ಬೇಡ ಬೇಡಿರಿ ಬಿಡಿರಿ ನನ್ನನು
ಬದುಕಗೊಡಿ ಇನ್ನೊಂದೈವತ್ತು ವರುಷ
ತೆರದಿ ಹಲುಬಿದ ಎನ್ನ ಆತ್ಮನ ಕ್ಷಣದಿ ಪಿಡಿದರು ಮರುಗದೆ
ದರದರನೆ ಎಳೆಯುತ ಕಾಲ್ಗಳಲಿ ಪಿಡಿದೊಯ್ದರೆಳೆಯುತ ನಾಲ್ವರು
ಕತ್ತಿಕೊಟ್ಟು ಪಿಕ್ಕಾಸುಗಳನೇ ಪಿಡಿದಿಹರಾಯುಧದ ತೆರದಲಿ ದೈತ್ಯರು
ಗಹಗಹಿಸಿ ನಗುತ ಗುರ್ ಗುರ್ರೆನ್ನುತ ಕೋರೆ ಹಲ್ಗಳ ಮಸೆವರು
ಬಾಯಬಿಡೆ ದುರ್ನಾತ ರಾಚಲು ಮೂಗ ಕೈಯಲಿ ಮುಚ್ಚಿದೆ
ಕೈಯ ಕೂಡಲೆ ಕಟ್ಟಿಬಿಟ್ಟರು ಬೇಲಿ ಮುಳ್ಳಲಿ ಹರಿತದ
ಯಾಕೆ ವಾಸನೆ ಪೇಸ್ಟು ಸಿಗದೇ ನಿಮ್ಮ ಲೋಕದಿ ಕೇಳಿದೆ
ಮುಖ ಮುಖ ನೋಡುತವರಲೆ ಸನ್ನೆಗಳ ಹಲ ಗೈದರು
ಯೋಚನೆಯ ನೀವ್ ಮಾಡಬೇಡಿರಿ ಸನಿಹದಲ್ಲೆ ಅಂಗಡಿ ಇರುವುದು
ಕ್ಷಣಗಳೆರಡು ಬಿಟ್ಟರೆನ್ನನು ತಂದು ಕೊಡುವೆ ಪೇಸ್ಟನು
ಅವರಿಗರ್ಥವೆ ಆಗಲಿಲ್ಲ ಎನ್ನ ಬಂಧನ ಕಳಚಲಿಲ್ಲ
ಹಕ್ಕಿಗಳು ಆಕಾಶ ಮಾರ್ಗದಿ ಎನ್ನ ನೋಡುತ ನಗುತ ಪೋದವು
ಲನಾ ಭಟ್ಟನು ಹೋಪ ಚಂದವ ನೋಡಿರೆನ್ನುತ ಕೂಗಿ ಕರೆಯುತ
ಕಾಗೆ ಕೂಡಾ ಕಾಕ ಎನ್ನುತ ಬೈ ಬೈ ಟಾಟಾ ಮಾಡಿತು
ವಿಕ್ಕಿಮಾಪಿಯದಲ್ಲಿ ಕಂಡತೆರನೇ ಭೂಮಿ ಎನಗೆ ಕಂಡಿತು
ತಿರುಗುತಿರುವಾಗ ಎಡೆಯಲಿ ಅಮೇರಿಕಾವೂ ಕಂಡಿತು
ಕೊನೆಯ ನೋಟವು ಬಳಿಕ ಭೂಮಿಯು ಚಿಕ್ಕ ಉಂಡೆಯೆ ಆದುದು
ಕತ್ತಲೆಯ ಮಾರ್ಗದಲ್ಲಿ ಎನನು ಎಲ್ಲೊ ಎಳೆಯುತ ಹೋದರು
ಕಣ್ಣ ಮುಚ್ಚಿದೆ ಭಯದಿ ಕಿರುಚುತ ದೈತ್ಯ ಕರಿಯರ ಕೈಯಲಿ
ಎಳೆದೊಯ್ದು ಎಸೆದರು ಕೊನೆಗೆ ಎನ್ನನು ಓರ್ವ ದೊಡ್ಡವ ಎದುರಲಿ
ಮೈ ಕೈಯಲೆಲ್ಲಾ ಅಪ್ಪ ಎದ್ದಿದೆ ಮಸಿಗಿಂತ ಕರಿಕರಿ ಬಣ್ಣವು
ಕೈಯಲೊಂದು ಗುದಿಗೆ ಹಿಡಿದಿಹ ಗಹಗಹಿಸಿ ನಗುತಿಹ ಹಾಸ್ಯದಿ
ಜತೆಗೆ ಓರ್ವನು ಕುಳ್ಳ ನಿಂತಿಹ ಎನೋ ಲೆಕ್ಕವ ಮಾಡುತ
ಕೈ ಕಾಲ್ಬೆರಳುಗಳ ಕೂಡಿ ಕಳೆದು ಕೊನೆಗೆ ಏನನೊ ಹೇಳಿದ
ನಾನು ಮಾತ್ರವೆ ಅಲ್ಲ ಲೆಕ್ಕದಿ ದಡ್ಡ ಇವ ನನಗಿಂತಲೂ
ಎನುತ ಮನದಲಿ ನಗುತಲಿರೆ ಅವ ಓರೆ ಕಣ್ಣಲಿ ನೋಡಿದ
ಹೊಟ್ಟೆ ಚುರುಚುರು ಎಂಬ ಶಬ್ದವ ಹಸಿವೆಯಲಿ ಶುರು ಮಾಡಿತು
ತಿನಲು ಏನಾದರೂ ಸಿಗುವುದೆ ಎನುತ ಕೇಳಲು ಬಯಸಿದೆ
ಅಷ್ಟರೊಳಗೆ ಧಡಿಯ ಅವರಿಗೆ ಏನೋ ಸಂಜ್ನೆಯ ಮಾಡಿದ
ನಾಲ್ವರೆನ್ನಯ ಕಾಲ ಬಿಟ್ಟು ತಲೆಕೂದಲಿಗೆ ಕೈಯನು ಇಟ್ಟರು
ಸತ್ತ ನಾಯಿಯ ಕಾರ್ಪೊರೇಷನ್ ಆಳುಗಳೆಳೆದೊಯ್ವ ತೆರದಲಿ
ಮೊಣಕಾಲ್ವರೆಗೆ ಬಂದಿಹ ನಾತ ನೀರಲಿ ಹೇಸದೇ ಎಳೆದೊಯ್ದರು
ಅಯ್ಯೊ ಹಾಹಾ ಏನ ಗೈವಿರಿ ಎನಲು ಬಾಯನು ತೆರೆಯಲು
ಫಳಫಳ ಹೊಳೆವ ಮುಳ್ಳಿನ ಉಂಡೆ ತುರುಕಿಸಿ ಬಾಯ ಮುಚ್ಚಿದರಾಗಲೆ
ನಾನೊಬ್ಬನೇ ಬಂದಿಹೆ ಬಹಳ ಕಷ್ಟ ಹೇಗೆ ಸಮಯವ ಕಳೆಯಲಿ
ಕಂಡರಾಗಲೆ ಹಲವು ಜನ ನನಗಿಂತ ಮೊದಲೇ ಬಂದವರ್
ನನ್ನ ಕಾಣುತ ಕೆಲರು ನಗುತಲಿ ಕೇಕೆ ಹಾಕುತ ಕುಣಿದರು
ಇನ್ನು ಕೆಲವರು ಅಯ್ಯೊ ಪಾಪ ಬಂದಿಹನಿವ ಎಷ್ಟು ಬೇಗನೆ ಎಂದರು
ಯಾಕಯ್ಯಾ ನನ್ನನು ಇಲ್ಲಿ ತಂದಿರಿ ಯಾವ ತಪ್ಪಿಗೆ ಶಿಕ್ಷೆಯು
ಎಂದು ಕೇಳಲು ಬಾಯೊಳಿಹ ಉಂಡೆ ಬಿಡುವುದೆ ಚುಚ್ಚದೆ
ಇನ್ನು ಹಲವರ ಕಾಣುತಿಹೆ ನಾ ವಸ್ತ್ರ ಹೀನರು ಮನುಜರು
ಕಚ್ಚಿ ತಿನ್ನುತ ಒಬ್ಬರೊಬ್ಬರ ಹಸಿವೆ ತಡೆಯದೆ ಕ್ರೌರ್ಯದಿ
ಕುದಿಕುದಿ ಎಣ್ಣೆ ಬಾಣಲೆಯೊಳಗೆ ಎಸೆದರು ಸೇರಿ ಹಲವರು ಓರ್ವನ
ಉರಿವ ಬೆಂಕಿಯ ಮೇಲೆ ಇನ್ನೋರ್ವ ತಲೆ ಕೆಳಗಾಗಿಹ
ಬೇರೆ ಇನ್ನಿನ್ನೇನೊ ಮಾಳ್ಪರು ಹೇಗೆ ಹೇಳಲಿ ನಾಚದೆ
ಸತ್ತ ಮೇಲೂ ಉಳಿದಿಹುದೆ ಎನ್ನಲಿ ಇನ್ನು ಹೋಗದೆ ಏತಕೆ ?
ಅಯ್ಯೊ ರಾಮ ನನ್ನನಿನ್ನೇನು ಮಾಳ್ಪರೊ ಅಧಮರು
ಎನುತ ಮುಂದುವರಿಯುತಿರೆ ನಾಲಗೆಗೆ ಬಂದಿಹ ಶ್ರೀಹರಿ
ಕೊನೆಯ ಕ್ಷಣದ ಸೂತ್ರ ಪಠಣದ ತೆರದಿ ಶ್ಲೋಕದ ಸಾಲ್ಗಳು
ರಪರಪನೆ ಕುಣಿದಿವೆ ನಾಲಗೆಯ ಮೇಲೆ ಬಹು ಹಿಂದೆ ಮರೆತಿದ್ದವುಗಳು
ಕೈಯಲೀರ್ವರು ಕಾಲಲೀರ್ವರು ಪಿಡಿದು ಆಳದ ಹಳ್ಳಕೆ
ಎಸೆಯಲೆನ್ನನು ಉಯ್ಯಾಲೆ ತೂಗುತ ಕುಯ್ಯೊ ಕುಯ್ಯೊ ಕೂಗ್ವರು
ಮೀನು,ಮೊಸಳೆಗಳಾದಿ ಯಾಗಿ ದೈತ್ಯಗಾತ್ರದ ಹಾವ್ಗಳು
ಜತೆಗೆ ಸೇರುತ ಬಾಯ ಹಿಗ್ಗಿಸಿ ನಾನು ಬೀಳ್ವುದ ಕಾಯ್ವವು
ನಾಲ್ವರೆನ್ನನು ಜತೆಗೆ ತೂಗಿ ಕೊನೆಗೆ ಕೈಗಳ ಬಿಟ್ಟರು
ಬೀಳಬೇಕಿನ್ನೇನು ಕ್ಷಣದಲಿ ಸಿಕ್ಕಿದೆ ಪುಣ್ಯ ಮರದೊಂದು ಕೊಂಬೆಯು
ಸತ್ಕಾರ್ಯದ ಗಾಳಿ ಬೀಸುತ ಮರವದೆನ್ನ ಕಡೆಗೆ ಬಾಗಿತು
ಸ್ವಪ್ನದಿ ಜಾರಿ ಮಂಚದ ಕರೆಯ ಹಿಡಿದು ಕೂಗಿದೆ
ಏನೆಂದಪ್ಪ ಓಡುತ ಬಂದು ಎನ್ನನು ವಾಸ್ತವದ ಲೋಕಕೆ ತಂದರು
ಸಧ್ಯ ಬದುಕಿದೆ ಮಂಚದಿಂದ ಕೆಳಗೆ ಬಿದ್ದದ್ದಷ್ಟೆಯೋ !:D
ಹೊದಿಕೆ ಸರಿಸಿ ಚಾಪೆ ಮಡಿಸಿ ಕಣ್ಣನುಜ್ಜುತ ಎದ್ದೆನು
ಸ್ವಪ್ನ ಯಾತ್ರೆಯ ಕಹಿಯ ಕನಲುತ ಸ್ನಾನ ಗೃಹಕೆ ನಡೆದೆನು
21.10.2007
No comments:
Post a Comment