿಕ್ರಿಯೆ ಏನೂ ಇರಲಿಲ್ಲ.
ಎರಡನೇ ದಿನ ಮಲಗಿದ್ದವ ಏನೋ ಯೋಚಿಸುತ್ತಿದ್ದೆ, ನನ್ನವಳು ಕರೆದು "ಏನ್ರೀ ಇವತ್ತು ಪದ್ಯ ಹೇಳ್ಲಿಕ್ಕಿಲ್ವಾ ಅಂತ ನೆನಪಿಸಬೇಕೇ ? !" ಹ್ನೆ ! ಎಲಾ ಇವಳೇ , ಹ ಹ , ನನ್ನ ಹಾಡುಗಾರಿಕೆಯ ಸ್ವಾರಸ್ಯ ಇವಳಿಗೆ ಈಗಲಾದರೂ ಅರ್ಥವಾಯಿತಲ್ಲ, ಒಳ್ಳೆಯದಾಯಿತು" ಎಂದುಕೊಂಡು ಉತ್ಸಾಹದಿಂದ ಗುನುಗುನಿಸಿದೆ.
ಮೂರನೆಯ ದಿನ ನನ್ನಾಕೆ ನಿಜವಾಗಲೂ ನನ್ನ ಹಾಡುಗಾರಿಕೆಯ ಅಭಿಮಾನಿಯಾಗಿದ್ದಾಳೋ ಇಲ್ಲವೋ ಎನ್ನುವುದನ್ನು ಪರೀಕ್ಷಿಸಬೇಕೆಂಬ ಉದ್ದೇಶದಿಂದ ಉದ್ದೇಶಪೂರ್ವಕವಾಗಿಯೇ ಸುಮ್ಮನಿದ್ದೆ. ನನ್ನವಳು ಮೆಲ್ಲನೇ ಕರೆದಳು "ರೀ, ಪದ್ಯ ಹೇಳ್ರೀ" , "ಹೆ ಹೆ ಹೆ, ನನಗಂತೂ ಬಹಳ ಸಂತೋಷವಾಯಿತು, ಈಗಲಾದರೂ ನನ್ನ ನಿಜವಾದ ಪ್ರತಿಭೆ ಇವಳಿಗೆ ಅರ್ಥವಾಯಿತಲ್ಲಾ " ಎಂದುಕೊಂಡು ಹಾಡತೊಡಗಿದೆ. ಕೆಲವಾರು ಹಾಡುಗಳನ್ನು ಹಾಡಿ ನಿಲ್ಲಿಸಿದೆ, ಅಷ್ಟರಲ್ಲಿ "ಎಂತಕ್ಕೆ ನಿಲ್ಲಿಸಿದ್ದು ಹಾಡಿ, ಹಾಡಿ" ಎಂದಳು. ನನಗಂತೂ ಅತ್ಯಾಶ್ಚರ್ಯವಾಗಿತ್ತು, ಛಂಗನೇ ಎದ್ದು ಕುಳಿತು ಉತ್ಸಾದಿಂದ,ಸಂತೋಷದಿಂಡ ಕೇಳಿದೆ "ಏ ... ಆಷ್ಟೂ ಒಳ್ಳೆಯದಾಗ್ತದ ಮಾರಾಯ್ತಿ ನಾನು ಹಾಡುವುದು, ಒಳ್ಳೆ ಸುಧಾರಣೆ ಆಗಿದೆ ಅಲ್ವಾ ಈಗ ನನ್ನ ಹಾಡುಗಾರಿಕೆಯಲ್ಲಿ ಹ್ನೇ ? ?" ಎಂದು...
ಅವಳಿಗೆ ನಿದ್ದೆ ಕಣ್ಣಿಗೆ ಹಿಡಿಯುತ್ತಾ ಇತ್ತೆಂದು ಕಾಣುತ್ತದೆ
"ಹಾಗೇನೂ ಇಲ್ಲ, ಕೇಳ್ತಾ ಇದ್ರೆ ಬೇಗ ನಿದ್ದೆ ಬರ್ತದೆ ಹಾಗೆ ಹೇಳಿದ್ದು, ನನಗೆ ನಿದ್ದೆ ಬರುವ ತನಕ ಹೇಳ್ತಾ ಇರಿ ಆಯ್ತ" ಎನ್ನಬೇಕೆ !!!
---------------------------------------------------

ನನ್ನ ಗಣಕದ ಪರದೆಯ ಮೇಲೆ ಕಣ್ಣಾಡಿಸುತ್ತಿದ್ದ ಮಡದೀಮಣಿ, ಒಮ್ಮೆಯೇ ಆಶ್ಚರ್ಯ ತುಂಬಿದ ಅನುಮಾನದ ದನಿಯಿಂದ "ಏನ್ರೀ ಇದು ?!!" ಎಂದು ಸ್ವಾತಂತ್ರ್ಯ ದಿನಾಚರಣೆಯನ್ನು ನೆನಪಿಸುವಂತೆ ಗದರಿಸಬೇಕೇ ?

"ಎಂತದ್ದೇ ನಿನ್ನದ್ದು ?" ಎನ್ನುತ್ತಾ ಕೊರಳೆತ್ತಿ ನೋಡಿದೆ , "ಏನಿದು "She" ಐಕಾನು, ಎಂತ ಉಂಟು ಇದ್ರಲ್ಲಿ ?" ಎಂದು ಗುಡುಗಿದಳು

"ಹ್ನೇ ! ಎಂತ ಶೀ ಐಕಾನು ಮಾರಾಯ್ತಿ ಏನಿದ್ರು "ಯು" ಐಕಾನೇ ಇರಬೇಕಿತ್ತಲ್ಲ, "ಶಿ" ಉಂಟಾ ! ಅಷ್ಟೊಂದು ಐಕಾನುಗಳ ನಡುವೆ ಇದೇ ನಿನ್ನ ಕಣ್ಣಿಗೆ ಬೀಳಬೇಕೆ" ಎಂದೆ.
ನನ್ನ ಡೆಸ್ಕ್ ಟಾಪ್ ಮೇಲೆ ನೂರಾರು ಐಕಾನ್ ಗಳು ಮುಕ್ತಿಗೋಸ್ಕರ ಕಾಯುತ್ತಾ ಕುಳಿತಿರುತ್ತವೆ, ಡೆಸ್ಕ್ ಟಾಪ್ ನಲ್ಲಿ ಇನ್ನು ಜಾಗ ಇಲ್ಲ ಎಂದಾದ ಮೇಲೆ ಎಲ್ಲಕ್ಕೂ ಒಮ್ಮೆಯೇ ಮುಕ್ತಿ ಕಲ್ಪಿಸುವ ಅಭ್ಯಾಸ ನನ್ನದು , ನನಗೂ ನೆನಪಿಲ್ಲ ಇದೆಂತ ಐಕಾನಪ್ಪ ಎಂದು ತಲೆ ಕೆರೆದುಕೊಂಡೆ.

ನನಗೂ ಕುತೂಹಲ ಉಂಟಾಯಿತು ಇದ್ಯಾವ "ಶಿ" ನನ್ನ ಗಣಕದಲ್ಲಿ ಕುಳಿತಿದೆ ಎಂದು

" ಧೈರ್ಯಮಾಡಿ ತೆರೆದು ನೋಡು, ನನಗೂ ನೆನಪಿಲ್ಲ ಎಂತಾಂತ ನೋಡುವ" ಎಂದೆ

ಮೌಸು ಮಹಾರಾಯನ ಹೃದಯಸ್ಥಂಭನವಾಗುವಂತೆಯೇ ಎರಡು ಬಾರಿ ಕ್ಲಿಕ್ಕಿಸಿದಳು.... !! ನಾನು ಬಂದದ್ದೆಲ್ಲಾ ಬರಲಿ ಗೋವಿಂದನ ದಯವಿರಲಿ ಎಂದು ತಯಾರಾದೆ ...

ಯಾವಾಗಲೋ ಗಡಿಬಿಡಿಯಲ್ಲಿ ಎಲ್ಲಿಂದಲೋ ಡೌನ್ ಲೋಡ್ ಮಾಡಿದ್ದ ಶೇಣಿಯವರ ನಗುಮುಖದ ಭಾವಚಿತ್ರ ಪ್ರಕಟವಾಯಿತು, ನನ್ನ ತಲೆ ಉಳಿಯಿತು... 

----------------------------------------

Friday, June 20, 2014

ಊಟಕ್ಕಿಲ್ಲದ ಉಪ್ಪಿನಕಾಯಿಯೂ ಉಪಯೋಗಕ್ಕಿಲ್ಲದ ರೈಲೂ ಎಷ್ಟಿದ್ದರೇನು ಪ್ರಯೋಜನ ಗೌಡರೇ ?

ಬೆಂಗಳೂರು ಮಂಗಳೂರು ರೈಲಲ್ಲಿ ಸೀಟು ಸಿಗುವುದೇ ಕಷ್ಟ, ಮಂಗಳೂರು ರೈಲು ಎಂಬುದು ಕೇವಲ ಹೆಸರಿಗೆ ಮಾತ್ರ ಎಂಬಂತಾಗಿದೆ, ಇಲ್ಲಿಂದ ಅಲ್ಲಿಗೆ ತಲುಪಲು ತೆಗೆದುಕೊಳ್ಳುವ ಸಮಯದಲ್ಲಿ ಎರಡು ಬಾರಿ ಮಂಗಳೂರಿಂದ ಬೆಂಗಳೂರಿಗೆ ಹೋಗಿ ಬರಬಹುದು. ಅರಸೀಕೆರೆಯ ಮೂಲಕ ಇರುವ ನೇರ ಮಾರ್ಗವನ್ನು ಬಿಟ್ಟು ಮೈಸೂರು ಮೂಲಕವಾಗಿ ೧೨ ಘಂಟೆ ಪ್ರಯಾಣ(ಸ) (ಪ)ಮಾಡಬೇಕು. ಇನ್ನು ಮಂಗಳೂರಿನಿಂದ ಹೊರಟರೆ ಮರುದಿನ ಕಛೇರಿ ಸಮಯಕ್ಕಂತೂ ಬೆಂಗಳೂರು ತಲುಪಲು ಸಾಧ್ಯವೇ ಇಲ್ಲ. ರೈಲು ಬೆಂಗಳೂರು ತಲುಪುವಾಗಲೇ ೯ ಘಂಟೆ ಕಳೆದಿರುತ್ತದೆ. ನಗರದ ಹೊರಪ್ರದೇಶದಲ್ಲಿ ಮನೆಯಿದ್ದರಂತೂ ಮಧ್ಯಾಹ್ನವಲ್ಲದೆ ಮನೆಗೆ ತಲುಪಲು ಸಾಧ್ಯವೇ ಇಲ್ಲ. ನಡುವಲ್ಲಿ ಹೊಟ್ಟೆ ಹಸಿವಾಯಿತೆಂದು ಹೋಟೇಲಿಗೆ ನುಗ್ಗಿ ಏನಾದರೂ ತಿಂಡಿ ತಿಂದರೆ ಅಲ್ಲಿಗೆ ಕಥೆ ಮುಗಿಯಿತೆಂದೇ ಅರ್ಥ, ಮರುದಿನವೂ ಕಛೇರಿಗೆ ರಜೆ ಹಾಕಿ ಉತ್ತಮ ವೈದ್ಯರನ್ನು(ಈ ಬೆಂಗಳೂರಿನಲ್ಲಿ ಅಸಲಿ ವೈದ್ಯರು ಯಾರೆಂದು ತಿಳಿಯುವುದೂ ದೊಡ್ಡ ಸಾಹಸವೇ ಸರಿ) ಹುಡುಕಿ ಅಲ್ಲಿ ಸರತಿ ಸಾಲಿನಲ್ಲಿ ನಿಂತು ಔಷಧೋಪಚಾರ ಪಡೆಯುವಷ್ಟರಲ್ಲಿ ಕಾಯಿಲೆ ಏನೆಂದೇ ಮರೆತು ಹೋಗಿರುತ್ತದೆ.
ಮಾನ್ಯ ಸದಾನಂದ ಗೌಡರೆ ಸ್ವಲ್ಪ ಆನಂದ ನಮಗೂ ಇರಲಿ ಸ್ವಾಮಿ ದಯವಿಟ್ಟು ಈ ಊಟಕ್ಕಿಲ್ಲದ ಉಪ್ಪಿನಕಾಯಿ ರೈಲನ್ನು ಒಂದು ಉಪಕಾರಕ್ಕೆ ಆಗುವಂತೆ ಮಾಡಿ ನೀವು ಸ್ವಲ್ಪ ದರ ಏರಿಸಿದ್ರೂ ಆಡ್ಡಿ ಇಲ್ಲ ಆದ್ರೆ ಊರಿಡೀ ನಮ್ಮನ್ನು ಸುತ್ತು ಬರುವಂತೆ ಮಾಡಿ ಮೊದಲೇ ಈ ಬೆಂಗಳೂರಿನ ರಸ್ತೆಗಳಲ್ಲಿ ಮನೆಯಿಂದ ಕಛೇರಿಗೆ ಕಛೇರಿಯಿಂದ ಮನೆಗೆ ಅಲೆದು ಅಲೆದು ಸುಸ್ತಾಗಿರುವ ನಮಗೆ ನಮ್ಮ ಊರು ಸೇರುವುದಕ್ಕೂ ಅಲೆಯುವಂತೆ ಮಾಡಬೇಡಿ, ದಯವಿಟ್ಟು ರೈಲು ನೇರವೇ ಹೋಗಲಿ ಒತ್ತಡಕ್ಕೆ ಮಣಿಯದೇ ಕಾರ್ಯ ಮಾಡಿ ಈಗ ಸಿಕ್ಕಿರುವ ಅವಕಾಶವನ್ನು ಕೈಚೆಲ್ಲಿಕೊಳ್ಳಬೇಡಿ.
ದಯವಿಟ್ಟು ಕ್ರಯ ಏರಿಸುವುದಕ್ಕೆ ಮುಂಚೆ ಈಗಿರುವ ರೈಲು ನಮಗೆ ಎಷ್ಟು ಪ್ರಯೋಜನಕಾರಿಯಾಗಿದೆ ಅಂತ ಒಮ್ಮೆ ಯೋಚಿಸಿ ನೋಡಿ. ರೈಲಿಗೂ ಬಸ್ಸಿಗೂ ಒಂದೇ ಕ್ರಯ ಆದ್ರೆ ಮತ್ತೆ ನಿಮ್ಮ ರೈಲು ಯಾರಿಗೆ ಬೇಕು ಹೇಳಿ. ಮೊದಲು ರೈಲು ಪ್ರಯೋಜನಕ್ಕೆ ಆಗುವಂತೆ ಮಾಡಿ ಮತ್ತೆ ಕ್ರಯ ಹೆಚ್ಚು ಮಾಡಿ.

Thursday, June 12, 2014

ಅಗರಿ-ದೇರಾಜೆ-ಶೇಣಿ-ನೆಡ್ಲೆ-ದಿವಾಣ ಯಕ್ಷಗಾನ ತಾಳಮದ್ದಳೆಗಳು

ಇತ್ತೀಚೆಗೆ ಅಂತರ್ಜಾಲದಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಹುಡುಕುತ್ತಿದ್ದಾಗ ಅನರ್ಘ್ಯ ರತ್ನಗಳೆರಡು ಸಿಕ್ಕವು.. ಬಹುಷಃ ಸಾಧಾರಣ ಯಕ್ಷಗಾನವೆಂಬ ಪದವನ್ನು ಬಳಸಿ ಹುಡುಕಿದಲ್ಲಿ ಇವು ಸಿಗಲಾರವೋ ಎನೋ. ಯಕ್ಷಗಾನ ಪ್ರಿಯರ ಅಸ್ವಾದನೆಗೋಸ್ಕರ ಈ ಎರಡು ತಾಳಮದ್ದಳೆಗಳ ಕೊಂಡಿಯನ್ನು ಮೂಲ ಪ್ರಕಟಿತ ಪುಟದ ಕೊಂಡಿಯೊಡನೆ ಪ್ರಕಟಿಸುತ್ತಿದ್ದೇನೆ.

ಮೂಲಪುಟ: http://deseesaamprathi.blogspot.in/p/yakshagana-thalamaddale.html

1. ಶಲ್ಯ ಸಾರಥ್ಯ
ಅಗರಿ ಶ್ರೀನಿವಾಸ ಭಾಗವತರು -  (Agari Shrinivasa Bhagavatha)
ನೆಡ್ಲೆ ನರಸಿಂಹ ಭಟ್ ( ಚೆಂಡೆ)- (Nedle Narasimha Bhat)
 ದಿವಾಣ ಭೀಮ ಭಟ್ (ಮದ್ದಳೆ) (Divana Bheema Bhat)

 ದೇರಾಜೆ ಸೀತಾರಾಮಯ್ಯ (ಕೌರವ) (Deraje Seetharamayya)
 ಶೇಣಿ ಗೋಪಾಲಕೃಷ್ಣ ಭಟ್ (ಶಲ್ಯ) (Sheni Gopalakrishna Bhat)


http://www.divshare.com/download/19235703-afe

2.ಉತ್ತರನ ಪೌರುಷ (ನಾದಲಹರಿ ಕ್ಯಾಸೆಟ್ಸ್) ದೇರಾಜೆ ಸೀತಾರಾಮಯ್ಯ (ಉತ್ತರ ಕುಮಾರ) 
ಶೇಣಿ ಗೋಪಾಲಕೃಷ್ಣ ಭಟ್ (ಬೃಹನ್ನಳೆ)  
ವಿಟ್ಲ ಗೋಪಾಲಕೃಷ್ಣ ಜೋಷಿ (ಗೋಪಾಲಕ)
ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ (ಉತ್ತರೆ) 
ಪಕಳಕುಂಜ ಶ್ಯಾಮ ಭಟ್ (ಕೌರವ)
ಮಾದೆಕಟ್ಟೆ ಈಶ್ವರ ಭಟ್ (ಭಾಗವತರು).







http://www.divshare.com/download/19235986-af0

Monday, May 26, 2014

ನರೇಂದ್ರ ಮೋದಿ ಅಭಿನಂದನಾ ಗೀತೆ

ನರೇಂದ್ರ ಮೋದಿಯವರ ಪ್ರಮಾಣವಚನ ಸ್ವೀಕಾರ ಸಂದರ್ಭದಲ್ಲಿ ನಮ್ಮದೊಂದು ಅಭಿನಂದನೆ. ಮಿತ್ರರಾದ ರಂಗನಾಥರು ನನ್ನ ಕೋರಿಕೆಯ ಮೇರೆಗೆ ಯಕ್ಷಗಾನೀಯ ಶೈಲಿಯಲ್ಲಿ ಹಾಡಿದ್ದಾರೆ , ಕೇಳಿ ಆನಂದಿಸಿ. ನರೇಂದ್ರ ಮೋದಿ ಅಭಿನಂದನಾ ಗೀತೆ

ಬಂದನಿಂದು ಭಾರತಾಂಬೆ ಭಾಗ್ಯೋದಯ ಚಂದ್ರನು
ದುಷ್ಟರೊಡಲ ದರ್ಪ ಹರಿವ ಕಾಲರೂಪಿ ಭೀಮನು
ಶಿಷ್ಟ ಜನರ ಪೊರೆದು ಧರ್ಮವನ್ನು ಕಾಯ್ವ ಧೀರನು
ಬಿಂಕದಿಂದ ಮೆರೆವ ಭ್ರಷ್ಟರನ್ನು ತುಳಿವ ರುದ್ರನು
ಸರ್ವ ಜನರ ಮಾನಸದಲಿ ಮೆರೆಯುತಿರುವ ಮನುಜನು
ಭರತ ಭೂಮಿಯುನ್ನತಿಕೆಯ ಕಾಯ್ವೆನೆಂಬ ಆಣೆಯಿಟ್ಟು
ಆರು ವೈರಿಗಳನು ಮಣಿಸಿ ಸರ್ವಶ್ರೇಷ್ಠ ಪದವಿಯತ್ತ
ಈತನಿಂದು ಪಯಣಹೊರಟ ಸರ್ವ ಜನರ ಮತದಲಿ
ಒಂದೆ ಗುರಿಯು ಒಂದೆ ಕರೆಯು ಸ್ವಾರ್ಥರಹಿತ ಕಜ್ಜವು
ಸರ್ವಭಾರತೀಯರೇಳಿ ಚಿಂತೆಗಳನು ದೂರಮಾಡಿ
ಬಂದನಿಂದು ಅಂಬೆ ಮುಕುಟಮಣಿಯ ಕಾಯ್ವ ಸರ್ಪನು
ಇಳೆಯ ಸಕಲ ಕೊಳೆಯತೊಳೆದು ಶುಭ್ರವಸನವುಡಿಸುವಂಥ
ಪರಮ ಋಷಿಯ ಪೋಲ್ವ ಮಹಿಮ ಈತನನ್ನು ಹರಸಿ ಎಲ್ಲ
ಇಂದು ಧರನ ವಾಣಿವರನ ಸಿರಿಯರಸನ ಕರುಣವಿರಲಿ
ಮಾತೆ ಶಾಂಭವಿ ಕಾಯಲಿವನ ಸರ್ವ ಪ್ರಿಯ ನರೇಂದ್ರನ...

ಲನಾಭಟ್ಟ-೨೬-೦೫-೨೦೧೪

ನಿಮ್ಮ ಅಭಿಪ್ರಾಯ