Monday, October 19, 2015

ಕೋಸಂಬರಿ-ಅನ್ನದಾನ ಮತ್ತು ಕನ್ಯಾದಾನ



ಹೀಗೇ ಏನೋ ಸ್ಫೂರ್ತಿ ಉಕ್ಕಿ ಹರಿದಾಗ ಮನೆಯಲ್ಲಿರುವ ಪ್ರೇಕ್ಷಕರಿಗೇ; ಅಂದರೆ ನನ್ನ ಅಪ್ಪ, ಅಮ್ಮ ಮತ್ತು ನನ್ನ ಮಡದೀಮಣಿಯ ಮುಂದೆ ಭಾಷಣ ಬಿಗಿವ ಪುಡಾರಿ ನಾನು. ಒಂದು ದಿನ ಮಧ್ಯಾಹ್ನ ಭೋಜನಕ್ಕೆ ಗಡದ್ದಾಗಿ ,ಸ್ವತಃ ನನ್ನದೇ ಆಗಿದ್ದ ಎರಡೂ ಕೈಗಳಿಂದ ಒಂದು ಕೋಸಂಬರಿ ಮಾಡಿ ಮುಗಿಸಿದೆ, ಮನೆಯವರೆಲ್ಲರಿಗೂ ಅದನ್ನು ರುಚಿ ನೋಡಿಸಿ, ಎಲ್ಲರೂ ತಲೆಯಾಡಿಸಿ ಬಾಯಿ ಚಪ್ಪರಿಸುವಂತೆ ಮಾಡಿ ಮಾರ್ಕೆಟಿಂಗ್ ಮಾಡಿಯೂ ಆಯಿತು. ಬಳಿಕ ಊಟ ಪ್ರಾರಂಭವಾಯಿತು, ಸಂತೆಯಿಂದ ಹತ್ತುರೂಪಾಯಿ ಕೊಟ್ಟು ತಂದಿದ್ದ ನಾಲ್ಕು ಜೋಳಗಳಲ್ಲಿ ಎರಡರ ಮೈಯ ಕಾಳುಗಳನ್ನೆಲ್ಲಾ ಕಿತ್ತು, ಜತೆಗೆ ಕ್ಯಾರೆಟ್, ಮುಳ್ಳುಸೌತೆ, ಹೆಸರುಬೇಳೆ ಬೆರೆಸಿ ನಿಂಬೆಹುಳಿ ಉಪ್ಪು ಹಾಕಿ ಮಾಡಿದ ಕೋಸಂಬರಿಗೆ ಶುಂಠಿ ಹಾಕುವುದಕ್ಕುಂಟೋ ಇಲ್ಲವೋ ಎನ್ನುವ ಪ್ರಶ್ನೆಗೆ ಮನೆಯಲ್ಲಿ ಯಾರಲ್ಲೂ ಉತ್ತರವಿಲ್ಲದಿದ್ದಾಗ, ಇದ್ದರೂ ಇಲ್ಲದಿದ್ದರೂ ಹೊಸರುಚಿಯಾಗಲಿ, ಹಾಕುವುದು ಹಾಕುದೇ ಅಂತ ಕೊಚ್ಚಿ ಕೊಚ್ಚಿ ಶುಂಠಿಯನ್ನೂ ಬೆರೆಸಿದ್ದೆ, ತಂದಿದ್ದ ಕಾಲುಕೇಜಿ ಹಸಿಮೆಣಸಿನಲ್ಲಿ ಅದೃಷ್ಟವಂತ ಒಂದು ಮೆಣಸಿನಕಾಯಿಯನ್ನು ಹಿಡಿದು ಮಧ್ಯಾಹ್ನ ಹನ್ನೆರಡಕ್ಕೆ ಸರಿಯಾಗಿ ಹನ್ನೊಂದು ಬಾರಿ ಕೊಚ್ಚಿ ಹಾಕಿದ್ದೆ. ಊಟದ ರುಚಿ ಹೇಳಬೇಕೇ ! ಕೋಸಂಬರಿಗಂತೂ ಬೇಡಿಕೆಯೇ ಬೇಡಿಕೆ. ಹಿಂದಿನ ಜನ್ಮದಲ್ಲಿ ನಳಮಹಾರಾಜನ ಅಡುಗೆ ಮನೆಯಲ್ಲೇ ನಾನು ಅಡುಗೆ ಭಟ್ಟನಾಗಿದ್ದಿರಬೇಕು ಇಲ್ಲವಾದಲ್ಲಿ ಇಷ್ಟು ಅದ್ಭುತವಾಗಿ ಕೋಸಂಬರಿ ಮಡುವುದಕ್ಕೆ ಖಂಡಿತವಾಗಿಯೂ ಸಾಧ್ಯವಿಲ್ಲ ಎನ್ನುವ ನಿರ್ಧಾರಕ್ಕೆ ಬಂದೆ. ನನ್ನವಳು ಮಾಡಿದ್ದ ಬೀನ್ಸು, ಬಟಾಟೆ ಸಾಂಬಾರಿನ ಬಣ್ಣ ಮಾತ್ರ ಗಾಢವಾಗಿತ್ತು, ಕೋಸಂಬರಿಯ ಎದುರಿನಲ್ಲಿ ಸಾಂಬಾರಿನ ಕಳೆಗುಂದಿತ್ತು !

ಊಟದಬಳಿಕ ಕಾಲು ಚಾಚಿ ತುಸು ಕಣ್ಣಡ್ಡ(ನಿದ್ದೆ) ಮಾಡುವುದು ರಜಾದಿನದ ವಾಡಿಕೆ. ಹಾಗೆ ಬಿದ್ದುಕೊಂಡವನ ತಲೆಯಲ್ಲಿ ಕೋಸಂಬರಿಯ ಪ್ರಭಾವವೋ ಎನೋ ಓತಪ್ರೋತವಾಗಿ ವಿಷಯಗಳ ಪ್ರವಾಹವೇ ಹರಿದು ಬರುತ್ತಿತ್ತು. ಹತ್ತಿರ ಮಲಗಿದ್ದ ಇವಳ ಕಿವಿ ಕೊರೆಯುವುದಕ್ಕೆ ಪ್ರಾರಂಭಿಸಿದೆ.
"ಗೊತ್ತುಂಟೇನೇ ನಿನಗೆ , ಅನ್ನದಾನವೆಂಬುದು ಅತ್ಯಂತ ಶ್ರೇಷ್ಠ ದಾನವಂತೆ. ಇತರ ಯಾವುದೇ ವಸ್ತುವನ್ನೂ ಎಷ್ಟೇ ಪ್ರಮಾಣದಲ್ಲೂ ದಾನವನ್ನಾಗಿ ನೀಡಿದಲ್ಲಿ ಸ್ವೀಕರಿಸುವ ವ್ಯಕ್ತಿಗೆ ಸಾಕೆನಿಸಲಾರದಂತೆ. ಅದೇ ಅನ್ನದಾನ, ಅರ್ಥಾತ್ ಭೋಜನ ಮಾತ್ರ, ಒಬ್ಬ ವ್ಯಕ್ತಿ ಅವನ ಹೊಟ್ಟೆ ತುಂಬುವಲ್ಲಿಯವರೆಗೆ ಉಂಡಾನು ಮತ್ತೆ ಯಾರೇ ಆದರೂ ಸಾಕು ಎನ್ನಲೇಬೇಕು, ಅದು ಪ್ರಕೃತಿ ನಿಯಮ" ಎಂದೆ.

ಹೌದದು ಸರಿ ಸರಿ ಎಂದು ಹ್ನೂಗುಟ್ಟಿ ಕಣ್ಮುಚ್ಚಿ ಮಲಗಿದಳು....
ಹ್ ಇಷ್ಟು ಒಳ್ಳೆಯ ವಿಷಯಕ್ಕೆ ಎಷ್ಟು ನಿರ್ವಿಕಾರದಿಂದ ಎಷ್ಟು ಚಿಕ್ಕದಾಗಿ ಪ್ರತಿಕ್ರಿಯಿಸಿದ್ದಾಳೆ ಎನ್ನುವಷ್ಟರಲ್ಲಿ..

"ಅಲ್ಲಾ , ಅನ್ನದಾನ ಮಾತ್ರ ಶ್ರೇಷ್ಠ ದಾನವಾಗುವುದು ಹೇಗೆ. ಕನ್ಯಾದಾನವೂ ಶ್ರೇಷ್ಠ ದಾನವಲ್ಲವೇ ?" ಎಂದಳು
ಎಲಾ ಇವಳ ತಲೆಯೇ , ವಿಷಯ ಹೌದು, ನನ್ನ ತಲೆಗೆ ಹೊಳೆಯಲಿಲ್ಲವಲ್ಲ ಅಂದುಕೊಂಡೆ.

"ಹೌದಪ್ಪಾ ಹೌದು, ಕನ್ಯಾದಾನವೇ ಶ್ರೇಷ್ಠ ದಾನ ಯಾಕೆಂದರೆ ಅನ್ನದಾನ ಸ್ವೀಕರಿಸಿದವರು, "ಸಾಕು" ಎಂದು ಮಾತ್ರ ಹೇಳ್ತಾರೆ ಆದ್ರೆ ಗಂಡನಾದವ ಮಾತ್ರ, ಜೀವನ ಪೂರ್ತಿ "ಸಾಕಪ್ಪೋ ಸಾಕು" ಎಂದೇ ಹೇಳುವುದಲ್ಲವೇ" ಎಂದು ಹೇಳುವುದಕ್ಕೆ ಬಾಯಿ ತೆರೆದಿದ್ದವನ ಒಳಮನಸ್ಸು ಥಟ್ಟನೆ ಇನ್ಸೆಪ್ಶನ್ ಸಿನೆಮಾದಂತೆ ಹಲವಾರು ಪದರಗಳ ಹಿಂದು ಮುಂದಿನ ವಿಚಾರಗಳನ್ನು ತೋರಿಸಿ ಸ್ಟಾಪ್ ಸಿಗ್ನಲ್ ತೋರಿಸಿತ್ತು.

"ಹೌದು ಕಣೇ ಪ್ರೀತಿಯಿಂದ ಸಾಕಿ ಬೆಳೆಸಿದ ಮಗಳನ್ನೇ ತಂದೆಯಾದವ ಧಾರೆಯೆರೆದು ಕೊಡುತ್ತಾನೆ, ಅದಕ್ಕಿಂತ ಶ್ರೇಷ್ಠದಾನ ಬೇರೆ ಏನಾದೀತು... ನಿನ್ನನ್ನು ಹೆಂಡತಿಯಾಗಿ ಪಡೆದ ನಾನೇ ಧನ್ಯ" ಎಂದೆ... ನನ್ನವಳ ತುಟಿ ಕಿವಿಯ ಅಂಚಿನವರೆಗೆ ಬಂದು ನಿಂತಿತು, ದಂತಪಂಕ್ತಿಗಳ ನಡುವೆ ಪಳಕ್ಕನೆ ನಕ್ಷತ್ರವೊಂದು ಮಿನುಗಿ ಮರೆಯಾಯಿತು. ಹಾಗೆ ಕಣ್ಮುಚ್ಚಿ ಭುಜದ ಮೇಲೆ ತಲೆಯಿಟ್ಟು ಮಲಗಿದಳು.

ನಾನೂ ಕಣ್ಮುಚ್ಚಿ, ಬಾಯನ್ನೂ ಮುಚ್ಚಿ ಮಲಗಿದೆ...


ವಿಸೂ: ತಮಾಷೆಗಾಗಿ ಮಾತ್ರ, ಆದರೆ ಇಲ್ಲಿ ಕೊಟ್ಟಿರುವ ೯೦% ಘಟನೆಗಳು ನಿಜ ಮತ್ತು ೧೦% ಕಲ್ಪಿತ, ಬದುಕಿರುವ ಮತ್ತು ಇನ್ನೂ ಬದುಕಲಿರುವ ಎಲ್ಲಾ ಜೀವಿಗಳಿಗೆ ಗಂಡ,ಹೆಂಡತಿಯರಿಗೆ ಸಂಬಂಧಿತ...

No comments:

ನಿಮ್ಮ ಅಭಿಪ್ರಾಯ