Tuesday, December 20, 2011

ಬೆಂಗಳೂರು


ಹಣದ ಹೊಳೆಯಲಿ ತೇಲಬೇಕೆಂಬ ಭ್ರಮೆಯಲಿ
ಈ ಮೂಲೆಯಿಂದಾಮೂಲೆಗೈದು ಕೆಲಸವ ಮಾಡುವರು
ಹರಕು ಮಾಸಿದ ಬಟ್ಟೆ ತೊಟ್ಟವರ ನಡುವಿನಲಿ
ಹಣವನೇ ಮೈತುಂಬ ತೊಟ್ಟವರಿಹರು

ದಿನಪೂರ್ತಿದುಡಿದು ರಸ್ತೆಬದಿಯಲಿ ಊಟ ಸವಿವವರು
ತಂಪನೆಯ ಕಛೇರಿಯಲಿ ವಿದೇಶಿ ನೈವೇದ್ಯ ಸವಿವವರು
ಪಿಜ್ಜಾ ಹಾಟುದಾಗೆಂದು ಸ್ಟೇಟಸ್ಸು ಮೆರೆವವರು
ಬ್ರಾಂಡು ಬ್ರಾಂಡೆಂದು ಹಣದ ಮಳೆ ಸುರಿವವರು

ಸಂಬಂಧಗಳ ಮರೆತು ತಂತ್ರ-ಅಜ್ನಾನದಲಿ ಕಳೆದವರು
ಆಂತರಿಕ ಭಾಂದವ್ಯ ಮರೆತವರು ಅಂತರ್ಜಾಲದಲಿ ಮೋರೆ ಕಾಂಬವರು
ಗಂಡ ಹೆಂಡತಿ ಮುಖವ ವಾರಕ್ಕೊಮ್ಮೆ ಕಾಂಬವರು
ಸಿನೆಮಾ ಪಾರ್ಟಿ ಎನುತ ತಮ್ಮವರ ಮರೆತವರು

ಹತ್ತು ಹೆಜ್ಜೆಗಳಾ ನಡೆಯರೀ ಮೊಂಡು ಜನರು
ಸಂಜೆ ಬೆಳಗೆನದೆ ಜಿಮ್ಮೊಳಗೆ ಮೈಮರೆವವರು
ಒಣದ್ರಾಕ್ಷೆ ಸಿಹಿಯೆಂದು ಭ್ರಮೆಯಲಿರುವವರು
ನಮ್ಮೀ ಬೆಂಗಳೂರಿಗರು ಸಂತೃಪ್ತ ಮಹಾಜನಗಳಿವರು...

ಸ್ವಾರ್ಥಿ...





ನಾನು ಸ್ವಾರ್ಥಿ...
ದಿನಬೆಳಗೆದ್ದು ಬಿ ಎಂ ಟೀ ಸಿ ಬಸ್ಸಲಿ
ಸ್ಪರ್ಧೆಯಲಿ ಬಿದ್ದೆದ್ದು ಸೀಟುಗಿಟ್ಟಿಸುವವ ನಾನು ಸ್ವಾರ್ಥಿ
ಹೊಂಡಗುಂಡಿಯ ರಸ್ತೆಗಳ, ತೆರೆದ ಮೋರಿಗಳ
ಹೊಲಸು ರಾಜಕಾರಣಿಗಳ ಬೈಯುತ್ತ ದಿನಗಳೆವ ನಾನು ಸ್ವಾರ್ಥಿ

ಕಾಲನೆಳೆಯುತ್ತ ಕಛೇರಿಗೆ ನಡೆಯುತ್ತ
ಕಾಲಹರಣವಗೈದು ಕೆಲಸ ಮಾಡುತಲಿರ್ಪ ನಾನು ಸ್ವಾರ್ಥಿ
ರಸ್ತೆಯಲಿ ಬಿದ್ದ ಕಸದ ರಾಶಿಯ ನಾತಕ್ಕೆ ಮೂಗ ಮುಚ್ಚುತ,
ಕಂಡರೂ ಕಾಣದೊಲು ನಡೆವವನು ನಾನು ಸ್ವಾರ್ಥಿ

ಮಹಾನಗರದಲಿ ಬದುಕುವವ ನಾನು
ಮಾಲೀಕ ಹೇಳಿದ ಬಾಡಿಗೆಯ ಸುರಿದು ಮತ್ತೆ ಸಂಬಳಕೆ ಕಾವ ನಾನು ಸ್ವಾರ್ಥಿ
ಹಗಲು ದರೋಡೆಯ ಗೈವ ಆಟೊ ಚಾಲಕರ ಬೈದು
ಮತ್ತದೇ ಆಟೊ ಅನಿವಾರ್ಯದಲಿ ಏರಿ ಅಲೆದಾಡುವವ ನಾನು ಸ್ವಾರ್ಥಿ

ಗೆಳೆಯರನು ಸೇರಿ ಗಂಭೀರ ಚರ್ಚೆಯಲಿ
ದೇಶದವ್ಯವಸ್ಥೆಯ ಬಗ್ಗೆ ಕೊರೆದು ಬದಲಾವಣೆಯು ಬೇಕೆಂಬೆ ನಾನು ಸ್ವಾರ್ಥಿ
ಕಟ್ಟಕಡೆಗೆನ್ನ ಪುಟ್ಟಮನೆಹೊಕ್ಕು ರಾತ್ರಿಯಲಿ
ಹೆಂಡತಿಯ ಬಿಸಿಯಪ್ಪುಗೆಯಲಿ ಮಲಗುವವ ನಾನು ಸ್ವಾರ್ಥಿ

ನಿಮ್ಮ ಅಭಿಪ್ರಾಯ