Saturday, November 28, 2015

ಅಸಹನೆ


ಜಳ್ಳು - ಪೊಳ್ಳಿನ ನಡುವೆ ಸತ್ಯವನು ಅರಸುವುದು ಕಲಿಯುಗದ ಕರ್ಮ.

ಯಾವುದೋ ಒಂದು ಘಟನೆಗೆ ಅಥವಾ ವಿಷಯಕ್ಕೆ ನಾವು ನಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಬೇಕೆಂದುಕೊಂಡಿದ್ದರೂ , ಸಮಯ - ಸಂದರ್ಭ, ವಿವೇಕ, ಮುಜುಗರ ಇಂತಹವುಗಳಿಗೆ ಸಿಲುಕಿ ಆ ಅಭಿಪ್ರಾಯವನ್ನು ವ್ಯಕ್ತಪಡಿಸಲಾಗದೆ ಮೂಕರಾಗಿದ್ದುಬಿಡಬೇಕಾಗುತ್ತದೆ. ಅಂತಹ ಸಂದರ್ಭದಲ್ಲಿ ಆ ವಿಷಯ ಅಸಹನೆಯಾಗಿ ಮಾರ್ಪಡುತ್ತದೆ ಅದು ಇನ್ನೆಲ್ಲೋ ಯಾರಮೇಲೋ ಪ್ರಕಟವಾಗಿ ಆಗಬಾರದ ನಕಾರಾತ್ಮಕ ಪರಿಣಾಮವೇ ಉಂಟಾಗುತ್ತದೆ. ಯಾವಾಗ ಎಲ್ಲಿ ಹೇಳಬೇಕಾದ್ದನ್ನು ಸರಿಯಾಗಿ ಹೇಳಿಯೇ ತೀರುತ್ತಾನೋ ಆತ ಹಿಂದೆ ಯಶಸ್ಸು ತಾನಾಗಿಯೇ ಹರಿದು ಬರುತ್ತದೆ, ಆತ ವಿವೇಕಿಯೆನ್ನಿಸಿಕೊಳ್ಳುತ್ತಾನೆ, ಇತರರಿಂದ ಮಾನಿಸಲ್ಪಡುತ್ತಾನೆ. ಆದ್ದರಿಂದ ಹೇಳಬೇಕಾದ ವಿಷಯವನ್ನು ನಯವಾಗಿ ಇತರರು ಒಪ್ಪುವಂತೆ ಯಾರಿಗೂ ನೋವಾಗದಂತೆ ತಿಳಿಸುವ ಕಲೆಯನ್ನು ಬಲ್ಲವನೇ ಶ್ರೇಷ್ಠನೆನ್ನಿಸುತ್ತಾನೆ.


Sunday, November 15, 2015

ಕಂಪ್ಯೂಟರ್ ನಲ್ಲಿ ವಾಟ್ಸಾಪ್ ಉಪಯೋಗಿಸುವುದು ಹೇಗೆ ?

ಕೆಲವು ತಿಂಗಳುಗಳ ಹಿಂದೆ ವಾಟ್ಸಾಪ್ ಈ ಸೌಲಭ್ಯವನ್ನು ಅಳವಡಿಸಿಕೊಂಡಿದೆ. ಮೊಬೈಲ್ ಮೂಲಕ ಸಂದೇಶಗಳನ್ನು ಬರೆಯುವುದು ಮತ್ತು ಓದುವುದು ಸ್ವಲ್ಪ ಶ್ರಮದಾಯಕವೇ ಉತ್ತಮವಾದ ಮೊಬೈಲ್, ದೊಡ್ಡದಾದ ಕೀಬೋರ್ಡ್ ಸೌಲಭ್ಯವಿರುವ ಮೊಬೈಲುಗಳಲ್ಲಿ ಬಹುಷಃ ಸ್ವಲ್ಪ ಆರಾಮವಾಗಿ ಕೀಬೋರ್ಡ್ ಉಪಯೋಗಿಸಬಹುದೇನೋ ಆದರೆ ಸಣ್ಣ ಡಿಸ್ಪ್ಲೇಯ ಫೋನ್ ಗಳಲ್ಲಿ ಕೆಲವೊಮ್ಮೆ ಇದು ಕಿರಿಕಿರಿಯೆನಿಸಬಹುದು.

ಮೊದಲಾಗಿ ನಿಮ್ಮ ಮೊಬೈಲ್ ನಲ್ಲಿ ವಾಟ್ಸಾಪ್ ತಂತ್ರಾಂಶವನ್ನು ಅಪ್ ಡೇಟ್ ಮಾಡಿಕೊಳ್ಳಿ ಆ ಬಳಿಕ ವಾಟ್ಸಾಪ್ ಅನ್ನು ತೆರೆದು ಮೆನುವಿನ್ನು ಸ್ಪರ್ಶಿಸಿ ವಾಟ್ಸಾಪ್ ವೆಬ್ ಆಯ್ಕೆಯನ್ನು ಒತ್ತಿ.



ನಿಮ್ಮ ಗಣಕದ ಬ್ರೌಸರ್ ನಲ್ಲಿ(ಕ್ರೋಮ್, ಮೋಝಿಲ್ಲಾ ಫೈರ್ ಫಾಕ್ಸ್) ನಲ್ಲಿ https://web.whatsapp.com/ ಅನ್ನು ಚಾಲೂಗೊಳಿಸಿ, ಕೆಳಗಿನ ಚಿತ್ರದಂತೆ, ಒಂದು ಕ್ಯೂ ಆರ್ ಕೋಡ್ ಕಾಣಿಸುತ್ತದೆ.

ಮೊಬೈಲ್ ನಲ್ಲಿ ಈ ಕ್ಯೂ ಆರ್ ಕೋಡ್ ಅನ್ನು ಸ್ಕ್ಯಾನ್ ಮಾಡುವಂತೆ ವಾಟ್ಸಾಪ್ ತಂತ್ರಾಂಶ ಕ್ಯಾಮರಾವನ್ನು ಚಾಲೂ ಮಾಡಿರುತ್ತದೆ. ಮೇಲಿನ ಮೊದಲನೆ ಚಿತ್ರದಲ್ಲಿ ಕಂಡುಬರುವಂತೆ.

ಕ್ಯೂಆರ್ ಕೋಡ್ ಸ್ಕ್ಯಾನ್ ಆದ ತಕ್ಷಣ ಕಂಪ್ಯೂಟರ್ ನಲ್ಲಿ ವಾಟ್ಸಾಪ್ ಅನ್ನು ಉಪಯೋಗಿಸಲು ಪ್ರಾರಂಭಿಸಬಹುದು.

ಈರೀತಿಯಾಗಿ ಗಣಕದಲ್ಲಿ ವಾಟ್ಸಾಪ್ ಉಪಯೋಗಿಸುವುದಕ್ಕೂ ಸಹ ಮೊಬೈಲ್ ನಲ್ಲಿ ಇಂಟರ್ ನೆಟ್ ಸಂಪರ್ಕ ಲಭ್ಯವಿರಲೇಬೇಕು.

ಆದರೆ ಮೊಬೈಲ್ ನಲ್ಲಿ ಇಂಟರ್ನೆಟ್ ಇಲ್ಲದೆ ಗಣಕದ ಮೂಲಕವಾಗಿ ಮೊಬೈಲ್ ಗಳಿಗೆ ಸಂದೇಶ ವಿನಿಮಯ ಮಾಡುವ ವ್ಯವಸ್ಥೆ ಟೆಲಿಗ್ರಾಮ್ ಎನ್ನುವ ಇನ್ನೊಂದು ತಂತ್ರಾಂಶದಲ್ಲಿ ಲಭ್ಯವಿದೆ. ಆಸಕ್ತರು https://telegram.org/ ಸಂಪರ್ಕಿಸಿ.

Monday, October 19, 2015

ಕೋಸಂಬರಿ-ಅನ್ನದಾನ ಮತ್ತು ಕನ್ಯಾದಾನ



ಹೀಗೇ ಏನೋ ಸ್ಫೂರ್ತಿ ಉಕ್ಕಿ ಹರಿದಾಗ ಮನೆಯಲ್ಲಿರುವ ಪ್ರೇಕ್ಷಕರಿಗೇ; ಅಂದರೆ ನನ್ನ ಅಪ್ಪ, ಅಮ್ಮ ಮತ್ತು ನನ್ನ ಮಡದೀಮಣಿಯ ಮುಂದೆ ಭಾಷಣ ಬಿಗಿವ ಪುಡಾರಿ ನಾನು. ಒಂದು ದಿನ ಮಧ್ಯಾಹ್ನ ಭೋಜನಕ್ಕೆ ಗಡದ್ದಾಗಿ ,ಸ್ವತಃ ನನ್ನದೇ ಆಗಿದ್ದ ಎರಡೂ ಕೈಗಳಿಂದ ಒಂದು ಕೋಸಂಬರಿ ಮಾಡಿ ಮುಗಿಸಿದೆ, ಮನೆಯವರೆಲ್ಲರಿಗೂ ಅದನ್ನು ರುಚಿ ನೋಡಿಸಿ, ಎಲ್ಲರೂ ತಲೆಯಾಡಿಸಿ ಬಾಯಿ ಚಪ್ಪರಿಸುವಂತೆ ಮಾಡಿ ಮಾರ್ಕೆಟಿಂಗ್ ಮಾಡಿಯೂ ಆಯಿತು. ಬಳಿಕ ಊಟ ಪ್ರಾರಂಭವಾಯಿತು, ಸಂತೆಯಿಂದ ಹತ್ತುರೂಪಾಯಿ ಕೊಟ್ಟು ತಂದಿದ್ದ ನಾಲ್ಕು ಜೋಳಗಳಲ್ಲಿ ಎರಡರ ಮೈಯ ಕಾಳುಗಳನ್ನೆಲ್ಲಾ ಕಿತ್ತು, ಜತೆಗೆ ಕ್ಯಾರೆಟ್, ಮುಳ್ಳುಸೌತೆ, ಹೆಸರುಬೇಳೆ ಬೆರೆಸಿ ನಿಂಬೆಹುಳಿ ಉಪ್ಪು ಹಾಕಿ ಮಾಡಿದ ಕೋಸಂಬರಿಗೆ ಶುಂಠಿ ಹಾಕುವುದಕ್ಕುಂಟೋ ಇಲ್ಲವೋ ಎನ್ನುವ ಪ್ರಶ್ನೆಗೆ ಮನೆಯಲ್ಲಿ ಯಾರಲ್ಲೂ ಉತ್ತರವಿಲ್ಲದಿದ್ದಾಗ, ಇದ್ದರೂ ಇಲ್ಲದಿದ್ದರೂ ಹೊಸರುಚಿಯಾಗಲಿ, ಹಾಕುವುದು ಹಾಕುದೇ ಅಂತ ಕೊಚ್ಚಿ ಕೊಚ್ಚಿ ಶುಂಠಿಯನ್ನೂ ಬೆರೆಸಿದ್ದೆ, ತಂದಿದ್ದ ಕಾಲುಕೇಜಿ ಹಸಿಮೆಣಸಿನಲ್ಲಿ ಅದೃಷ್ಟವಂತ ಒಂದು ಮೆಣಸಿನಕಾಯಿಯನ್ನು ಹಿಡಿದು ಮಧ್ಯಾಹ್ನ ಹನ್ನೆರಡಕ್ಕೆ ಸರಿಯಾಗಿ ಹನ್ನೊಂದು ಬಾರಿ ಕೊಚ್ಚಿ ಹಾಕಿದ್ದೆ. ಊಟದ ರುಚಿ ಹೇಳಬೇಕೇ ! ಕೋಸಂಬರಿಗಂತೂ ಬೇಡಿಕೆಯೇ ಬೇಡಿಕೆ. ಹಿಂದಿನ ಜನ್ಮದಲ್ಲಿ ನಳಮಹಾರಾಜನ ಅಡುಗೆ ಮನೆಯಲ್ಲೇ ನಾನು ಅಡುಗೆ ಭಟ್ಟನಾಗಿದ್ದಿರಬೇಕು ಇಲ್ಲವಾದಲ್ಲಿ ಇಷ್ಟು ಅದ್ಭುತವಾಗಿ ಕೋಸಂಬರಿ ಮಡುವುದಕ್ಕೆ ಖಂಡಿತವಾಗಿಯೂ ಸಾಧ್ಯವಿಲ್ಲ ಎನ್ನುವ ನಿರ್ಧಾರಕ್ಕೆ ಬಂದೆ. ನನ್ನವಳು ಮಾಡಿದ್ದ ಬೀನ್ಸು, ಬಟಾಟೆ ಸಾಂಬಾರಿನ ಬಣ್ಣ ಮಾತ್ರ ಗಾಢವಾಗಿತ್ತು, ಕೋಸಂಬರಿಯ ಎದುರಿನಲ್ಲಿ ಸಾಂಬಾರಿನ ಕಳೆಗುಂದಿತ್ತು !

ಊಟದಬಳಿಕ ಕಾಲು ಚಾಚಿ ತುಸು ಕಣ್ಣಡ್ಡ(ನಿದ್ದೆ) ಮಾಡುವುದು ರಜಾದಿನದ ವಾಡಿಕೆ. ಹಾಗೆ ಬಿದ್ದುಕೊಂಡವನ ತಲೆಯಲ್ಲಿ ಕೋಸಂಬರಿಯ ಪ್ರಭಾವವೋ ಎನೋ ಓತಪ್ರೋತವಾಗಿ ವಿಷಯಗಳ ಪ್ರವಾಹವೇ ಹರಿದು ಬರುತ್ತಿತ್ತು. ಹತ್ತಿರ ಮಲಗಿದ್ದ ಇವಳ ಕಿವಿ ಕೊರೆಯುವುದಕ್ಕೆ ಪ್ರಾರಂಭಿಸಿದೆ.
"ಗೊತ್ತುಂಟೇನೇ ನಿನಗೆ , ಅನ್ನದಾನವೆಂಬುದು ಅತ್ಯಂತ ಶ್ರೇಷ್ಠ ದಾನವಂತೆ. ಇತರ ಯಾವುದೇ ವಸ್ತುವನ್ನೂ ಎಷ್ಟೇ ಪ್ರಮಾಣದಲ್ಲೂ ದಾನವನ್ನಾಗಿ ನೀಡಿದಲ್ಲಿ ಸ್ವೀಕರಿಸುವ ವ್ಯಕ್ತಿಗೆ ಸಾಕೆನಿಸಲಾರದಂತೆ. ಅದೇ ಅನ್ನದಾನ, ಅರ್ಥಾತ್ ಭೋಜನ ಮಾತ್ರ, ಒಬ್ಬ ವ್ಯಕ್ತಿ ಅವನ ಹೊಟ್ಟೆ ತುಂಬುವಲ್ಲಿಯವರೆಗೆ ಉಂಡಾನು ಮತ್ತೆ ಯಾರೇ ಆದರೂ ಸಾಕು ಎನ್ನಲೇಬೇಕು, ಅದು ಪ್ರಕೃತಿ ನಿಯಮ" ಎಂದೆ.

ಹೌದದು ಸರಿ ಸರಿ ಎಂದು ಹ್ನೂಗುಟ್ಟಿ ಕಣ್ಮುಚ್ಚಿ ಮಲಗಿದಳು....
ಹ್ ಇಷ್ಟು ಒಳ್ಳೆಯ ವಿಷಯಕ್ಕೆ ಎಷ್ಟು ನಿರ್ವಿಕಾರದಿಂದ ಎಷ್ಟು ಚಿಕ್ಕದಾಗಿ ಪ್ರತಿಕ್ರಿಯಿಸಿದ್ದಾಳೆ ಎನ್ನುವಷ್ಟರಲ್ಲಿ..

"ಅಲ್ಲಾ , ಅನ್ನದಾನ ಮಾತ್ರ ಶ್ರೇಷ್ಠ ದಾನವಾಗುವುದು ಹೇಗೆ. ಕನ್ಯಾದಾನವೂ ಶ್ರೇಷ್ಠ ದಾನವಲ್ಲವೇ ?" ಎಂದಳು
ಎಲಾ ಇವಳ ತಲೆಯೇ , ವಿಷಯ ಹೌದು, ನನ್ನ ತಲೆಗೆ ಹೊಳೆಯಲಿಲ್ಲವಲ್ಲ ಅಂದುಕೊಂಡೆ.

"ಹೌದಪ್ಪಾ ಹೌದು, ಕನ್ಯಾದಾನವೇ ಶ್ರೇಷ್ಠ ದಾನ ಯಾಕೆಂದರೆ ಅನ್ನದಾನ ಸ್ವೀಕರಿಸಿದವರು, "ಸಾಕು" ಎಂದು ಮಾತ್ರ ಹೇಳ್ತಾರೆ ಆದ್ರೆ ಗಂಡನಾದವ ಮಾತ್ರ, ಜೀವನ ಪೂರ್ತಿ "ಸಾಕಪ್ಪೋ ಸಾಕು" ಎಂದೇ ಹೇಳುವುದಲ್ಲವೇ" ಎಂದು ಹೇಳುವುದಕ್ಕೆ ಬಾಯಿ ತೆರೆದಿದ್ದವನ ಒಳಮನಸ್ಸು ಥಟ್ಟನೆ ಇನ್ಸೆಪ್ಶನ್ ಸಿನೆಮಾದಂತೆ ಹಲವಾರು ಪದರಗಳ ಹಿಂದು ಮುಂದಿನ ವಿಚಾರಗಳನ್ನು ತೋರಿಸಿ ಸ್ಟಾಪ್ ಸಿಗ್ನಲ್ ತೋರಿಸಿತ್ತು.

"ಹೌದು ಕಣೇ ಪ್ರೀತಿಯಿಂದ ಸಾಕಿ ಬೆಳೆಸಿದ ಮಗಳನ್ನೇ ತಂದೆಯಾದವ ಧಾರೆಯೆರೆದು ಕೊಡುತ್ತಾನೆ, ಅದಕ್ಕಿಂತ ಶ್ರೇಷ್ಠದಾನ ಬೇರೆ ಏನಾದೀತು... ನಿನ್ನನ್ನು ಹೆಂಡತಿಯಾಗಿ ಪಡೆದ ನಾನೇ ಧನ್ಯ" ಎಂದೆ... ನನ್ನವಳ ತುಟಿ ಕಿವಿಯ ಅಂಚಿನವರೆಗೆ ಬಂದು ನಿಂತಿತು, ದಂತಪಂಕ್ತಿಗಳ ನಡುವೆ ಪಳಕ್ಕನೆ ನಕ್ಷತ್ರವೊಂದು ಮಿನುಗಿ ಮರೆಯಾಯಿತು. ಹಾಗೆ ಕಣ್ಮುಚ್ಚಿ ಭುಜದ ಮೇಲೆ ತಲೆಯಿಟ್ಟು ಮಲಗಿದಳು.

ನಾನೂ ಕಣ್ಮುಚ್ಚಿ, ಬಾಯನ್ನೂ ಮುಚ್ಚಿ ಮಲಗಿದೆ...


ವಿಸೂ: ತಮಾಷೆಗಾಗಿ ಮಾತ್ರ, ಆದರೆ ಇಲ್ಲಿ ಕೊಟ್ಟಿರುವ ೯೦% ಘಟನೆಗಳು ನಿಜ ಮತ್ತು ೧೦% ಕಲ್ಪಿತ, ಬದುಕಿರುವ ಮತ್ತು ಇನ್ನೂ ಬದುಕಲಿರುವ ಎಲ್ಲಾ ಜೀವಿಗಳಿಗೆ ಗಂಡ,ಹೆಂಡತಿಯರಿಗೆ ಸಂಬಂಧಿತ...

Sunday, October 18, 2015

ಪ್ರಿಸನ್ ಬ್ರೇಕ್ : ರೋಚಕತೆಯ ಸುಳಿಯೊಳಗೆ

ಪ್ರಿಸನ್ ಬ್ರೇಕ್ ಎನ್ನುವ ಸೀರಿಯಲ್ ನ ಬೆನ್ನು ಹತ್ತಿದ್ದೆ. ಪ್ರತಿ ನಿಮಿಷಕ್ಕೂ ರೋಚಕತೆಯ ಬೆನ್ನು ಹತ್ತಿ ಕುತೂಹಲದ ಕೊಂಡಿಯನ್ನು ಪೋಣಿಸುತ್ತಾ ಸಾಗುವ ಕಥಾಹಂದರ. ನಿರಪರಾಧಿಯಾಗಿದ್ದರೂ ವ್ಯವಸ್ಥೆಯ ಕಾರಣದಿಂದಾಗಿ, ಪ್ರಭಾವಿ ರಾಜಕೀಯ ವ್ಯಕ್ತಿಗಳ ಚಾಣಾಕ್ಷ ತಂತ್ರಗಾರಿಕೆಯಿಂದಾಗಿ ಕುತಂತ್ರಕ್ಕೆ ಬಲಿಯಾಗಿ, ಮರಣದಂಡನೆಗೆ ದಿನಗಣನೆ ಮಾಡುತ್ತಿರುವ ತನ್ನ ಸಹೋದರನನ್ನು ರಕ್ಷಿಸುವುದಕ್ಕೋಸ್ಕರ ಸಾಮಾನ್ಯ ವ್ಯಕ್ತಿಯಾದ ಮೈಕಲ್ ಸ್ಕೋಫೀಲ್ಡ್ ತಾನೇ ಅಪರಾಧದ ಲೋಕಕ್ಕಿಳಿದು ಕಡುಪಾತಕಿಗಳಿರುವ ಜೈಲು ಸೇರುತ್ತಾನೆ. 
Photo: imdb site.


ಜೈಲಿನ ನಕ್ಷೆಯನ್ನು ತನ್ನ ಮೈಮೇಲೆ ಪೂರ್ತಿ ಹಚ್ಚೆಗಳಿಂದ ಬರೆಸಿರುತ್ತಾನೆ, ಯಾರಿಗೂ ತಿಳಿಯದಂತೆ ಅದ್ಭುತವಾದ ಚಿತ್ರವಿನ್ಯಾಸಗಳಿಂದ ನಕ್ಷೆಯನ್ನು ಅಡಗಿರಿಸಲಾಗಿರುತ್ತದೆ. ಬಾರಿಬಾರಿಗೂ ಎದುರಾಗುವ ಅಡೆತಡೆಗಳನ್ನು ತನ್ನ ಚಾಣಾಕ್ಷಮತಿಯಿಂದ ನಿಭಾಯಿಸುವ ಸ್ಕೋಫೀಲ್ಡ್ ಜತೆಗೆ ನಾವೂ ಇದ್ದಂತೆ ಭಾಸವಾಗುತ್ತದೆ. ಅಪರಾಧಿ ಜಗತ್ತಿನಲ್ಲಿಯೂ ಜೈಲಿನ ನಿಯಮಗಳು ಅವುಗಳನ್ನು ಮೀರುವ , ಒರೆಗೆ ಹಚ್ಚುವ ಖೈದಿಗಳು ಪರಸ್ಪರ ತಮ್ಮ ಜತೆಗಾರರಿಂದಲೇ ಹತ್ಯೆ/ಶಿಕ್ಷೆಗೆ ಒಳಗಾಗುವ ರೀತಿ, ಜೈಲಿನ ವಾರ್ಡರ್ ಗಳ ದಬ್ಬಾಳಿಕೆ, ಭ್ರಷ್ಟಾಚಾರ ಇವೆಲ್ಲವನ್ನೂ ಕಥಾಹಂದರದಲ್ಲಿ ಮಿಳಿತಗೊಳಿಸಿ ಅದ್ಭುತವಾಗುವಂತೆ ಚಿತ್ರಿಸಲಾಗಿದೆ. ಏನೇ ಆದರೂ ಅಪರಾಧಿಗಳ ಮಧ್ಯದಲ್ಲೇ ಇದ್ದರೂ ಸ್ಕೋಫೀಲ್ಡ್ ತನ್ನ ಚಾರಿತ್ರ್ಯವನ್ನು ಕಾಯ್ದುಕೊಳ್ಳುತ್ತಾನೆ, ಆ ನಿಟ್ಟಿನಲ್ಲಿ ಜೈಲಿನಿಂದ ಪರಾರಿಯಾಗುವ ಅಪರಾಧವನ್ನೆಸಗುತ್ತಿದ್ದರೂ ವ್ಯವಸ್ಥೆಯ ವಿರುದ್ಧ ಸಮರ ಸಾರುವ ನಾಯಕನ ಸ್ಥಾನದಲ್ಲಿ ನಿಂತು ಅನ್ಯಾಯದ ವಿರುದ್ಧ ಹೋರಾಡುತ್ತಾನೆ. ಸಾಹಸಮಯ ಚಿತ್ರಗಳನ್ನು, ಥ್ರಿಲ್ಲರ್ ಚಿತ್ರಗಳನ್ನು ಮೆಚ್ಚುವವರಾದಲ್ಲಿ , ನೀವೂ ಒಮ್ಮೆ ನೋಡಿ ಪ್ರಿಸನ್ ಬ್ರೇಕ್.
ಅಂದ ಹಾಗೆ ನಾನು ಹೇಳಿದ್ದು ಒಂದನೇ ಸೀಸನ್ ಬಗ್ಗೆ, ಪ್ರಿಸನ್ ಬ್ರೇಕ್ ನ ಒಂದನೇ ಸೀಸನ್ ನಲ್ಲಿ ೪೫ ನಿಮಿಷಗಳ 22 ಎಪಿಸೋಡ್ಗಳಿವೆ. 2005 ರಿಂದ 2009 ರ ವರೆಗೆ ನಾಲ್ಕು ಸೀಸನ್ ನಲ್ಲಿ ಪ್ರಿಸನ್ ಬ್ರೇಕ್ ಅಮೇರಿಕಾದಲ್ಲಿ ಪ್ರಸಾರವಾಗಿದೆ.

ಚಲನಚಿತ್ರಗಳ ಮಾಹಿತಿಕೋಶ IMDB ತಾಣದಲ್ಲಿ ಈ ಧಾರಾವಾಹಿಗೆ 8.5 ರ ಅಂಕಗಳು.
ಕಥೆ: ಪಾಲ್ ಶ್ಯೂರಿಂಗ್

Sunday, August 16, 2015

ಋಷ್ಯಮೂಕ:

ಋಷ್ಯಮೂಕ: ಆಲ್ಲಿಗೆ ಹೋದ ಋಷಿಗಳಿಗೆ ಅಜ್ಞಾನವು ನಿವಾರಣೆಯಾಗುವುದರಿಂದ
೨. ಎಲ್ಲಿ ಋಷ್ಯ ಎನ್ನುವ ಪ್ರಾಣಿಗಳು ಮೌನವಾಗಿರುತ್ತವೆಯೋ ಆ ಕಾರಣದಿಂದ
೩. ಎಲ್ಲಿ ಋಷಿಗಳು ಮೌನವಾಗಿ ತಪಸನ್ನು ಮಾಡುತ್ತಾರೋ ಆ ಕಾರಣದಿಂದ

ಆಧಾರ: ಭಾರತ ದರ್ಶನ ಗ್ರಂಥಮಾಲಿಕೆ - ರಾಮಾಯಣ

Wednesday, July 15, 2015

ಶೇರ್ ಇಟ್ ಎನ್ನುವ ಸಂಚಲನ...

ಶೇರ್ ಇಟ್ ಎನ್ನುವ ಸಂಚಲನ...
ಕಾಲವೊಂದಿತ್ತು ಒಂದು ಹಾಡನ್ನು ಹಂಚಿಕೊಳ್ಳುವುದಕ್ಕಾಗಿ ಮೊಬೈಲ್ ಗಳನ್ನು ಪರಸ್ಪರ ಜನುಮದ ಜೋಡಿಗಳಂತೆ, ಹತ್ತಿರ ಹಿಡಿದು ತುಂಬಾ ಹೊತ್ತು ಕಾಯಬೇಕಿತ್ತು.ಆಗ ಇನ್ಫ್ರಾರೆಡ್ ಎನ್ನುವ ತಂತ್ರಜ್ಞಾನದ ಬಳಕೆಯಾಗುತ್ತಿತ್ತು, ಆಮೇಲೆ ಬ್ಲೂಟೂಥ್ ಎನ್ನುವ ವ್ಯವಸ್ಥೆಯಿಂದಾಗಿ ಹಂಚುವಿಕೆ ಸರಳವಾಯಿತು.ಈಗಿನ ಬೆಳವಣಿಗೆ ಎಂದರೆ ಬ್ಲೂಟೂಥ್ ಗಿಂತಲೂ ವೇಗವಾಗಿ ಬೇಕಾದ್ದನ್ನು ಹಂಚಿಕೊಳ್ಳುವುದಕ್ಕಾಗಿ ಲಭ್ಯವಿರುವ ಶೇರ್ ಇಟ್(Share It) ಎನ್ನುವ ತಂತ್ರಾಂಶ. ಇದರ ಮೂಲಕವಾಗಿ ಗಣಕ-ಮೊಬೈಲ್-ಮೊಬೈಲ್ ಗಳ ನಡುವೆ, ಕಡತಗಳು, ಚಿತ್ರಗಳು, ವೀಡೀಯೋಗಳನ್ನು ಹಂಚಿಕೊಳ್ಳಬಹುದು, ಮಾತ್ರವಲ್ಲದೆ ತಂತ್ರಾಂಶಗಳನ್ನೂ ಹಂಚಿಕೊಳ್ಳಬಹುದು. ಉಚಿತವಾಗಿ ಲಭ್ಯವಿರುವ ಈ ತಂತ್ರಾಂಶ ಅತ್ಯಂತ ವೇಗವಾಗಿ ಮಾಹಿತಿಗಳನ್ನು ವಿನಿಮಯ ಮಾಡಬಲ್ಲದು. ನಿಮ್ಮ ಮೊಬೈಲ್ ನಲ್ಲಿ ವೈಫೈ ಮತ್ತು ಹಾಟ್ ಸ್ಪಾಟ್ ತಂತ್ರಜ್ಞಾನದ ಲಭ್ಯತೆಯಿದ್ದಲ್ಲಿ ಈ ತಂತ್ರಾಂಶವನ್ನು ಉಪಯೋಗಿಸಿಕೊಳ್ಳಬಹುದು. ಈ ತಂತ್ರಾಂಶವನ್ನು ಉಪಯೋಗಿಸುವುದಕ್ಕೆ ಇಂಟರ್ನೆಟ್ ನ ಅವಶ್ಯಕತೆಯಿಲ್ಲ. ನಿಮ್ಮ ಗೆಳೆಯನ ಫೋನ್ ನಲ್ಲಿ ಈ ತಂತ್ರಾಂಶ ಲಭ್ಯವಿಲ್ಲದಿದ್ದಲ್ಲಿ ಬ್ಲೂಟೂಥ್ ಮೂಲಕ ಆ ಮೊಬೈಲ್ ಗೆ ತಂತ್ರಾಂಶವನ್ನು ರವಾನಿಸುವ ವ್ಯವಸ್ಥೆ ಈ ತಂತ್ರಾಂಶದಲ್ಲಿ ಲಭ್ಯವಿದೆ. ಹೊಸ ಮೊಬೈಲ್ ಖರೀದಿಸಿದ್ದೀರಿ ಎಂದಿಟ್ಟುಕೊಳ್ಳಿ ನಿಮ್ಮ ಗೆಳೆಯನ ಮೊಬೈಲ್ ನಲ್ಲಿರುವ ಹಲವಾರು ತಂತ್ರಾಂಶಗಳನ್ನು ನಿಮಿಷ ಮಾತ್ರಗಳಲ್ಲಿ ನಿಮ್ಮ ಮೊಬೈಲ್ ನಲ್ಲಿ ಡೌನ್ಲೋಡ್ ಮಾಡಿ ಅನುಸ್ಥಾಪಿಸಿಕೊಳ್ಳಬಹುದು, ಚಿತ್ರ, ಹಾಡು ಇತ್ಯಾದಿಗಳನ್ನು ಹಂಚಿಕೊಳ್ಳಬಹುದು. ಇದುವರೆಗೆ ಬಳಸಿಲ್ಲವಾದಲ್ಲಿ ಒಮ್ಮೆ ಬಳಸಿನೋಡಿ, ಹೇಗಿದೆ ಹೇಳಿ. ಆಂಡ್ರಾಯ್ಡ್ , ವಿಂಡೋಸ್ ಮತ್ತು ಐ ಓ ಎಸ್ ನ ಸಹಾಯದಿಂದ ನಡೆಯುವ ಸಾಧನಗಳಿಗೆ ಈ ತಂತ್ರಾಂಶ ಲಭ್ಯವಿದೆ ಜತೆಗೆ ವಿಂಡೋಸ್ ಗಣಕದ ಸಂಚಾಲನಾ ವ್ಯವಸ್ಥೆಗೂ ಈ ತಂತ್ರಾಂಶ ಲಭ್ಯವಿದೆ. ಶೇರ್ ಇಟ್ ಮೂಲಕ ಐವತ್ತು ಮೀಟರ್ ಅಂತರದಲ್ಲಿದ್ದರೂ ಸಾಧನಗಳನ್ನ್ನು ಸಂಪರ್ಕಿಸಬಹುದಂತೆ.

ಈ App ಬಗ್ಗೆ ಹೆಚ್ಚಿನ ಮಾಹಿತಿಗಾಗಿ ನೋಡಿ - http://shareit.lenovo.com/
ಮೊಬೈಲ್ ನಲ್ಲಿ ಅನುಸ್ಥಾಪಿಸಿ - http://bit.ly/13GyDk5
ಲ.ನಾ.ಭಟ್

Sunday, July 12, 2015

ದೃಷ್ಟಿ

ಒಂದು ಮರವಿದ್ದಲ್ಲಿ, ಒಬ್ಬ ಅದರ ತೊಗಟೆಯನ್ನು ಮುಟ್ಟಿ ಇದು ಬಹಳ ಕಠಿಣವಾಗಿದೆ ಎನ್ನುತ್ತಾನೆ, ಇನ್ನೊಬ್ಬ ಅದರ ಎಲೆಯನ್ನು ನೋಡಿ ಹೂವನ್ನು ನೋಡಿ, ಆಹಾ ಸುಂದರವಾಗಿದೆ ಎನ್ನುತ್ತಾನೆ, ಇನ್ನೊಬ್ಬ ಅದರ ಹಣ್ಣು ತಿಂದು ಕಹಿಯೋ/ಸಿಹಿಯೋ ಎಂದು ತನ್ನ ಅಭಿಪ್ರಾಯವನ್ನು ವ್ಯಕ್ತಪಡಿಸ್ತಾನೆ. ಮತ್ತೊಬ್ಬ ಅದರ ಗೆಲ್ಲಿನ ತುಂಡನ್ನು ಸೌದೆ ಮಾಡಿ, ಓ ಒಳ್ಳೆಯ ಉರುವಲು ಅಥವಾ ಪ್ರಯೋಜನಕ್ಕಿಲ್ಲದ ಮರ ಎನ್ನಬಹುದು. ಅವರವರಿಗೆ ಬೇಕಾದ ಅಂಶವನ್ನು ಅಥವಾ ಗುಣವನ್ನು ಮಾತ್ರ ಗಮಸಿರುತ್ತಾರೆ. ಆದರೆ ಎಲ್ಲಾ ಲಕ್ಷಣಗಳನ್ನು ಯಾರು ಸಂಪೂರ್ಣವಾಗಿ ಗಮನಿಸಿ ನಿರ್ಧಾರ ತೆಗೆದುಕೊಳ್ಳುತ್ತಾರೋ ಅದು ಮಾತ್ರ ಸರಿಯಾಗಿರ್ತದೆ. ನಮ್ಮ ಜೀವನವೂ ಹೀಗೇ ಅಲ್ವೇ ?
 ------------------------------------------------
ಓರ್ವ ವ್ಯಕ್ತಿಯನ್ನು ಹೊಗಳುವುದಕ್ಕೆ ಮೊದಲು ಹೆಚ್ಚು ಯೋಚಿಸಬೇಕೆಂದಿಲ್ಲ, ಆದರೆ ಯಾರನ್ನಾದರೂ ದೂಷಿಸಬೇಕೆಂದಿದ್ದರೆ ಸಾವಿರ ಬಾರಿ ಯೋಚಿಸು, ಆ ವ್ಯಕ್ತಿಯಲ್ಲಿ ಹೊಗಳುವಂತಹಾ ಒಂದೂ ಗುಣವಿಲ್ಲದಿದ್ದಲ್ಲಿ ಆ ಮೇಲೆ ದೂಷಿಸು.... 

Sunday, March 15, 2015

ಆತ್ಮಸಂಭಾಷಣೆ೧-ಬದಲಾವಣೆ

ಯಕ್ಷಗಾನ ಕಾರ್ಯಕ್ರಮಕ್ಕೋಸ್ಕರ ಮೈಸೂರಿಗೆ ಹೋಗಿದ್ದೆವು, ಯಕ್ಷಗಾನ ಪ್ರಾರಂಭವಾಗುವುದಕ್ಕೆ ಇನ್ನೂ ಒಂದು ಒಂದೂವರೆ ಘಂಟೆಯಷ್ಟು ಸಮಯಾವಾಕಾಶವಿತ್ತು. ನಮ್ಮ ಜತೆ ಹೊರಟಿದ್ದ ಎರಡನೇ ಗುಂಪು ಬಂದು ಸೇರಿರಲಿಲ್ಲ. ನಾನೂ ಅತ್ಮೀಯರೊಬ್ಬರೂ ಹೀಗೇ ಮಾತನಾಡುತ್ತಿದ್ದೆವು. ಹೀಗೇ ಮಾತನಾಡುತ್ತಿರುವಾಗ ಒಂದು ಮಾತು ಬಂತು ಬಹಳ ಗಾಢವಾಗಿ ಕಾಡಿತು, ಮತ್ತು ಆ ಮಾತಿನಿಂದಾಗಿ ನನ್ನ ಯೋಚನೆಗಳೂ ಈ ರೀತಿ ಹರಿದವು - ದೇವರು ಎಲ್ಲರಿಗೂ ಅವಕಾಶ ಕೊಡ್ತಾನೆ ಆ ಅವಕಾಶ ಸಿಕ್ಕಾಗ ನಾವೇನು ಮಾಡ್ತೇವೆ ಅನ್ನುವುದರ ಮೇಲೆ ನಮ್ಮ ಮುಂದಿನ ಜೀವನ ನಿರ್ಧರಿಸಲ್ಪಡುತ್ತದೆ. ಅವಕಾಶ ಎನ್ನುವುದು ಬಂದಾಗ ಅದನ್ನು ಬಾಚಿಕೊಳ್ಳಬೇಕು. ಮನುಷ್ಯನ ಜೀವನ ಬದಲಾವಣೆಗೆ ಹೊರತಾದುದಲ್ಲ ಆದರೆ ಬದಲಾವಣೆಗೆ ಒಗ್ಗಿಕೊಳ್ಳುವುದನ್ನು ಮಾನಸಿಕವಾಗಿ ನಾವು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಅವಕಾಶ ಸಿಕ್ಕಾಗ ಬದಲಾವಣೆಯೂ ಸ್ವಾಭಾವಿಕವಾಗಿಯೇ ಜತೆಯಾಗುತ್ತದೆ. ಆದರೆ ಇದ್ದ ಜಾಗದಲ್ಲಿ ನಾವು ಅದುವರೆಗೆ ಬೆಳೆಸಿರುವ ನಮ್ಮದೇ ಆದ ಜಗತ್ತು ಮತ್ತೆ ನಮ್ಮನ್ನು ಅಲ್ಲಿಂದ ಕದಲದಂತೆ ಪ್ರೇರೇಪಿಸುತ್ತದೆ. ಬೆಚ್ಚಗಿನ ಗೂಡಿನಂತೆ, ಅಲ್ಲಿ ನಮಗೆ ಲಭ್ಯವಾದ ಸೌಲಭ್ಯಗಳಿಗೆ ಒಗ್ಗಿ ಹೋಗಿರುತ್ತೇವೆ. ಬದಲಾವಣೆಯೆಂದಾಗ ಮುಂದೆದುರಾಗಬಹುದಾದ ಸನ್ನಿವೇಶಗಳ ಬಗೆಗಿನ ಹಿಂಜರಿಕೆಯೇ ವ್ಯಕ್ತಿಯನ್ನು ಮುಂದೆ ಚಲಿಸದಂತೆ ಮಾಡುವುದಕ್ಕೆ ಕಾರಣ ಅನ್ನಿಸುತ್ತದೆ. ಆದರೆ ಬದಲಾವಣೆಗೆ ಹೊರತಾಗಿ ಜಗತ್ತೆಲ್ಲಿದೆ, ಬದಲಾವಣೆಯಿಲ್ಲದಿದ್ದರೆ ಗರ್ಭದಲ್ಲಿರುವ ಜೀವ ಹೊರಬರುವುದಕ್ಕುಂಟೇ, ಕಣ್ತೆರೆದು ಜಗತ್ತಿನಲ್ಲಿ ತನ್ನ ಅಸ್ಥಿತ್ವವನ್ನು ಸ್ಥಾಪಿಸುವುದಕ್ಕುಂಟೇ ? ಮನುಷ್ಯನ ಹೃದ್ಗತವಾದ ಭಯ ನಿವಾರಣೆಯಾದಾಗ ಯಾವುದೇ ಕಾರ್ಯ ಕಷ್ಟಕರವಾಗಲಾರದು. ಬದಲಾವಣೆಯನ್ನು ಸ್ವಾಗತಿಸಿ, ಸಾಧಿಸಬೇಕೆಂಬ ಛಲವಿದ್ದು ಮುನ್ನುಗ್ಗುವವನು ಯಶಸ್ವಿಯಾದಾನು ನಾಳೆ ಇತರರಿಗೆ ಮಾದರಿಯಾದಾನು.

Sunday, February 1, 2015

ನಗೆಟಿವ್ ನೆಗೆಟಿವ್ ನಗೆಟಿವ್ !!!!

ಇವುಗಳಲ್ಲಿ ಒಂದೋ ಎರಡೋ ಒಂದೊಂದು ಬಾರಿ ನಮ್ಮ ಬದುಕಿನಲ್ಲಿ ನಡೆಯುವುದು ಸಹಜ, ಹಾಗಾದಾಗಲಂತೂ ದೈನಂದಿನ ದಿನಚರಿಗಳೇ ಅಸ್ತವ್ಯಸ್ತವಾಗುತ್ತವೆ. ಒಮ್ಮೆ ಯೋಚಿಸಿ ಎಲ್ಲವೂ ಒಮ್ಮೆಯೇ ನಡೆದರೆ. ಅಂತಹ ಕಾಲ್ಪನಿಕ ಸನ್ನಿವೇಶ ಸೃಷ್ಟಿಸಿ ನಡೆಯಬಹುದಾದ ಹಾಸ್ಯದ ಅವಲೋಕನ.
---------------------------------- ----------------------------------------
ಎಂತ ಸಾವ್ ನುಸಿ ಮಾರೆ, ಕಚ್ಚುವುದಕ್ಕೆ ನನ್ನ ಮೂಗೇ ಬೇಕಾ ಮಾರಿ. ಹೊದಿಕೆಯೆಳೆದು ಮಲಗಿದ್ರೆ ಬಂದು ಇವಳು ಎಳೆದು ತೆಗೆದ್ಲು, "ರಾಯರು ಆಫೀಸಿಗೆ ಹೋಗುವ ಅಂದಾಜೇನಾದ್ರೂ ಉಂಟಾ ಇವತ್ತು, ಇಲ್ವಾ" "ಎಂತ ಮಾರಾಯ್ತಿ ಮಲಗುವುದಕ್ಕೆ ಬಿಡು, ಅಪೀಸ್ ನಲ್ಲಿ ಬಾಸ್ ತಿಂದೇ ತಲೆ ಎಲ್ಲ ಮುಗ್ದಿದೆ" ಹೊದಕೆಯೆಳೆದು ಮಲಗಿದೆ, "ಘಂಟೆ ಎಂಟೂವರೆಯಾಯ್ತು,  ನಂಗೇನು ನಾನು ಕಾಲೇಜಿಗೆ ಹೊರಟೆ" ಅಷ್ಟೇ ಕೇಳಿದ್ದು, ಮತ್ತೂ ಕಾಲು ಘಂಟೆ ನಿದ್ರಾಂಗನೆಯ ಕೇಳಿಯಲಿ ಮಲಗಿದ್ದೆ.

ಎದ್ದು ಹಲ್ಲುಜ್ಜುವುದಕ್ಕೆ ಪೇಸ್ಟ್ ಮುಗಿದಿದೆ, ಪೇಸ್ಟ್ ನ ಕತ್ತು ಕುಯ್ದು ಹೊಟ್ಟೆ ಹಿಚುಕಿ ವಾಂತಿ ಮಾಡಿಸಿ ಕೆಲಸ ಮುಗಿಸಿದೆ. ಇವಳಂತೂ ಸ್ಕ್ಕೂಟಿ ಸ್ಟಾರ್ಟ್ ಮಾಡಿ ಹೊರಟೇ ಹೋಗಿದ್ಲು.
ಎಂತ ಕರ್ಮ ಮಾರೆ ಮದುವೆಯಾದ್ರೂ ಬ್ರಹ್ಮಚಾರಿಯಾದೆ. ಅವಳು ಮಾಡಿಟ್ಟಿದ್ದ ಎಂತದ್ದೋ ರೈಸ್ ಬಾಯೊಳಕ್ಕೆಸೆದು, ಚಹಾ ಹೀರಿ. ಮನೆಯಿಂದ ಹೊರಗೆ ಬರ್ತೇನೆ ಕ್ಯಾಬ್ ನವನ ಸುಳಿವಿಲ್ಲ.
ಪ್ಯಾಂಟ್ ನ ಕಿಸೆಗೆ ತುರುಕಿಸಿದ್ದ ಮೊಬೈಲ್ ಎಳೆದು ಬಲಗಯ್ಯಿಂದ ಎಡಗೈಗೆ ವರ್ಗಾಯಿಸುವಷ್ಟರಲ್ಲಿ ಮೊದಲನೇ ಮಹಡಿಯಿಂದ ಕೆಳಗೆ ಹಾರಿತು.
"ಅಯ್ಯೋ ಪರ್ದೇಸಿ ಪ್ರಾಣ ಬಿಟ್ಟಿತಲ್ಲ ಇನ್ನೂ ಒಂದೇ ಒಂದು ಇಎಮ್ ಐ ಕೂಡಾ ಪಾವತಿ ಮಾಡಿರ್ಲಿಲ್ಲ ಸ್ವಲ್ಪ ದಿನ ತಡಕೊಳೊಕ್ಕಾಗ್ತಿರ್ಲಿಲ್ವ ಈಗಲೇ ಆತ್ಮ ಹತ್ಯೆಗೆ ಹೊರಟಿತಲ್ಲ" ಎಂದು ಹಾಳಾದ ಮೊಬೈಲ್ಗೆ ಬಯ್ಕೊಂಡು, ಕೆಳಗೆ ಬಂದು ತುಂಡು ತುಂಡಾಗಿದ್ದ ಅದರ ಅವಯವಗಳನ್ನೇಲ್ಲಾ ಜೋಡಿಸಿ ಮತ್ತೆ ಜೀವ್ ಉಂಟೋ ಇಲ್ವೋ ಪರೀಕ್ಷಿಸಿದೆ.
ಪುಣ್ಯಾತ್ಮ, ಆಯುಷ್ಯ ಗಟ್ಟಿ ಇತ್ತು, ಸಿಮೆಂಟ್ ನೆಲಕ್ಕೆ ಬಿದ್ದಿದ್ರೂ ಸತ್ತಿರ್ಲಿಲ್ಲ. ಜೈ ನೋಕಿಯಾ, ನಿಮ್ಮ ಕಂಪೆನಿಯ ಶೇರ್ ಮೇಲೆ ಹೋಗ್ಲಿ , ಪರಮಾತ್ಮನಿಗೆ ಅಲ್ಲೇ ಕೈಮುಗಿದೆ.
ಜೀವ ಬಂದ ಮೊಬೈಲ್ ನಕ್ಕು, ಟುಂಯ್ ಟುಂಯ್ ಅನ್ನುತ್ತಾ ನಗುಮೊಗ ಪ್ರದರ್ಶಿಸಿ ಒಟ್ಟಿಗೇ ಕರೆಂಟ್ ಶಾಕ್ ಕೊಟ್ಟಿತು. ಕ್ಯಾಬ್ ನವನ ಹದಿನಾಲ್ಕು ಮಿಸ್ ಕಾಲ್.
ಮಾರಾಯ ಇವತ್ತು ಬಸ್ಸೇ ಗತಿ ಅನ್ನುತ್ತಾ ಹಾಳಾಗಿದ್ದ ಹಾಳಾದ ಬೈಕ್ ನ ಮುಖ ನೋಡಿ ಬಸ್ ಸ್ಟ್ಯಾಂಡ್ ಗೆ ಓಡಿದೆ. ದಿನಾಲೂ ಮೂರು ಮೂರು ಬಸ್ ಒಟ್ಟಿಗೇ ಬರೋದು ಇವತ್ತು ಒಂದೂ ಇಲ್ಲ, ಬಸ್ ಸ್ಟ್ಯಾಂಡ್ ನಲ್ಲಿ ಜನರೆಲ್ಲಾ ಸಾಫ್ಟ್ವೇರ್ ಪ್ರಾಣಿ ಬಂತೆಂದು ಮುಖ ನೋಡ ತೊಡಗಿದರು. ಹಲ್ಕಿರಿದು ನಕ್ಕೆ. ಮುಖ ತಿರುಗಿಸಿಕೊಂಡರು. 

ಹದಿನೈದು ನಿಮಿಷ ಬಿಟ್ಟು ಬಸ್ ಬಂತಲ್ಲಾ, ಓ ಬಸ್ಸಿಡೀ ಜನ, ಇನ್ನು ಟಾಪ್ ಮಾತ್ರ ಖಾಲಿ ಅಂತ ನೋಡುತ್ತಿದ್ದೆ, ಹಿಂದಿದ್ದವರು ನೂಕಿ ನೂಕಿ ಬಾಗಿಲಿನ ಬಳಿಯಿದ್ದವ ನಾನು ಬಸ್ಸಿನ ಒಳಗಿದ್ದೆ. ಟಿಕೇಟ್ ಗೆ ದುಡ್ಡು ಕೊಡುವುದಕ್ಕೆ ಪ್ಯಾಂಟ್ ನ ಕಿಸೆಗೆ ಕೈತೂರಿಸುವುದಕ್ಕೂ ಜಾಗ ಇರ್ಲಿಲ್ಲ.
ಗೋಡೆಗೆ ಅಂಟಿಸಿದ್ದ ಪೇಂಟಿಗ್ ನಮುನೆ ಅಂಟಿ ನಿಂತಿದ್ದೆ. ನನ್ನ ಒಂದು ಕಾಲಿನಮೇಲೆ ಯಾರದ್ದೋ ಕಾಲು, ಯಾರದ್ದೋ ಕಾಲಿನ ಮೇಲೆ ನನ್ನ ಮತ್ತೊಂದು ಕಾಲು.

ಇದ್ದ ಬದ್ದ ಸಿಗ್ನಲ್ ಎಲ್ಲಾ ಬಿದ್ದದ್ದೇ, ಇವತ್ತು ಬಾಸ್ ಗೆ ಒಳ್ಳೇ ಚಾನ್ಸ್ ನಾಳಿನಿಂದ ನಿದ್ದೆ ಕಡಿಮೆ ಮಾಡ್ಬೇಕು ಕೆಲಸ ಅಂದುಕೊಂಡೆ. ಅಂತೂ ಇಂತೂ ಸ್ಟಾಪ್ ಬಂದಾಗ ಇದ್ದ ಬಲವೆಲ್ಲಾ ಪ್ರಯೋಗಿಸಿ ನನ್ನ ಸಾಮಾನು ಸರಂಜಾಮುಗಳೆಲ್ಲ ಎಳೆದು ಎಳೆದು ಬಸ್ಸಿನಿಂದ ಹೊರಬಿದ್ದೆ, ಬಾಡಿ ಪಾರ್ಟ್ ಎಲ್ಲಾ ಸರಿಯಾಗಿ ಸ್ವಸ್ಥಾನದಲ್ಲುಂಟಲ್ಲ ಅಂತ ನೋಡಿಕೊಂಡೆ.


ಇನ್ನು ಹೋಗ್ಲಿಕ್ಕೆ ಉಂಟಲ್ಲ ಸುಮಾರು ಒಂದು ಕಿಲೋಮೀಟ್ರು. ಅತ್ಯಂತ ಹೇಟ್ ಮಾಡ್ತಿದ್ದ ಆಟೋವಾಲಾಗಳು ನನ್ನ ಪರಮಾಪ್ತ ಸ್ನೇಹಿತರಾಗುವ ಕಾಲ ಬಂದಿತ್ತು. ಇರುವುದರಲ್ಲಿ ಪಾಪ ತೋರುವ ಆಟೋದವನ ರಥ ಏರಿದೆ.
ಬೇಗ ನನ್ನ ಆಫೀಸ್ ಬುಡಕ್ಕೆ ಬಿಟ್ಟು ಬಿಡು ಮಾರಾಯ. ಅನ್ನುತ್ತಾ ಏರಿ ಕೂತರೆ ಇವನ ಕೆಟ್ಟ ರಥ ಸ್ಟಾರ್ಟೇ ಆಗುದಿಲ್ಲ.

ಅಂತೂ ಇಂತೂ ಅನ್ನದೇಗುಲದ ಎದುರು ಬಂದು ನಿಂತೆ. ಕರ್ಮ ಕರ್ಮ, ಗಡಿಬಿಡಿಯಲ್ಲಿ ಐಡಿ ಕಾರ್ಡು ಮನೆಯಲ್ಲೇ ಬಿಟ್ಟದ್ದು ನೆನಪಾಯಿತು. ಅಂಗಿ ಪ್ಯಾಂಟಿನ ಕಿಸೆಯ ಮೂಲೆಯಿಂದ ಬ್ಯಾಗಿಗಿನ ಮೂಲೆಯವರೆಗೆ ಹುಡುಕಿದರೂ ಪ್ರಯೋಜನ ಆಗ್ಲಿಲ್ಲ. ಸೆಕ್ಯುರಿಟಿ ಗಾರ್ಡ್ ನನ್ನನ್ನು ಟೆರರಿಸ್ಟನ್ನು ನೋಡುವಂತೆ ನೋಡುತ್ತಿದ್ದಾನೆಯೇ ಅನ್ನಿಸತೊಡಗಿತ್ತು.

ಅಗ್ನಿಕೋಟೆಯನ್ನು ದಾಟಿ ಆಫೀಸಿನ ಒಳಗೆ ಹೇಗೋ  ಬಂದೆ. ನನ್ನ ದುರದೃಷ್ಟ ಸೀನಿಯರ್ ಗೋಪಾಲನಿಗೆ ಜೋರು ಜ್ವರ ಎಮರ್ಜೆನ್ಸಿ ಲೀವು. ಬಾಸ್ ನನ್ನ ಬರುವಿಕೆಯನ್ನೇ ಕಾಯ್ತಿದ್ರು ಅನ್ನಿಸ್ತದೆ "ಅಂತೂ ಬಂದ್ರಲ್ಲಾ ಬಟ್ರೇ , ಇಲ್ಲಾಂದ್ರೆ ಕಷ್ಟ ಆಗ್ತಿತ್ತಲ್ವಾ" ಅಂದ್ರು. "ಬೆಳಗ್ಗೆ ಏಳುವುದಕ್ಕಿರುವುದಕಿಂತ ಕಷ್ಟ ಬೇರುಂಟೇ ಸಾರ್" ಮನಸಿನಲ್ಲೇ ಅಂದುಕೊಂಡದ್ದು, "ಗುಡ್ ಮಾರ್ನಿಂಗ್ ಸರ್, ನಿನ್ನೆ ಯು ಎಸ್ ರೀಜನ್ ಸೆಕ್ಯುರಿಟಿ ಪ್ಯಾಚ್ ಡಿಪ್ಲಾಯ್ ಮೆಂಟ್ ಪ್ರಾಬ್ಲಮ್ ಇತ್ತು ಸಾರ್, ರಾತ್ರಿ ಮೂರು ಗಂಟೆ ಆಗಿತ್ತು. ಮಲಗುವಾಗ.", "ಹೌದಾ ತೊಂದ್ರೆ ಇಲ್ಲ ಒಂದು ದಿವ್ಸ ಅಲ್ವಾ" ಅಂದ್ರು, "ಎಂತ ಕರ್ಮ ನೋಡುದ, ಕೆಲಸ ನಾವು ಮಾಡುವುದು ನೋಡುವವ ನೋಡುದೇ" ಅಂದುಕೊಂಡೆ . ಲ್ಯಾಪ್ ಟಾಪ್ ಓಪನ್ ಮಾಡಿದೆ, ಎಂತ ಸಾವ ಬೂಟೇ ಆಗುದಿಲ್ಲ. ಸರಿ ರಿಪೇರಿಗೆ ಕಳ್ಸಿದೆ. ಡೆಸ್ಕ್ಟಾಪ್ ಓಪನ್ ಬೂಟ್ ಮಾಡಿದೆ. ದಿನ ಭವಿಷ್ಯ ನೋಡಿದೆ. ಗುರು ಶನಿ ಬುಧ ಮಂಗಳ ಎಲ್ಲ ಅನುಕೂಲರಾಗಿದ್ದಾರೆ , ಜೀವನದಲ್ಲಿ ಸಮಸ್ಯೆಗಳ ಪರಿಹಾರ ಅಂತಿತ್ತು",  "ವಾಹ್, ಒಳ್ಳೇ ದಿನದ ಪ್ರಾರಂಭ" ಅಂತ ಈಮೇಲ್ ಓಪನ್ ಮಾಡಿದೆ. "ಟಕ ಟಕ ಟಕ ಟಕ, ನಾಲ್ಕು ಎಸ್ಕಲೇಶನ್ ಈಮೇಲುಗಳು ಬಂದು ಬಿದ್ದವು.
ಬಾಸ್ ನ ಟೇಬಲ್ ಕಡೆ ತಿರುಗುವುದಕ್ಕೆ ಮುಂಚೆಯೇ ಬೆನ್ನ ಹಿಂದೆ ಬಂದು ನಿಂತಿದ್ದಾನೆ, ಬುಧ ಗುರು ಶುಕ್ರ ಮಂಗಳ ಶನಿ ಎಲ್ಲ ಒಟ್ಟಿಗೆ ಬಂದು ನಿಂತ ಹಾಗೆ !!!

ಬಹುಬಲ ಧಾರಿಣೀಂ ನಮಾಮಿ ತಾರಿಣೀಂ ರಿಪುದಲ ವಾರಿಣೀಂ ಮಾತರಂ!

ಸಿಂಹದ ಹೊಟ್ಟೆಯಲ್ಲಿ ಜನಿಸಿದ ಸಿಂಹದ ಮರಿಯವಳು. ನಿರ್ಜೀವವಾಗಿ ಮಲಗಿದ್ದ ಸೈನಿಕನ ಮುಖದಲ್ಲಿ ವಿಜಯೋತ್ಸಾಹದ ನಗೆಯಿತ್ತು. ಹನ್ನೊಂದು ವರ್ಷದ ಅಲ್ಕಾ ಕೊನೆಯ ಬಾರಿಗೆ ತಂದೆಯನ್ನು ಬೀಳ್ಕೊಳ್ಳುವ ಹೃದಯ ಕಲಕುವ ಕ್ಷಣ. ದುಃಖದಿಂದ ಬಿದ್ದು ಆಕೆ ಗೋಗರೆಯಲಿಲ್ಲ, ಅಪ್ಪಾ ನನ್ನನ್ನು ಅನಾಥಳನ್ನಾಗಿಸಿ ಹೋದೆಯಾ ಎನ್ನುತ್ತಾ ಮರುಗಲಿಲ್ಲ. ತಲೆಯೆತ್ತಿ ಎದೆ ಎತ್ತರಿಸಿ ಗೂರ್ಖಾ ರೆಜಿಮೆಂಟ್ ನ ಯುದ್ಧಘೋಷ ಮೊಳಗಿಸಿದಳು. ಜತೆಗೇ ನಾಡ ರಕ್ಷಣೆಗೆ ಟೊಂಕ ಕಟ್ಟಿ ಸಹೋದರರಂತೆ ಹೋರಾಡಿದ್ದ ಸೈನಿಕರ ಹೃದಯ ಸುಮ್ಮನಿದ್ದೀತೆ, ಭಾರತವೇ ಎದ್ದಿತು. ದನಿ ಸೇರಿಸಿತು.

ನೆತ್ತರ ಬಿಸಿಯೇರಿ ಹಣೆಯಲ್ಲಿ ಬೆವರೊಡೆಯಿತು, ಕಣ್ಣಲ್ಲಿ ನೀರಿಳಿಯಿತು. ಭಾರತ ಮಾತೆ ಧನ್ಯಳು...


ನಿಮ್ಮ ಅಭಿಪ್ರಾಯ