Sunday, October 18, 2015

ಪ್ರಿಸನ್ ಬ್ರೇಕ್ : ರೋಚಕತೆಯ ಸುಳಿಯೊಳಗೆ

ಪ್ರಿಸನ್ ಬ್ರೇಕ್ ಎನ್ನುವ ಸೀರಿಯಲ್ ನ ಬೆನ್ನು ಹತ್ತಿದ್ದೆ. ಪ್ರತಿ ನಿಮಿಷಕ್ಕೂ ರೋಚಕತೆಯ ಬೆನ್ನು ಹತ್ತಿ ಕುತೂಹಲದ ಕೊಂಡಿಯನ್ನು ಪೋಣಿಸುತ್ತಾ ಸಾಗುವ ಕಥಾಹಂದರ. ನಿರಪರಾಧಿಯಾಗಿದ್ದರೂ ವ್ಯವಸ್ಥೆಯ ಕಾರಣದಿಂದಾಗಿ, ಪ್ರಭಾವಿ ರಾಜಕೀಯ ವ್ಯಕ್ತಿಗಳ ಚಾಣಾಕ್ಷ ತಂತ್ರಗಾರಿಕೆಯಿಂದಾಗಿ ಕುತಂತ್ರಕ್ಕೆ ಬಲಿಯಾಗಿ, ಮರಣದಂಡನೆಗೆ ದಿನಗಣನೆ ಮಾಡುತ್ತಿರುವ ತನ್ನ ಸಹೋದರನನ್ನು ರಕ್ಷಿಸುವುದಕ್ಕೋಸ್ಕರ ಸಾಮಾನ್ಯ ವ್ಯಕ್ತಿಯಾದ ಮೈಕಲ್ ಸ್ಕೋಫೀಲ್ಡ್ ತಾನೇ ಅಪರಾಧದ ಲೋಕಕ್ಕಿಳಿದು ಕಡುಪಾತಕಿಗಳಿರುವ ಜೈಲು ಸೇರುತ್ತಾನೆ. 
Photo: imdb site.


ಜೈಲಿನ ನಕ್ಷೆಯನ್ನು ತನ್ನ ಮೈಮೇಲೆ ಪೂರ್ತಿ ಹಚ್ಚೆಗಳಿಂದ ಬರೆಸಿರುತ್ತಾನೆ, ಯಾರಿಗೂ ತಿಳಿಯದಂತೆ ಅದ್ಭುತವಾದ ಚಿತ್ರವಿನ್ಯಾಸಗಳಿಂದ ನಕ್ಷೆಯನ್ನು ಅಡಗಿರಿಸಲಾಗಿರುತ್ತದೆ. ಬಾರಿಬಾರಿಗೂ ಎದುರಾಗುವ ಅಡೆತಡೆಗಳನ್ನು ತನ್ನ ಚಾಣಾಕ್ಷಮತಿಯಿಂದ ನಿಭಾಯಿಸುವ ಸ್ಕೋಫೀಲ್ಡ್ ಜತೆಗೆ ನಾವೂ ಇದ್ದಂತೆ ಭಾಸವಾಗುತ್ತದೆ. ಅಪರಾಧಿ ಜಗತ್ತಿನಲ್ಲಿಯೂ ಜೈಲಿನ ನಿಯಮಗಳು ಅವುಗಳನ್ನು ಮೀರುವ , ಒರೆಗೆ ಹಚ್ಚುವ ಖೈದಿಗಳು ಪರಸ್ಪರ ತಮ್ಮ ಜತೆಗಾರರಿಂದಲೇ ಹತ್ಯೆ/ಶಿಕ್ಷೆಗೆ ಒಳಗಾಗುವ ರೀತಿ, ಜೈಲಿನ ವಾರ್ಡರ್ ಗಳ ದಬ್ಬಾಳಿಕೆ, ಭ್ರಷ್ಟಾಚಾರ ಇವೆಲ್ಲವನ್ನೂ ಕಥಾಹಂದರದಲ್ಲಿ ಮಿಳಿತಗೊಳಿಸಿ ಅದ್ಭುತವಾಗುವಂತೆ ಚಿತ್ರಿಸಲಾಗಿದೆ. ಏನೇ ಆದರೂ ಅಪರಾಧಿಗಳ ಮಧ್ಯದಲ್ಲೇ ಇದ್ದರೂ ಸ್ಕೋಫೀಲ್ಡ್ ತನ್ನ ಚಾರಿತ್ರ್ಯವನ್ನು ಕಾಯ್ದುಕೊಳ್ಳುತ್ತಾನೆ, ಆ ನಿಟ್ಟಿನಲ್ಲಿ ಜೈಲಿನಿಂದ ಪರಾರಿಯಾಗುವ ಅಪರಾಧವನ್ನೆಸಗುತ್ತಿದ್ದರೂ ವ್ಯವಸ್ಥೆಯ ವಿರುದ್ಧ ಸಮರ ಸಾರುವ ನಾಯಕನ ಸ್ಥಾನದಲ್ಲಿ ನಿಂತು ಅನ್ಯಾಯದ ವಿರುದ್ಧ ಹೋರಾಡುತ್ತಾನೆ. ಸಾಹಸಮಯ ಚಿತ್ರಗಳನ್ನು, ಥ್ರಿಲ್ಲರ್ ಚಿತ್ರಗಳನ್ನು ಮೆಚ್ಚುವವರಾದಲ್ಲಿ , ನೀವೂ ಒಮ್ಮೆ ನೋಡಿ ಪ್ರಿಸನ್ ಬ್ರೇಕ್.
ಅಂದ ಹಾಗೆ ನಾನು ಹೇಳಿದ್ದು ಒಂದನೇ ಸೀಸನ್ ಬಗ್ಗೆ, ಪ್ರಿಸನ್ ಬ್ರೇಕ್ ನ ಒಂದನೇ ಸೀಸನ್ ನಲ್ಲಿ ೪೫ ನಿಮಿಷಗಳ 22 ಎಪಿಸೋಡ್ಗಳಿವೆ. 2005 ರಿಂದ 2009 ರ ವರೆಗೆ ನಾಲ್ಕು ಸೀಸನ್ ನಲ್ಲಿ ಪ್ರಿಸನ್ ಬ್ರೇಕ್ ಅಮೇರಿಕಾದಲ್ಲಿ ಪ್ರಸಾರವಾಗಿದೆ.

ಚಲನಚಿತ್ರಗಳ ಮಾಹಿತಿಕೋಶ IMDB ತಾಣದಲ್ಲಿ ಈ ಧಾರಾವಾಹಿಗೆ 8.5 ರ ಅಂಕಗಳು.
ಕಥೆ: ಪಾಲ್ ಶ್ಯೂರಿಂಗ್

No comments:

ನಿಮ್ಮ ಅಭಿಪ್ರಾಯ