Sunday, March 15, 2015

ಆತ್ಮಸಂಭಾಷಣೆ೧-ಬದಲಾವಣೆ

ಯಕ್ಷಗಾನ ಕಾರ್ಯಕ್ರಮಕ್ಕೋಸ್ಕರ ಮೈಸೂರಿಗೆ ಹೋಗಿದ್ದೆವು, ಯಕ್ಷಗಾನ ಪ್ರಾರಂಭವಾಗುವುದಕ್ಕೆ ಇನ್ನೂ ಒಂದು ಒಂದೂವರೆ ಘಂಟೆಯಷ್ಟು ಸಮಯಾವಾಕಾಶವಿತ್ತು. ನಮ್ಮ ಜತೆ ಹೊರಟಿದ್ದ ಎರಡನೇ ಗುಂಪು ಬಂದು ಸೇರಿರಲಿಲ್ಲ. ನಾನೂ ಅತ್ಮೀಯರೊಬ್ಬರೂ ಹೀಗೇ ಮಾತನಾಡುತ್ತಿದ್ದೆವು. ಹೀಗೇ ಮಾತನಾಡುತ್ತಿರುವಾಗ ಒಂದು ಮಾತು ಬಂತು ಬಹಳ ಗಾಢವಾಗಿ ಕಾಡಿತು, ಮತ್ತು ಆ ಮಾತಿನಿಂದಾಗಿ ನನ್ನ ಯೋಚನೆಗಳೂ ಈ ರೀತಿ ಹರಿದವು - ದೇವರು ಎಲ್ಲರಿಗೂ ಅವಕಾಶ ಕೊಡ್ತಾನೆ ಆ ಅವಕಾಶ ಸಿಕ್ಕಾಗ ನಾವೇನು ಮಾಡ್ತೇವೆ ಅನ್ನುವುದರ ಮೇಲೆ ನಮ್ಮ ಮುಂದಿನ ಜೀವನ ನಿರ್ಧರಿಸಲ್ಪಡುತ್ತದೆ. ಅವಕಾಶ ಎನ್ನುವುದು ಬಂದಾಗ ಅದನ್ನು ಬಾಚಿಕೊಳ್ಳಬೇಕು. ಮನುಷ್ಯನ ಜೀವನ ಬದಲಾವಣೆಗೆ ಹೊರತಾದುದಲ್ಲ ಆದರೆ ಬದಲಾವಣೆಗೆ ಒಗ್ಗಿಕೊಳ್ಳುವುದನ್ನು ಮಾನಸಿಕವಾಗಿ ನಾವು ಒಪ್ಪಿಕೊಳ್ಳಲು ಸಿದ್ಧರಿರುವುದಿಲ್ಲ. ಅವಕಾಶ ಸಿಕ್ಕಾಗ ಬದಲಾವಣೆಯೂ ಸ್ವಾಭಾವಿಕವಾಗಿಯೇ ಜತೆಯಾಗುತ್ತದೆ. ಆದರೆ ಇದ್ದ ಜಾಗದಲ್ಲಿ ನಾವು ಅದುವರೆಗೆ ಬೆಳೆಸಿರುವ ನಮ್ಮದೇ ಆದ ಜಗತ್ತು ಮತ್ತೆ ನಮ್ಮನ್ನು ಅಲ್ಲಿಂದ ಕದಲದಂತೆ ಪ್ರೇರೇಪಿಸುತ್ತದೆ. ಬೆಚ್ಚಗಿನ ಗೂಡಿನಂತೆ, ಅಲ್ಲಿ ನಮಗೆ ಲಭ್ಯವಾದ ಸೌಲಭ್ಯಗಳಿಗೆ ಒಗ್ಗಿ ಹೋಗಿರುತ್ತೇವೆ. ಬದಲಾವಣೆಯೆಂದಾಗ ಮುಂದೆದುರಾಗಬಹುದಾದ ಸನ್ನಿವೇಶಗಳ ಬಗೆಗಿನ ಹಿಂಜರಿಕೆಯೇ ವ್ಯಕ್ತಿಯನ್ನು ಮುಂದೆ ಚಲಿಸದಂತೆ ಮಾಡುವುದಕ್ಕೆ ಕಾರಣ ಅನ್ನಿಸುತ್ತದೆ. ಆದರೆ ಬದಲಾವಣೆಗೆ ಹೊರತಾಗಿ ಜಗತ್ತೆಲ್ಲಿದೆ, ಬದಲಾವಣೆಯಿಲ್ಲದಿದ್ದರೆ ಗರ್ಭದಲ್ಲಿರುವ ಜೀವ ಹೊರಬರುವುದಕ್ಕುಂಟೇ, ಕಣ್ತೆರೆದು ಜಗತ್ತಿನಲ್ಲಿ ತನ್ನ ಅಸ್ಥಿತ್ವವನ್ನು ಸ್ಥಾಪಿಸುವುದಕ್ಕುಂಟೇ ? ಮನುಷ್ಯನ ಹೃದ್ಗತವಾದ ಭಯ ನಿವಾರಣೆಯಾದಾಗ ಯಾವುದೇ ಕಾರ್ಯ ಕಷ್ಟಕರವಾಗಲಾರದು. ಬದಲಾವಣೆಯನ್ನು ಸ್ವಾಗತಿಸಿ, ಸಾಧಿಸಬೇಕೆಂಬ ಛಲವಿದ್ದು ಮುನ್ನುಗ್ಗುವವನು ಯಶಸ್ವಿಯಾದಾನು ನಾಳೆ ಇತರರಿಗೆ ಮಾದರಿಯಾದಾನು.

No comments:

ನಿಮ್ಮ ಅಭಿಪ್ರಾಯ