Thursday, May 31, 2007

ಭಾಗ ೨

ಹನುಮಂತನ ಪರಿಚಯ ನಿಮಗಾಗಬೇಕೆಂದರೆ ನಮ್ಮ ವೇದಪಾಠ ಶಾಲೆಯ location ನಿಮಗೆ ಗೊತ್ತಾಗಬೇಕು.ಸುಬ್ರಹ್ಮಣ್ಯ ದೇಗುಲದ ಗೋಪುರದ ಎದುರು
ಎಡಭಾಗದಲ್ಲಿ ಛತ್ರವಿದೆ ಅದರ ಹೊರಾಂಗಣ ಬಹಳ ವಿಶಾಲವಾಗಿದೆ.ರಥಬೀದಿಯ ಮುಕ್ಕಾಲು ಪಾಲು ಉದ್ದವಿದೆ.ದೇಗುಲದ ಕಡೆಗೆ ಮುಖ ಮಾಡಿ ನಿಂತರೆ ಎಡಗಡೆಗೆ.
ಉತ್ತರಾದಿ ಮಠವೆಂದು ಕರೆಯಲ್ಪಡುವ ಒಂದು Sub ದೇವಸ್ಥಾನವಿದೆ.ಅಲ್ಲಿ ನಡೆಯುತ್ತಿತ್ತು ನಮ್ಮವೇದಪಾಠ ಶಾಲೆ.ಇಲದು ಒಂದು ಪುರಾತನ (:D ಬಹುಶಹ) ಹನುಮಂತನ ಗುಡಿ.
ಬೆಳಗ್ಗೆ ಪ್ರತೀದಿನ ೭-೭.೩೦ ರವರೆಗೆ
ಓರ್ವರು ಪುರೋಹಿತರು ಬಂದು ಹನುಮಂತನ ಜತೆ ಸ್ವಲ್ಪ ಹೊತ್ತು ಇದ್ದು(ಪೂಜೆ ಮಾಡಿ)ಹೋಗುತ್ತಿದ್ದರು.ಅವರು ಬರುತ್ತಿದ್ದುದು ಕೆಲವೊಮ್ಮೆ ನಮಗೆ ತಿಳಿಯುತ್ತಲೇ ಇರಲಿಲ್ಲ.
ಇರಲಿ ಬಿಡಿ .. ಸುಮಾರು ೫ ವರೆ ಅಡಿ ಎತ್ತರ ಸಾಧಾರಣ ಮೈಕಟ್ಟು ಎಣ್ಣೆಗೆಂಪು ಮೈಬಣ್ಣ :D ಕಿವಿಯಲ್ಲಿ ಒಂದು ಓಲೆಯಿತ್ತು,ಎರಡೂ ಕಿವಿಗಳಲ್ಲೋ ಒಂದರಲ್ಲೋ ಎಂದು ನೆನಪಿಲ್ಲ.ಯಾರೊಂದಿಗೂ ಅವರು(ಪುರೋಹಿತರು) ಮಾತಾಡಿದ್ದನ್ನು ನಾನು ಆ ಮೂರು ವರ್ಷಗಳಲ್ಲಿ ನೋಡಲಿಲ್ಲ.
ಅವರಾಯಿತು ಅವರ ಕೆಲಸವಾಯಿತು ಎಂದಿರಬಹುದೋ ಅಥವಾ ಈ ಪಿಳ್ಳೆಗಳೊಂದಿಗೆ ಎಂತ ಮಾತಾಡುವುದು ಎಂಬ ಭಾವವಿದ್ದಿರಬಹುದೋ ಎನೋ.ಬಿಳಿ ಬಣ್ಣದ ಸುಮಾರು ೧೦-೧೫
ದೊಡ್ಡ ಹೂಗಳನ್ನು ದಿನಾಲೂ ತರುತ್ತಿದ್ದರು ಹನುಮಂತನ ಸಂದಿಗೊಂದುಗಳಲ್ಲೆಲ್ಲಾ ಒಂದೊಂದು ಹೂ ಸಿಕ್ಕಿಸಿ ಗಂಧ ಮೆತ್ತಿ ಆರತಿ ಎತ್ತಿದಾಗ ಪೂಜೆ ಮುಗಿಯುತ್ತಿತ್ತು.ಅದಕ್ಕಿಂತ ಮೊದಲು ಪಾಪ ಹನುಮನಿಗೆ ತಣ್ಣೀರಿಂದ ಪುಟ್ಟ ಸ್ನಾನ.
ಗುಡಿಯ ಹೊರಗೆ ಇದ್ದ್ದ ಘಂಟೆಗಳನ್ನು ಎಳೆಯುವುದಕ್ಕೆ ನಮ್ಮ ಪೈಪೋಟಿ ಕಂಡು ಹನುಮಂತನಿಗೆ ನಗು ಬಂದಿರಬಹುದೋ ಏನೋ !.ಇನ್ನು ಪೂಜೆಯಬಳಿಕ ಒಂದೊಂದು ಚಿಕ್ಕ ಚಿಕ್ಕ ಗಂಧದ ಉಂಡೆಗಳು ನಮ್ಮ ಕೈಮೇಲೆ ಬೀಳುತ್ತಿದ್ದವು.
ಯಾಕೋ ಏನೋ ಹೂಗಳೆಲ್ಲಾ ಹನುಮಂತನಿಗೆ ಮಾತ್ರ ಸೀಮಿತವಾಗಿದ್ದವು.ಭಡಾಲ್ ಎಂದು ಗುಡಿಯಲ್ಲಿ ಹನುಮಂತನನ್ನು ಭಂದಿಸಿ ಅರೆ ಕ್ಷಣದಲ್ಲಿ ಮಾಯವಾಗಿಬಿಡುತ್ತಿದ್ದರು.ಮತ್ತೆ ಪಾಪ ಹನುಮಂತನ ದರುಶನ ಮರುದಿನ ಬೆಳಗ್ಗೆಯೇ ಕೆಲವೇಕೆಲವು ಘಳಿಗೆಗಳ ಕಾಲ.

ಹೀಗೆ ನಮ್ಮ ದಿನ ಪ್ರಾರಂಭವಾಗುತ್ತಿತ್ತು.ಇಷ್ಟು ಹೊತ್ತಿಗೆ ವೇದಪಾಠಶಾಲೆಯ ಕೊನೆಯ ಸೋಮಾರಿ ಕೂಡ ಎದ್ದು ಸ್ನಾನ ಪೂರೈಸಿ ಆಗಿರುತ್ತಿತ್ತು.ಇನ್ನು ಗಂಜಿ ಊಟದವರೆಗೆ ಕಾಯುವ ಕೆಲಸ.ಅಷ್ಟರವರೆಗೆ ಅಂದು ಕಲಿಯಬೇಕಾದ ಮಂತ್ರಗಳ ಮೇಲೆ ದೃಷ್ಟಿ ಹಾಯಿಸುವ ಕೆಲಸ.
ಗಂಜಿಯ ಬಳಿಕ ಓತಪ್ರೋತವಾಗಿ ಹತ್ತು ಘಂಟೆಯವರೆಗೆ ಮಂತ್ರಪಾಠ ಬಳಿಕ ಕಷಾಯ ಸೇವನೆ.ಅದರ ನಂತರ ಪುನಹ ಮಧ್ಯಾಹ್ನದವರೆಗೆ ಮಂತ್ರಪಾಠ.ಕಾಲು ಮಡಚಿಕುಳಿತು ಇರುವೆ ಹತ್ತಿದರೆ ನಿಂತುಕೊಂಡು ಮಂತ್ರ ಪಠಣ.ಸರಿಯಾಗಿ ಸ್ವರ ಏರದಿದ್ದಲ್ಲಿ ಇಳಿಯದಿದ್ದಲ್ಲಿ ಗುರುಗಳ ಬೆತ್ತ ಏರುತ್ತಿತ್ತು.
ಹೀಗೆ ಸಂಜೆಯಾದರೆ ಏನೋ ಖುಶಿ.ಸಂಜೆ ಅತ್ಯಂತ ಮುಖ್ಯವಾದ ಕಾರ್ಯಕ್ರಮವಿರುತ್ತಿತ್ತು.೯೦% ಜನ ಸಂಜೆಯ ನಿರೀಕ್ಷೆಯಲ್ಲ್ಲಿ ಇರುತ್ತಿದ್ದೆವು.ಯಾಕೆಂದರೆ ಸಂಜೆ ಸ್ನಾನಕ್ಕಾಗಿ ಮೋಜು ಮಾಡಲು ಕುಮಾರಧಾರೆಗೆ ಹೋಗುವ ಅವಕಾಶವಿತ್ತು ಅದೂ ನಮ್ಮ ಗುರುಗಳು Free ಇದ್ದರೆ ಮಾತ್ರ.

ಸುಮಾರು ೧ ಕಿಮೀ ದೂರ ನಾವು ಮೀಯುತ್ತಿದ್ದ ಸ್ಥಳ ಅಗ್ರಹಾರವೆಂದು ಹೆಸರು.ಅಲ್ಲಿ ಸ್ವಾಮಿಗಳ ವೃಂದಾವನವಿತ್ತು(ಸ್ವಾಮಿಗಳ ಸಮಾಧಿ ಸ್ಥಳ).


ಮತ್ಯಾವುದೋ ಒಂದು ಶಿವನ ದೇವಸ್ಥಾನ.ಎರಡು ಮೂರು ವರ್ಷಗಳ ಹಿಂದೆ ಜೀರ್ಣೋಧ್ಧಾರವಾದ ಸುದ್ದಿ ಪತ್ರಿಕೆಗಳಲ್ಲಿ ಪ್ರಕಟವಾಗಿತ್ತು.ಅಲ್ಲಿ ಸಾಧಾರಣ ೩-೩.೫ ಅಡಿ ಎತ್ತರ ನೀರಿರುತ್ತಿತ್ತು.








.
ಗುರುಗಳ ಹದ್ದಿನ ಕಣ್ಣಿನ ಕಾವಲಿನಲ್ಲಿ ನೀರಿನಲ್ಲಿ ನಮ್ಮ ಜಲಕ್ರೀಡೆ.ಹೊಸ ಹುಡುಗರ ಕಾಲು ಎಳೆಯುವುದು ದೊಡ್ಡವರ ಬೆನ್ನ ಮೇಲೆಹತ್ತಿ ಎರಡುಮೂರು ಜನ ಅವರನ್ನು ಮುಳುಗಿಸಲು ಪ್ರಯತ್ನಿಸಿ ಕೊನೆಗೆ ತಾವೇ ನೀರು ಕುಡಿದು.ಸುಮ್ಮನೆ ದೂರ ಹೋಗುವುದೂ.ನಮ್ಮ ದೈನಂದಿನ ಆಟಗಳು.ಅಷ್ಟರಲ್ಲಿ ಉಳಿದವರ ಸ್ನಾನವಾಗುವ ಮುಂಚೆ
ಬಟ್ಟೆಗಳು ಒಗೆಯಲ್ಪಟ್ಟು ಶುಚಿಯಾಗಬೇಕು ಬಳಿಕ ಸ್ನಾನ.ಒಂದು ವರ್ಷದ ಸತತ ಪ್ರಯತ್ನದ ಬಳಿಕ ಎರಡನೇ ವರ್ಷದಲ್ಲಿ ನಾನು ಈಜಲು ಕಲಿತೆ.ಇನ್ನು ನೀರಿಂದ ಮೇಲೆ ಬಂದ ಮೇಲಿನ ಗೋಳೇ ಬೇರೆ.ನೀರೊಳಗೆ ಇದ್ದ ಕಲ್ಲುಗಳಿಗೆ ಢೀ ಹೊಡೆದರೆ ನೀರೊಳಗೆ ಗಮನಕ್ಕೆ ಬರುವುದಿಲ್ಲ.ನೀರಿಂದ ಮೇಲೆ ಬಂದ ಮೇಲೆಯೇ ಅದರ ಅವಸ್ಥೆ ಗೊತ್ತಾಗುವುದು.
ಅಂತೂ ಹೀಗೆ ಪುನಹ ಹಿಂದಿರುಗಿ ಪಾಠಶಾಲೆಗೆ ಬಂದಮೇಲೆ ಪುನಹ ಸ್ನಾನ ಮಾಡಬೇಕಾದಷ್ಟು ಬೆವರು ಇಳಿದಿರುತ್ತಿತ್ತು.ಮತ್ತೆ ಕೆಲವೊಂದು ಬಾರಿ ನಮ್ಮ ಜ್ಯೋತಿಷ್ಯಗುರುಗಳು ಬಂದರೆ ಅಗ್ರಹಾರ Cancel.ಆದರೆ ಕ್ಲಾಸ್ ಬೇಗ ಮುಗಿದರೆ ಒಂದು Hope ಇರುತ್ತಿತ್ತು.


ಹೀಗೆ ಇಷ್ಟೆಲ್ಲಾ ನಡೆದಾಗುವಾಗ ಸಂಜೆ ಆರು ದಾಟಿರುತ್ತಿತ್ತು.ಈ ಗಡಿಬಿಡಿಯಲ್ಲಿ ನಮ್ಮ ಸಂಜೆಯ ಉಪಹಾರದ ಬಗ್ಗೆ ಹೇಳುವುದೇ ಮರೆತೆ.ಸಂಜೆ ೪ ಕ್ಕೆ ನಮ್ಮ ತರಗತಿಗಳು ಮುಗಿದಿರುತ್ತಿದ್ದವು.ಆ ಬಳಿಕ ಲಘು ಉಪಾಹಾರ.ಅವಲಕ್ಕಿ ಅಥವಾ ಸಜ್ಜಿಗೆ ಇತ್ಯಾದಿ ಇತ್ಯಾದಿ ಇವೆರಡು most commom.ಜತೆಗೆ ಚಹಾ ಕಾಫಿ ಅಥವಾ ಕಷಾಯ.
೬.೩೦ ಕ್ಕೆ ಗುರುಗಳು Mood ಚೆನ್ನಗಿದ್ದರೋ ಇಲ್ಲದಿದ್ದರೋ ಅಂತು ವಿಷ್ಣುಸಹಸ್ರನಾಮ ಪಾರಾಯಣ.ಬಳಿಕ ೮-೮.೩೦ ರ ಹೊತ್ತಿಗೆ ಊಟ.ಬಳಿಕ ನಮ್ಮ ಹರಟೆ ಕಟ್ಟೆಗಳು.ಆಟಗಳು ಲೂಡೋ :D ಇತ್ಯಾದಿ.ಒಂದು ದಿನ ಮುಗಿಯಿತು, ಇನ್ನೆಷ್ಟುದಿನವಿದೆ ಎಂದು ಲೆಕ್ಕಾಚಾರ. ಬೊಬ್ಬೆ ಹೊಡೆದರೆ ಮಾತ್ರ ತುಸು ತೊಂದರೆಯಿತ್ತು.

ಹೀಗೆ ಇಷ್ಟಾಗುವ ಹೊತ್ತಿಗೆ ಎಳೆಯ ಕಣ್ಣುಗಳು ನಿದ್ದೆಯ ನಿರೀಕ್ಷೆಯಲ್ಲಿ ದಣಿದಿರುತ್ತಿತ್ತು.ಮನೆಯಲ್ಲಾದರೆ ಅಮ್ಮಾ ಹಾಸಿಗೆ ಹಾಸು ಎಂದು ಹೇಳಿದರೆ ಹಾಸಿಗೆ ಸಿಧ್ದ.ಇಲ್ಲಿ ಅಮ್ಮನ ನೆನಪು ಮಾತ್ರ ಹಾಸಿಗೆ ನಾವೇ ಹಾಸಿಕೊಂಡು,ನಿದ್ರಾದೇವಿಯ ಮಡಿಲಿಗೆ ಜಾರಿಕೊಳ್ಳುತ್ತಿದ್ದೆವು.
ಇನ್ನು ಕಣ್ಣು ಮುಚ್ಚಿ ತೆರೆಯುವುದರೊಳಗೆ ಬೆಳಗಾದಂತೆ ಭಾಸವಾಗುತ್ತಿತ್ತು :O.ಬೆಳಗ್ಗೆ ಎದ್ದು ಅದೇ ದಿನಚರಿ.

ಇನ್ನೊಂದು ಬೆಳಗ್ಗೆ ಹಾಗೂ ಸಂಜೆ ನಮ್ಮ ಭೇಟಿ ಸುಬ್ಬಣ್ಣನ(ಸುಬ್ರಹ್ಮಣ್ಯ) ಜತೆಗೆ ನಿಗದಿಯಾಗಿತ್ತು.ಒಂದು ಉದ್ದನೆಯ ಸಾಲು ನೇರವಾಗಿ ದೇವಳದ ಒಳಗೆ ತೆರಳಿ ಅಲ್ಲಿಂದ ಆದಿ ಸುಬ್ರಹ್ಮಣ್ಯಕ್ಕೆ ಅಲ್ಲಿ ದೇವರಿಗೆ ಪ್ರದಕ್ಷಿಣೆ ಬಂದು ನಮಸ್ಕರಿಸಿ ಪುನಹ ಬಂದು ಸುಬ್ರಹ್ಮಣ್ಯನಿಗೆ ನಮಸ್ಕರಿಸಿ ಸುಬ್ರಹ್ಮ್ಣಣ್ಯ ಮಠಕ್ಕೆ ಪ್ರದಕ್ಷಿಣೆ ಬಂದು.ಪಾಠಶಾಲೆಗೆ.ಇದು ಬೆಳಗ್ಗೆ ಹಾಗೂ ರಾತ್ರಿ ಯ ಪರಿಪಾಠ.
ರಾತ್ರಿ ಆದಿ ಸುಬ್ರಹ್ಮಣ್ಯಕ್ಕೆ ಭೇಟಿಯಿರಲಿಲ್ಲ.ಇನ್ನು ವೇದಪಾಠಶಾಲೆಯಲ್ಲಿ ನಡೆದ ಕೆಲವು ವಿಚಿತ್ರ ಘಟನೆಗಳು ಮುಂದಿನ ಸಂಚಿಕೆಯಲ್ಲಿ.
ನಮಸ್ಕಾರ

Thursday, May 24, 2007

ವಸಂತ ವೇದಪಾಠ ಶಿಬಿರದ ನೆನಪುಗಳು

      ಏನನ್ನಾದರೂ ಮರೆಯುವುದೆಂದರೆ ಎಷ್ಟು ಸುಲಭ ಆದರೆ ಅದನ್ನೇ ನೆನಪಿನಲ್ಲಿಟ್ಟುಕೊಳ್ಳುವುದಕ್ಕೆಬಹಳ ಕಷ್ಟ.ಇರಲಿ ಈ ಮಾತು ಯಾಕೆ ನೆನಪಾಯತು ಎಂದರೆ ಈ ಬ್ಲಾಗ್ ಗೆ ನಾನು ಆರಿಸಿಕೊಂಡ ವಿಷಯವೇ ಅಂತಹದ್ದು.ನನ್ನ ಬಾಲ್ಯದ ಮಂತ್ರಪಾಠ ತರಗತಿಗಳ ಬಗ್ಗೆ ಬರೆಯಬೇಕಂಬ ಉಪಾಯ ಹೊಳೆಯಿತು,ಬರೆಯುವುದಾದರೂ ಏನನ್ನು ? ನಾನು ಸುಬ್ರಹ್ಮಣ್ಯಕ್ಕೆ ಅದಕ್ಕಾಗಿ ಹೋದದ್ದು ಸುಮಾರು ೭ ವರ್ಷಗಳ ಹಿಂದೆ ಆದರೂ ಆ ನೆನಪುಗಳು ಮಾಸಿಲ್ಲ ಮನಸ್ಸಿನ ಮೂಲೆಯ ಯಾವುದೋ ಪುಟಗಳಲ್ಲಿ ಅಡಗಿ ಕುಳಿತಿವೆ ಒಂದೊಂದನ್ನೇ ಹೊರಗೆಳೆಯಬೇಕು ಅಷ್ಟೇ.
ಮೊದಲ ಬಾರಿ ನಾನು ಉಪನಯನದ ಬಳಿಕ ೫ ನೇ ತರಗತಿಯ ಬೇಸಿಗೆ ರಜೆಯಲ್ಲಿ ಒಲ್ಲದ ಮನಸ್ಸಿನಿಂದ ಅಪ್ಪನ ಒತ್ತಾಯಕ್ಕೆ ವೇದಪಾಠಶಾಲೆಗೆ ಹೋಗಬೇಕಾಯಿತು.

ನನ್ನ ಆ ಮೂರು ವರ್ಷಗಳ ಬೇಸಿಗೆ ರಜೆಯ ೧.೫ ತಿಂಗಳುಗಳ ನೆನೆಪುಗಳು ತುಂಬಾ ಖುಶಿ ಕೊಡುತ್ತವೆ.ಅಲ್ಲಿ ನನ್ನದೇ ವಯಸ್ಸಿನ ನನಗಿಂತ ಹೆಚ್ಚು ಅಥವಾ ಕಡಿಮೆ ವಯಸ್ಸಿನ ವಟುಗಳ ಜತೆಯಲ್ಲಿ ಬೆರೆತು ಕಳೆದ ಆ ಸಮಯಗಳು ಅಪೂರ್ವ ಅನುಭವಗಳು.ನಾನು ಅದೇ ಸಮಯದಲ್ಲಿ ಕಲಿತ ಒಂದು ಹಿಂದಿ ಕವಿತೆ ನೆನಪಾಗುತ್ತದೆ ಬಾರ್ ಬಾರ್ ಅತೀಹೆ ಮುಜ್ ಕೋ 
ಮಧುರ್ ಯಾದ್ ಬಚ್ ಪನ್ ತೇರೀ ಆ ಸಮಯದಲ್ಲಿ ಪದ್ಯ ಏನೋ ಒಂದು ಐದು ಅಂಕಗಳ ಆಶೆಗೆ ಕಲಿತದ್ದು ಆದರೆ ಅದರ ಅರ್ಥ ಎಷ್ಟು ವಿಶಾಲವಾಗಿದೆ ಎಂದು ತಿಳಿದದ್ದು ಆ ಮೇಲೆಯೇ.

ನಮ್ಮ ಶಿಬಿರವನ್ನು ಹೊಗುವುದರ ಒಂದು ವಾರದ ಮೊದಲು ನಾನು ನನ್ನ ಅಜ್ಜನ ಮನೆಗೆ ಬಂದು ತಂಗಿದ್ದೆ.ಅಲ್ಲಿಂದ ಸುಬ್ರಹ್ಮಣ್ಯಕ್ಕೆ ೧೮ ಕಿ.ಮೀಗಳಾಗುತ್ತವೆ.
 
ಹೇಗೋ ಅಂತೂ ಒತ್ತಾಯದಿಂದ ಪಾಠಶಾಲೆಯ ಮೊದಲನೆಯ ವರ್ಷದ ಪ್ರಥಮ ದಿನ ತಂದೆ ತಾಯಿ ಜತೆಗೆ ವೇದಪಾಠಶಾಲೆಗೆ ಭಾರವಾದ ಹೆಜ್ಜೆ ಹಾಕಿದೆ.ಅಲ್ಲಿಗೆ ತಲುಪಿದ ಬಳಿಕ 
ನಮ್ಮದೇ ಊರಿನ ಗೋಪಿ ನನಗೆ ಜತೆಯಾದ.
ಸ್ವಲ್ಪ ಹೋದಜೀವ ಬಂದಂತಾಯಿತು ನನಗೆ. "ಅಬ್ಬ ಇವ ಒಬ್ಬ ಆದರೂ ಇದ್ದಾನ್ನೆ ಸಧ್ಯಕ್ಕೆ "ಎಂದು ನಿಟ್ಟ್ಸುಸಿರು ಬಿಟ್ಟೆ.ಹೀಗೆ ಆದಿನ ನನ್ನ ಮತಾ ಪಿತರು ನನ್ನನ್ನು 
೨ ತಿಂಗಳ ಅಜ್ನಾತವಾಸಕ್ಕೆ ಬಿಟ್ಟು ಭಾರವಾದ ಮನಸ್ಸಿನಿಂದ ಮನೆಗೆ ತೆರಳಿದರು.
ಯಾಕೋ ಏನೋ ಆ ದಿನ ಸಂಜೆ ಸಂಧ್ಯಾವಂದನೆ ಮಾಡುವಾಗ ಒಂದು ರೀತಿಯ ಏಕಾಂಗಿ ಎಂಬ ಭಾವ ನನ್ನನ್ನು ಕಾಡತೊಡಗಿತ್ತು.
ಊಟ ಮಾಡುವಾಗ ಊಟ ಬಡಿಸುತ್ತಿರುವ ಸಮಯದಲ್ಲಿ ಭಗವದ್ಗೀತೆ ಹೇಳುವುದು ನಮ್ಮ ಅಲ್ಲಿನ ಪರಿಪಾಠ.ನಮ್ಮ ಪುಸ್ತಕಗಳು ಆದಿನ ನಮ್ಮ ಕೈ್ಸೇರಿರಲಿಲ್ಲವಾದ್ದರಿಂದ ಭಗವದ್ಗೀತೆ ಏನೇನೋ ಕೇಳಿಸುತ್ತಿತ್ತು ನನಗೆ :D . ಅಂತೂ ಆದಿನ ಊಟ ಮಾಡಿ ರಾತ್ರಿ ಮರುದಿನದ ನಿರೀಕ್ಷೆಯಲ್ಲಿ ಮಲಗಿದೆ....
ಇನ್ನು ಪ್ರಾರಂಭವಾದದ್ದು ಸಿಂದಾಬಾದನ ಸಮುದ್ರಯಾನದಂತೆ ವಿಚಿತ್ರ ಪರಿಸ್ಥಿತಿಗಳು.ಬೆಳಗ್ಗೆ, ಮನೆಯಲ್ಲಿದ್ದಾಗ ಸೂರ್ಯೋದಯದ ಬಳಿಕ ಆತನೇ(ಸೂರ್ಯ) ನನ್ನನ್ನು ಎಬ್ಬಿಸಬೇಕಿತ್ತು ಆದರೆ ಪರಿಸ್ಥಿತಿ ಇಲ್ಲಿ ತದ್ವಿರುದ್ಧ ಅವನನ್ನು ನಾವೇ ಎಬ್ಬಿಸಬೀಕಿತ್ತು ಅದೂ ಅತ ಬೇಗನೆ ಏಳುವ ಆಸಾಮಿಯಲ್ಲ ನಾವು ಎದ್ದು ಒಂದೆರಡು ಘಂಟೆಯಾದರೂ ಬೇಕಿತ್ತು ಆತ ಏಳಲು :P.ಎದ್ದಮೇಲೆ ಶೌಚವಾಗಬೇಡವೇ ? ಅದಕ್ಕೆ ನಮಗಿದ್ದ ಆಸರೆ ಸಾರ್ವಜನಿಕ ಶೌಚಾಲಯ.ಅಲ್ಲಿ ಯಾವುದ್ಯಾವುದೋ ಲಿಪಿಗಳು ಗೋಡೆಯ ಮೇಲೆಲ್ಲಾ.ಏನೋ ನನಗಂತೂ ಒಂದಕ್ಕೂ ತಲೆ ಬುಡವಿಲ್ಲದಂತೆ ತೋರುತ್ತಿತ್ತು.ಅದಾದಬಳಿಕ ಬಿಸಿನೀರನ್ನು ನೆನೆಯುತ್ತಾ ತಣ್ಣೀರಿನಲ್ಲಿ ಸ್ನಾನ.. ಊಹುಹು ಆಹಹ ಸಂಗೀತಾಭ್ಯಾಸ.ನಮ್ಮ ಗೋಪಿ ಭಾರೀ ಚಾಲೂ ರಾತ್ರೆ ಅಡುಗೆ ಭಟ್ಟರು ಮರುದಿನದ ಗಂಜಿಗೆ ಇಟ್ಟಿದ್ದ ನೀರು ನಮ್ಮ ಸ್ನಾನಕ್ಕೆ ಸಂದಾಯವಾಗುತ್ತಿತ್ತು (ಕೆಲವೊಮ್ಮೆ ಮಾತ್ರ).ಮತ್ತೆ ಪಾತ್ರೆ ತಣ್ಣೀರಿನಿಂದ ತುಂಬಿಕೊಂಡು ತೆಪ್ಪಗೆ ಕೂತಿರುತ್ತಿತ್ತು ಒಲೆಯ ಮೇಲೆ ಏನೂ ಅರಿಯದವನಂತೆ(ಪಾತ್ರೆ ಪುಲ್ಲಿಂಗವೋ ಸ್ತ್ರೀ ಲಿಂಗವೋ ಎಂಬ confusion ಬೇಡ).

ಇನ್ನು ನಮಗೆ ಬೇರೆ ಕಾರ್ಯಕ್ರಮಗಳಿಲ್ಲ ಸುಮ್ಮನೆ ಗಂಜಿ ತಯಾರಾಗುವುದನ್ನು ಕಾಯ್ವ ಕೆಲಸ.ಅಷ್ಟರವರೆಗೆ ಆಮೇಲೆ ಎದ್ದವರಿಗೆ ನಮ್ಮ ಸ್ನಾನವಾಯಿತು 
ಎಂದು ಜಂಭದಿಂದ ಹೇಳುವ ಕೆಲಸ.
ಜಪ ಎಷ್ಟೊತ್ತಿಗೆ ಮಾಡುತ್ತಿದ್ದನೋ ನೆನಪಿಲ್ಲ.ಅಂತೂ ಮಾಡುತ್ತಿದ್ದೆ ಅನ್ನೋದು ನಮ್ಮ ಹನುಮಂತನಿಗೂ ಗೊತ್ತು.
ಹಾಂ ನಮ್ಮ ಹನುಮಂತ ಯಾರು ಅಂತ ಕುತೂಹಲ ಬಂತಾದ್ರೆ ಒಳ್ಳೇದು..
Keep Guessing ನಂಗೆ type ಮಾಡಿ ಕೈ ನೋಯೊಕ್ಕೆ ಪ್ರಾರಂಭವಾಯ್ತು.. ಹನುಮಂತನಜತೆಗೆ ನಿಮ್ಮ ಭೇಟಿ ಮುಂದಿನ Post ನಲ್ಲಿ
ನಮಸ್ಕಾರ.


ವೇದಪಾಠಶಾಲೆಲಿ ಇದ್ದದು ಇವ              

ನಿಮ್ಮ ಅಭಿಪ್ರಾಯ