
ಎಷ್ಟೊಂದು ಜನ ಬರುತ್ತಾರೆ ಹೋಗುತ್ತಾರೆ
ಮುದುಕರು ,ಮಕ್ಕಳು,ಗೆಳೆಯರು,ಎಳೆಯರು
ಹಿರಿಯರು ಗಣ್ಯರು ಧನಿಕರು ಬಡವರು
ಪಟ್ಟಿ ಉದ್ದ ಬೆಳೆಯುತ್ತದೆ ಹೀಗೆಯೇ
ಬರದವರು ಬಹುಶಹ ಯಾರೂ ಇಲ್ಲ
ಒಮ್ಮೆ ಬಂದವರು ಹಲವು ನೆನಪುಗಳ
ಹೊತ್ತೇ ಹಿಂದೆ ನಡೆಯುತ್ತಾರೆ
ರಂಗದ ಧೂಳು ಹಾರಿಸುವ ಕಲಾವಿದರ ಕಾಣುತ್ತಾರೆ

ಇವನದ್ದು ಯಾವತ್ತೂ ಒಂದು ವೇಷವಿದೆ
ಕಿರೀಟ ಧರಿಸಿ ರಾತ್ರಿಯೆಲ್ಲಾ ಮಿನುಗುತ್ತಾನೆ
ನಕ್ಷತ್ರ ಕೂಡಾ ಕಾಣದಾಗುತ್ತದೆ ಇವನ
ಪೌರುಷದ ನಡೆಗಳ ಮಿಣುಕಿನಲ್ಲಿ
ಚೆಂಡೆಯಣ್ಣ ರಡ್ಡೀಂಗಣ ಬಾರಿಸುತ್ತಲೇ ಇರುತ್ತಾನೆ
ಮದ್ದಳೆಯಾತ ತಾಂ ತೋಂ ನುಡಿಸುತ್ತಲೇ ಇರುತ್ತಾನೆ
ಕೋಡಂಗಿಯಾಗಲಿ ಬಣ್ಣದವನಾಗಲಿ ನಮಸ್ಕರಿಸಿಯೇ ಬರುತ್ತಾನೆ
ಪಾತ್ರ ಬದಲಾಗಬಹುದು ಆದರೆ ಬಯಲು ಅದೇ ಅಲ್ಲವೆ
ಯಾರೇ ಬರಲಿ ಬಿಡಲಿ ಬಯಲಾಟ ನಿಲ್ಲದು
ಯಾರಿಗೂ ಕಾಯದು ಚಲಿಸುವ ಕಾಲದಂತೆ
ರಾವಣ ಸಾಯಲೇ ಬೇಕು ರಾಮ ಗೆಲ್ಲಲೇ ಬೇಕು
ದಮಯಂತಿ ನಳನಿಗೇ ದಕ್ಕುತ್ತಾಳೆ ಪುಷ್ಕರ ಮಣ್ಣು ಮುಕ್ಕುತ್ತಾನೆ

ಕಡ್ಲೆಪುರಿ ಚುರುಮುರಿ ಮಾರುವವರೂ ಸೆಳೆಯುತ್ತಾರೆ
ರಾಳದ ಬೆಂಕಿಗೆ ಬಿದ್ದ ಕೀಟಗಳ ಲೆಕ್ಕವುಂಟೆ
ಕನಸಿನಲ್ಲಿ ಆಟ ನೋಡುತ್ತಿದ್ದವನ ಎದುರಲ್ಲಿ ರಕ್ಕಸ
ಉಚ್ಚೆ ಹುಯ್ದುಕೊಂಡು ಓಡುವುದೊಂದೇ ಬಾಕಿ
ಕೇಕೆಗೆ ಉಬ್ಬುತ್ತಾರೆ ಶಿಳ್ಳೆಗೆ ಹಿಗ್ಗುತ್ತಾರೆ
ರಾತ್ರಿಯೆಲ್ಲಾ ಲೋಕವನ್ನೇ ಮರೆಯುತ್ತಾರೆ ನಿಮ್ಮನ್ನೂ ಮರೆಸುತ್ತಾರೆ
ಆಟ ಮುಗಿದ ಬಳಿಕ ಒಂದೆ ವಾರ ಮಾತು ಚರ್ಚೆ
ಮತ್ಯಾರಿಗೂ ನೆನಪಿಲ್ಲ ಎಲ್ಲವನ್ನೂ ಮರೆಯುತ್ತಾರೆ

ಬದುಕೂ ಅಂತೇ ಅಲ್ಲವೇ ಇಂದಿರುತ್ತೇವೆ
ನಾಳೆ ಇರಬಹುದೆಂಬ ಆಶೆ ಮಾತ್ರ
ಬದುಕಿರುವ ತನಕ ತಲೆಯೆತ್ತಿ ಕುಣಿಯಬೇಕು
ನಾಳೆ ಯಾರು ನೆನಪಿಟ್ಟು ಏನಾಗಬೇಕಾಗಿದೆ ?
ಬದುಕಲ್ಲಿ ಸಿಗಬಹುದು ಶರಧಿ
ಸೇತುವೆ ಕಟ್ಟಲು ರಾಮ ಬರಲಿಕ್ಕಿಲ್ಲ
ರಾಮ ಮೂರ್ತಿ ಮಾತ್ರ ,ಆಕೃತಿಯಲ್ಲವಲ್ಲ ....
ಕಟ್ಟಿ ಕೊನೆಮುಟ್ಟುವ ವರೆಗೆ ಕಟ್ಟುವುದೊಂದೇ ಕೆಲಸ
ಬಯಲಾಟ ಒಂದು ರಾತ್ರಿಯಲ್ಲಿ ಮುಗಿದಿರುತ್ತದೆ
ಮಳೆ ಬಂದರೆ ಇನ್ನಷ್ಟು ಬೇಗ ಮುಗಿವುದರ ಮೊದಲೇ
ಬದುಕೂ ಹಾಗೆಯೇ ಮಳೆ ಹೇಳದೇ ಬಂದೀತು
ಮಳೆ ಬರುವುದಕ್ಕೆ ಮೊದಲು ಪ್ರಯತ್ನ ಮುಗಿಸಲಿಕ್ಕೆ ಪ್ರಸಂಗ
೨೨.೧೦.೨೦೦೭
1 comment:
ಸುಂದರ ಕವನ..:)
photos ಚೆನ್ನಾಗಿವೆ..
Post a Comment