Tuesday, October 23, 2007

ಬಯಲಾಟ


ಎಷ್ಟೊಂದು ಜನ ಬರುತ್ತಾರೆ ಹೋಗುತ್ತಾರೆ
ಮುದುಕರು ,ಮಕ್ಕಳು,ಗೆಳೆಯರು,ಎಳೆಯರು
ಹಿರಿಯರು ಗಣ್ಯರು ಧನಿಕರು ಬಡವರು
ಪಟ್ಟಿ ಉದ್ದ ಬೆಳೆಯುತ್ತದೆ ಹೀಗೆಯೇ

ಬರದವರು ಬಹುಶಹ ಯಾರೂ ಇಲ್ಲ
ಒಮ್ಮೆ ಬಂದವರು ಹಲವು ನೆನಪುಗಳ
ಹೊತ್ತೇ ಹಿಂದೆ ನಡೆಯುತ್ತಾರೆ
ರಂಗದ ಧೂಳು ಹಾರಿಸುವ ಕಲಾವಿದರ ಕಾಣುತ್ತಾರೆ


ಇವನದ್ದು ಯಾವತ್ತೂ ಒಂದು ವೇಷವಿದೆ
ಕಿರೀಟ ಧರಿಸಿ ರಾತ್ರಿಯೆಲ್ಲಾ ಮಿನುಗುತ್ತಾನೆ
ನಕ್ಷತ್ರ ಕೂಡಾ ಕಾಣದಾಗುತ್ತದೆ ಇವನ
ಪೌರುಷದ ನಡೆಗಳ ಮಿಣುಕಿನಲ್ಲಿ


ಚೆಂಡೆಯಣ್ಣ ರಡ್ಡೀಂಗಣ ಬಾರಿಸುತ್ತಲೇ ಇರುತ್ತಾನೆ
ಮದ್ದಳೆಯಾತ ತಾಂ ತೋಂ ನುಡಿಸುತ್ತಲೇ ಇರುತ್ತಾನೆ
ಕೋಡಂಗಿಯಾಗಲಿ ಬಣ್ಣದವನಾಗಲಿ ನಮಸ್ಕರಿಸಿಯೇ ಬರುತ್ತಾನೆ
ಪಾತ್ರ ಬದಲಾಗಬಹುದು ಆದರೆ ಬಯಲು ಅದೇ ಅಲ್ಲವೆ

ಯಾರೇ ಬರಲಿ ಬಿಡಲಿ ಬಯಲಾಟ ನಿಲ್ಲದು
ಯಾರಿಗೂ ಕಾಯದು ಚಲಿಸುವ ಕಾಲದಂತೆ
ರಾವಣ ಸಾಯಲೇ ಬೇಕು ರಾಮ ಗೆಲ್ಲಲೇ ಬೇಕು
ದಮಯಂತಿ ನಳನಿಗೇ ದಕ್ಕುತ್ತಾಳೆ ಪುಷ್ಕರ ಮಣ್ಣು ಮುಕ್ಕುತ್ತಾನೆ

ಕಡ್ಲೆಪುರಿ ಚುರುಮುರಿ ಮಾರುವವರೂ ಸೆಳೆಯುತ್ತಾರೆ
ರಾಳದ ಬೆಂಕಿಗೆ ಬಿದ್ದ ಕೀಟಗಳ ಲೆಕ್ಕವುಂಟೆ
ಕನಸಿನಲ್ಲಿ ಆಟ ನೋಡುತ್ತಿದ್ದವನ ಎದುರಲ್ಲಿ ರಕ್ಕಸ
ಉಚ್ಚೆ ಹುಯ್ದುಕೊಂಡು ಓಡುವುದೊಂದೇ ಬಾಕಿ

ಕೇಕೆಗೆ ಉಬ್ಬುತ್ತಾರೆ ಶಿಳ್ಳೆಗೆ ಹಿಗ್ಗುತ್ತಾರೆ
ರಾತ್ರಿಯೆಲ್ಲಾ ಲೋಕವನ್ನೇ ಮರೆಯುತ್ತಾರೆ ನಿಮ್ಮನ್ನೂ ಮರೆಸುತ್ತಾರೆ
ಆಟ ಮುಗಿದ ಬಳಿಕ ಒಂದೆ ವಾರ ಮಾತು ಚರ್ಚೆ
ಮತ್ಯಾರಿಗೂ ನೆನಪಿಲ್ಲ ಎಲ್ಲವನ್ನೂ ಮರೆಯುತ್ತಾರೆ

ಬದುಕೂ ಅಂತೇ ಅಲ್ಲವೇ ಇಂದಿರುತ್ತೇವೆ
ನಾಳೆ ಇರಬಹುದೆಂಬ ಆಶೆ ಮಾತ್ರ
ಬದುಕಿರುವ ತನಕ ತಲೆಯೆತ್ತಿ ಕುಣಿಯಬೇಕು
ನಾಳೆ ಯಾರು ನೆನಪಿಟ್ಟು ಏನಾಗಬೇಕಾಗಿದೆ ?

ಬದುಕಲ್ಲಿ ಸಿಗಬಹುದು ಶರಧಿ
ಸೇತುವೆ ಕಟ್ಟಲು ರಾಮ ಬರಲಿಕ್ಕಿಲ್ಲ
ರಾಮ ಮೂರ್ತಿ ಮಾತ್ರ ,ಆಕೃತಿಯಲ್ಲವಲ್ಲ ....
ಕಟ್ಟಿ ಕೊನೆಮುಟ್ಟುವ ವರೆಗೆ ಕಟ್ಟುವುದೊಂದೇ ಕೆಲಸ

ಬಯಲಾಟ ಒಂದು ರಾತ್ರಿಯಲ್ಲಿ ಮುಗಿದಿರುತ್ತದೆ
ಮಳೆ ಬಂದರೆ ಇನ್ನಷ್ಟು ಬೇಗ ಮುಗಿವುದರ ಮೊದಲೇ
ಬದುಕೂ ಹಾಗೆಯೇ ಮಳೆ ಹೇಳದೇ ಬಂದೀತು
ಮಳೆ ಬರುವುದಕ್ಕೆ ಮೊದಲು ಪ್ರಯತ್ನ ಮುಗಿಸಲಿಕ್ಕೆ ಪ್ರಸಂಗ

೨೨.೧೦.೨೦೦೭

Sunday, October 21, 2007

ಲಭ ಪರಲೋಕ ಯಾತ್ರೆ

ಬೇಡ ಬೇಡಿರಿ ಬಿಡಿರಿ ನನ್ನನು
ಬದುಕಗೊಡಿ ಇನ್ನೊಂದೈವತ್ತು ವರುಷ
ತೆರದಿ ಹಲುಬಿದ ಎನ್ನ ಆತ್ಮನ ಕ್ಷಣದಿ ಪಿಡಿದರು ಮರುಗದೆ
ದರದರನೆ ಎಳೆಯುತ ಕಾಲ್ಗಳಲಿ ಪಿಡಿದೊಯ್ದರೆಳೆಯುತ ನಾಲ್ವರು

ಕತ್ತಿಕೊಟ್ಟು ಪಿಕ್ಕಾಸುಗಳನೇ ಪಿಡಿದಿಹರಾಯುಧದ ತೆರದಲಿ ದೈತ್ಯರು
ಗಹಗಹಿಸಿ ನಗುತ ಗುರ್ ಗುರ್ರೆನ್ನುತ ಕೋರೆ ಹಲ್ಗಳ ಮಸೆವರು
ಬಾಯಬಿಡೆ ದುರ್ನಾತ ರಾಚಲು ಮೂಗ ಕೈಯಲಿ ಮುಚ್ಚಿದೆ
ಕೈಯ ಕೂಡಲೆ ಕಟ್ಟಿಬಿಟ್ಟರು ಬೇಲಿ ಮುಳ್ಳಲಿ ಹರಿತದ

ಯಾಕೆ ವಾಸನೆ ಪೇಸ್ಟು ಸಿಗದೇ ನಿಮ್ಮ ಲೋಕದಿ ಕೇಳಿದೆ
ಮುಖ ಮುಖ ನೋಡುತವರಲೆ ಸನ್ನೆಗಳ ಹಲ ಗೈದರು
ಯೋಚನೆಯ ನೀವ್ ಮಾಡಬೇಡಿರಿ ಸನಿಹದಲ್ಲೆ ಅಂಗಡಿ ಇರುವುದು
ಕ್ಷಣಗಳೆರಡು ಬಿಟ್ಟರೆನ್ನನು ತಂದು ಕೊಡುವೆ ಪೇಸ್ಟನು

ಅವರಿಗರ್ಥವೆ ಆಗಲಿಲ್ಲ ಎನ್ನ ಬಂಧನ ಕಳಚಲಿಲ್ಲ
ಹಕ್ಕಿಗಳು ಆಕಾಶ ಮಾರ್ಗದಿ ಎನ್ನ ನೋಡುತ ನಗುತ ಪೋದವು
ಲನಾ ಭಟ್ಟನು ಹೋಪ ಚಂದವ ನೋಡಿರೆನ್ನುತ ಕೂಗಿ ಕರೆಯುತ
ಕಾಗೆ ಕೂಡಾ ಕಾಕ ಎನ್ನುತ ಬೈ ಬೈ ಟಾಟಾ ಮಾಡಿತು

ವಿಕ್ಕಿಮಾಪಿಯದಲ್ಲಿ ಕಂಡತೆರನೇ ಭೂಮಿ ಎನಗೆ ಕಂಡಿತು
ತಿರುಗುತಿರುವಾಗ ಎಡೆಯಲಿ ಅಮೇರಿಕಾವೂ ಕಂಡಿತು
ಕೊನೆಯ ನೋಟವು ಬಳಿಕ ಭೂಮಿಯು ಚಿಕ್ಕ ಉಂಡೆಯೆ ಆದುದು
ಕತ್ತಲೆಯ ಮಾರ್ಗದಲ್ಲಿ ಎನನು ಎಲ್ಲೊ ಎಳೆಯುತ ಹೋದರು

ಕಣ್ಣ ಮುಚ್ಚಿದೆ ಭಯದಿ ಕಿರುಚುತ ದೈತ್ಯ ಕರಿಯರ ಕೈಯಲಿ
ಎಳೆದೊಯ್ದು ಎಸೆದರು ಕೊನೆಗೆ ಎನ್ನನು ಓರ್ವ ದೊಡ್ಡವ ಎದುರಲಿ
ಮೈ ಕೈಯಲೆಲ್ಲಾ ಅಪ್ಪ ಎದ್ದಿದೆ ಮಸಿಗಿಂತ ಕರಿಕರಿ ಬಣ್ಣವು
ಕೈಯಲೊಂದು ಗುದಿಗೆ ಹಿಡಿದಿಹ ಗಹಗಹಿಸಿ ನಗುತಿಹ ಹಾಸ್ಯದಿ

ಜತೆಗೆ ಓರ್ವನು ಕುಳ್ಳ ನಿಂತಿಹ ಎನೋ ಲೆಕ್ಕವ ಮಾಡುತ
ಕೈ ಕಾಲ್ಬೆರಳುಗಳ ಕೂಡಿ ಕಳೆದು ಕೊನೆಗೆ ಏನನೊ ಹೇಳಿದ
ನಾನು ಮಾತ್ರವೆ ಅಲ್ಲ ಲೆಕ್ಕದಿ ದಡ್ಡ ಇವ ನನಗಿಂತಲೂ
ಎನುತ ಮನದಲಿ ನಗುತಲಿರೆ ಅವ ಓರೆ ಕಣ್ಣಲಿ ನೋಡಿದ

ಹೊಟ್ಟೆ ಚುರುಚುರು ಎಂಬ ಶಬ್ದವ ಹಸಿವೆಯಲಿ ಶುರು ಮಾಡಿತು
ತಿನಲು ಏನಾದರೂ ಸಿಗುವುದೆ ಎನುತ ಕೇಳಲು ಬಯಸಿದೆ
ಅಷ್ಟರೊಳಗೆ ಧಡಿಯ ಅವರಿಗೆ ಏನೋ ಸಂಜ್ನೆಯ ಮಾಡಿದ
ನಾಲ್ವರೆನ್ನಯ ಕಾಲ ಬಿಟ್ಟು ತಲೆಕೂದಲಿಗೆ ಕೈಯನು ಇಟ್ಟರು

ಸತ್ತ ನಾಯಿಯ ಕಾರ್ಪೊರೇಷನ್ ಆಳುಗಳೆಳೆದೊಯ್ವ ತೆರದಲಿ
ಮೊಣಕಾಲ್ವರೆಗೆ ಬಂದಿಹ ನಾತ ನೀರಲಿ ಹೇಸದೇ ಎಳೆದೊಯ್ದರು
ಅಯ್ಯೊ ಹಾಹಾ ಏನ ಗೈವಿರಿ ಎನಲು ಬಾಯನು ತೆರೆಯಲು
ಫಳಫಳ ಹೊಳೆವ ಮುಳ್ಳಿನ ಉಂಡೆ ತುರುಕಿಸಿ ಬಾಯ ಮುಚ್ಚಿದರಾಗಲೆ

ನಾನೊಬ್ಬನೇ ಬಂದಿಹೆ ಬಹಳ ಕಷ್ಟ ಹೇಗೆ ಸಮಯವ ಕಳೆಯಲಿ
ಕಂಡರಾಗಲೆ ಹಲವು ಜನ ನನಗಿಂತ ಮೊದಲೇ ಬಂದವರ್
ನನ್ನ ಕಾಣುತ ಕೆಲರು ನಗುತಲಿ ಕೇಕೆ ಹಾಕುತ ಕುಣಿದರು
ಇನ್ನು ಕೆಲವರು ಅಯ್ಯೊ ಪಾಪ ಬಂದಿಹನಿವ ಎಷ್ಟು ಬೇಗನೆ ಎಂದರು

ಯಾಕಯ್ಯಾ ನನ್ನನು ಇಲ್ಲಿ ತಂದಿರಿ ಯಾವ ತಪ್ಪಿಗೆ ಶಿಕ್ಷೆಯು
ಎಂದು ಕೇಳಲು ಬಾಯೊಳಿಹ ಉಂಡೆ ಬಿಡುವುದೆ ಚುಚ್ಚದೆ
ಇನ್ನು ಹಲವರ ಕಾಣುತಿಹೆ ನಾ ವಸ್ತ್ರ ಹೀನರು ಮನುಜರು
ಕಚ್ಚಿ ತಿನ್ನುತ ಒಬ್ಬರೊಬ್ಬರ ಹಸಿವೆ ತಡೆಯದೆ ಕ್ರೌರ್ಯದಿ


ಕುದಿಕುದಿ ಎಣ್ಣೆ ಬಾಣಲೆಯೊಳಗೆ ಎಸೆದರು ಸೇರಿ ಹಲವರು ಓರ್ವನ
ಉರಿವ ಬೆಂಕಿಯ ಮೇಲೆ ಇನ್ನೋರ್ವ ತಲೆ ಕೆಳಗಾಗಿಹ
ಬೇರೆ ಇನ್ನಿನ್ನೇನೊ ಮಾಳ್ಪರು ಹೇಗೆ ಹೇಳಲಿ ನಾಚದೆ
ಸತ್ತ ಮೇಲೂ ಉಳಿದಿಹುದೆ ಎನ್ನಲಿ ಇನ್ನು ಹೋಗದೆ ಏತಕೆ ?

ಅಯ್ಯೊ ರಾಮ ನನ್ನನಿನ್ನೇನು ಮಾಳ್ಪರೊ ಅಧಮರು
ಎನುತ ಮುಂದುವರಿಯುತಿರೆ ನಾಲಗೆಗೆ ಬಂದಿಹ ಶ್ರೀಹರಿ
ಕೊನೆಯ ಕ್ಷಣದ ಸೂತ್ರ ಪಠಣದ ತೆರದಿ ಶ್ಲೋಕದ ಸಾಲ್ಗಳು
ರಪರಪನೆ ಕುಣಿದಿವೆ ನಾಲಗೆಯ ಮೇಲೆ ಬಹು ಹಿಂದೆ ಮರೆತಿದ್ದವುಗಳು

ಕೈಯಲೀರ್ವರು ಕಾಲಲೀರ್ವರು ಪಿಡಿದು ಆಳದ ಹಳ್ಳಕೆ
ಎಸೆಯಲೆನ್ನನು ಉಯ್ಯಾಲೆ ತೂಗುತ ಕುಯ್ಯೊ ಕುಯ್ಯೊ ಕೂಗ್ವರು
ಮೀನು,ಮೊಸಳೆಗಳಾದಿ ಯಾಗಿ ದೈತ್ಯಗಾತ್ರದ ಹಾವ್ಗಳು
ಜತೆಗೆ ಸೇರುತ ಬಾಯ ಹಿಗ್ಗಿಸಿ ನಾನು ಬೀಳ್ವುದ ಕಾಯ್ವವು

ನಾಲ್ವರೆನ್ನನು ಜತೆಗೆ ತೂಗಿ ಕೊನೆಗೆ ಕೈಗಳ ಬಿಟ್ಟರು
ಬೀಳಬೇಕಿನ್ನೇನು ಕ್ಷಣದಲಿ ಸಿಕ್ಕಿದೆ ಪುಣ್ಯ ಮರದೊಂದು ಕೊಂಬೆಯು
ಸತ್ಕಾರ್ಯದ ಗಾಳಿ ಬೀಸುತ ಮರವದೆನ್ನ ಕಡೆಗೆ ಬಾಗಿತು
ಸ್ವಪ್ನದಿ ಜಾರಿ ಮಂಚದ ಕರೆಯ ಹಿಡಿದು ಕೂಗಿದೆ

ಏನೆಂದಪ್ಪ ಓಡುತ ಬಂದು ಎನ್ನನು ವಾಸ್ತವದ ಲೋಕಕೆ ತಂದರು
ಸಧ್ಯ ಬದುಕಿದೆ ಮಂಚದಿಂದ ಕೆಳಗೆ ಬಿದ್ದದ್ದಷ್ಟೆಯೋ !:D
ಹೊದಿಕೆ ಸರಿಸಿ ಚಾಪೆ ಮಡಿಸಿ ಕಣ್ಣನುಜ್ಜುತ ಎದ್ದೆನು
ಸ್ವಪ್ನ ಯಾತ್ರೆಯ ಕಹಿಯ ಕನಲುತ ಸ್ನಾನ ಗೃಹಕೆ ನಡೆದೆನು

21.10.2007

Wednesday, October 17, 2007

ನೀರವತೆ-ರಾತ್ರಿ-ಇರುಳು

ಅರ್ಥವಿಲ್ಲದಿರಬಹುದು ಲೋಕಕ್ಕೆ
ರಾತ್ರಿಯ ಅಲೌಕಿಕ ಭಾವದೊಳಗೆ
ಎಷ್ಟೊಂದು ವಿಧದ ಆರ್ದ್ರ ಭಾವಗಳು
ನಿಶ್ಶಬ್ದದೊಳಗಿನ ಶಬ್ದದೊಳಗೆ

ಭಾವವಿಲ್ಲದಿಹ ಭಾವಗಳು ಬೆಸೆಯಬಲ್ಲವು ರಾತ್ರಿಗಳ
ರಹಸ್ಯಗಳ ಮಣಿಗಳು ರಾತ್ರಿಮಾಲೆಯ ಹೆಣೆದಿಹವು
ಸ್ಥಿರವಾಗಿ ಚಲಿಸುತ್ತಿಹ ಮನ ಚಲಿಸುತ್ತಲಿ ಸ್ಥಿರವೂ ಅಹುದು
ಎನೇನೋ ದ್ವಂದ್ವಗಳು ಬರಿ ಎರಡಲ್ಲ

ಮುಗಿಲ್ಮುಟ್ಟಿದೆ ಮೋಟು ಮುದಿನಾಯಿಯ ಕೂಗು
ಜತೆ ಸೇರಿದೆ ಕೊನೇ ಮೋಟಾರಿನ ಎಂಜಿನ್ನಿನ ಕಿರ್ರು
ಝೀರುಂಡೆಯ ಝೀ ಎನ್ನುವ ಝೇಂಕಾರದ ಝಿಲ್ಲು
ಶಬ್ದವೇಧಿಗೆ ತೊಡಗಿಹ ಕರಿ ಬಾವಲಿಗಳ ಶಿಳ್ಳು

ಮುಂಜಾವಿನ ವೇಳೆಗೆ ಆಭರಣದ ತೆರ ಭುವಿಯನ್ನು
ಆವರಿಸಲು ಮಂಜಿನ ಹನಿ ಅವಸರಿಸದೆ ಬರುತಿಹನು
ತಂಗಾಳಿಯು ಬರೆಯುತ್ತಿಹ ನೀರವತೆಯ ಭಾಷ್ಯ್ತ
ಚುಂಬಿಸುತಲಿ ಗಿಡಮರಗಳ ಚಿಗುರನು ಕೆಣಕಿಹನು

ಕೊನೆಬೀದಿಯ ಕಡೆಯಿಂದಲಿ ಪಹರೆಯ ಸೀಟಿ
ಏಕಾಂತವ ಅನುಭವಿಸುತ್ತಿದೆ ಇರುಳಲಿ ಬಡ ರಸ್ತೆಗಳು
ಕನಲುತ್ತಲಿ ತಾ ಪಡೆದಿಹ ಇನಿಯಳ ಸಿಹಿಮುತ್ತನ್ನು
ಕಾದಿಹನಿವ ಕನಸಿನ ಬೀದಿಯೊಳಾಕೆಯ ಬರವನ್ನು


ಎಲೆಮರಗಳು ಸಹ ಸದ್ದಿಲ್ಲದೆ ನಿದ್ದೆಗೆ ಸರಿದಿಹವು
ಜಗಬೆಳಗುತ ಎಂದಿನ ತೆರ ದೀಪದ ಕಂಭಗಳು
ಕ್ರಿಮಿಕೀಟಗಳೂ ಮಂಡೂಕಗಳೂ ಸಭೆ ಜಂಟಿಯ ಕರೆದಿಹವು
ಕಿರ್ರ್ ಕಿರ್ರೆನ್ನುತ ಟರ್ರ್ ಟರ್ರೆನ್ನುತ ಸಭೆ ರಂಗೇರಿಹುದುಮೋಡಗಳೆಡೆಯಿಂದಲಿ ಶಶಿ ಬಾಂದಳದಲಿ ನಿಂದು
ಭುವಿ ಮಲಗಿರುವುದ ಕಾಣುತ್ತಲೆ ಮುದಗೊಂಡಿಹನಿಂದು
ಮೂರ್ಲೋಕವೆ ನಿದ್ರೆಯ ಸವಿಯೊಳುಮಲಗಿರಲು
ನೀರವತೆಯು ಕಾಡಿರುವನು ಇರುಳನು ಯಾಕಿಂದು ?!

ಇದೇ ರೀತಿಯ ಇನ್ನೊಂದು ಕವನಕ್ಕೆ ಇಲ್ಲಿ ಬನ್ನಿ

ನಿಮ್ಮ ಅಭಿಪ್ರಾಯ