Wednesday, February 27, 2013

ಅಲ್ಲಾಹ್ ಕೊಟ್ಟ ಅನಾನಾಸುರಾತ್ರಿ ಹತ್ತು ಘಂಟೆಗೆ ಎರಡನೇ ಪಾಳಿಯ ಕರ್ತವ್ಯ ನಿರ್ವಹಿಸಿ ಮನೆಗೆ ವಾಪಸಾಗುತ್ತಿದ್ದೆ.
ದೊಡ್ಡನೆಯ ಜಲ್ಲಿಕಲ್ಲುಗಳನ್ನು ಅರ್ಧ ತನ್ನ ಒಡಲೊಳಗೆ ಹಾಗೂ ಅರ್ಧ ಹೊರಗೆ ಚಾಚಿಕೊಂಡು, ಡಾಮರಿನ ಲೇಪಕ್ಕೋಸ್ಕರ ಕಕ್ಕುಲತೆಯಿಂದ ಕಾಯುತ್ತಾ ಬಿದ್ದುಕೊಂಡಿದ್ದ ಶಾಂತಿಪುರದ ನಿರ್ಜನವಾದ ರಸ್ತೆಯಲ್ಲಿ ನನ್ನ ಬೈಕ್ ಚಲಾಯಿಸುತ್ತಾ ಬರುತ್ತಿದ್ದೆ. ಮಾರ್ಗ ಮಧ್ಯದಲ್ಲಿ ಒಂದು ಅನಾನಾಸು ಹಣ್ಣು ಚಲಿಸದೇ ! ಬಿದ್ದುಕೊಂಡಿತ್ತು.
ಅರರೇ ಇದೇನಚ್ಚರಿಯೆಂದು ಮೆಲ್ಲನೆ ಬೈಕ್ ನಿಲ್ಲಿಸಿ ಹಣ್ಣನ್ನು ಎತ್ತಿ ಚೆನ್ನಾಗಿದೆಯೇ ಎಂದು ಪರೀಕ್ಷಿಸಿದೆ, ಹೆ ಹೆ.... ಹಣ್ಣು ಭಾರೀ ಒಳ್ಳೆದುಂಟು ಮಾರಾಯ್ರೆ... ಬಹಳ ದಿನಗಳಿಂದ ಅನಾನಾಸು ತಿನಬೇಕು ಎಂದಿದ್ದ ಬಯಕೆ ದೂರಾಯ್ತು ಇಂದು ಎಂದು ಮನದಲ್ಲೇ ನೆನೆದೆ. ಆದರೇನು ಮಾಡುವುದು ,ದುಷ್ಟಮನಸ್ಸು, ಯಾಕೆ ಬಿದ್ದದ್ದು ಯಾವಾಗ ಬಿದ್ದದ್ದು ಯಾರದ್ದು ಬಿದ್ದದ್ದು ? ಬಿದ್ದರೆ ಹೆಕ್ಕಿಕೊಂಡು ಹೋಗದ್ದೇಕೆ ?, ಯಾರದ್ದಾದರೂ ತಂತ್ರವೇ ? ಮಂತ್ರವೇ ಎಂದೆಲ್ಲಾ ಅರೆಕ್ಷಣದಲ್ಲಿ ಕೇಳಿತು.  

ಅಷ್ಟರಲ್ಲೇ ಅನಾನಾಸು ಹಣ್ಣು ಬೀಳಿಸಿದ್ದವನ ಮೇಲೆ ಮನಸ್ಸಿನಲ್ಲಿ ಒಂದು ರೀತಿಯ ಕರುಣಾರಸ ಪ್ರವಹಿಸಿತು, ಅಯ್ಯೋ ಪಾಪ ಇಷ್ಟು ದೊಡ್ಡ ಅನಾನಾಸು ಹಣ್ಣಾದರೂ ಆತನ ಕಣ್ತಪ್ಪಿಸಿ ಬಿತ್ತಲ್ಲವೇ, ಚೀಲದಿಂದ ಬಿದ್ದದ್ದಾಗಿರಲಿಕ್ಕಿಲ್ಲ ಮತ್ತೆ ಹೇಗೆ ಬಿತ್ತು ಎಂದು ಯೋಚಿಸುತ್ತಾ ಮುಂದೆ ಹಿಂದೆ ನೋಡಿದೆ. ಓssss ದೂರದಲ್ಲಿ, ಅಷ್ಟೇನು ದೂರವಲ್ಲss ಹತ್ತಿರದಲ್ಲೇ ಒಂದು ಜನ ! ಗಾಡಿಯೊಂದನ್ನು ತಳ್ಳುತ್ತಾ ಹೋಗುತ್ತಿದೆ. ಕ್ಷಮಿಸಿ... ವ್ಯಕ್ತಿಯೊಬ್ಬ ಹೋಗುತ್ತಿದ್ದಾನೆ. ಹ್ಮ್sss ಇನ್ನೇನು ಮಾಡುವುದು, 

ಆತನೇ ನನ್ನೊಡೆಯ ಎಂದು ಆನಾನಾಸು ಹೇಳಿ ನಕ್ಕಂತೆ ಕಂಡಿತು(ಕತ್ತಲೆಯಲ್ಲೂ). ಮೆಲ್ಲನೆ ಆತನ ಬಳಿಗೆ ಬಂದು ಆತನ ಗಾಡಿಯನ್ನು ಪರೀಕ್ಷಿಸಿದೆ, ಎಡಗಡೆ ಮೂಲೆಯಲ್ಲಿ ಮತ್ತೆ ನಾಲ್ಕಾರು ಅನಾನಾಸು ಹಣ್ಣುಗಳು ಒಂದಕ್ಕೊಂದು ಅಂಟಿಕೊಂಡು ಮಲಗಿದ್ದವು. ಕೈಯಲ್ಲಿದ್ದ ಅನಾನಾಸನ್ನು ಎತ್ತಿ ಏನಿದು ಬೀಳಿಸಿಕೊಂಡು ಹೋಗುತ್ತಿರುವೆಯಲ್ಲಾ ತಗೋ ಎಂದು ಕೊಟ್ಟೆ, 

೫೦ ವರ್ಷ ಮೇಲ್ಪಟ್ಟ ಮುಸ್ಲಿಂ ವ್ಯಕ್ತಿ ಆತ, ಬಿಳಿಯ ಗಡ್ಡವನ್ನು ಕತ್ತರಿಸಿ ಮಟ್ಟಸವಾಗಿಟ್ಟಿದ್ದ ಮತ್ತು ಬಿಳಿ ಟೊಪ್ಪಿ ತೊಟ್ಟಿದ್ದ. ಕತ್ತಲೆಯಲ್ಲಿ ಕಣ್ಣು ಕಾಣಿಸಲಿಲ್ಲ ಸ್ವಾಮೀ ಹಾಗೆ ಹಣ್ಣು ಬಿದ್ದುದು ತಿಳಿಯಲಿಲ್ಲ ಎಂದ. ಅನಾನಾಸನ್ನು ಕೈಯಲ್ಲೇ ಹಿಡಿದುಕೊಂಡಿದ್ದ. ಎಷ್ಟು ಕಿಲೋ ಗೆ ಎಂದು ಕೇಳಿದೆ. ೩೦ ಎಂದ, ಮಾರ್ಕೇಟ್‍ನಲ್ಲಿ ? ೨೦-೨೫ ರೂಪಾಯಿಗೆ ಸಿಗುತ್ತದೆ ಸ್ವಾಮಿ ಎಂದ, ಸರಿ ಹೊರಡುತ್ತೇನೆ ಎಂದು ಹೊರಡಲನುವಾದಾಗ ಆತನಿಗೆ ಏನನ್ನಿಸಿತೋ ಗೊತ್ತಿಲ್ಲ, ತಗೊಳ್ಳಿ ಸ್ವಾಮೀ ತೆಗೆದುಕೊಂಡು ಹೋಗಿ ಎಂದು ಅನಾನಾಸನ್ನು ನನ್ನ ಮುಂದೆ ಹಿಡಿದ ! .... 

ಅಯ್ಯೋ ಬೇಡಯ್ಯಾ ನಾನು ಹೀಗೆಯೆ ಬೆಲೆ ವಿಚಾರಿಸಿದ್ದು, ಬೇಡ ಎಂದೆ... ಪರವಾಗಿಲ್ಲ ತೆಗೆದುಕೊಳ್ಳಿ ಎಂದು ಅನಾನಾಸನ್ನು ಮತ್ತಷ್ಟು ಮುಂದೆ ಹಿಡಿದ ಹಣ್ಣಾದ ಅನಾನಾಸಿನ ಸುವಾಸನೆ ನನ್ನ ಮೂಗಿಗೆ ಬಡಿದು ಮನಸ್ಸಿನಲ್ಲಿ ಮತ್ತೆ ಆಸೆ ಚಿಗುರೊಡೆಯಿತು... ೧-೧.೫ ಕಿಲೋ ದಷ್ಟು ತೂಕವಿರಬಹುದು, ಆತನಿಗೆ ಹಣ ಕೊಟ್ಟು ಖರೀದಿಸೋಣವೆಂದರೆ ನನ್ನ ಬಳಿ ಆ ಸಮಯದಲ್ಲಿ ೧೦ರೂ ನೋಟು ಹಾಗೂ ೧ ರೂ ನಾಣ್ಯದ ಹೊರತಾಗಿ ಬೇರೆ ಹಣವಿರಲಿಲ್ಲ. ಒಂದು ರೂ ನಾಣ್ಯವನ್ನು ನಾನು ಆತನಿಗೆ ಕೊಡುವಂತಿಲ್ಲ ಯಾಕೆಂದರೆ ನಮ್ಮಲ್ಲಿ ಹಣದ ಚೀಲವನ್ನು ಪೂರ್ತಿಯಾಗಿ ಖಾಲಿಯಾಗಿಸಬಾರದೆಂಬ ಅಲಿಖಿತ ನಿಯಮವಿದೆ!! ನೋಡಯ್ಯಾ ನನ್ನ ಬಳಿ ಕೇವಲ ೧೦ರೂಪಾಯಿಯ ನೋಟು ಮಾತ್ರವಿರುವುದು ಆದ್ದರಿಂದ ಬೇಡ ನಾನು ತೆಗೆದುಕೊಳ್ಳಲಾರೆ ಎಂದೆ. 

ಪರವಾಗಿಲ್ಲ ೧೦ರೂ ಕೊಡಿ, ನಿಮ್ಮದು ಒಳ್ಳೆಯ ಮನಸ್ಸು ಆದ್ದರಿಂದ ಬಿದ್ದ ಹಣ್ಣನ್ನು ಎತ್ತಿ ಕೊಡುತ್ತಿದ್ದೀರಿ, ಬೇರೆಯವರಾಗಿದ್ದಲ್ಲಿ ಹಾಗೆಯೇ ತೆಗೆದುಕೊಂಡು ಹೋಗುತ್ತಿದ್ದರು, ನನಗೆ ಈ ಹತ್ತು ರೂ ಮತ್ತು ನಿಮಗೆ ಅನಾನಾಸು ಆ ಅಲ್ಲಾಹ್ ಕೊಡುತ್ತಿರುವುದು ಆದ್ದರಿಂದ ತೆಗೆದುಕೊಳ್ಳಿ ಎಂದ.
ಒಹ್ ಅಲ್ಲಾಹ್ ಕೊಟ್ಟ ಅನಾನಾಸು  ಬೇಡವೆಂದು ಹೇಗೆ ಹೇಳಲಿ, ಸರಿ ದೇವನೊಬ್ಬನೇ ನಾಮ ಹಲವು ಎಂದು ಹತ್ತು ರೂಗಳನ್ನು ಆತನ ಕೈಗಿತ್ತು ಅನಾನಾಸನ್ನು ನನ್ನ ಹೆಗಲುಚೀಲಕ್ಕೆ ತುಂಬಿಸಿ ಬೈಕ್ ಚಾಲೂ ಮಾಡಿ ಹೊರಟೆ......

ಬಹಳ ದೂರ ಬಂದರೂ ಮನಸ್ಸಿನಲ್ಲಿ ಹಣ್ಣಿನ ವ್ಯಾಪಾರಿ ಮುದುಕನ ಚಿತ್ರವೇ ತುಂಬಿತ್ತು....

ಕಟ್ಟಿಗೆ ಕಡಿಯುವವನ ಕೊಡಲಿ ನೀರಿಗೆ ಬಿದ್ದ ಕಥೆ ಮನಸ್ಸಿನಲ್ಲಿ ಮತ್ತೆ ಮತ್ತೆ ಹಾದು ಹೋಗುತ್ತಲೇ ಇತ್ತು......


ನಿಮ್ಮ ಅಭಿಪ್ರಾಯ