ಹೀಗೆ ಬರೆದು ಬರೆದು ಸುಸ್ತಾಗುತ್ತಾ ಬಂತು ಸ್ವಲ್ಪ ಆಸಕ್ತಿಯೂ ಕಡಿಮೆಯಾಗಿತ್ತು ಯಾಕಂದರೆ ನನ್ನ ಕಥೆಯ ಅಂತ್ಯ ಪ್ರಾರಂಭದಲ್ಲಿ ನನಗೇ ಗೊತ್ತಿರಲಿಲ್ಲ ಆದರೆ ಬರೆಯುತ್ತಾ ಬಂದಂತೆ ಕಥೆಯ ಮುಕ್ತಾಯವನ್ನೂ ಆಲೋಚಿಸಿದೆ.ಹಾಗಾಗಿ ಮುಕ್ತಾಯ ಓಡುತ್ತಾ ಬಂದ ನದಿ ಭರದಿಂದ ಜಲಪಾತವಾಗಿ ಧುಮುಕಿದ ತೆರ ಕಥೆ ಒಂದೇ ಓಟಕ್ಕೆ ಮುಕ್ತಾಯವಾಗುತ್ತದೆ.
ನನ್ನ ಕಥೆಯ ಮೊದಲನೆಯ ಓದುಗಾರ್ತಿ ನನ್ನ ತಂಗಿ(ಶ್ವೇತಾ) ಹಾಗೂ editing ಗೆ ಸಹಕರಿಸಿದ ಅತ್ತಿಗೆ ಅನು(ಶ್ರೀ)ವಿಗೆ ನನ್ನ ಕೃತಜ್ನತೆಗಳು.
------------------------------------------
ಪ್ರೊಫೆಸರ್ ವಿಶ್ವಾಸ್ ವಯಸ್ಸು ೭೦ರ ಹತ್ತಿರ.ಐದೂವರೆ ಅಡಿ ಎತ್ತರದ ದೇಹ, ಬೆಳ್ಳನೆಯ ಕುರುಚಲು ಗಡ್ಡ.ಯಾವತ್ತಿನಂತೆ ಇಂದೂ ತಮ್ಮ ಪ್ರಯೋಗಶಾಲೆಯಲ್ಲಿ ಪ್ರಯೋಗದಲ್ಲಿ ನಿರತರಾಗಿದ್ದಾರೆ.ವಯಸ್ಸಾಗಿದ್ದರೂ ತಮ್ಮ ವಯಸ್ಸಿಗೆ ಮೀರಿದ ಚಟುವಟಿಕೆಯಿಂದ ಆರೋಗ್ಯವಂತರಾಗಿ ಯುವಕರೂ ಅಸೂಯೆಪಡುವಂತಹ ಲವಲವಿಕೆಯ ವ್ಯಕ್ತಿತ್ವ.ಯಾವುದೋ ಹಳೆಯ ದುರ್ಬಲವಾಗಿದ್ದಂತಹ ಹಾಳೆಯಂತೆ ತೋರುವ ವಸ್ತುವೊಂದನ್ನು ದ್ರಾವಣವೊಂದರಲ್ಲಿ ಅದ್ದಿ ಶುಚಿಗೊಳಿಸುತ್ತಾ ಲೋಕವನ್ನೇ ಮರೆತಿದ್ದವರಿಗೆ ಪ್ರತಾಪನು ಅಜ್ಜಯ್ಯಾ ಎಂದು ಕೂಗುತ್ತಾ ಬಂದಾಗಲಷ್ಟೇ ಬಾಹ್ಯ ಪ್ರಪಂಚದ ಅರಿವಾಗಿತ್ತು.
ಪ್ರೊಫೆಸರ್ ವಿಶ್ವಾಸ್ ರ ಮಗ ಸಂಕೇತ್ ರಿಗೆ ಮದುವೆಯಾಗಿ ಹಲವು ವರ್ಷಗಳ ಬಳಿಕವೂ ಮಕ್ಕಳಾಗದಿದ್ದ ಕಾರಣ ಅನಾಥಾಲಯದಿಂದ ಪುಟ್ಟ ಕಂದಮ್ಮವೊಂದನ್ನು ದತ್ತು ಸ್ವೀಕರಿಸುವ ಬಗ್ಗೆ ಚಿಂತಿಸಿದ ಸಂಕೇತ್,ತಮ್ಮ ತಂದೆ ತಾಯಿಯೊಂದಿಗೆ ಚರ್ಚಿಸಿ ೧ ವರ್ಷದ ಮಗುವನ್ನು ಕರೆತಂದು ಆತನಿಗೆ ಪ್ರತಾಪನೆಂದು ಹೆಸರನ್ನಿರಿಸಿದ್ದರು.ಪ್ರತಾಪನು ಅನಾಥಾಶ್ರಮಕ್ಕೆ ಕಸದತೊಟ್ಟಿಯಿಂದ ತರಲ್ಪಟ್ಟಿದ್ದನಂತೆ.ದುರ್ಗಂಧದ ನಡುವೆ ಬದುಕ್ಕಿದ್ದೇ ಒಂದು ಪವಾಡವೂ ಪ್ರತಾಪವೂ ಎಂಬಂಥಾ ಅರ್ಥವೋ ಏನೋ.ಆದರೂ ಪ್ರೊಫೆಸರ್ ರು ತಮ್ಮ ವಂಶಾವಳಿಯ ಕುಡಿಗಳ ಹೆಸರುಗಳ ಬಗ್ಗೆ
ನಿರ್ಲಿಪ್ತರಾಗಿದ್ದಂತೆ ತೋರುತ್ತಿತ್ತು.
ನೇರವಾಗಿ ಬಂದವನೇ ಪ್ರತಾಪ ಪ್ರೊಫೆಸರ್ ರ ಪ್ರಯೋಗದ ಮೇಜಿನ ಮೇಲೆ ಕುಳಿತು ಅಜ್ಜನ ಬಿಳಿ ಗಡ್ಡವನ್ನೇ ನೋಡುತ್ತಾ..
"ಅಜ್ಜಯ್ಯಾ ಇಷ್ಟೆಲ್ಲಾ ಪ್ರಯೋಗ ಮಾಡ್ತೀಯಲ್ಲ,ನಿನ್ನ ಗಡ್ಡ ಮೊದಲೇ ಬಿಳಿ ಇರಲಿಲ್ಲ ಅಲ್ವಾ ಅದು ಹೀಗೆ ಬಣ್ಣ ಬದಲಾಯಿಸದಂತೆ ಮಾಡೋದಕ್ಕೆ ನಿಂಗೇನೂ ಮದ್ದು ಸಿಕ್ಕಿಲ್ವಾ ?" ಎಂದು ಫಟಾರನೆ ಪ್ರಶ್ನಿಸಿದ ಯಾವತ್ತೂ ಶಾಂತಚಿತ್ತರಾಗಿಯೇ ಇರುತ್ತಿದ್ದ ಪ್ರೊಫೆಸರ್ ರಿಗೆ ಇಂತಹ ಪ್ರಶ್ನೆಗಳೇನೂ ಹೊಸದಲ್ಲ.ಪ್ರತಾಪನು ಜತೆಗಿದ್ದು ಇಂತಹ ಪ್ರಶ್ನೆಗಳನ್ನು ಕೇಳಿದಾಗಲೇ ಅವರಿಗೆ ಸಮಾಧಾನ.ಎಂದಿನಂತಾಗಿದ್ದಲ್ಲಿ ಖಂಡಿತವಾಗಿ ಅದ್ಭುತ ಪ್ರತಿಕ್ರಿಯೆ ಕೊಟ್ಟಿರಬಹುದಾಗಿದ್ದ ಪ್ರೊಫೆಸರ್ ರು ಇಂದು ಮೌನವಾಗಿಯೇ ಮುಗುಳ್ನಕ್ಕು ಮತ್ತೆ ತಮ್ಮ ಕಾರ್ಯದಲ್ಲಿ ತಲ್ಲೀನರಾದರು.
"ಓಹೋ ಹಾಗದ್ರೆ ಅಜ್ಜಯ್ಯಂಗೆ ಅಜ್ಜೀನ impress ಮಾಡೋ ಮನಸ್ಸು ಹೊರಟ್ಹೋಗಿದೇಂತ ಕಾಣ್ಸುತ್ತೆ" ಎಂದು ಮಾತಿಗೆ ವಿರಾಮ ಹಾಕಲೆತ್ನಿಸಿದ.
"ಹಾಗೇನೂ ಇಲ್ಲ ಗಡ್ಡದ ಕೂದ್ಲು ಕರ್ರಗಾಗೋದ್ರೆ ನನಗೆ ಮಾತ್ರ ತಾನೆ ಲಾಭ ಹಾಗಾಗಿ ನಿಮ್ಮಜ್ಜಿಗೂ ಲಾಭ ಮಾಡೋಣ ಅಂತ ನನ್ನ ಯೋಚನೆ "ಎಂದು ಉತ್ತರಿಸಿದಾಗ ಆಶ್ಚರ್ಯಕ್ಕೊಳಗಾಗುವ ಸರದಿ ಪ್ರತಾಪನದ್ದಾಯಿತು.
"ಏನಜ್ಜಾ ನಿಜವಾಗ್ಲೂ ಹಾಗೇನಾದ್ರೂ ಮಾಡ್ಬಿಟ್ಟೀಯಾ .ನಾಳೆ ನಾನೂ ನೀನೂ ರಸ್ತೇಲಿ ಹೋಗೋವಾಗ ಹುಡ್ಗೀರೆಲ್ಲ ನಿನ್ನ ಹಿಂದೇನೆ ಬಂದಾರು" ಎಂದು ಜೋರಾಗಿ ನಕ್ಕ.
"ಖಂಡಿತ"ಎಂದು ಮಾತ್ರ ಉತ್ತರಿಸಿ ಪ್ರೊಫೆಸರ್ ರು ಸುಮ್ಮನಾದರು.
ಆಗತಾನೆ ತನ್ನ BBMನ ಕೊನೆಯ ವರ್ಷದ ತರಗತಿಗಳನ್ನು ಮುಗಿಸಿ ರಜಕ್ಕೆಂದು ಪ್ರತಾಪ ತನ್ನ ಅಜ್ಜನ ಮನೆಗೆ ಬಂದಿದ್ದ.೨೨ ವಯಸ್ಸಿನ ಸುಂದರ ತರುಣ.ನಗುಮುಖ ಹಾಸ್ಯಪ್ರವೃತ್ತಿಯಿಂದ ಹಾಗೂ ತನ್ನ ಒಳ್ಳೆಯತನಗಳಿಂದ ಎಲ್ಲರನ್ನು ಸೆಳೆಯಬಲ್ಲ ವ್ಯಕ್ತಿತ್ವ.ಹೊಸಬರು ಯಾರೇ ಆಗಲಿ ಅವರ ಜತೆ ಬೆರೆಯುವುದು ಪ್ರತಾಪನಿಗೆ ನೀರಲ್ಲಿ ಮೀನು ಈಜಿದಂತೆ ಸಲೀಸು.ಅವನ ಕಾಲೇಜಿನಲ್ಲಿ ಎಲ್ಲರೂ ಅವನ ಗೆಳೆಯರೇ.ಕಾಲದ ಪ್ರಭಾವದಿಂದಲೋ,ವಿಧಿ ಸಂಕಲ್ಪದಂತೆಯೋ ?! ಪ್ರತಾಪ ಒಬ್ಬಾಕೆಯನ್ನು ಪ್ರೀತಿಸುತ್ತಿದ್ದ.ಆಕೆಯ ಹೆಸರು ವೀಕ್ಷಿತ.ಆತನದೇ ತರಗತಿ,ಅವನಷ್ಟೇ ಚುರುಕು.ಇಬ್ಬರ ಸ್ವಭಾವದಲ್ಲೂ ಬಹಳಷ್ಟು ಸಾಮ್ಯತೆಗಳಿದ್ದವು.ಮುದ್ದು ಮುಖದ ಹುಡುಗಿ, ಶಿವಮೊಗ್ಗದ ವೈದ್ಯರೊಬ್ಬರ ಮಗಳು, ಆಕೆಯೂ ಪ್ರತಾಪನನ್ನು ಬಹಳವಾಗಿ ನೆಚ್ಚಿದ್ದಳು.ಪ್ರತಾಪನ ತಂದೆ ಪ್ರಸಿದ್ಧ ಅಂತರಾಷ್ಟ್ರೀಯ ಕಂಪೆನಿಯೊಂದರಲ್ಲಿ ಎಮ್ ಡಿ ಯಾಗಿದ್ದರು.ಈ ಬಾರಿಯ ವಾರ್ಷಿಕ ವರ್ಷದಲ್ಲಿ ಅವರ ಕಂಪೆನಿ ಹಲವಾರು ದಶಲಕ್ಷ ಡಾಲರ್ ಗಳಷ್ಟು ಲಾಭ ಸಂಪಾದಿಸಿತ್ತು.ಆದ್ದರಿಂದ ಪ್ರತಾಪನಿಗೂ ಕುಳಿತು ಉಣ್ಣುವಷ್ಟು ಆಸ್ತಿ ಅಂತಸ್ತು ತಂದೆಯ ಮೂಲಕ ಹರಿದು ಬಂದಿತ್ತು.ವೀಕ್ಶಿತಾಳ ತಂದೆ ತಮ್ಮದೇ ಆದ ಆಸ್ಪತ್ರೆ ನಡೆಸುತ್ತಿದ್ದರು.ಶಿವಮೊಗ್ಗದ ಬಡಜನರಿಗೆ, ನಾಗರಿಕರಿಗೆ ತಮ್ಮ ಪ್ರಾಮಾಣಿಕ ಸೇವೆಯನ್ನೀಯುತ್ತಿದ್ದರು.ಇಬ್ಬರ ಮನೆಯಲ್ಲೂ ಪ್ರತಾಪ-ವೀಕ್ಷಿತಾಳ ಸಂಬಂಧಕ್ಕೆ ಆಕ್ಷೇಪವಿರಲ್ಲಿಲ್ಲವಾದರೂ,ಅದು ಮಕ್ಕಳ ಹುಡುಗಾಟಿಕೆಯೆಂದೇ ಭಾವಿಸಿದ್ದರು.
ನಗರದ ಅಬ್ಬರದ ವಾತಾವರಣದಲ್ಲಿ ಬೆಳೆದವನಾದರೂ ಸರಳವಾದ ಹಳ್ಳಿಯ ಬದುಕನ್ನು ಇಷ್ಟಪಟ್ಟವನು ಪ್ರತಾಪ.ವೀಕ್ಷಿತಾಳೂ ಅಂತೆಯೇ, ಅವಳಿದ್ದುದೂ ತೀರಾ ಮುಂದುವರಿದ ನಗರವಾಗಿರಲಿಲ್ಲವಾದ್ದರಿಂದ ಸರಳವಾಗಿಯೇ ಬೆಳೆದಿದ್ದಳು.ಉದ್ದನೆಯ ಜಡೆ,ಚೂಡಿದಾರ ಧರಿಸಿ ಗೆಳತಿಯರ ಜತೆ ಕಾಲೇಜಿಗೆ ಬರುವ ವೀಕ್ಷಿತಾಳನ್ನು ಕಾರಿಡಾರ್ ನಲ್ಲಿ ನಿಂತು ನೋಡುತ್ತಿದ್ದರೆ ಪ್ರತಾಪನಿಗೆ ಎದುರಿನಿಂದ ಪ್ರಿನ್ಸಿಪಾಲರು ಬಂದರೂ ಕಾಣಿಸುತ್ತಿರಲಿಲ್ಲ.ಕಾಲೇಜಿನ ಮೊದಲಿನಿಂದಲೂ ಪರಸ್ಪರ ಪರಿಚಯವಾದಂದಿನಿಂದಲೂ ಪ್ರತಾಪ ಆಕೆಯನ್ನು ಬಹಳವಾಗಿ ಹಚ್ಚಿಕೊಂಡಿದ್ದ.ಪ್ರತಾಪನ ಮನಸ್ಸೂ ಆಕೆಗೆ ಅರ್ಥವಾಗಿತ್ತು.ಆಕೆಗೂ ಪ್ರತಾಪ ಇಷ್ಟವಾಗಿದ್ದ.ಕೆಲವು ಸಮಯದಲ್ಲೇ ಇಬ್ಬರೂ ಪರಸ್ಪರ ಬಿಟ್ಟಿರಲಾರದಷ್ಟು ಹತ್ತಿರವಾಗಿದ್ದರು.ಗೆಳತಿಯರ ಜತೆ ಹರಟುತ್ತಿದ್ದಾಗಲೂ,ಕಾಲೇಜಿನ ಕಾರಿಡಾರ್ ನಲ್ಲಿ ನಿಂತಿದ್ದಾಗಲೂ,ಹೆಚ್ಚೇಕೆ ತರಗತಿಯಲ್ಲಿ ಬಿಡುವಿನ ವೇಳೆಗಳಲ್ಲೂ ವೀಕ್ಷಿತಾಳ ಕಣ್ಣು ಪ್ರತಾಪ್ ನ ಮೇಲೆಯೇ ಇದ್ದಿರುತ್ತಿತ್ತು.ಪ್ರತಾಪನಾದರೋ ತರಗತಿಯಲ್ಲಿ ಪಾಠ ಬೋರ್ ಎನಿಸಿದರೆ ಓರೆ ಕಣ್ಣಲ್ಲಿ ವೀಕ್ಷಿತಾಳನ್ನೆ ನೋಡುತ್ತ ಕುಳಿತುಕೊಳ್ಳುತ್ತಿದ್ದ.ಉಪನ್ಯಾಸಕರು ಪ್ರಶ್ನೆಕೇಳಿ ಪ್ರತಾಪ್ ನ ಹೆಸರು ಕರೆದಾಗಲೋ,ಹತ್ತಿರ ಕುಳಿತ ಗೆಳೆಯ ಎಚ್ಚರಿಸಿದಾಗಲೋ ಪ್ರತಾಪ ಕನಸಿನಿಂದ ಹೊರಬರುತ್ತಿದ್ದ.
ಆದರೂ ಎಷ್ಟೇ ಹುಡುಗಾಟ ಮಾಡಿದರೂ ಪ್ರತಿ ಬಾರಿ ಇಬ್ಬರೂ ೮೫ ಶೇಕಡಾ ಅಂಕಗಳನ್ನು ಪಡೆಯುತ್ತಿದ್ದರು.ಬಿ ಎಸ್ಸಿ ಮಾಡಿ ಸಸ್ಯಶಾಸ್ತ್ರದಲ್ಲಿ ಸಂಶೋಧನೆ ಮಾಡಬೇಕೆಂದುಕೊಂಡಿದ್ದ ಪ್ರತಾಪ
ತಂದೆಯ ಒತ್ತಾಯದ ಮೇರೆಗೆ ಬಿ ಬಿ ಎಮ್ ಗೆ ಸೇರಿದ್ದ.ಕೆಲವು ವರ್ಷಗಳಲ್ಲಿ ಪ್ರತಾಪ್ ಎಮ್ ಬಿ ಎ ಮುಗಿಸಿದ ಬಳಿಕ ತಮ್ಮದೇ ಆದ ಕಂಪೆನಿಯನ್ನು ಪ್ರಾರಂಭಿಸಿ ತಮ್ಮ ಅನುಭವವನ್ನೂ ಪ್ರತಾಪ್ ನ ಪ್ರತಿಭೆಯನ್ನು ಬಂಡವಾಳವನ್ನಾಗಿಸಬೇಕೆಂಬುದು ಸಂಕೇತ್ ರ ಕನಸಾಗಿತ್ತು.ತಾನು ಆಯ್ಕೆ ಮಾಡಿದ ಕಾಲೇಜ್ ನಲ್ಲಿಯೇ ತನ್ನ ವಿದ್ಯಾಭ್ಯಾಸವಾಗಬೇಕೆಂದು ತಂದೆಯಲ್ಲಿ ಶರತ್ತನ್ನಿಟ್ಟು ಶಿವಮೊಗ್ಗದ ಪ್ರಖ್ಯಾತ "ನಿಸರ್ಗ" ಕಾಲೇಜಿಗೆ ಪ್ರತಾಪ ದಾಖಲಾಗಿದ್ದ.ಮೊದಮೊದಲು ವೀಕ್ಷಿತಾಳಿಗೆ ಪ್ರತಾಪ್ ನದ್ದು ಹುಡುಗಾಟವೆನಿಸಿದರೂ ಸಮಯ ಕಳೆದಂತೆ ಆತನ ಪ್ರೀತಿ ಆಕೆಯ ಮೇಲೆ ಮೋಡಿ ಮಾಡಿತ್ತು.ದುಃಖದಲ್ಲಿ ಸಂತೋಷದಲ್ಲಿ ಪರಸ್ಪರ ಭಾಗಿಗಳಾಗಿ ಪರಸ್ಪರರನ್ನು ಸಂತೈಸುತ್ತಾ ತಮ್ಮನ್ನು ತಾವೇ ಮರೆಯುತ್ತಿದ್ದರು.
ಕಾಲೇಜು, ಹೆಸರಿನಂತೆಯೇ ಸುತ್ತೆಲ್ಲಾ ಹಸಿರಿನಿಂದ ಸುತ್ತುವರಿಯಲ್ಪಟ್ಟಿತ್ತು.ಕಾಲೇಜಿನ ಹತ್ತಿರದಲ್ಲೆ ದಟ್ಟವಾದಕಾಡು.ಕಾಲೇಜಿನ ಪಕ್ಕಕ್ಕೆ ಹೋಗಿ ಆವರಣದ ಆಕಡೆಗೆ ತೆರಳಿದರೆ ಕಾಡಿನಲ್ಲಿ ಪ್ರಶಾಂತವಾಗಿ ಹರಿಯುವ ನದಿ ಭೋರ್ಗರೆದು ಜಲಪಾತವಾಗಿ ಧುಮ್ಮಿಕ್ಕುವ ಸ್ವರ ಕೇಳಿಸುತ್ತಿತ್ತು.ಪ್ರತಾಪನೂ ವೀಕ್ಷಿತಾಳೂ ತರಗತಿ ಇಲ್ಲದಾಗೆಲ್ಲ ಅರಣ್ಯದೊಳಗೆ ಮರೆಯಾಗಿ ಪರಸ್ಪರರ ಕೈಯಲ್ಲಿ ಕೈ ಬೆಸೆದು ಹಸಿವು ಬಾಯಾರಿಕೆಗಳನ್ನು ಮರೆತು ಭವಿಷ್ಯದ ಸುಂದರ ಕನಸುಗಳನ್ನು ಜಲಪಾತದ ಶ್ರುತಿಗೆ ಸರಿಯಾಗಿ ಕಟ್ಟುತ್ತಿದ್ದರು.
ಸಂಜೆಯ ಹೊತ್ತಿನ ರೈಲು ಏದುಸಿರು ಬಿಡುತ್ತ ಸಿಳ್ಳೆ ಹೊಡೆಯುತ್ತಾ ಬೆಟ್ಟದ ಮೂಲಕ ಸಾಗುತ್ತಿದ್ದಾಗಲೇ ಇಬ್ಬರಿಗೂ ಸಮಯದ ಅರಿವಾಗುತ್ತಿದ್ದುದು.ಜಲಪಾತದ ಮೇಲ್ಭಾಗದಿಂದ ನದಿಯನ್ನು ದಾಟಿ ಆ ಕಡೆಗೆ ತುಸು ದೂರ ನಡೆದರೆ ರೈಲಿನ ಹಳಿ ಸಿಗುತ್ತಿತ್ತು.ಎಡಗಡೆಗೆ- ಮುಗಿಲನ್ನೇ ಚುಂಬಿಸಲೆಳಸಿ ಎತ್ತರವಾಗಿ,ಎದೆ ಎತ್ತರಿಸಿ ನಿಂತಂತೆ ತೋರುವ ಪರ್ವತ.ಅದರ ಮೂಲಕವಾಗಿಯೇ ಅದ್ಭುತವಾಗಿ ಸುರಂಗವನ್ನು ನಿರ್ಮಿಸಲಾಗಿತ್ತು.ಚಾರಣಿಗರಿಗಂತೂ ಅತ್ಯಂತ ಪ್ರಿಯವಾದ ತಾಣ ಅದು.ಪಟ್ಟಣದ ಮಂದಿ ಕೃತಕವಾಗಿ ನಿರ್ಮಿಸುವ ಹವಾನಿಯಂತ್ರಿತ ಕೊಠಡಿಯಂತೆ ಅಲ್ಲಿನ ಪರಿಸರ ಬಹಳ ತಂಪಾಗಿತ್ತು.ದಿನದ ಕೊನೆಯಲ್ಲಿ ಸಂಚರಿಸುವ ರೈಲಿನ ಪ್ರಯಾಣಿಕರಿಗಂತೂ ಈ ಭಾಗದಲ್ಲಿ ಸಂಚರಿಸುವಾಗ ಸ್ವರ್ಗವೇ ಧರೆಗಿಳಿದಂತೆ ಭಾಸವಾಗುತ್ತಿತ್ತು.ಅರಣ್ಯವಂತೂ ಸಂಪದ್ಭರಿತವಾದ ಮರಗಿಡಗಳಿಂದ ಅತ್ಯಾಕರ್ಷಕವಾಗಿತ್ತು.ಕೆಲವೊಂದು ಬಾರಿ ವಿಶೇಷ ಪ್ರಭೇದದ ಮರಗಳು ಅಪರೂಪವಾಗಿ ಹೂಬಿಟ್ಟಾಗ ಎಲ್ಲೆಡೆ ಸುಗಂಧ ಪಸರಿಸಿ
ಸ್ವರ್ಗಲೋಕದ ನಂದನ ಈ ತೆರ ಸದಾಕಾಲ ಇರಬಹುದೋ ಎಂಬ ಭಾವ ಪ್ರಕಟವಾದರೆ ಅಚ್ಚರಿಯಲ್ಲ ಎಂಬಂತಿತ್ತು.ಅಂತಹುದರಲ್ಲಿ ಪ್ರತಾಪ-ವೀಕ್ಷಿತ ಪರಸ್ಪರರ ತೋಳುಗಳಲ್ಲಿ ಬಂಧಿಯಾಗಿ ಲೋಕವನ್ನೇ ಮರೆಯುತ್ತಿದ್ದುದು ಅಚ್ಚರಿಯಲ್ಲ.
ಪ್ರತಾಪ ಬಹಳ ಸಾಹಸಿ ಸ್ವಭಾವದ ಯುವಕ.ವೀಕ್ಷಿತಳು ಜತೆಯಲ್ಲಿದ್ದರಂತೂ ಆತನಿಗೆ ನೂರಾನೆ ಬಲ ಬಂದಂತಾಗುತ್ತಿತ್ತು.ನದಿಯಲ್ಲಿ ಈಜಾಡುವುದು,ಎಷ್ಟೇ ಎತ್ತರದ ಮರವೇ ಆಗಲಿ ವೀಕ್ಷಿತಳಿಗೆ ಇಷ್ಟವಾದ ನೇರಳೆ ಹಣ್ಣುಗಳನ್ನು ಕೊಯ್ಡು ಸಂಗ್ರಹಿಸಿ ಕೊಡುವುದು,ಸ್ನೇಹಿತರ ಜತೆಗೆ ಚಾರಣ ಇತ್ಯಾದಿ ಅವನ ಪ್ರಿಯವಾದ ಹವ್ಯಾಸಗಳು.
ವೀಕ್ಷಿತಳ ಮನ ಮುದಗೊಳಿಸುವುದಕ್ಕೋ ಎಂಬಂತೆ ಕೆಲವೊಂದು ಬಾರಿ ಆಕೆಯ ಗುಣರೂಪ ಸ್ವಭಾವ ವರ್ಣನೆಗಳ ಕವನ ರಚನಾ ಕಾರ್ಯವನ್ನೂ ನಡೆಸುತ್ತಿದ್ದ.ಅದಲ್ಲದೆ ತನ್ನಗುಣಗತವಾಗಿದ್ದ ಸಸ್ಯಶಾಸ್ತ್ರವನ್ನೂ ತನ್ನ ಅಭಿರುಚಿಯಿಂದ ಅಭ್ಯಸಿಸುತ್ತಿದ್ದ ಆತ ಗಿಡಗಂಟಿಗಳನ್ನೆಲ್ಲಾ
ನೋಡುತ್ತಾ ದಟ್ಟಾರಣ್ಯದಲ್ಲಿ ವೀಕ್ಷಿತಳೊಂದಿಗೆ,ಕೆಲವೊಮ್ಮೆ ಗೆಳೆಯರ ಜತೆ ತಿರುಗಾಡಿದ ದಿನಗಳ ಲೆಕ್ಕವಿರಲಿಕ್ಕಿಲ್ಲ.ಕೆಲವೊಂದು ಬಾರಿ ವೀಕ್ಷಿತಳ ಜತೆ ಕಾಡಿನಲ್ಲಿ ನಡೆದಾಡುತ್ತಿದ್ದಾಗ ಸರ್ರನೆ ಮರೆಯಾಗಿ ಆಕೆಯನ್ನು ಗಲಿಬಿಲಿಗೊಳಗಾಗಿಸಿ ಆಕೆಯಿಂದ ತನ್ನ ಹೆಸರನ್ನು ಕರೆಯಿಸಿಕೊಳ್ಳುವುದರಲ್ಲಿ ಆತನಿಗೆ ಎಂಥದೋ ಆನಂದ.
ದ್ವಿತೀಯ ವರ್ಷದಲ್ಲಿದ್ದಾಗ ಪ್ರತಾಪನಿಗೆ ಕಾಡಿನಲ್ಲಿ ವಿಷಜಂತು ಕಡಿತದಿಂದಾಗಿ ಸ್ಮೃತಿ ತಪ್ಪಿ ಬಿದ್ದಿದ್ದಾಗ ,ವೀಕ್ಷಿತಳೇ ಆತನನ್ನು ಬದುಕಿಸಿದ್ದಳು.ವೈದ್ಯರ ಮಗಳಾದ್ದರಿಂದ ಪ್ರಥಮ ಚಿಕಿತ್ಸೆ ನೀಡಿ ಆತನ ಗೆಳೆಯರನ್ನು ಕೂಡಿಸಿ ತನ್ನ ತಂದೆಯ ಆಸ್ಪತ್ರೆಗೆ ಒಯ್ದಿದ್ದ ಆಕೆಯ
ಕಣ್ತೆರೆದಾಗ ಆತನನ್ನು ಅಪ್ಪಿ ಗಳಗಳನೆ ಅತ್ತಿದ್ದಳು.ಪ್ರತಾಪನಿಗೋ ಆಕೆ ವಿವರಿಸಿದ ಬಳಿಕವಷ್ಟೇ ಏನಾಗಿತ್ತೆಂದುದರ ಅರಿವಾಗಿತ್ತು.ಪ್ರತಾಪನ ಪಾಲಿಗಂತೂ ಮರುಜನ್ಮವಿತ್ತ ತಾಯಿಯಂತೆ ಕಂಡಿದ್ದಳು ವೀಕ್ಷಿತ.ಕೆಲವೊಂದು ಬಾರಿ ಚುಡಾಯಿಸುವುದಕ್ಕೆ ಪ್ರತಾಪ ಆಕೆಯನ್ನು ಅಮ್ಮಾ ಎಂದು ಕರೆದರೆ,
"ಅಮ್ಮ ಇನ್ನೂ ಬಹಳ ಕಾಲವಿದೆ ಮರೀ " ಎಂದು ಅವನ ಕೆನ್ನೆ ಹಿಂಡುತ್ತಾಳೆ ವೀಕ್ಷಿತ.ಹೀಗೆ ಇಬ್ಬರೂ ಪದವಿಯ ಕೊನೆಯ ಹಂತಕ್ಕೆ ಬಂದಿದ್ದರು ಪರೀಕ್ಷೆಗಳ ಬಳಿಕ ಪ್ರತಾಪ ಸ್ವಲ್ಪ ಸಮಯ ತನ್ನ ಮನೆಯಲ್ಲಿದ್ದು ಬಳಿಕ ಅಜ್ಜನ ಮನೆಗೆ ಹೋಗುವುದೆಂದು ನಿಶ್ಚಯಿಸಿದ್ದ.
ಆತನ ಅಜ್ಜ ಓರ್ವ ಪ್ರಖ್ಯಾತ ವಿಜ್ಞಾನಿ ಆಯುರ್ವೇದ ವೈದ್ಯಶಾಸ್ತ್ರಕ್ಕೆ ಅನೇಕ ಕೊಡುಗೆಗಳನ್ನು ನೀಡಿದ ಮಹಾನುಭಾವ.ಯಾವುದೇ ಕಾಡಿನ ಯಾವುದೇ ಮೂಲೆಯ ಗಿಡದ ಪರಿಚಯ ಅವರಿಗಿತ್ತು.ಹಿಂದಿನ ಬಾರಿ ಅಜ್ಜನ ಜತೆ ದೂರವಾಣಿಯಲ್ಲಿ ಮಾತಾಡಿದ್ದ ಪ್ರತಾಪನಿಗೆ ತಾನು ಹೊಸ ಸಂಶೋಧನೆಯಲ್ಲಿ ತೊಡಗಿಕೊಂಡಿರುವೆನೆಂದೂ ತನ್ನ
ಸಂಶೋಧನೆಗೆ ಸಹಾಯಕ ಗ್ರಂಥಾಧ್ಯಯನ ನಡೆಸುತ್ತಿರುವೆನೆಂಬುದಾಗಿಯೂ ತಿಳಿಸಿದ್ದರು.ಯಾವ ಸಂಶೋಧನೆ ಮತ್ತಿತ್ಯಾದಿ ವಿವರಗಳು ಅಜ್ಜಯ್ಯ ಪ್ರತಾಪ್ ನಿಗೆ ತಿಳಿಸಿರಲಿಲ್ಲ.ಕಾಲೇಜಿನ ಕೊನೆಯ ದಿನಗಳು ಮುಗಿದು ಹೋದವು ಪ್ರತಾಪನಂತೂ ಬಾಲಸುಟ್ಟ ಬೆಕ್ಕಿನಂತೆ ಚಡಪಡಿಸಲಾರಂಭಿಸಿದ್ದ.
ಕ್ಷಣಕಾಲಕ್ಕೂ ವೀಕ್ಷಿತ ಅವನ ದೃಷ್ಟಿಯಿಂದ ಸರಿಯುವುದನ್ನೂ ಸಹಿಸಲಾರದಾಗಿದ್ದ.ವೀಕ್ಷಿತ ಅದೆಷ್ಟು ಸಮಾಧಾನ ಪಡಿಸಿದರೂ ಪ್ರತಾಪನಿಗೆ ಮತ್ತಷ್ಟು ಬೇಸರ.ಮೊದಲ ಬಾರಿಗೆ ವೀಕ್ಷಿತ ಪ್ರತಾಪನ ಸಮಾಧಾನಕ್ಕೋಸ್ಕರ
ಆತನ ಕೆನ್ನೆ ಮೇಲೆ ನಾನೆಂದೂ ನಿನ್ನವಳೇ ಎಂಬ ಮುದ್ರೆಯೊತ್ತಿದ್ದಳು.ಪ್ರತಾಪನಿಗೆ ಸಂತೋಷವಾದರೂ ಅದನ್ನು ತೋರಗೋಡದೆ "ನೀನೂ ನನ್ನಜ್ಜನ ಮನೆಗೆ ಇನ್ನೊಂದು ವಾರದಲ್ಲಿ ಬರಬೇಕು" ಎಂಬ ವಾಗ್ದಾನವನ್ನು ಪಡೆದುಕೊಂಡು ಭಾರವಾದ ಮನಸ್ಸಿನಿಂದ ರೈಲು ಹತ್ತಿದ್ದ.
ವೀಕ್ಷಿತಾ ಮನೆಯಲ್ಲಿ ಹೇಗೆ ಅನುಮತಿ ಪಡೆದುಕೊಳ್ಳುವುದು ಎಂಬ ಅಧೈರ್ಯದೊಂದಿಗೆ ಬಂದು ಕೇವಲ ಒಂದು ವಾರದ ಮಟ್ಟಿಗೆ ಅನುಮತಿಯನ್ನು ಪಡಕೊಂಡಳು.
ಅಜ್ಜನ ಮನೆಗೆ ಪ್ರತಾಪ ಬಂದು ೨ ದಿನ ಕಳೆದಿತ್ತು ಎರಡು ದಿನವೂ ಅಜ್ಜನಿಗೆ ಕೇಳಿಸಿದ್ದು ಎರಡೇ ಪದಗಳು "ವೀಕ್ಷಿತ" ಹಾಗೂ "ಕಾಲೇಜಿನ ಬಳಿಯ ಕಾಡು" ಅತ್ಯಂತ ಸುಗಂಧಿತ ಹೂ ಬಿಡುವ ಮರಗಳಿಂದ ಕೂಡಿದ ಕಾರಣ ಸೌಗಂಧಿಕಾವನ ಎಂಬುದಾಗಿಯೂ ಕರೆಯುತ್ತಿದ್ದರು.
ಎರಡು ದಿನಗಳ ಬಳಿಕ ಅಜ್ಜ ನಡೆಸುತ್ತಿದ್ದ ಸಂಶೋಧನೆಯನ್ನು ಗಮನಿಸಿದ ಪ್ರತಾಪ
"ಅಲ್ಲಜ್ಜ ನೀನು ಒಂದು ಬಾರಿ ನಮ್ಮ ಕಾಲೇಜಿನ ಬಳಿಯ ಕಾಡಿಗೆ ಬರಬೇಕಾಗಿತ್ತು ಎಂತೆಂಥಾ ಮರ ಗಿಡಗಳಿವೆ ಗೊತ್ತೇ ? ನನಗಂತೂ ಅಲ್ಲಿರುವ ೯೦% ಮರಗಿಡಗಳ ಪರಿಚಯವೇ ಇಲ್ಲ.ನಿನಗೆ ಎಲ್ಲ ಗಿಡಮರಗಳ ಹೆಸರು,ಉಪಯೋಗ ಗೊತ್ತಿರಬಹುದು" ಎಂದ.
ಪ್ರೊಫೆಸರ್ ರಿಗೆ ಏನೋ ಒಂದು ರೀತಿಯ ಪ್ರೇರಣೆ, ಯೋಜನೆ, ಬೆಳಕು ಕಂಡಂತಾಯಿತು.ಪ್ರತಾಪನಿಗೆ ಸಂಕೇತ್ ರು ಒಂದು ವಿದೇಶಿ DSLR ಕ್ಯಾಮರಾವನ್ನು ಉಡುಗೊರೆಯಾಗಿ ನೀಡಿದ್ದರು.
ತಾನು ಕಾಡಿನಲ್ಲಿ ಸೆರೆಹಿಡಿದ ಹಲವಾರು ಗಿಡಗಳ ಚಿತ್ರಗಳನ್ನು ತನ್ನ Laptopನಲ್ಲಿ ಅಜ್ಜನಿಗೆ ತೋರಿಸಿ ಅವುಗಳ ಬಗ್ಗೆ ವಿವರಗಳನ್ನು ಹೇಳುತ್ತಾ ಸರಿಯಲ್ಲವೇ ? ಹೀಗೋ ಹಾಗೋ ಎಂದು ಅಜ್ಜಯ್ಯನನ್ನು ಕೇಳುತ್ತಿದ್ದ.ಅಜ್ಜನಿಗಂತೂ ಅವನ ಜ್ಞಾನ ಆಸಕ್ತಿಗಳನ್ನು ಕಂಡು ಆಶ್ಚರ್ಯವಾಯಿತು.
ತಾನೊಂದು ವಿಶೇಷ ಗಿಡವನ್ನು ನೋಡಿದ್ದಾಗಿಯೂ ಅದರ ವಿಶೇಷಗಳನ್ನೂ ತಿಳಿಸಿ ಅದರ ಚಿತ್ರವನ್ನೂ ತೋರಿಸಿದ.ಅತ್ಯಂತ ಅಪರೂಪವಾಗಿದ್ದ ಆ ಸಸ್ಯಸಂತತಿ ಅಳಿವಿನ ಅಂಚಿನಲ್ಲಿದೆ ಎಂದು ಪ್ರೊಫೆಸರ್ ರು ತಿಳಿಸಿದರು.
"ಛೆ ಹಾಗಿದ್ದಲ್ಲಿ ಒಂದೆರಡು ಗಿಡಗಳನ್ನು ಕಿತ್ತು ತಂದು ನಡಬಹುದಿತ್ತು ಮನೆಯಲ್ಲಿ" ಎಂದು ಉಪಾಯವೊಂದನ್ನು ಹೊರಹಾಕಿದ.
"ಇಲ್ಲಯ್ಯ ಹಾಗೆಲ್ಲ ತಂದು ನೆಟ್ಟರೆ ಗಿಡ ಬದುಕುವುದಿಲ್ಲ.ಮಾತ್ರವಲ್ಲದೆ ತುಪ್ಪಳವಿಲ್ಲದ ಪ್ರಾಣಿ ಕೆಲವು ಘಂಟೆಗಳ ಕಾಲ ನಿರಂತರವಾಗಿ ಸಸ್ಯದ ಸಂಪರ್ಕದಲ್ಲಿದ್ದರೆ ಸಾಯಲೂ ಬಹುದು"ಎಂದರು.
"ಓಹೋ ಹಾಗಾದಲ್ಲಿ ಚಂದ್ರಲೋಕಕ್ಕೆ ಹೋಗುವ ಗಗನ ಯಾನಿಗಳಂತೆ ಕವಚ ಮುಖವಾಡ ಧರಿಸಿ ಹೋಗಿ ತರಬೇಕಷ್ಟೆ " ಎಂದ.
"ಇಲ್ಲ ಹಾಗೂ ಅಲ್ಲ ನನ್ನ ಮಾತಿನ ಅರ್ಥ.ಆ ಸಸ್ಯದ ಬೀಜ ಪ್ರಸಾರವಾಗಿ ಇನ್ನೊಂದು ಸಸ್ಯ ಉತ್ಪತ್ತಿಯಾಗುವ ಜಟಿಲವಾದ ಪ್ರಕ್ರಿಯೆಯೇ ಅದರ ಅವಸಾನಕ್ಕೆ ಕಾರಣ"ಎಂದು ವಿವರಣೆಯನ್ನು ಪ್ರಾರಂಭಿಸಿದರು ಪ್ರೊಫೆಸರರು.
ಪ್ರತಾಪನಿಗೆ ಬೇಕಾಗಿದ್ದುದೂ ಅದೇ ,ನೇರವಾಗಿ ಕೇಳಿದಲ್ಲಿ ಅಜ್ಜಯ್ಯ ವಿಚಾರಗಳನ್ನು ತಿಳಿಸಲಾರ ಎಂಬುದು ಆತನಿಗೆ ಚೆನ್ನಾಗಿ ಗೊತ್ತು,ಅದಕ್ಕಾಗಿಯೇ ಅಜ್ಜಯ್ಯನನ್ನು ಹೇಗಾದರೂ ಮಾತಿನ ಜಾಲದಲ್ಲಿ ಸಿಲುಕಿಸಿ ತನಗೆ ಬೇಕಾದ ಮಾಹಿತಿಯನ್ನು ಹೊರಗೆಡಹುವಂತೆ ಮಾಡುತ್ತಿದ್ದ.
"ಎಲ್ಲ ಸಸ್ಯಗಳಂತೆ ನೇರವಾದ ಕ್ರಮದಲ್ಲಿ ಬೀಜಪ್ರಸಾರ ಈ ಸಸ್ಯದ ವಿಚಾರದಲ್ಲಿ ನಡೆಯುವುದಿಲ್ಲ.ಈ ಸಸ್ಯದ ಬೀಜಪ್ರಸಾರದ ಬಗ್ಗೆ ನನಗೆ ಮತ್ತು ದಿ|ವಿಲಿಯಮ್ ಕಿಲ್ಲೆ ಯವರಿಗೆ ಮಾತ್ರ ಗೊತ್ತಿದೆ.ಈಗ ನೀನು ಈ ವಿಚಾರವನ್ನು ತಿಳಿದ ಮೂರನೆಯವನಾಗುತ್ತಿ"
ಎಂದಾಗ ಪ್ರತಾಪನಿಗೆ ಅಜ್ಜನ ಬಳಿ ಇಂಥ ಅದೆಷ್ಟು ರಹಸ್ಯಗಳಿವೆಯೋ,ಅಜ್ಜ ರಹಸ್ಯಗಳ ಪೆಟ್ಟಿಗೆಯಂತೆಯೂ ಒಂದೊಂದು ಪೆಟ್ಟಿಗೆಯ ಒಳಗೂ ಮತ್ತೆ ಪೆಟ್ಟಿಗೆಯೂ ಅನಂತವಾಗಿ ಪೆಟ್ಟಿಗೆಗಳೋ ಎಂಬಂತೆಯೂ,ಬೀಗದ ಕೈಗಳು ತನ್ನ ಪ್ರತಿ ಪ್ರಶ್ನೆಗಳೋ ಎಂಬಂತೆ ಭಾಸವಾಯಿತು.
ಮತ್ತೆ ಪ್ರೊಫೆಸರ್ ರು ತಮ್ಮ ಮಾತಿನ ಓಘವನ್ನು ಅತ್ಯಂತ ಉತ್ಸಾಹದಿಂದ ಮುಂದುವರಿಸತೊಡಗಿದರು.
"ಕಿಲ್ಲೆಯವರು ೨೦೦೩ರಲ್ಲಿ ನಿಧನರಾದರು ಆದ್ದರಿಂದ ಇದುವರೆಗೆ ನಾನೊಬ್ಬನೇ ತಿಳಿದ ರಹಸ್ಯ,ರಹಸ್ಯವಲ್ಲ ಮಾಹಿತಿಯನ್ನು ನೀನೂ ತಿಳಿದಂತಾಗುತ್ತದೆ" ಎನ್ನುತ್ತಿದ್ದಂತೆ
"ಅಜ್ಜ ನೀನು ಹೀಗೆ ಭಾಷಣ ಬಿಟ್ರೆ ಆಗೋದಿಲ್ಲ ನನ್ನ ಪ್ರಶ್ನೆಗಳಿಗೆ ಉತ್ತರ ಕೊಟ್ಟೇ ಮುಂದುವರಿಸಬೇಕು ಇಲ್ಲವಾದಲ್ಲಿ ಗಣಪತಿ ಮಾಡಲಿಕ್ಕೆ ಹೊರಟವ ಆನೆ ಮಾಡಿದಂತಾಗುತ್ತದೆ"ಎಂದ ಪ್ರತಾಪ್ ತನ್ನ ಸಂದೇಹವನ್ನು ಪರಿಹರಿಸಲಿಕ್ಕೆ ಇದೊಂದೇ ದಾರಿ ಎಂದು ತಿಳಿದು.
"ok my dear I will clear all your doubts ask whatever you want to ask"ಎಂದು ತಮ್ಮ ಹಳೇ ಮಾದರಿಯ English ನಲ್ಲಿ ಉತ್ತರಿಸಿದರು.
"ಅಜ್ಜ first question ನಿನಗೆ ಮತ್ತು ದಿ|ಕಿಲ್ಲೆಯವರಿಗೆ ಮಾತ್ರ ತಿಳಿದಿತ್ತು,ತಿಳಿದಿದೆ sorry ತಿಳಿದಿದೆ, ತಿಳಿದಿತ್ತು ಎಂದೆಯಲ್ಲ ಹಾಗಾದಲ್ಲಿ ಬೇರೆ ಸಸ್ಯಶಾಸ್ತ್ರಜ್ಞರಿಗೆ ಇದರ ಬಗ್ಗೆ ತಿಳಿದಿಲ್ಲ ಯಾಕೆ ?"ಎಂದು ಪ್ರಶ್ನಿಸಿದ ಪ್ರತಾಪ.
"good question" ಎನ್ನುತ್ತಾ ಮುಂದುವರಿಸಿ ಅಜ್ಜಯ್ಯ,
"ಈ ಪ್ರಭೇದವನ್ನು ಅದುವರೆಗೆ ಯಾರೂ ಪತ್ತೆ ಹಚ್ಚಿರಲಿಲ್ಲ ನಾನು ಮತ್ತು ಕಿಲ್ಲೆ ನಮ್ಮ ಪಿ ಎಚ್ ಡಿ ಸಂಶೋಧನೆ ಕೈಗೊಂಡಿದ್ದಾಗ ಮಲೆನಾಡಿನ ಯಾವುದೋ ಒಂದು ಕಾಡಿನಲ್ಲಿ ಕೆಲವು samples ಸಂಗ್ರಹ ಮಾಡೋದಿಕ್ಕೆ ಹೋದವ್ರಿಗೆ
ಈ ಸಸ್ಯ ಸಿಕ್ಕಿತ್ತು ಆವಾಗ್ಲೇ ಇದು ಇನ್ನೂ ಅನ್ವೇಷಣೆ ಆಗಿಲ್ಲ ಎಂಬ ವಿಚಾರ ನಮಗೆ ಗೊತ್ತಾಗಿತ್ತು.ಕುತೂಹಲದಿಂದ ಈ ಸಸ್ಯವನ್ನೂ ಕಿತ್ತು ತರಲು ಹೊರಟಾಗ ನಮಗಿಬ್ರಿಗೂ allergy ಆಗಿ ಕೆಲವು ಎಲೆಗಳನ್ನು ಮಾತ್ರ ತರಲು ಸಾಧ್ಯವಾಯಿತು.ಅವುಗಳನ್ನು
ಪ್ರಯೋಗಕ್ಕೆ ಒಳಪಡಿಸಿ ಸ್ವಲ್ಪ ಮಾತ್ರ ಮಾಹಿತಿ ಕಲೆ ಹಾಕಿದೆವು.ಬಹುಶಃ ನನಗೆ ಹಾಗೂ ಕಿಲ್ಲೆಯವರಿಗೆ ಇದ್ದ ಮತ್ತೊಂದು ಸಂಶೋಧನೆಯ ಒತ್ತಡದಿಂದ ಈ ಸಸ್ಯದ ಬಗ್ಗೆ ಸಂಶೋಧನೆ ಮಾಡುವುದಕ್ಕೆ ಸಾಧ್ಯವಾಗಲಿಲ್ಲ.ಆದರೂ ಕಿಲ್ಲೆ ಇದರ ಬೀಜ ಪ್ರಸಾರದ ಬಗ್ಗೆ ಅಧ್ಯಯನ ಮಾಡಿ ಈ ವಿಶೇಷವಾದ ಕುತೂಹಲಕರವಾದ
ಮಾಹಿತಿಯನ್ನು ಕಂಡು ಹಿಡಿದಿದ್ದ ,ನನಗೂ ವಿವರಿಸಿದ್ದ .ಆದರೆ ನಾವು ಈ ವಿಚಾರವನ್ನು ಎಲ್ಲೂ ಬಹಿರಂಗ ಪಡಿಸಲಿಲ್ಲ.ನಾವು ಆಗ ಕೇವಲ ವಿದ್ಯಾರ್ಥಿಗಳಾಗಿದ್ದುದರಿಂದ ನಮ್ಮ ಸಂಶೋಧನೆಗೆ ಮಾನ್ಯತೆ ಸಿಗುತ್ತಿರಲಿಲ್ಲ ಎಂಬುದು ನಮ್ಮ ಭಾವನೆಯಾಗಿತ್ತು.ಮತ್ತೆ ಕೆಲವು ವರ್ಷಗಳಲ್ಲಿ ಪೀಟರ್ ಆರ್ತೊನ್ ಮತ್ತು ಮೆಹೋ ಜೆಂಗ್ಸ್ ಈ ಸಸ್ಯದ ಸಂಶೋಧನೆ ಮಾಡಿ
ಈ ಸಸ್ಯಕ್ಕೆ ಅರ್ತೊಜೆಹೋ ಎಂಬ ವೈಜ್ಞಾನಿಕ ನಾಮಕರಣ ಮಾಡಿದರು" ಎಂದು ದೀರ್ಘವಾಗಿ ವಿವರಿಸಿದರು.
"ಅಯ್ಯೋ ಅಜ್ಜಯ್ಯ ಸುಮ್ಮನೇ ಒಂದವಕಾಶ ಕಳಕೊಂಡು ಬಿಟ್ರಿ ಇಲ್ಲದಿದ್ದರೆ ಇವತ್ತು ಸಸ್ಯಕ್ಕೆ ವಿಲಿಯಂವಿಶ್ ಅಂತ ಕರೀತಿದ್ರೋ ಏನೋ" ಎಂದು ನಕ್ಕ ಪ್ರತಾಪ್.
ಅಜ್ಜನಿಗೂ ಈ ಮಾತನ್ನು ಕೇಳಿ ಸ್ವಲ್ಪ ನಗು ಬಂತು.ಮತ್ತೆ ಮುಂದುವರಿಸುತ್ತಾ ಪ್ರೊಫೆಸರ್ ರು..
"ಈ ಸಸ್ಯದ ಸಂಶೋಧನೆಯ ಬಳಿಕ ಮತ್ಯಾರೂ ಅದರ ಗೊಡವೆಗೆ ಹೋಗಲಿಲ್ಲ ಇದರ ಬಗ್ಗೆ ಒಂದೇ ಒಂದು ಗ್ರಂಥವೂ ಪ್ರಕಟವಾಗಿಲ್ಲ.ಈ ಸಸ್ಯ ರಹಸ್ಯಗುಣಗಳ ಭಂಡಾರ" ಎಂದರು.
ಪ್ರತಾಪ ಮನಸ್ಸಿನಲ್ಲಿಯೇ ಖಂಡಿತವಾಗಿಯೂ ಮುಂದೊಂದು ದಿನ ಸಾಧ್ಯವಾದಲ್ಲಿ ಈ ಸಸ್ಯದ ಬಗ್ಗೆ ಸಂಶೋಧನೆ ನಡೆಸಬೇಕೆಂಬ ಆಸೆ ಮೊಳಕೆಯೊಡೆಯಿತು.
"ಅಜ್ಜಾ ಕಿಲ್ಲೆ ತಾನೇ Non-Vegetarian Plants ಪುಸ್ತಕ ಬರೆದದ್ದು ?" ಎಂದು ಪ್ರಶ್ನೆಯೊಂದನ್ನು ಇರಿಸಿದ.
"ಹೌದು ಪ್ರತಾಪ ಆತನೇ ಬರೆದದ್ದು ಆತ ಆ ಪುಸ್ತಕ ಬರೆಯುತ್ತಿದ್ದಾಗ ನಾವು ಜತೆಯಲ್ಲೇ ಇದ್ದೆವು ನಾನೇ ಆ ಪುಸ್ತಕದ Proof Reader ಹಾಗೂ Editor" ಎಂದರು.
"ಒಹೋ ok ಈಗ ಸಸ್ಯದ ಬಗ್ಗೆ ಹೇಳ್ತಾ ಇದ್ರಲ್ಲ ಮುಂದುವರಿಸಿ" ಎಂದ.
"ಆ ಸಸ್ಯದ ಬೀಜಪ್ರಸಾರ ಅತ್ಯಂತ ಕುತೂಹಲಕರವಾದದ್ದು.ತುಪ್ಪಳವಿದ್ದ ಪ್ರಾಣಿ ಈ ಸಸ್ಯದ ಬೀಜವನ್ನು ಸೇವಿಸಿ ಮೃತವಾದರೆ ಆ ಜೀವಿಯ ದೇಹ ಕೊಳೆತಾಗ ಉಂಟಾಗುವ ಸೂಕ್ಷ್ಮ ಜೀವಿಗಳು
ಸಸ್ಯದ ಉತ್ಪತ್ತಿ ಕಾರ್ಯವನ್ನು ಮುಂದುವರಿಸುತ್ತವೆ ಬಳಿಕ ಕೊಳೆತ ಅವಶೇಷಗಳಿಂದ ಸಸ್ಯ ಎದ್ದು ಬರುತ್ತದೆ.ಸೂಕ್ಷ್ಮವಾಗಿ ಗಮನಿಸಿದರೆ ಈ ಪ್ರಭೇದದ ಸಸ್ಯಗಳ ಎಲೆಯ ಬಳಿಯಲ್ಲಿ ಇದರ ಉತ್ಪತ್ತಿಗೆ
ಕಾರಣವಾದ ಪ್ರಾಣಿಯ ಎಲುಬುಗಳು ದೊರೆಯುತ್ತವೆ"ಎಂದು ಕುತೂಹಲಕರವಾದ ಮಾಹಿತಿಯನ್ನು ನೀಡಿದರು.
"ವ್ಹಾವ್ it's so interesting ಅದ್ಭುತ ಇದಕ್ಕೇ ನನಗೆ ಸಸ್ಯಗಳು ಯಾವಗಲೂ ಏನೋ ವಿಶೇಷಗಳು ಅನ್ನಿಸುವುದು" ಎಂದ ಪ್ರತಾಪ.
"ok dear ಮಧ್ಯಾಹ್ನ ಆಯ್ತು ಇನ್ನು ತಡಮಾಡಿದರೆ ನಿಮ್ಮಜ್ಜಿ ಮತ್ತೆ ಪಾಕಶಾಸ್ತ್ರದ ೧೨ನೇ ಅಧ್ಯಾಯ 'ಊಟಕ್ಕೆ ತಡವಾಗಿ ಬಂದವರಿಗೆ ಬೈಗುಳಗಳು' ಪಾಠ ಪ್ರಾರಂಭ ಮಾಡ್ತಾಳೆ.ಬೇಗ ಹೋಗೋಣ"ಎಂದರು.
ಮರು ಮಾತಿಲ್ಲದೆ ಗಾಢಯೋಚನೆಯೊಂದಿಗೆ ಅಜ್ಜನೂ ಮೊಮ್ಮಗನೂ ಊಟದ ಕೋಣೆಗೆ ಹೆಜ್ಜೆ ಹಾಕಿದರು.
ಮಧ್ಯಾಹ್ನ ಊಟದ ಬಳಿಕ ವಿಶ್ರಾಂತಿ ಪಡೆಯುತ್ತಿದ್ದ ಪ್ರತಾಪನಿಗೆ ಒಂದೇ ಸಮನೆ ಕಾಡಿನ ನೆನಪೂ ವೀಕ್ಷಿತಾಳ ನೆನಪೂ ಕಾಡತೊಡಗಿತು.
"ಅಜ್ಜಯ್ಯಾ ಪೇಟೆಗೆ ಹೋಗಿ ಮನೆಗೂ ಅವಳಿಗೂ ಫೋನ್ ಮಾಡಿ ಬರುತ್ತೇನೆ.ಮನೆಯ ಫೋನ್ ಹಾಳಾಗಿದೆ" ಎಂದು ನೇರವಾಗಿ ತನ್ನ ಬೈಕ್ ಹತ್ತಿ ಪೇಟೆ ಕಡೆ ಹೊರಟ.
"Exchange ಗೂ ಹೋಗಿ Complaint ಕೊಟ್ಟು ಬಾ ಮಾರಾಯಾ"ಎಂದು ಅಜ್ಜ ಕೂಗಿದ್ದು ಪ್ರತಾಪ್ ನಿಗೆ ಕೇಳಿಸಿತ್ತೋ ಇಲ್ಲವೋ ಅವನಿಗೇ ಗೊತ್ತು.
ಎರಡು ಘಂಟೆಗಳ ಬಳಿಕ ಜೋಲು ಮುಖ ಮಾಡಿಕೊಂಡು ಕೈಯಲ್ಲಿ ಕೋಲೊಂದನ್ನು ಹಿಡಿದು ಬೀಸುತ್ತಾ ಬಂದ ಪ್ರತಾಪ.
"ಏನಾಯ್ತು ಮಗೂ Telephone ಕಂಬ ಏನದ್ರೂ ಬಿತ್ತಾ ? ಬೈಕ್ ಎಲ್ಲಿದೆ ?"ಎಂದು ನಕ್ಕರು ಪ್ರೊಫೆಸರ್
"Bike tyre puncture ಅಜ್ಜಾ.ಫೋನ್ ಎಲ್ಲರಿಗೂ ಮಾಡ್ದೆ ...ಆದ್ರೆ ಪೇಟೆಗೆ ಸ್ವಲ್ಪ ದೂರ ಇರೋವಾಗ ಪಾಪಿ ಕೈಕೊಡ್ತು
ತಳ್ಳಿಕೊಂಡು ಹೋಗ್ಬೇಕಾಯ್ತು .Patch shop ನೋನು ನಾಳೆ ಬಾ ಇವತ್ತು full busy ಅಂದ.Double charge ಕೊಡ್ತೇನೆ ಅಂದ್ರೂ ಕೇಳಲಿಲ್ಲ" ಎಂದು,ತನ್ನ ಹೊಸತಲ್ಲದಿದ್ದರೂ ಹಳತೂ ಅಲ್ಲದ ಬೈಕ್ ನ ಜತೆ ಪಂಕ್ಚರ್ ಶಾಪ್ ಸುಬ್ರಾಯನ ಮೇಲೂ ತನ್ನ ಅಸಹನೆಯನ್ನು ವ್ಯಕ್ತಪಡಿಸಿದ.
"ಅವ್ನು ಹಾಗೇ ಕಣೋ ತುಂಬಾ Strict and sincere ಮನುಷ್ಯ.ಕೆಲ್ಸಾನೂ ಚೆನ್ನಾಗೇ ಮಾಡ್ತಾನೆ.ನಮ್ಮ Commander ಗೂ ಅವ್ನೇ ಔಷಧಿ ಮಾಡೋದು.ಹಾಗಾಗಿ ಅದು ಕೆಡೋದೇ ಅಪರೂಪ.Smooth ಆದಗಿ ಓಡುತ್ತೆ "
ಎಂದು ತನ್ನ ಜೀಪನ್ನೂ ಪಂಕ್ಚರ್ ಸುಬ್ರಾಯನನ್ನೂ ಹೊಗಳಿದರು ಪ್ರೊಫೆಸರ್ ರು.
"ಒಹೋಹೋ, ನಾಳೆ ಅಲ್ಲಿ ತನ್ಕ ನಡೀಬೇಕಲ್ಲ ;ಅಜ್ಜ ಯಾರನ್ನಾದ್ರೂ ನನ್ನಜೊತೆ ಕಳ್ಸು.ಯಾರಾದ್ರೂ ಆಳುಗಳೂ ಆಗ್ಬಹುದು,ಬೈಕ್ ನ ಮೇಲೆ ಕುಳಿತುಕೊಳ್ಳೋಕೆ ಅಭ್ಯಾಸ ಇದ್ರೆ ಸಾಕು,ಮತ್ತೆ ಬಿದ್ದು ಕಯ್ಯೊ ಕಾಲೋ ಮುರ್ಕೊಂಡ್ರೆ ನಂಗೊತ್ತಿಲ್ಲ"ಎಂದು ತನ್ನ ಬೈಕ್ ರೈಡಿಂಗ್ ಪರಿಣತಿಯನ್ನು ಅಜ್ಜನ ತಲೆಗೆ ತುರುಕಿಸಲೆತ್ನಿಸಿದ ಪ್ರತಾಪ.
"ಆ ರಮೇಶನ್ನ ಕರ್ಕೊಂಡ್ ಹೋಗೋ.ನಿನಗಿಂತ ಎರಡು ವರ್ಷ ಡೊಡ್ಡವನು ಥೇಟ್ ನಿನ್ನ ತರಾನೆ ಮಂಗ ಬುದ್ಧಿ ತೋರ್ಸೋದ್ರಲ್ಲಿ ನಿಂಗೇ ಗುರು! ಒಳ್ಳೇ ಜೋಡಿ" ಎಂದು ಪ್ರತಾಪನನ್ನು ಕೆಣಕಿದರು ಪ್ರೊಫೆಸರ್ ರು
"ಒಕೆ ಅಜ್ಜಯ್ಯ ನೀನು ಏನಾಗ್ತೀಯ ಹಾಗಾದ್ರೆ ಅಂತ ಯೋಚನೆ ಮಾಡ್ತಾ ಇರು ಮಂಗಕ್ಕಿಂತ ಮೊದಲಿನದ್ದು"ಎಂದು ಕಟಕಟನೆ ನಕ್ಕ
"ಆಯ್ತು ಮರೀ ನಾಳೆ ಮತ್ತೇನೂ ಎಡವಟ್ಟು ಮಾಡ್ಕೋಬೇಡ.ನಾಳೆ ಒಂದು Important ವಿಷ್ಯ ನಿಂಗೆ ಸಂತೋಷವಾಗೋವಂಥಾದ್ದು" ಎನ್ನುತ್ತಾ ಕುತೂಹಲದ ಕಾದಂಬರಿಯ ಮತ್ತೊಂದು ಅಧ್ಯಾಯಕ್ಕೆ ಮೇಲ್ಪಂಕ್ತಿ ಬರೆದರು ಪ್ರೊಫೆಸರ್ ರು.
"ಅಜ್ಜಾ ನೀವು ಹಾಗೆಲ್ಲ ಸಂಶೋಧನೆ ಮಾಡಿ ಹೇಳ್ಬೇಕಾಗಿಲ್ಲ ಈಗ್ಲೇ ಹೇಳು,ಮತ್ತೆ ನಿಂಗೆ ಮರ್ತೋದ್ರೆ ಕಷ್ಟ.ವಿಷ್ಯ ಎಲ್ಲಾದ್ರೂ ನಿನ್ನ ಬಿಳೀ ತಲೆಕೂದ್ಲೆಡೆಯಲ್ಲಿ ಕಸದ ಹಾಗೆ filter ಆಗಿ ಉಳ್ಕೊಂಡ್ರೆ ಏನ್ಮಾಡೋದು..?" ಎನ್ನುತ್ತಾ ಅಜ್ಜನ ಗುಟ್ಟನ್ನು ಇಂದೇ ಹೊರಗೆಡಹಲೆತ್ನಿಸಿದ ಪ್ರತಾಪ್.
"ಇಲ್ಲ ಮರೀ ನಾಳೇನೇ ಹೇಳೋದು.ನಾಳೆ ಬೆಳಗ್ಗೆ "ಎಂದರು ಪ್ರೊಫೆಸರ್.
ಅಜ್ಜ ಇನ್ನು ಖಂಡಿತವಾಗಿ ಹೇಳಲಾರರು ಎಂಬುದು ಪ್ರತಾಪ್ ನಿಗೆ ಗೊತ್ತಿತ್ತು.ಆದ್ದರಿಂದ
"ok sir ನಿಮ್ಮ accident ರಮೇಶ್ ಎಲ್ಲಿ ಸಿಗ್ತಾನೆ ? ಅವಂಗೊಂದು ವಾರಂಟ್ ಕಳ್ಸು ನೋಡೋಣ"ಎಂದ,ಆತನನ್ನು ಕರೆಸು ಎನ್ನುವ ಧಾಟಿಯಲ್ಲಿ
"ಅವನ್ನ ಅಜ್ಜಿ ರಾತ್ರಿ ಅಡುಗೆಗೆ ದೀವು ಹಲಸು ತರಲಿಕ್ಕೆ ಅಂತ ತೋಟಕ್ಕೆ ಕಳ್ಸಿದ್ದಾಳೆ ಕೆಳಗಡೆ ತೋಟದಲ್ಲಿರ್ಬೇಕು ನೋಡು" ಎಂದರು.
"ವಾವ್ ಹಾಗಾದ್ರೆ ನನ್ನಂತೆ ಅವನಿಗೂ ಮರ ಹತ್ತೋ ಚಟ ಇದೆ , ಜೋಡಿ suit ಆಗುತ್ತೆ " ಅಂದುಕೊಂಡ ಪ್ರತಾಪ.
ಕ್ಷಣ ಮಾತ್ರದಲ್ಲಿ ರಮೇಶನನ್ನು ಹುಡುಕುತ್ತಾ ರಮೇಶ ಹತ್ತಿದ್ದ ಮರದ ಬುಡದಲ್ಲಿ ನಿಂತಿದ್ದ ಪ್ರತಾಪ.ಎತ್ತ್ತರದ ಮರದ ತುದಿಯಲ್ಲಿದ್ದ ರಮೇಶನನ್ನು ಕಾಣುತ್ತಾ,ಅಜ್ಜ ಹೇಳಿದ್ದು ಸರಿ ಈತ ಕೋತಿ ವಿದ್ಯೆಯಲ್ಲಿ ನನ್ನನ್ನೂ ಮೀರಿಸುತ್ತಾನೆ ಎಂದುಕೊಂಡ.
"ಓಹೋಯ್ ಆಕ್ಸಿಡೆಂಟ್.... ರಮೇಶಾ ಆಕ್ಸಿಡೆಂಟ್...ರಮೇಶಾ" ಎಂದು ಕೂಗಿದ
"ಯಾರ್ ಸ್ವಾಮೀ ಅದು ? ಆಕ್ಸಿಡೆಂಟಾಗಿದ್ಯಾ ಪೇಟೇಲಾ ? ಯಾರಿಗೂ ಏಟಾಗಿಲ್ಲ ತಾನೇ ?" ಎಂದ .ರಮೇಶನ ಪ್ರತಿಕ್ರಿಯೆಗೆ ಪ್ರತಾಪನಿಗೆ ಆಶ್ಚರ್ಯದ ಜತೆ ನಗುಬಂತು"
"ಅಯ್ಯೋ ಹೊಸ ಫಿಲಂ ಕಣಯ್ಯಾ,ನೀನೇ ಅಲ್ವಾ ಡೈರೆಕ್ಟರ್ ?" ಎಂದ.
"ಓಹೋ ಹಾಗನ್ನಿ ಮತ್ತೆ" ಅಂತ ಅಷ್ಟೆತ್ತರದಿಂದ ಕೆಳಕ್ಕೆ ನೋಡಿ ಹಲ್ಕಿರಿದು ನಕ್ಕ.
"ಬೇಗ ಕೊಯ್ದು ಕೆಳಗೆ ಬಾ,ನಾಳೆ ನಂಜೊತೆ ಪೇಟೆಗೆ ಬರ್ತೀಯಾ ಅಂತ ಕೇಳೋಕ್ಕೆ ಬಂದೆ" ಎಂದ ಪ್ರತಾಪ್
ಒಂದೆರಡು ನಿಮಿಷಗಳಲ್ಲಿ ಕಾಯಿಗಳೂ ರಮೇಶನೂ ಪ್ರತಾಪನ ಮುಂದೆ ಪ್ರತ್ಯಕ್ಷ
"ಏನಯ್ಯಾ ಪೇಟೆ ಅಂದ ಕೂಡಲೆ girl friend ನ meet ಆಗೋಕೆ ಹೋಗೋದು ಅನ್ನೊ ತರಹ ಆಡ್ತೀಯಲ್ಲ" ಎಂದು ಛೇಡಿಸಿದ ಪ್ರತಾಪ.
"ಇಲ್ಲ ಸ್ವಾಮೀ ,ಅಜ್ಜಯ್ಯನ ಹತ್ರ ಕೇಳಿದ್ರಾ ನಾನಿಲ್ದಿದ್ರೆ ಅವ್ರಿಗೆ ತೋಟದ ಕೆಲಸ ನಡೆಯೋದೇ ಇಲ್ಲ ಅನ್ಸುತ್ತೆ,ಅವರ permission ತಗೊಂಡ್ರೆ ಮಾತ್ರ ಬರೋದು" ಎಂದು ತನ್ನ ಸ್ವಾಮಿನಿಷ್ಠೆಯನ್ನು,ಆಂಗ್ಲಾಭಾಷಾಪದಪ್ರಯೋಗದೊಂದಿಗೆ ಪ್ರಕಟಪಡಿಸಿದ.
"ಅವರೇ ಕಣಯ್ಯ ನಿನ್ನನ್ನು suggest ಮಾಡ್ದೋರು,ಓಕೆ ನಿಂಗೆ ಬೈಕ್ ನಲ್ಲಿ ಕೂತ್ಕೊಳ್ಳೋ ಧೈರ್ಯ ಅಥವಾ ಅಭ್ಯಾಸ ಯಾವ್ದಾದ್ರೂ ಒಂದಿದ್ರೂ ನಂಜೊತೆ ಬರಬಹುದು" ಎಂದ.
"ಬೈಕ್ ನಿಂತಿರೋವಾಗ ಕೂತು ಅಭ್ಯಾಸ ಇದೆ ಸ್ವಾಮೀ ಆದ್ರೆ ಹೋಗ್ತಾ ಇರೋವಾಗ ಕೂತು ಅಭ್ಯಾಸ ಸ್ವಲ್ಪ ಕಡ್ಮೇನೆ" ಎಂದ.
"ಹೋಗಲಿ ನನ್ನ ಜತೆ ಬರೋಕೆ ಧೈರ್ಯ ಇದೆಯೋ ?" ಪ್ರಶ್ನೆ ಪ್ರತಾಪನದು
"ಏನ್ ಸ್ವಾಮೀ ಬರದೆ ,ಆದ್ರೆ ಹೋದವ್ನು ಹೋದಾಗ ಇದ್ದ ಹಾಗೆ ಒಂಚೂರೂ damage ಆಗದೆ ವಾಪಾಸ್ ಬರಬೇಕು ನೋಡಿ" ಎಂದಾಗ ಪ್ರತಾಪ ಉಕ್ಕಿ ಬಂದ ನಗೆಯನ್ನು ತಡೆಯುತ್ತಾ,
"ಹೋಗಾವಾಗ ಎನೂ damage ಆಗೋಲ್ಲ ಆದ್ರೆ ಬರೋವಾಗ ಆಗೋ chance ಸ್ವಲ್ಪ ಜಾಸ್ತಿ ಯಾಕಂದ್ರೆ ಬೈಕ್ ರಿಪೇರ್ ಗೆ ಹೋಗಿದೆ ನಡ್ಕೊಂಡು ಹೋಗಿ ಬೈಕ್ ನಲ್ಲಿ ಬರೋದು" ಎಂದ.
"ಓಕೆ life ನಲ್ಲಿ ಸ್ವಲ್ಪ ರಿಸ್ಕ್ ತಗೋಬೇಕು ಇಲ್ಲಾಂದ್ರೆ ಗಮ್ಮತ್ತಿರೋದಿಲ್ಲ" ಎಂದ ರಮೇಶ
"ವಾವ್ ನೀನೂ ನಾನೂ ಒಳ್ಳೆ ಜೋಡಿ ಕಣಯ್ಯ.ನೀನ್ ಹೇಳಿದ್ದಕ್ಕಿಂತ ಸ್ವಲ್ಪ ಜಾಸ್ತಿನೇ ರಿಸ್ಕ್ ತಗೊಳ್ಳೋನು ನಾನು" ಎನ್ನುತ್ತಾ ತಮ್ಮಿಬ್ಬರ ಅಭಿಪ್ರಾಯಗಳಲ್ಲಿದ್ದ ಹೋಲಿಕೆಯನ್ನು ತಿಳಿಸಲೆತ್ನಿಸಿದ ಪ್ರತಾಪ
"ಎಷ್ಟೊತ್ತಿಗೆ ಬರಲಿ ಮನೆ ಹತ್ರ ?" ಉತ್ಸಾಹದಿಂದ ಪ್ರಶ್ನಿಸಿದ ರಮೇಶ
"9.30 ಗೆ ಬಾ ನಾನು ready ಆಗಿರ್ತೇನೆ .ಬೆಳಗ್ಗೆ ಹೋಗಿ ಪೇಟೆ ಎಲ್ಲಾ ಸುತ್ತಾಡ್ಕೊಂಡು ಬರೋಣ" ಕೊನೆಯದಾಗಿ ತಿಳಿಸಿ ರಮೇಶನ ಉತ್ತರಕ್ಕೂ ಕಾಯದೆ ತೋಟದ ಪ್ರದಕ್ಷಿಣೆಗಾಗಿ ಮುಂದಕ್ಕೆ ಹೊರಟ ಪ್ರತಾಪ.ರಮೇಶ ಬಂದೇ ಬರುತ್ತಾನೆಂದು ಪ್ರತಾಪನಿಗೆ ತಿಳಿದಿತ್ತು.
"ಆಯ್ತು ಸ್ವಾಮಿ,9.25ಕ್ಕೆ ಸರಿಯಾಗಿ ಬಂದ್ಬಿಡ್ತಾನೆ ರಮೇಶ" ಎಂದು ಕೂಗಿದ ಪ್ರತಾಪನ ತಲೆ ದೃಷ್ಟಿಯಿಂದ ಮರೆಯಾಗುವುದರ ಮೊದಲೇ.
ತೋಟವೆಲ್ಲಾ ಸುತ್ತಾಡಿ ಸಂಜೆ ೫.೩೦ ರ ಹೊತ್ತಿಗೆ ಪ್ರತಾಪ ಮನೆಗೆ ವಾಪಸಾದ.
"ಎಲ್ಲಿ ಹೋಗಿದ್ಯೋ ಪ್ರತಾಪ ನಿಂಗೋಸ್ಕರ ಕಾದು ಕಾದು ಅಜ್ಜನೂ ಚಹ ಕುಡಿದಿಲ್ಲ ಬನ್ನಿ ಇಬ್ಬರೂ" ಎನ್ನುತ್ತಾ ಹಲಸಿನಕಾಯಿ ಹಪ್ಪಳ,ಚಿಪ್ಸ್ ಜತೆ ಚಹಾ ತಂದಿಟ್ಟರು ಪ್ರತಾಪ್ ನ ಅಜ್ಜಿ ಮಂದಾಕಿನಿ.
ಮೂವರೂ ಅನೌಪಚಾರಿಕ ಮಾತುಕತೆಯಲ್ಲಿ ತೊಡಗಿಕೊಂಡರು.
ಮರುದಿನ ಬೆಳಗ್ಗೆ 6.30 ರ ಹೊತ್ತಿಗೆ ಪಂಚೆ ಉಟ್ಟು ಬರೀ ಮೈಯಲ್ಲಿ ,ಕೈಯಲ್ಲಿ ಒಂದು ಟವಲ್ ,ಸೋಪ್ box ಹಿಡಿದುಕೊಂಡು brush ಮಾಡುತ್ತಾ ರಮೇಶನ ಮನೆ ಮುಂದೆ ಪ್ರತ್ಯಕ್ಷನಾಗಿದ್ದ ಪ್ರತಾಪನಿಗೆ ರಮೇಶನ ಮಣ್ಣಿನ ಗೋಡೆಯ, ಮುಳಿ ಹುಲ್ಲಿನ ಮಾಡಿನಿಂದ ಮಾಡಿದ ಮನೆ ಅಪೂರ್ವ ಕಲಾಕೃತಿಯಂತೆ ಕಂಡಿತು.
"ರಮೇಶಾ....... ರಮೇಶಾ......." ಎರಡು ಬಾರಿ ದೀರ್ಘವಾಗಿ ಪ್ರತಾಪ್ ಕೂಗುವುದರೊಳಗೆ ರಮೇಶ ಹೊರಗಡೆ ಬಂದು ಪ್ರತಾಪ್ ನ ಹೊಸ ಅವತಾರ ಕಂಡು ಆಶ್ಚರ್ಯದಿಂದ ಪ್ರತಾಪ್ ನನ್ನು ನೋಡಿದ.
"ಏನ್ ಸ್ವಾಮೀ ನಮ್ಮನೇಲಿ ಸ್ನಾನ ಮಾಡೋಕೆ ಬಂದ್ರಾ ?, ಮನೇಲಿ ಬಿಸಿನೀರಿಗೆ ನಿನ್ನೆ ರಾತ್ರಿನೇ ಬೆಂಕಿ ಹಾಕಿ ಬಂದಿದ್ನಲ್ಲ ?" ಎಂದು ಪ್ರಶ್ನಿಸಿದ
"ಹಾಗೇನಿಲ್ಲ ,ನದಿ ಇದೆಯಂತಲ್ಲ ಹತ್ತಿರದಲ್ಲಿ ,ನಡಿ ಸ್ವಲ್ಪ ಈಜಾಡಿ ಬರೋಣ" ಎಂದ ಪ್ರತಾಪ್.
"ಇಷ್ಟು ಬೆಳಗ್ಗೆ ಯಾರಾದ್ರೂ ಈಜಾಡೋಕೆ ಹೋಗ್ತಾರ ಸುಮ್ನೆ ತಮಾಷೆ ಮಾಡ್ಬೇಡಿ" ಎಂದ ರಮೇಶ
"ತಮಾಷೆ ಅಲ್ಲಯ್ಯ serious ಆಗಿ ಹೇಳ್ತಾ ಇರೋದು.ನಿಂಗೇನೂ ಒತ್ತಾಯ ಇಲ್ಲ ನಾನೊಬ್ನೆ ಈಜಾಡ್ತೇನೆ ನೀನು ಬೇಕಾದ್ರೆ ದಡದ ಮೇಲೆ ಕುಳಿತಿರು,ನದೀನಾದ್ರು ತೋರ್ಸು ಮಾರಾಯಾ" ಎಂದ
"ಸರಿ ನಡೀರಿ.." ಎನ್ನುತ್ತಾ ತನ್ನ ತಾಯಿಗೆ ತಿಳಿಸಿ ಪ್ರತಾಪನ ಜತೆಗೆ ನದಿಯ ಕಡೆಗೆ ಹೊರಟ.
"ಒಹ್ ಕ್ಯಾಮರಾನೂ ತಂದಿದೀರ ನದೀ ದಡದಲ್ಲಿ ನಂದೂ ಒಂದೆರಡು ಫೋಟೋ ತೆಗೀರಿ" ಮನವಿ ಸಲ್ಲಿಸಿದ ರಮೇಶ
"ಆಯ್ತಪ್ಪ ಒಂದಲ್ಲ ಹತ್ತು ತೆಗೆಯೋಣ" ಎನ್ನುತ್ತಾ ಅಲ್ಲಲ್ಲಿ ನಿಂತು ದಾರಿಯ ಇಕ್ಕೆಲಗಳಲ್ಲಿ ಪೊದೆಗಳಲ್ಲಿನ ಕೀಟಗಳ,ಇರುವೆ ಗೂಡುಗಳ,ಚಿಗುರು,ಹಣ್ಣು,ಹೂಗಳ ಚಿತ್ರಗಳನ್ನು ಸಂಗ್ರಹಿಸುತ್ತಾ ನದಿಯಬಳಿ ತಲುಪಲು ಒಂದು ಘಂಟೆ ಬೇಕಾಯ್ತು.
"ನೋಡಿ ಸ್ವಾಮೀ ನಮ್ಮ ನಿರ್ಮಲಾ ನದಿ ಹೆಸರಿನ ಹಾಗೇ ಕ್ಲೀನು" ಎಂದು ಹಲ್ಕಿರಿದ ರಮೇಶ.
"ಅಲ್ಲ ಮಾರಾಯ ನೀನು ಎಷ್ಟು ಓದಿದ್ದೀಯ ಭಾರೀ ಇಂಗ್ಲೀಷ್ ಮಾತಾಡ್ತೀಯಲ್ವಾ ?" ಕುತೂಹಲದಿಂದ ಪ್ರಶ್ನಿಸಿದ ಪ್ರತಾಪ.
"PUC First Class Pass ಆಗಿದ್ದೇನೆ" ಹೆಮ್ಮೆಯಿಂದ ಉತ್ತರಿಸಿದ ರಮೇಶ.
"ಓಹೋ ಮತ್ಯಾಕೋ college ಗೆ ಹೋಗಿಲ್ಲ ?" ಸಹಜವಾಗಿಯೇ ಪ್ರಶ್ನಿಸಿದ ಪ್ರತಾಪ.
"ನಂಗೆ ವಿದ್ಯಾಭ್ಯಾಸದಲ್ಲಿ ಆಸಕ್ತಿನೂ ಇಲ್ಲ ಮನೇಲಿ ಅನುಕೂಲಾನೂ ಇಲ್ಲ ಅಜ್ಜ ಸಹಾಯ ಮಾಡೋಕೆ ತಯಾರಿದ್ರು.ನಾನೇ ಬೇಡ ಅಂದೆ.ನಂಗೆ ತೋಟದಲ್ಲಿ ಕೆಲಸ ಮಾಡೋದು ಮರಗಿಡಗಳ ಜತೆ ಹಸಿರಿನ ಮಧ್ಯೆ ಕಾಲ ಕಳೆಯೋದು ಅಂದ್ರೆ ತುಂಬಾ ಇಷ್ಟ"ಎನ್ನುತ್ತಾ ಪರಿಸರದ ಬಗೆಗಿನ ತನ್ನ ಒಲವನ್ನು ವ್ಯಕ್ತಪಡಿಸಿದ ರಮೇಶ.
"ಸರಿ ಇಲ್ಲೇ ಇಳೀರಿ ನೀರಿಗೆ,ಕುತ್ತಿಗೆ ಮಟ್ಟ ನೀರಿದೆ ಸಾಕಲ್ವಾ ?" ಎನ್ನುತ್ತಾ ಒಂದು ಕಡೆ ಜಾಗ ಸೂಚಿಸಿದ ರಮೇಶ
"ಛೆ ಛೆ ನನ್ನನ್ನ ಹೀಗೆ ತಮಾಷೆ ಮಾಡ್ಬೇಡಯ್ಯ ನಾನು ಮುಳುಗೋದಕ್ಕಿಂತ ಒಂದೆರಡು ಅಡಿಯಾದ್ರೂ ಹೆಚ್ಚೇ ಇರಬೇಕು ನೀರು, ಹೆಚ್ಚಿದ್ದರೆ ಅಡ್ಡಿಯೇನಿಲ್ಲ,ಈಜೋಕೆ ಬರೋದಿಲ್ಲ ಅಂದ್ಕೊಂಡಿದ್ದೀಯ ?" ಎನ್ನುತ್ತಾ ತನ್ನ ಈಜಿನ ನೈಪುಣ್ಯವನ್ನು ಕೀಳಂದಾಜಿಸಿದ್ದ ರಮೇಶನ ಪ್ರತಿಕ್ರಿಯೆಯನ್ನು ನಿರೀಕ್ಷಿಸತೊಡಗಿದ.
"ಏನಾದ್ರೂ ಹೆಚ್ಚು ಕಮ್ಮಿ ಮಾಡ್ಕೊಂಡೀರ ಮತ್ತೆ ನಾನೂ ಬರ್ತೇನೆ ನಿಮ್ಮ safety ಗೆ, ಓ ಆ ಕಡೆ ಹೋಗೋಣ ನಿಮ್ಮ ಲೆಕ್ಕದಷ್ಟು ನೀರಿದೆ ಅಲ್ಲಿ " ಎನ್ನುತ್ತಾ ಪ್ರತಾಪನ ಬಟ್ಟೆಗಳನ್ನೂ ಇನ್ನಿತರ ವಸ್ತುಗಳನ್ನೂ ಹಿಡಕೊಂಡ ರಮೇಶ.ನಿಧಾನವಾಗಿ ನಡೆಯುತ್ತಾ ಇಬ್ಬರೂ ದೈತ್ಯ ಬಂಡೆಗಳೆಡೆಗೆ ನುಸುಳಿ ಮರೆಯಾದರು.ನಿರ್ಮಲಾ ನದಿ ಇಬ್ಬರ ಮಾತುಗಳನ್ನು ಕೇಳಿಯೂ ಕೇಳಿಸಿಕೊಳ್ಳದವರಂತೆ ತನ್ನಷ್ಟಕ್ಕೆ ಹರಿಯುತ್ತಿತ್ತು.
..................
ಶಿವಾಜಿಪುರದ ಸಂತೆ ಎಲ್ಲರೂ ತಮ್ಮ ತಮ್ಮ ವ್ಯವಹಾರಗಳಲ್ಲಿ ತಮ್ಮನ್ನೇ ಮರೆತು ತೊಡಗಿಕೊಂಡಿದ್ದಾರೆ. ಮಹಿಳೆಯರು ವ್ಯಾಪಾರಿಗಳೂ ಒಬ್ಬರಿಗೊಬ್ಬರು ಸೋಲಲೊಪ್ಪದೆ ಚೌಕಾಶಿ ಸ್ಪರ್ಧೆಯಲ್ಲಿ ಲೋಕವನ್ನೇ ಮರೆತು ತೊಡಗಿಕೊಂಡಿದ್ದಾರೆ.ಮೋಟಾರು ವಾಹನಗಳ ಓಡಾಟ ಅತ್ಯಂತ ವಿರಳವಾಗಿತ್ತು. ಸಮಯ ಹನ್ನೊಂದರ ಸಮೀಪವಾದರೂ ಚಳಿಗಾಲದ ಬೆಳಗಿನಂತೆ ಪರಿಸರ ತಂಪಾಗಿತ್ತು.ಸಂತೆ ದೊಡ್ಡದಾಗಿದ್ದರೂ ಓಡಾಡುತ್ತಿದ್ದ ಜನರ ಸಂಖ್ಯೆ ವಿರಳವಾಗಿತ್ತು.ಆಧುನಿಕ ಯುಗದ ಪ್ರತಿನಿಧಿಗಳೇ ಆಗಿದ್ದರೂ ಸಂತೆಯಲ್ಲಿದ್ದ ಬಹುತೇಕ ಮಂದಿ ಹಳ್ಳಿಯ ಉಡುಗೆಗಳನ್ನೇ ಸಂತಸದಿಂದ ಧರಿಸಿದ್ದರು.ಯಾವುದೇ ಅವಸರಗಳಿಲ್ಲದೆ,ಶಾಂತವಾಗಿ,ಪ್ರೇಮಭಾವದಿಂದ ವ್ಯವಹರಿಸುತ್ತಿದ್ದರು.ಯಾವುದೇ ರೀತಿಯ ವಸ್ತುಗಳೇ ಆಗಲಿ ಸೂಜಿಯಿಂದ ತೊಡಗಿ ಕಪಾಟಿನ ವರೆಗೆ ಎಲ್ಲಾ ವಸ್ತುಗಳೂ ಸಂತೆಯಲ್ಲಿ ದೊರಕುತ್ತಿದ್ದವು.ಶಿವಾಜಿಪುರದ ಸಂತೆ ಸುತ್ತ ಮುತ್ತಲಿನ ಊರುಗಳಲ್ಲೆಲ್ಲಾ ಪ್ರಸಿದ್ಧವಾಗಿತ್ತು.ಪ್ರತಾಪನೂ ರಮೇಶನೂ ಸಂತೆಯ ದಾರಿಯಾಗಿಯೇ ಸುಬ್ರಾಯರ ಶಾಪ್ ಗೆ ಹೋಗುವುದಾಗಿ ತೀರ್ಮಾನವಾಗಿದ್ದರಿಂದ ಆ ದಾರಿಯಾಗಿ ಬಂದಿದ್ದರು.
ಇಬ್ಬರೂ ಸಂತೆಯ ಅವರ್ಣನೀಯ ವಾತಾವರಣದಲ್ಲಿ ಅಪರಿಚಿತರಂತೆ ಕಂಡರೂ ತಾವೂ ಅಲ್ಲಿರುವವರಲ್ಲಿ ಒಬ್ಬರೆಂಬಂತೆ ಅವರ ಜತೆ ಬೆರೆತು ಹೋಗಲೆತ್ನಿಸಿದರು.
ಪ್ರತಾಪ್ ನೇರವಾಗಿ ಹೆಣ್ಮಕ್ಕಳಿಗೆ ಸಂಬಂಧಪಟ್ಟ ಬಳೆ,ಮಣಿಸರ,ಓಲೆ ಇತ್ಯಾದಿ ವಸ್ತುಗಳ ಅಂಗಡಿಯೊಂದರ ಬಳಿ ನಿಂತ.ರಮೇಶನಿಗೆ ಪ್ರತಾಪನ ವರ್ತನೆಯ ಒಳಗೂ ಹೊರಗೂ ಒಂದೂ ಅರ್ಥವಾಗದೆ ಮೌನವಾಗಿ ನೋಡುತ್ತಾ ನಿಂತಿದ್ದ.ಪ್ರತಾಪ್ ವೀಕ್ಷಿತಾಗೋಸ್ಕರ ಕೆಲವು ಗಾಜಿನ ಬಳೆಗಳನ್ನೂ ಎರಡು ಜತೆ ಕಿವಿಯೋಲೆಗಳನ್ನೂ ಕೊಂಡುಕೊಂಡ.ಇವೆಲ್ಲವನ್ನು ಗಮನಿಸಿದ ರಮೇಶನಿಗೆ ತುಸು ಸಂಶಯದ ವಾಸನೆ ಹತ್ತಿತು,ಆದರೂ ಒತ್ತರಿಸಿ ಬರುತ್ತಿದ್ದ ಪ್ರಶ್ನೆಗಳ ಪ್ರವಾಹಕ್ಕೆ ಮೌನದ ಅಣೆಕಟ್ಟೆ ಕಟ್ಟಿ ಸುಮ್ಮನಿದ್ದ.
ಸುಬ್ರಾಯರ ಜತೆ ಒಂದರ್ಧಘಂಟೆ ಹರಟಿದ ಪ್ರತಾಪ್ ಬೈಕ್ ಪಡೆದು ಹೊರಟಾಗ ಸುಬ್ರಾಯರಿಗೂ ಪ್ರತಾಪ್ ಇಷ್ಟವಾಗಿದ್ದ.ರಮೇಶನನ್ನು ಬೈಕ್ ನಲ್ಲಿ ಕೂರಿಸಿ ವಾಯುವೇಗದಲ್ಲಿ ಹೊರಟ ಪ್ರತಾಪನಿಗೆ ರಮೇಶನ ತಲೆಯಲ್ಲಿ ಸಂಶಯದ ಪಿಶಾಚಿ ಗೂಡುಕಟ್ಟಿದೆಯೆಂಬುದು ಖಚಿತವಾಗಿತ್ತು.ಎಲ್ಲದರ ಬಗ್ಗೆ ಪ್ರಶ್ನಿಸುವ ರಮೇಶ ಈ ವಿಚಾರದ ಬಗ್ಗೆ ಪ್ರಶ್ನಿಸಿರಲಿಲ್ಲ,ಆದ್ದರಿಂದ ಪ್ರತಾಪನೇ ಮೌನವನ್ನು ಮುರಿಯುತ್ತಾ
"ರಮೇಶಾ... ಓಲೆ ಬಳೆ ಅಜ್ಜಿಗೆ ಸರಿಯಾಗೊತ್ತಲ್ವೇನೋ ?" ಎಂದ
"ಅಜ್ಜಿ ಕೈಗೆ ಇಷ್ಟು ಸಣ್ಣ ಬಳೇನಾ ? ಮತ್ತೆ ಅಜ್ಜಿ ಚಿನ್ನದೋಲೆ ಬಿಟ್ರೆ ಬೇರೆ ಓಲೆ ಹಾಕಿದ್ದು ನಾನು ಕಂಡೇ ಇಲ್ಲ.ಬೇರೆ ಯಾರ್ಗೋ ತಗೊಂಡಿದ್ದು ಗೊತ್ತಾಯ್ತು" ಖಚಿತವಾಗಿ ಉತ್ತರಿಸಿದ ರಮೇಶ.
"ಹೌದಯ್ಯಾ ನನ್ನ ವೀಕ್ಷಿಗೆ ತಗೊಂಡದ್ದು..." ಪ್ರತಾಪ ನಿಸ್ಸಂಕೋಚವಾಗಿ ಪ್ರತಿಕ್ರಿಯಿಸಿದ
"ಸರಿಯಾಗಿ ಹೇಳಿ ಧಣಿ.. ಯಾರು ವೀಕ್ಷಿ ಅಂದ್ರೆ ಗೆಳತೀನ ? ಮಾವನ ಮಗಳಾ ? ಅಲ್ಲ ಬೇರೆ ಇನ್ಯಾರಾ ?" ಸಂಶಯಿಸಿದ ರಮೇಶ
"ನಾನೂ ವೀಕ್ಷಿ ಒಟ್ಟಿಗೇ ಕಲ್ತಿದ್ದು.ನನ್ನ class mate ಅವ್ಳು." ವಿವರಿಸಲಾರಂಭಿಸಿದ ಪ್ರತಾಪ್
ಬೈಕ್ ಸಾಗಿದಂತೆ ಪ್ರತಾಪ ತನ್ನ,ವೀಕ್ಷಿತಾಳ ಪ್ರೇಮ ಕಥೆಯನ್ನು,ತಮ್ಮ ಚಾರಣದ ಕಥೆಗಳನ್ನೂ ವಿವರಿಸುತ್ತಾ ರಮೇಶನ ಸಂದೇಹಗಳನ್ನು ಪರಿಹರಿಸುತ್ತಾ ಮನೆಗೆ ತಲುಪಿದ
"ಹೇಗಿದೆ ರಮೇಶಾ ಕಥೆ ?" ಎನ್ನುತ್ತಾ ರಮೇಶನ ಪ್ರತಿಕ್ರಿಯೆಗಾಗಿ ಹಿಂತಿರುಗಿದ್ದಾನೆ ಪ್ರತಾಪ ರಮೇಶ ಮಾಯವಾಗಿದ್ದ.
"ಅಜ್ಜಯ್ಯಾ ರಮೇಶ ಬೈಕ್ ನಿಂದ ಬಿದ್ದಿದ್ದಾನೆ ಕಾಣ್ಸೊತ್ತೆ ಎಲ್ಲಿ ಬಿದ್ದಿದ್ದಾನೋ ಗೊತ್ತಾಗ್ಲಿಲ್ಲ ಏನ್ಮಾಡ್ಲಿ ?" ಎನ್ನುತ್ತಾ ಅಜ್ಜಯ್ಯನ ಕೋಣೆಯ ಕಿಟಕಿಗೆ ಮುಖವಿರಿಸಿ ಕೂಗಿದ.
ಅಜ್ಜಯ್ಯ "ಬರ್ತಾನೆ ಬಿಡೋ ಅವ್ನು ನಿನಗಿಂತ ಕಿಲಾಡಿ" ಎನ್ನುತ್ತಿರುವಾಗಲೇ ಅಂಗಳದ ಕೊನೆಯಲ್ಲಿ ರಮೇಶ ಸೊಂಟಕ್ಕೆ ಕೈಹಿಡಿದು ಕುಂಟುತ್ತಾ ಬಂದ.
"ನಾನಿನ್ನು ಬರಲ್ಲ ಸ್ವಾಮೀ ನಿಮ್ಮ ಜತೆ ಸ್ವಲ್ಪ ಆಚೆ ಈಚೆ ಆಗಿದ್ರೆ ಶ್ಯಾಮರಾಯರ ತೋಟದ ಗೊಬ್ಬರದ ಗುಂಡಿಗೆ ಬಿದ್ದಿರ್ತಿದ್ದೆ.ನಮ್ಮ ಅಮ್ಮಂಗೂ ನನ್ನನ್ನ ಗುರ್ತು ಹಿಡಿಯೋಕೆ ಆಗ್ತಿರ್ಲಿಲ್ಲ ಅಷ್ಟು ಡ್ಯಾಮೇಜ್ ಆಗೋಗ್ತಿತ್ತು ಬಾಡಿ." ಎಂದು ಪ್ರತಾಪನನ್ನು ತರಾಟೆಗೆ ತೆಗೆದುಕೊಂಡ ರಮೇಶ
"ಅಲ್ಲಯ್ಯ ಚಲಿಸುವ ವಾಹನದಿಂದ ಇಳಿಯೋದು ಅಪಾಯ ಅಂತ ಗೊತ್ತಿಲ್ವ ನಿಂಗೆ, ಗೊತ್ತಿದ್ದು ಗೊತ್ತಿದ್ದೂ ಬೈಕ್ ನಿಂದ ಜಂಪ್ ಮಾಡಿದ್ದೀಯಲ್ಲ ಹೇಳಿದ್ರೆ ನಾನೇ ನಿಲ್ಲಿಸ್ತಿರ್ಲಿಲ್ವಾ ?." ಎನ್ನುತ್ತಾ ಗಂಭೀರ ಪರಿಸ್ಥಿತಿಯನ್ನೂ ಹಾಸ್ಯಕ್ಕೆ ತಿರುಗಿಸಲೆತ್ನಿಸಿದ ಪ್ರತಾಪ.
"ಹಾರಿದ್ದಲ್ಲ ಸ್ವಾಮೀ ದಬಕ್ಕಂತ ಬಿದ್ದಿದ್ದು ಕಲ್ಮೇಲೆಲ್ಲಾ ಹತ್ಸೋವಾಗ ನಿಧಾನಕ್ಕೆ ಓಡ್ಸೋಕಾಗೋಲ್ವ ? ನನ್ನ ಸೊಂಟ ಗಿಂಟ ಮುರ್ದಿದ್ರೆ ಏನ್ ಮಾಡ್ತಿದ್ರಿ ?" ಎನ್ನುತ್ತಾ ಪ್ರತಾಪನ ತಪ್ಪನ್ನು ಬೊಟ್ಟು ಮಾಡಿ ತೋರಿಸಲೆತ್ನಿಸಿದ.
"ಓಕೆ sorry ಕಣಯ್ಯಾ ಬಾ ಎಲ್ಲೆಲ್ಲ ಎಷ್ಟೆಷ್ಟು ಡ್ಯಾಮೇಜ್ ಆಗಿದೆ ರಿಪೇರಿ ಮಾಡೋಣ" ಎನ್ನುತ್ತ ರಮೇಶನ ಕೈಯನ್ನು ತನ್ನ ಹೆಗಲ ಮೇಲಿಟ್ಟು ಆತನನ್ನು ಉಪಚರಿಸುವುದಕ್ಕಾಗಿ ಕರೆದೊಯ್ದ.
ರಮೇಶ ತನ್ನ ಸಿಟ್ಟನ್ನು ಪ್ರತಾಪನ ಮೇಲಿಂದ ಬೈಕ್ ಗೆ ವರ್ಗಾಯಿಸಿ ಗೊಣಗುತ್ತಾ ನಡೆದ.
...
ಮಧ್ಯಾಹ್ನ ಊಟಕ್ಕೆ ಜತೆಯಾದಾಗ ಪ್ರತಾಪನಿಗೆ ಅಜ್ಜಯ್ಯ ನಿನ್ನೆ ಹೇಳಿದ್ದ ವಿಷಯ ನೆನಪಿಗೆ ಬಂತು.
"ಅಜ್ಜಯ್ಯಾ ನಿನ್ನೆ ನಾಳೆ ಏನೋ ವಿಷಯ ತಿಳಿಸುವುದಿದೆ ಎಂದಿದ್ರಲ್ಲ ಏನದು ?" ಎನ್ನುತ್ತಾ ಮಾತು ಪ್ರಾರಂಭಿಸಿದ
"ಏನಿಲ್ಲ ಸೌಗಂಧಿಕಾವನದಲ್ಲಿರುವ ..." ಎನ್ನುತ್ತಾ ಪ್ರೊಫೆಸರ್ ರು ಪ್ರಾರಂಭಿಸುತ್ತಿದ್ದಂತೆ ಪ್ರತಾಪನ ಕಿವಿ ನೆಟ್ಟಗಾಯಿತು.
ಮುಂದುವರಿಸುತ್ತಾ ಪ್ರೊಫೆಸರ್ ರು
"ಅಲ್ಲಿರುವ ಒಂದು ಸಸ್ಯದ ಬೇರುಗಳು ನನಗೆ ಬೇಕಾಗಿದ್ದವು ನಿನಗೆ ಬಹುಶಹ ಆ ಸಸ್ಯದ ಪರಿಚಯ ಇರಲೂ ಬಹುದು.ಆ ಸಸ್ಯದ ಪೊದರುಗಳಿರುವ ಜಾಗದ ಕರಡು ನಕ್ಷೆಯನ್ನು ತಯಾರಿಸಿದ್ದೇನೆ,ಕಾಡಿನ ಪರಿಚಯವಿರುವ ಯಾರೊಬ್ಬರ ಜತೆಗಾದರೂ ಹೋಗಿ ಹುಡುಕಬೇಕು.ನಾಳೆ ನಾವು ನಿನ್ನ ಕಾಲೇಜಿನ ಕಡೆ ಪ್ರಯಾಣ ಬೆಳೆಸಬೇಕು.ನಾಳೆ ವಿಶ್ರಾಂತಿ ಪಡಕೊಂಡು ನಾಡಿದ್ದಿನಿಂದ ಸಸ್ಯದ ಪತ್ತೆ ಕಾರ್ಯಕ್ಕೆ ತೊಡಗಬೇಕು" ಎಂದರು.
"ಹುರ್ರೇ ಸೂಪರ್ " ಎನ್ನುತ್ತಾ ಪ್ರತಾಪತನ್ನ ಸಂತೋಷವನ್ನು ಪ್ರಕಟಪಡಿಸಿದ.ಪ್ರತಾಪನಿಗೂ ವೀಕ್ಷಿತಾಳನ್ನು ಶೀಘ್ರವಾಗಿ ಕಾಣಬಹುದೆಂಬ ಉತ್ಸಾಹದಿಂದ ಅಧಿಕವಾಗಿಯೇ ಸಂತೋಷವಾಗಿತ್ತು."
"ಅಜ್ಜಾ ನಾವು ಡಾಕ್ಟರ್ ಅಂಕಲ್ ಮನೇಲೇ ಉಳ್ಕೊಳ್ಳೋಣ ಆಗದೇ ?" ಪ್ರಶ್ನಿಸಿದ ಪ್ರತಾಪ್.
"ಅವರ ಅಭ್ಯಂತರ ಇಲ್ಲಾಂದ್ರೆ ಪರವಾಗಿಲ್ಲ " ಎಂದರು ಪ್ರೊಫೆಸರ್.
ಊಟವಾದ ಬಳಿಕ ವೀಕ್ಷಿತಾಳ ಮನೆಗೆ ಕರೆ ಮಾಡಿ ಪ್ರತಾಪ್ ತಾನೂ ಅಜ್ಜಯ್ಯನೂ ಮರುದಿನ ರಮೇಶನ ಜತೆಗೆ ಬರುತ್ತೇವೆಂದೂ ಅವರ ಅಭ್ಯಂತರವಿಲ್ಲದಿದ್ದಲ್ಲಿ ತಮ್ಮ ಕಾರ್ಯ ಪೂರ್ತಿಯಾಗುವ ತನಕ ಅವರ ಮನೆಯಲ್ಲಿರುವುದಕ್ಕೆ ಅನುಮತಿ ಬೇಕೆಂದೂ ಕೇಳಿಕೊಂಡ.ಡಾ|ನಿರಂಜನ್ ರವರ ಪತ್ನಿ ಪ್ರತಾಪ್ ಹಾಗೂ ಪ್ರೊಫೆಸರ್ ರವರ ಆಗಮನಕ್ಕೆ ಉಳಿದುಕೊಳ್ಳುವುದಕ್ಕೆ ಸಂತೋಷದಿಂದ ಅನುಮತಿ ನೀಡಿದರು.
ಮರುದಿನ ವೀಕ್ಷಿತಾಳನ್ನು ಕಾಣುತ್ತೇನೆಂಬ ಉತ್ಸಾಹದಿಂದ ಪ್ರತಾಪನಿಗೆ ಆ ದಿನ ರಾತ್ರಿ ನಿದ್ದೆಯೇ ಹತ್ತಲಿಲ್ಲ.
ಮರುದಿನ ಮಧ್ಯಾಹ್ನದ ಹೊತ್ತಿಗೆ ಪ್ರತಾಪನೂ ಪ್ರೊಫೆಸರ್ ರೂ ರಮೇಶನೂ ಡಾ | ನಿರಂಜನ್ ರ ಮನೆಯ ಮುಂದೆ ಪ್ರತ್ಯಕ್ಷರಾಗಿದ್ದರು.ಪ್ರತಾಪನಂತೂ ಜೀಪ್ ಪಾರ್ಕ್ ಮಾಡಿ ಲಗೇಜ್ ನ ಜವಾಬ್ದಾರಿಯನ್ನು ರಮೇಶನಿಗೊಪ್ಪಿಸಿ ನೇರವಾಗಿ ಕರೆಘಂಟೆಯನ್ನೊತ್ತಲೋಡಿದ.ವೀಕ್ಷಿತಾಳು ಬಂದು ಸ್ವಾಗತಿಸುತ್ತಾಳೆಂದು ತಿಳಿದಿದ್ದ ಪ್ರತಾಪನಿಗೆ ಆಕೆಯ ತಾಯಿ ಸುಲೇಖಾ ಬಾಗಿಲು ತೆರೆದಾಗ ಆಶ್ಚರ್ಯವಾಗಿತ್ತು.ಪ್ರತಾಪ್ ಮತ್ತು ಪ್ರೊಫೆಸರ್ ರನ್ನು ಗೆಸ್ಟ್ ರೂಮ್ ಗೆ ಕರೆದೊಯ್ದು ಪಾನೀಯ ವಿಚಾರಿಸಿ ವೀಕ್ಷಿತಾ ತನ್ನ ಗೆಳತಿಯರ ಜತೆಗೆ ಸಣ್ಣ ಪಿಕ್ ನಿಕ್ ಗೆ ಹೋಗಿದ್ದಳೆಂದೂ ಮಧ್ಯಾಹ್ನ ಊಟದ ಬಳಿಕ ಹಿಂದಿರುಗುತ್ತಾಳೆಂದೂ ತಿಳಿಸಿದರು.
ತಮ್ಮ ಅನಿರೀಕ್ಷಿತ ಭೇಟಿಯಿಂದ ವೀಕ್ಷಿತಾಳನ್ನು ಆಶ್ಚರ್ಯಚಕಿತಳನ್ನಾಗಿಸ ಬೇಕೆಂದುಕೊಂಡಿದ್ದ ಪ್ರತಾಪ್ ಗೆ ತುಸು ಬೇಸರವಾಯಿತು.
ಮತ್ತೆ ಅರ್ಧ ಘಂಟೆಯ ಬಳಿಕ ಪಿಕ್ ನಿಕ್ ನಿಂದ ಮರಳಿದ ವೀಕ್ಷಿತಾ ಶೂ ಸ್ಟಾಂಡ್ ನಲ್ಲಿದ್ದ ಶೂ ಪ್ರತಾಪ್ ನದ್ದೇ ಎಂದು ಅರಿವಾಗಿ ಆಶ್ಚರ್ಯವೂ ಅನಂದವೂ ಜತೆಗೆ ಉಂಟಾಯಿತು.
"ಅಮ್ಮಾ ಪ್ರತಾಪ್ ಬಂದಿದ್ದಾನಾ ?" ಎಂದು ಬಾಗಿಲು ತೆರೆದ ಅಮ್ಮನನ್ನು ಪ್ರಶ್ನಿಸುತ್ತಾ ನೇರವಾಗಿ ಗೆಸ್ಟ್ ರೂಮ್ ಗೆ ತೆರಳಿದಳು, ಅಮ್ಮನ ಉತ್ತರಕ್ಕೂ ಕಾಯದೆ.
"ಊಟ ಮಾಡಿ ನಿದ್ದೆ ಮಾಡಿರ್ತಾನೆ ಕಣೇ ಸಂಜೆ ಮಾತಾಡ್ಸು..ಪಾಪ ಸುಸ್ತಾಗಿರ್ತಾನೆ" ಎನ್ನುತ್ತಾ ತಮ್ಮ ಬೆಡ್ ರೂಮ್ ಗೆ ತೆರಳಿದರು ಸುಲೇಖಾ.
ಪ್ರತಾಪ್ ಖಂಡಿತಾ ನಿದ್ರಿಸಿರಲಾರ ಮಧ್ಯಾಹ್ನ ನಿದ್ರಿಸುವ ಅಭ್ಯಾಸ ಅವನಿಗಿಲ್ಲ , ತನ್ನನ್ನು ಕಾಣದೆ ಬೇಸರವಾಗಿರಬಹುದು ಎಂದು ವೀಕ್ಷಿತಾಳಿಗೆ ತಿಳಿದಿತ್ತು.
ವೀಕ್ಷಿತಾ ಗೆಸ್ಟ್ ರೂಮ್ ನ ಡೋರ್ knock ಮಾಡಿ ಒಳಬಂದಾಗ ಪ್ರತಾಪ್ ಸುಮ್ಮನೇ ಮಂಚದ ಮೇಲೆ ಬಿದ್ದುಕೊಂಡು fan ನ ಮೇಲೆ ತನ್ನ ದೃಷ್ಟಿಯನ್ನು ನೆಟ್ಟಿದ್ದ.ಒಳಗೆ ಬಂದ ವೀಕ್ಷಿತಾಳನ್ನು ಕಾಣುತ್ತಾ ಛಂಗನೇ ಮೇಲೆದ್ದು ಕುಳಿತು ಆಕೆಗಿಂತ ಮೊದಲೇ ಮಾತನಾಡಲಾರಂಭಿಸಿದ.
"Hi dear how was your picnic ವನ ಭೋಜನಾನ ?" ಎಂದು ಪ್ರಶ್ನಿಸಿದ.
"ಅದಿರ್ಲಿ ಕಣೋ ಸುದ್ದೀನೇ ಇಲ್ದೆ ಬಂದ್ಬಿಟ್ಟಿದ್ದೀಯ ಏನ್ ಪ್ರೋಗ್ರಾಂ ? ಅಜ್ಜನ್ನ ಕರ್ಕೊಂಡು ಟ್ರೆಕ್ಕಿಂಗ್ ಏನಾದ್ರೂ ಹೋಗೋ ಪ್ಲಾನ್ ಇದ್ಯಾ ?" ಎಂದು ಕಿಚಾಯಿಸಿದಳು.
"ಒಂಥರಾ ಟ್ರೆಕ್ಕಿಂಗೇ.ಆದ್ರೆ ಪ್ಲಾನ್ ನಂದಲ್ಲ ಅಜ್ಜಂದೇ" ಎಂದ ಪ್ರತಾಪ್.
"ಓಹೋ ಹಾಗಾದ್ರೆ ದಟ್ಟಾರಣ್ಯದ ರಹಸ್ಯ ಗರ್ಭವನ್ನ ಅಜ್ಜನ ಜತೆ ಕೋತಿ ಗ್ಯಾಂಗ್ ಅರಸೋಕೆ ಹೋಗೊತ್ತೆ ಆಂತಾಯ್ತು . ಕಷಾಯ ಮಾಡೋದಿಕ್ಕೆ ಬೇರು ಅಗಿಯೋದಿದೆಯಂತಾ ಅಜ್ಜಯ್ಯಂಗೆ" ಪ್ರತಾಪನ ಮಾತಿನ ಪ್ರತಿ ಶಬ್ದಕ್ಕೆ ಪುಟಗಟ್ಟಲೆ ವ್ಯಾಖ್ಯಾನ ಕೊಡಬಲ್ಲವಳಂತೆ ಉತ್ತರಿಸಿದಳು ವೀಕ್ಷಿತಾ.
"ಹೌದು ಮಿಸ್ ನೀವೂ ಕೋತಿಗಳ ಜತೆ ಸೇರ್ಕೊಂಡಿದ್ರೆ ಕೋತಿಗಳೂ ಮನುಷ್ಯರಾಗಬಹುದೇನೋ ಅನ್ನೋ ಆಶಾಕಿರಣ ಏನಂತೀರಿ" ಎಂದ ಪ್ರತಾಪ.
"ಸರಿ ನಂದೇನೂ ಅಭ್ಯಂತರ ಇಲ್ಲ ಅಪ್ಪ ಪರ್ಮಿಶನ್ ಕೊಟ್ರೆ" ಎನ್ನುತ್ತಿದ್ದವಳನ್ನು ನಡುವೆ ತಡೆದು ಪ್ರತಾಪ..
"ಗಾಂಧೀಜಿ ಶಿಷ್ಯೆ.ನೀನು ನಂಜೊತೆ ಆವತ್ತು ಪರ್ಮೀಷನ್ ತಗೊಂಡು ಸುತ್ತಾಡಿದ್ದ?.ಆವಾಗಿಲ್ಲದ್ದು ಇವಾಗ ಯಾಕೋ ?" ಎಂದ.
"ಹಾಗಲ್ಲ ಕಣೋ ಮನೆಯಿಂದ ನಿಮ್ಜೊತೆಗೆ ಹೋಗೋದು ಅಂದ್ರೆ,ಎಲ್ಲಿಗೆ ಅಂತ ಕೇಳಿ,ಕಾಡಿಗೆ ನೀನ್ಯಾಕೆ ಹೋಗೋದು ಅಂತೆಲ್ಲ ಕನ್ ಫ್ಯೂಷನ್ ಆಗೊತ್ತೆ.ಅದಕ್ಕೆ ಹೇಳ್ದೆ.ಮೊದಲೇ ಹೇಳಿದೆ ಅಂತಾದ್ರೆ ಚನಾಗಿರೊತ್ತೆ ಅಲ್ವಾ ?" ಎಂದಳು ವೀಕ್ಷಿತಾ".
"ಸರಿ ಹಾಗಾದ್ರೆ ಕೇಳ್ಕೊ ಅದರಲ್ಲೇನಿದೆ" ಎಂದ ಪ್ರತಾಪ.
"ನಂಗೊತ್ತಿಲ್ಲಪ್ಪ ನೀನೆ ಕೇಳು" ಎಂದು ಸರ್ರನೆ ಹೇಳಿ ಅಡಿಗೆ ಕೋಣೆಯತ್ತ ನಡೆದಳು ವೀಕ್ಷಿತ.
ಆ ದಿನ ರಾತ್ರಿ ಊಟದ ವೇಳೆಯಲ್ಲಿ ಪ್ರತಾಪ ಡಾಕ್ಟರ್ ರಿಂದ ವೀಕ್ಷಿತಾಳನ್ನು ಕರಕೊಂಡು ಹೋಗಲು ಅನುಮತಿ ಪಡೆದುಕೊಂಡ.
ರಾತ್ರಿ ೧೨ ಘಂಟೆಗೆ ರಮೇಶ ಪ್ರತಾಪನನ್ನು ಹುಡುಕುತ್ತಾ ಹೊರಗದೆ ಬಂದವ ಜೋಕಾಲಿಯಲ್ಲಿ ಕುಳಿತು ಹರಟುತ್ತಿರುವ ವೀಕ್ಷಿತಾ,ಪ್ರತಾಪ್ ರನ್ನು ಕಂಡು ಮುಗುಳ್ನಕ್ಕು ಪುನಹ ಬಂದು ತನ್ನ ಹಾಸಿಗೆಯ ಮೇಲೆ ಉರುಳಿಕೊಂಡ.
...
ಮರುದಿನ ಬೆಳಗ್ಗೆ ೮.೩೦ಕ್ಕೆ ಎಲ್ಲರೂ ಸಿದ್ಧವಾಗಿ ತಮ್ಮ ತಮ್ಮ Trekking bag ಹಿಡಿದುಕೊಂಡು ವೀಕ್ಷಿತಾಗಾಗಿ ಕಾಯುತ್ತಾ ನಿಂತಿದ್ದರು.೮.೩೫ ಕ್ಕೆ ವೀಕ್ಷಿತಾ ಸಿದ್ಧಳಾಗಿ ತಡವಾದುದಕ್ಕೆ ಕ್ಷಮೆಯಾಚಿಸುತ್ತಾ ಬಂದಳು.
"ಪಾಪ ಅವ್ರು ನಿನ್ನೆ ರಾತ್ರಿ ನಿದ್ದೆ ಮಾಡೋವಾಗ ಬೆಳಗಾಗಿತ್ತೋ ಏನೋ" ಎಂದು ಪ್ರತಾಪನ ಮುಖ ನೋಡಿ ನಕ್ಕ "ರಮೇಶ
ಪ್ರತಾಪನಿಗೋ ವೀಕ್ಷಿತಾ ತಡವಾಗಿ ಬಂದುದರಿಂದ ತುಸು ಅಸಮಾಧಾನವಾಗಿತ್ತು, ರಮೇಶನನ್ನು ಕೆಕ್ಕರಿಸಿ ನೋಡಿ ಮೆಲ್ಲನೆ ಅವನ ತಲೆಯ ಮೇಲೆ ಠೊಣೆದ.
ಆ ದಿನ ಸಸ್ಯ ಸಿಗದಿದ್ದಲ್ಲಿ ಮನೆಗೆ ಹಿಂದಿರುಗಿ ಮರುದಿನ ಪುನಹ ಹುಡುಕಾಟ ಪ್ರಾರಂಭಿಸುವುದು ಎಂದು ತೀರ್ಮಾನಿಸಲಾಗಿತ್ತು.
೮.೪೦ ರ ಹೊತ್ತಿಗೆ ಎಲ್ಲರೂ ಡಾಕ್ಟರ್ ಹಾಗೂ ಅವರ ಪತ್ನಿಯನ್ನು ಬೀಳ್ಕೊಂಡು ಶತ್ರುಪಾಳಯವನ್ನು ಅರಸುವ ಸೈನಿಕರಂತೆ ಕಾಡಿನ ಕಡೆಗೆ ಹೊರಟರು.
ಪ್ರೊಫೆಸರ್ ರು ಕೆಮಿಕಲ್ ನಲ್ಲಿ ಅದ್ದಿ ಪುನರುಜ್ಜೀವನಗೊಳಿಸಿದ್ದ ನಕ್ಷೆಯ ಆಧಾರದ ಮೇಲೆ ಕಾಡಿನ ಉತ್ತರ ದಿಕ್ಕಿಗೆ ತೆರಳುವುದು ಎಂಬುದಾಗಿ ತೀರ್ಮಾನವಾಗಿತ್ತು.ಪ್ರತಾಪ್ ಅಜ್ಜನ ಮನೆಗೆ ತೆರಳಿದ್ದಾಗ ಪ್ರೊಫೆಸರ್ ರು ಇದೇ ಕಾರ್ಯದಲ್ಲಿ ಮಗ್ನರಾಗಿದ್ದರು.ರಮೇಶನಿಗಂತೂ ಕಾಡಿನ ಒಳ ಪ್ರವೇಶಿಸುತ್ತಿದ್ದಂತೆಯೇ ರೋಮಾಂಚನವಾಗಿತ್ತು. ಪ್ರತಾಪ ಎಷ್ಟೋ ಬಾರಿ ಬಂದು ಹೋಗಿದ್ದನಾದರೂ ಪ್ರತಿಬಾರಿಯೂ ಆತನಿಗೆ ಹೊಸ ಲೋಕಕ್ಕೆ ಪ್ರವೇಶಿಸುವಂತೆ ಭಾಸವಾಗುತ್ತಿತ್ತು.ಪ್ರೊಫೆಸರ್ ರು ಮಾತ್ರ ನಿರ್ಲಿಪ್ತ ಭಾವದಿಂದ ಯಾವುದೆ ಇಂದ್ರಿಯಗಳ ಮೇಲೂ ಪ್ರಭಾವಕ್ಕೊಳಗಾಗದವರಂತೆ ಯುವಕರ ಜತೆ ಹೆಜ್ಜೆಯಿರಿಸುತ್ತಾ ಬರುತ್ತಿದ್ದರು.ವೀಕ್ಷಿತಳೂ ಪ್ರತಾಪನ ಸಮೀಪದಲ್ಲೇ ಆತನ ಹೆಜ್ಜೆಯ ಜತೆ ಹೆಜ್ಜೆಗಳನ್ನಿಡುತ್ತಾ ನಡೆಯುತ್ತಿದ್ದಳು. ಹೀಗೆ ಒಂದೆರಡು ಘಂಟೆಗಳು ಕಳೆದು ದಟ್ಟ ಕಾಡಿನ ಮಧ್ಯ ಭಾಗಕ್ಕೆ ಇನ್ನರ್ಧ ಘಂಟೆಯಲ್ಲಿ ತಲುಪುವವರಿದ್ದರು.ನೇರಳೆ ಮರಗಳನ್ನು ಕಂಡ ಪ್ರತಾಪ-ವೀಕ್ಷಿತ ಪ್ರೊಫೆಸರ್ ಮತ್ತು ರಮೇಶನನ್ನು ಮುಂದೆ ಹೋಗಲು ಸೂಚಿಸಿ ತಾವು ಸ್ವಲ್ಪ ಹಣ್ಣುಗಳನ್ನು ಸಂಗ್ರಹಿಸಿ ಬರುವುದಾಗಿ ತಿಳಿಸಿ ಅಲ್ಲೇ ಉಳಿದರು.ತಾವು ಸ್ವಲ್ಪ ದೂರ ಕ್ರಮಿಸಿ ವಿಶ್ರಾಂತಿ ಪಡೆಯುವುದಾಗಿಯೂ ಬೇಗನೇ ಬನ್ನಿ ಎಂದು ತಿಳಿಸಿ ಪ್ರೊಫೆಸರ್ ರು ಮುಂದುವರಿದರು, ಕಾಡಿನ ತಿರುವಿನಲ್ಲಿ ಮರೆಯಾದ ಪ್ರೊಫೆಸರ್ ಮತ್ತು ರಮೇಶನಿಗೆ ವೀಕ್ಷಿತ ಪ್ರತಾಪ್ ಎಂದು ಜೋರಾಗಿ ಕಿರುಚಿದ್ದು ಕೇಳಿಸಿತು, ಪ್ರೊಫೆಸರ್ ರನ್ನು ನಿಧಾನವಾಗಿ ಬರುವಂತೆ ತಿಳಿಸಿ ರಮೇಶ ಹಿಂದಕ್ಕೆ "ಏನಾಯಿತು ಏನಾಯಿತು ?" ಎನ್ನುತ್ತಾ ಓಡುತ್ತಾ ಬಂದ ರಮೇಶನಿಗೆ ರಕ್ತದ ಮಡುವಿನಲ್ಲಿ ಬಿದ್ದಿದ್ದ ಪ್ರತಾಪ ಕಾಣಿಸಿದ.ಆತನ ತಲೆಗೆ ಏಟಾಗಿತ್ತು.
"ಪ್ರತಾಪನ ಮೇಲೆ ಹಾವು ಬಿತ್ತು, ಮರದ ಮೇಲಿದ್ದಾಗ, ಅದನ್ನು ಸರಿಸೋಕೆ ಹೋಗಿ ಆಯ ತಪ್ಪಿ ಕೆಳಗೆ ಬಿದ್ಬಿಟ್ಟ.ತಲೆಗೆ ಏಟಾಗಿದೆ ತಕ್ಷಣ ಆಸ್ಪತ್ರೆಗೆ ಕರ್ಕೊಂಡೋಗ್ಬೇಕು" ಎಂದಳು ಒಂದೇ ಉಸಿರಿನಲ್ಲಿ, ಗಾಬರಿಗೊಂಡಿದ್ದ ವೀಕ್ಷಿತಾ.
ಮಧ್ಯಾಹ್ನ ೨ ಘಂಟೆಯ ಹೊತ್ತಿಗೆ ಪ್ರೊಫೆಸರ್ ,ರಮೇಶ ,ವೀಕ್ಷಿತ ಪ್ರತಾಪನನ್ನು ಎತ್ತಿಕೊಂಡು ಆಸ್ಪತ್ರೆಗೆ ಬಂದರು.ಪ್ರತಾಪನನ್ನು ತಕ್ಷಣ ತುರ್ತು ಚಿಕಿತ್ಸಾ ಘಟಕಕ್ಕೆ ದಾಖಲು ಮಾಡಿ ಪ್ರಖ್ಯಾತ ಮೆಡುಳು ತಜ್ನ ಡಾ| ವಿವೇಕ್ ರನ್ನು ಕರೆಸಿ ಶಸ್ತ್ರ ಚಿಕಿತ್ಸೆ ನಡೆಸಲಾಯಿತು.ಸಂಜೆ ೬.೩೦ ರ ಹೊತ್ತಿಗೆ ವೈದ್ಯರು ಪ್ರತಾಪ್ ನನ್ನು ವಾರ್ಡ್ ಗೆ ಸ್ಥಳಾಂತರಿಸಿದರು.ಪ್ರತಾಪ್ ಕೋಮಾ ಸ್ಥಿತಿಯಲ್ಲಿದ್ದಾನೆಂದೂ ಪ್ರಜ್ನೆ ಯಾವಾಗ ಮರಳೀತೆಂಬುದನ್ನು ನಿಖರವಾಗಿ ತಿಳಿಸಲು ಸಾಧ್ಯವಿಲ್ಲವೆಂದೂ ತಿಳಿಸಿದರು.
ವೀಕ್ಷಿತಾಳಂತೂ ೨೪ ಘಂಟೆ ಪ್ರತಾಪ್ ನ ಬಳಿಯಲ್ಲಿದ್ದು ಆತನನ್ನು ಉಪಚರಿಸಿದಳು.ಮೂರು ತಿಂಗಳ ಬಳಿಕ ಒಂದು ದಿನ ಬೆಳಗ್ಗೆ ಪ್ರತಾಪನಿಗೆ ಪ್ರಜ್ನೆ ಬಂತು.ಎರಡನೇ ದಿನ ಸಾಯಂಕಾಲ ಕಾಗದವೊಂದನ್ನು ವೀಕ್ಷಿತಾಳ ಕೈಯಲ್ಲಿಟ್ಟು ಮುಗುಳ್ನಕ್ಕು ಆಕೆಯ ತಲೆಯನ್ನು ನೇವರಿಸುತ್ತಾ ನಾಳೆ ಬೆಳಗ್ಗೆ ತನಗಾಗಿ ಉಪಹಾರ ತರಲು ಮನೆಗೆ ಹೋದಾಗ ಓದಬೇಕಾಗಿ ತಿಳಿಸಿದ.ಪ್ರತಾಪ ತನಗೋಸ್ಕರ ಹೊಸ ಕವನ ಬರೆದಿರಬೇಕೆಂದುಕೊಂಡಳು ವೀಕ್ಷಿತಾ.ಆ ರಾತ್ರಿ ಪೂರ್ತಿ ಪ್ರತಾಪನ ಕೈಯನ್ನು ನೇವರಿಸುತ್ತಾ ಕುಳಿತಲ್ಲೇ ನಿದ್ರಿಸಿದಳು.ಮರುದಿನ ಮುಂಜಾನೆ ಪ್ರತಾಪನಿಗೆ ಉಪಹಾರ ತರುವ ಸಲುವಾಗಿ ಒಂದು ಘಂಟೆಯಲ್ಲಿ ಹಿಂದಿರುಗುತ್ತೇನೆ ಎಂದು ಪ್ರತಾಪನಿಗೆ ತಿಳಿಸಿ ಮನೆಗೆ ಬಂದು ಪತ್ರವನ್ನೋದಿದಳು ವೀಕ್ಷಿತಾ.
"ಪ್ರೀತಿಯ ವೀಕ್ಷಿ,
ಬದುಕೊಂದು ಅನಿರೀಕ್ಷಿತ ತಿರುವುಗಳುಳ್ಳ ಕೊನೆ ಮುಟ್ಟುವವರೆಗೂ ಕೊನೆ ಕಾಣಿಸದಂತಹಾ ಕಡಿದಾದ ರಸ್ತೆಯಂತೆ"
ಮೊದಲ ಸಾಲನ್ನು ಓದುತ್ತಿದ್ದಂತೆಯೇ ವೀಕ್ಷಿತಾಳ ಎದೆ ಬಡಿತ ಹೆಚ್ಚಾಯಿತು.
"ನಾನು,ನೀನು ಬಾಳದಾರಿಯಲ್ಲಿ ಸಂಗಾತಿಗಳಾಗಿ ಏರು ತಗ್ಗುಗಳಲ್ಲಿ,ಕಷ್ಟ ಸುಖದಲ್ಲಿ ಎಂದೆಂದೂ ಒಬ್ಬರೊಬ್ಬರಿಗೆ ಆಸರೆಯಾಗಿ ನಿಂತು ಎಲ್ಲವನ್ನು ಸಮಾನವಾಗಿ ಹಂಚಿಕೊಂಡು ಸದಾಕಾಲ ಜತೆಯಾಗಿರಬೇಕೆಂದು ಬಯಸಿದ್ದೆವು.ಬಹುಷಹ ನಿನ್ನ ಆ ದೇವರಿಗೆ ಇದು ಇಷ್ಟವಿಲ್ಲ ಅಂತ ಕಾಣೊತ್ತೆ, ಹ್ಮ್ ಇರಲಿ.ನನ್ನ ಆತ್ಮ ಈ ದೇಹವನ್ನು ಬಿಟ್ಟು ಹೋಗೋ ಕಾಲ ಬಂದಿದೆ ಅನ್ನಿಸ್ತ ಇದೆ ಕಣೇ !.ಬಾಳದಾರಿಯಲ್ಲಿ ನಾವು ಬಯಸಿದ ರೀತಿ ಪರಸ್ಪರ ಕೈ ಕೈ ಹಿಡಿದು ನಡೆಯಲು ಸಾಧ್ಯವಾಗಲಿಲ್ಲ ಆದರೆ ನೀನು ನನ್ನ ಕೈ ಹಿಡಿದು ನಡೆಸಲು ಕಲಿಸುವ ಕಾಲಕ್ಕಾಗಿ ಕಾಯುತ್ತಿದ್ದೇನೆ.ಜೀವಗಳ ಸಂಗಮವಾಗಲಿಲ್ಲ ಅದೇನೂ ಮುಖ್ಯವಲ್ಲ ನಮ್ಮ ಹೆಸರನ್ನು ಮುಂದುವರಿಸುವುದಕ್ಕೆ ವಂಶದ ಕುಡಿ ಬೇಕಾದದ್ದು ಅಷ್ಟೇ ಅಲ್ಲವೇ ?. ನಿನ್ನ ಜೀವವನ್ನು ಹಂಚಿಕೊಳ್ಳುವ ಮತ್ತ್ಯಾವ ಬಗೆಯೂ ಇಲ್ಲವೆ ಸ್ವಲ್ಪ ಯೋಚನೆ ಮಾಡು." ಒಂದೊಂದೇ ಸಾಲನ್ನು ಓದುತ್ತಿದ್ದಂತೆ ವೀಕ್ಷಿತಾಳ ಕಂಗಳು ಅಸಂಖ್ಯ ದುಃಖಾಶ್ರುಗಳನ್ನು ಸುರಿಸುತ್ತಿವೆ.
"ವೀಕ್ಷಿ ನನ್ನದೊಂದು ಕೊನೆಯ ಆಸೆ ಇಲ್ಲ ಅನ್ನಬಾರದು.. ಡಾ| ವಿವೇಕ್ ನಿನ್ನನ್ನು ಮೆಚ್ಚಿದ್ದಾರೆ. ನಾನು ಕೋಮಾದಲ್ಲಿದ್ದರು ನನ್ನ ಸುಪ್ತ ಪ್ರಜ್ನೆ ಜಾಗೃತವಾಗಿತ್ತು. ನೀನು ಸಂತೋಷವಾಗಿದ್ದರೇನೆ ನನ್ನ ಆತ್ಮಕ್ಕೆ ಶಾಂತಿ. ಡಾ|ವಿವೇಕ್ ರನ್ನು ಮದುವೆಯಾಗಿ ಸಂತೋಷವಾಗಿ ಬಾಳು. ಸಾಧ್ಯವಾದಲ್ಲಿ ನಾನೂ ನಿನ್ನನ್ನು ನಗಿಸುತ್ತೇನೆ. ನನ್ನ ಕೊನೆಯ ಆಸೆಯನ್ನು ದಯವಿಟ್ಟು ಈಡೇರಿಸು.
ನಿನ್ನವ
ಪ್ರತಾಪ
"
ಪತ್ರವನ್ನೋದಿದವಳೇ ಕಣ್ಣೀರನ್ನೊರಸುತ್ತಾ ನೇರವಾಗಿ ಆಸ್ಪತ್ರೆಗೆ ಓಡೋಡಿ ಬಂದಳು.ಪ್ರತಾಪ್ ನ ತಂದೆ ತಾಯಿ ದುಃಖದ ಕಟ್ಟೆಯೊಡೆದು ಕಂಬನಿಗರೆಯುತ್ತಿದ್ದಾರೆ. ರಮೇಶ ಮಂಕಾಗಿ ಕಂಗೆಟ್ಟಿದ್ದಾನೆ. ವೀಕ್ಷಿತಾಳ ತಂದೆ ಕನ್ನಡಕವನ್ನು ಕೈಯಲ್ಲಿ ಹಿಡಿದು ತಡೆದಷ್ಟು ಒತ್ತರಿಸಿದ ಕಣ್ಣೀರನ್ನು ಒರೆಸುವ ಯತ್ನ ಮಾಡುತ್ತಿದ್ದಾರೆ. ಪ್ರೊಫೆಸರ್ ರು ಆಸ್ಪತ್ರೆಯ ಮಂಚದ ಮೇಲೆ ಕುಸಿದು ಕುಳಿತಿದ್ದಾರೆ.
ಪ್ರತಾಪನ ಶಾಂತವಾಗಿ ಮಲಗಿದ್ದ ದೇಹವನ್ನು ಬಿಳಿಬಟ್ಟೆಯಲ್ಲಿ ಮುಚ್ಚಿ ಗಾಲಿ ಹಾಸನ್ನು ತಳ್ಳಿಕೊಂಡು ಬಂದರು.ಕುಸಿದು ಬಿದ್ದ ವೀಕ್ಷಿತಾಳನ್ನು ಉಪಚರಿಸುವುದಕ್ಕಾಗಿ ಕೋಣೆಯೊಂದಕ್ಕೆ ಎತ್ತಿಕೊಂಡು ಹೋಗಲಾಯಿತು.....
ಪ್ರತಾಪ್ ಸಂದು ೪ ವರ್ಷಗಳಾಗಿವೆ ಹಿರಿಯರ ಒತ್ತಾಯಕ್ಕೆ ಮಣಿದು ೧ ವರ್ಷದ ಹಿಂದೆ ವೀಕ್ಷಿತಾ ,ಶ್ರೀಮತಿ ವೀಕ್ಷಿತಾ
ವಿವೇಕ್ ಆಗಿದ್ದಾಳೆ. ತನ್ನ ಆಗ ತಾನೇ ಹುಟ್ಟಿದ ಮಗುವನ್ನು ಮಡಿಲಲ್ಲಿ ಇರಿಸಿಕೊಂಡು ನೋಡುತ್ತಿದ್ದಾಳೆ...
ಭುಜದ ಮೇಲೆ ಪ್ರತಾಪನಿಗಿದ್ದಂತೆಯೇ ಕಪ್ಪಾದ ಮಚ್ಚೆಯಿದೆ. ಕಾಲ ಕಿರು ಬೆರಳನ್ನೂ ಗಮನಿಸುತ್ತಿದ್ದಾಳೆ ವೀಕ್ಷಿತಾ, ಪ್ರತಾಪನ ಬೆರಳಿದ್ದಂತೆಯೇ ತುಸು ಓರೆ ಯಾಗಿತ್ತು. ಆಕೆಗರಿವಿಲ್ಲದಂತೆಯೇ ಎರಡು ಹನಿ ಕಣ್ಣೀರ ಬಿಂದುಗಳು ಮಗುವಿನ ಗಲ್ಲದ ಮೇಲೆ ಬಿದ್ದವು. ಮಲಗಿದ್ದ ಮಗು ಒಮ್ಮೆ ಆಕಳಿಸಿ ಮತ್ತೆ ನಿದ್ರಾ ಪ್ರಕ್ರಿಯೆಯಲ್ಲಿ ತಲ್ಲೀನವಾಯಿತು.
------------------------------------------
ಈ ಕಥೆಯ ಪಾತ್ರಗಳು ಹಾಗೂ ಘಟನೆಗಳು ಕೇವಲ ಕಾಲ್ಪನಿಕ....