Monday, December 30, 2013

ಅಲೆತ್ತೂರು ಹಬ್ಬ - ಯಕ್ಷಗಾನದ ನಂಟು ಬಲಗೊಂಡ ನೆನಪುಗಳು ಹಾಗೂ ಮಯ್ಯರ ಯಕ್ಷಗಾನ ಪ್ರೇಮ

ಮನುಷ್ಯ ಸಂಘಜೀವಿ ಆತನಿಗೆ ಇತರರ ಪ್ರೀತಿ, ವಿಶ್ವಾಸ,ಬಲ, ಸಹಕಾರಗಳು ಅತ್ಯಗತ್ಯ. ಒಗ್ಗಟ್ಟಿನಲ್ಲಿ ಬಲವಿದೆ ಈ ಮಾತುಗಳು ಅಕ್ಷರಶಃ ಸತ್ಯ ಎಂದು ಗೋಚರಿಸುವುದು ಅಲೆತ್ತೂರು ಹಬ್ಬದಲ್ಲಿ.
ನನ್ನ ಮಿತ್ರನಾ(ರಾ)ದ ಪ್ರೀತಿಯಿಂದ ನಚ್ಚು(ನರಸಿಂಹ ಮಯ್ಯ) ಈ ವ್ಯಕ್ತಿಯ ಮೂರ್ತಿ ಚಿಕ್ಕದಾದರೂ ಕೀರ್ತಿ ದೊಡ್ಡದೇ, ಪ್ರತೀ ವರ್ಷ ಉತ್ಸಾಹಿ ತರುಣರನ್ನು ಒಟ್ಟು ಸೇರಿಸಿ ಯಕ್ಷಗಾನ ನಡೆಸುವುದು ಸುಲಭದ ಮಾತೇನೂ ಅಲ್ಲ, ಯಕ್ಷಗಾನ ಸಂಘಟನೆ ಎನ್ನುವುದು ಅತ್ಯಂತ ಕ್ಲಿಷ್ಟಕರವಾದ , ಸೂಕ್ಷ್ಮವಾದಂತಹ ಕೆಲಸ. ಹಲವಾರು ಮಂದಿ ಕಲಾವಿದರನ್ನು ಜತೆಗೆ ಸೇರಿಸಿ ಎಲ್ಲರೂ ಒಬ್ಬರಿಗೊಬ್ಬರು ಹೊಂದಿಕೊಂಡು ಯಾವುದೇ ಮನಃಕಶಾಯಳಿಲ್ಲದೆ ಒಂದು ಪ್ರದರ್ಶನವನ್ನು ಏರ್ಪಡಿಸುವಂತೆ ಮಾಡುವುದು ಎಷ್ಟು ಕಷ್ಟ ಎನ್ನುವ ವಿಷಯ ಯಕ್ಷಗಾನವನ್ನು ಸಂಘಟಿಸಿದ ಪ್ರತಿಯೊಬ್ಬರಿಗೂ ಅಥವಾ ಯಕ್ಷಗಾನದ ಬಗ್ಗೆ ತುಸು ಹಿನ್ನೆಲೆಯುಳ್ಳ ಪ್ರತಿಯೊಬ್ಬರಿಗೂ ಗೊತ್ತಿರುತ್ತದೆ. ಅಂತಹದರಲ್ಲಿ ಸತತವಾಗಿ ಕಳೆದ ೬ ವರ್ಷಗಳಿಂದ ಯಕ್ಷಗಾನ ಪ್ರದರ್ಶನವನ್ನು ಏರ್ಪಡಿಸುತ್ತಿರುವ ಅಲೆತ್ತೂರು ಮಯ್ಯ ಬಳಗದವರ ಪ್ರಯತ್ನವನ್ನು ಮೆಚ್ಚಬೇಕಾದದ್ದೆ. ಎಸ್.ವಿ.ಎಸ್ ಕಾಲೇಜಿನಲ್ಲಿ ಆರಂಭಗೊಂಡ ನಮ್ಮ ಸ್ನೇಹ ಮುಂದೆ ಬಂಟ್ವಾಳದ ಮಹಾಲಿಂಗೇಶ್ವರ ಹವ್ಯಾಸಿ ಯಕ್ಷಗಾನ ಮಂಡಳಿಯ ಮೂಲಕ ಮುಂದುವರೆಯಿತು. ಬಳಿಕ ೨೦೦೮ ರಲ್ಲಿ ನರಸಿಂಹ ಮಯ್ಯ ಅವರು ತಮ್ಮ ಬಂಧುಗಳ ಮತ್ತು ಸಹೃದಯಿ ಕಲಾಪ್ರೋತ್ಸಾಹಕರ ನೆರವಿನಿಂದ ಹುಟ್ಟು ಹಾಕಿದ ಸಂಘಟನೆಯೇ ಹವ್ಯಾಸಿ ಯಕ್ಷಗಾನ ಕಲಾ ಸಂಘ ಅಲೆತ್ತೂರು.ನೋಡ ನೋಡುತ್ತಿದ್ದಂತೆಯೇ ೬ ವರ್ಷಗಳು ಹಿಂದೆ ಸರಿದಿವೆ ಮಾತ್ರವಲ್ಲ ೬ ಪ್ರದರ್ಶನಗಳು ನಡೆದಿವೆ ಮತ್ತು ಇತರ ಕಡೆಗಳಲ್ಲಿ ನಮ್ಮ ತಂಡದ ಕಲಾವಿದರು ಪ್ರದರ್ಶನಗಳನ್ನು ನೀಡಿದ್ದಾರೆ.  ನಮ್ಮ ಈ ಸಂಘಕ್ಕೆ ಗುರುಸ್ಥಾನದಲ್ಲಿ ನಿಂತವರು ಭಾಗವತರೂ ವೇಷಧಾರಿಗಳೂ ಆದಂತಹ ಉಂಡೆಮನೆ ಕೃಷ್ಣ ಭಟ್ಟರು ಮತ್ತು ಭಾಗವತರಾದಂತಹ ಪುರುಷೋತ್ತಮ ಭಟ್ಟರು. ಕುಶಲವರ ಕಾಳಗ-2008, ವೀರಮಣಿ ಕಾಳಗ-2009, ಸುದರ್ಶನ ಗರ್ವಭಂಗ-2010, ಏಕಾದಶೀ ದೇವಿ ಮಹಾತ್ಮೆ-2011, ಸುದರ್ಶನ ಗರ್ವಭಂಗ-ಕಾರ್ತವೀರ್ಯಾರ್ಜುನ-2012, ಶುಂಭವಧೆ-2013, ಭಾರ್ಗವ ವಿಜಯ-ಇಂದ್ರಜಿತು ಕಾಳಗ-2013 ಈ ವರೆಗೆ ನಾವು ಪ್ರದರ್ಶಿಸಿದ ಪ್ರದರ್ಶನಗಳು, ಇಲ್ಲಿ ನೆನಪಿಗೋಸ್ಕರ ಹೆಸರಿಸುತ್ತಿದ್ದೇನೆ.


ಎಸ್ ವಿ ಎಸ್ ಕಾಲೇಜಿನಲ್ಲಿ ಉಪಾನ್ಯಾಸಕರಾದ ಪಾಂಡುರಂಗ ರಾವ್, ನಾಗವೇಣಿ ಮಂಚಿ ಮತ್ತು ಶಿವಣ್ಣ ಪ್ರಭು ಅವರುಗಳ ನಿರ್ದೇಶನದಲ್ಲಿ ನಡೆಯುತ್ತಿದ್ದ ಯಕ್ಷಗಾನ ತರಗತಿಗಳಲ್ಲಿ ಭಾಗವಹಿಸುತ್ತಿದ್ದ ನಮಗೆ ಗುರುಗಳಾಗಿ ಬೋಳಂತೂರು ವಿಠಲ ಶೆಟ್ಟರು ಮತ್ತು ಕರ್ಗಲ್ಲು ವಿಶ್ವೇಶ್ವರ ಭಟ್ಟರ ಶಿಷ್ಯೆಯಾದ ಸುಮಂಗಲಾ ಐತಾಳ್ ಇವರು ನಾಟ್ಯಗಾರಿಕೆಯಲ್ಲಿ ಮತ್ತು ಯಕ್ಷಗಾನದ ರಂಗ ತಂತ್ರಗಳ ಬಗ್ಗೆ ತರಬೇತಿಯನ್ನು ನೀಡಿ ನಮ್ಮನ್ನು ಯಕ್ಷಗಾನ ಪ್ರದರ್ಶನಕ್ಕೆ ಅಣಿಗೊಳಿಸುತ್ತಿದ್ದರು. ಸುಮಂಗಲಾ ಐತಾಳ್ ಇವರು ಸ್ವತಃ ಎಸ್ ವಿ ಎಸ್ ಕಾಲೇಜ್ ನಲ್ಲಿ ಕಲಿತು ಧರ್ಮಸ್ಠಳ ಮಂಜುನಾಥೇಶ್ವರ ಕಾಲೇಜ್ ನಲ್ಲಿ ನಡೆಯುತ್ತಿದ್ದ ಯಕ್ಷಗಾನ ಸ್ಪರ್ಧೆಯಲ್ಲಿ ತನ್ನ ಕೃಷ್ಣನ ಪಾತ್ರಕ್ಕೆ ಪ್ರಥಮ ಬಹುಮಾನವನ್ನು ಗಳಿಸಿದ್ದರು ಮಾತ್ರವಲ್ಲ ನಮ್ಮ ಕಾಲೇಜ್ ನ ತಂಡಕ್ಕೂ ಬಹುಮಾನ ದೊರೆಯುವುದರಲ್ಲಿ ಪ್ರಮುಖ ಪಾತ್ರವಹಿಸಿದ್ದರು.


ಹೀಗೆ ಕಾಲೇಜಿನಲ್ಲಿ ನಡೆಯುತ್ತಿದ್ದ ವಾರ್ಷಿಕೋತ್ಸವದ ಸಂದರ್ಭದಲ್ಲಿ ನಮ್ಮ ಯಕ್ಷಗಾನ ಪ್ರದರ್ಶನ ಪ್ರಮುಖ ಕಾರ್ಯಕ್ರಮವಾಗಿ ಪ್ರದರ್ಶಿಸಲ್ಪಡುತ್ತಿತ್ತು. ಯಕ್ಷಗಾನದ ನಾದ ಸದಾ ಪರಿಸರದಲ್ಲಿ ಗುಂಯ್ಗುಡುತ್ತಿರುವ ಬಂಟ್ವಾಳದಲ್ಲಿ ಯಕ್ಷಗಾನಕ್ಕೆ ಪ್ರಾಮುಖ್ಯತೆಯನ್ನು ನೀಡಿ ಯಕ್ಷಗಾನ ಕಲೆಯಲ್ಲಿ ಯುವಕ, ಯುವತಿಯರನ್ನು ತೊಡಗಿಸಿ ಅವರ ಸರ್ವತೋಮುಖ ಬೆಳವಣಿಗೆಗೆ ಪ್ರೋತ್ಸಾಹ ನೀಡುತ್ತಿರುವ ಶ್ರೀ ವೆಂಕಟರಮಣ ಸ್ವಾಮಿ ಕಾಲೇಜು, ವಿದ್ಯಾಗಿರಿ ಬಂಟ್ವಾಳ ಇಲ್ಲಿನ ಪ್ರಾಧ್ಯಾಪಕರು ಮತ್ತು ಆಡಳಿತ ಮಂಡಳಿಯ ಸದಸ್ಯರೆಲ್ಲರೂ ಸ್ತುತ್ಯರ್ಹರು. ಇದೇ ಕಾಲೇಜಿನಲ್ಲಿ ಕಲಿತು ಯಕ್ಷಗಾನ ರಂಗದಲ್ಲಿ ಹವ್ಯಾಸಿಗಳಾಗಿ ತೊಡಗಿಸಿಕೊಂಡಿರುವ ನಮ್ಮ ತಂಡದ ಮತ್ತೀರ್ವ ಕಲಾವಿದರು ಗಣೇಶ ಹೆಗ್ಗಡೆ ಮತ್ತು ಶ್ರೀಕಾಂತ ಸೋಮಯಾಜಿ. ಬಹುಮುಖ ಪ್ರತಿಭೆಯ ಕಲಾವಿದ ಗಣೇಶ ಪುಂಡು ವೇಶಕ್ಕೆ ಹೇಳಿ ಮಾಡಿಸಿದಂತಹ ಅಂಗ ಸೌಷ್ಟವದಿಂದ ಲಾಲಿತ್ಯಪೂರ್ಣವಾದಂತಹ ನಾಟ್ಯಗಾರಿಕೆಯಿಂದ ಪಾತ್ರಕ್ಕೆ ನ್ಯಾಯವನ್ನೊದಗಿಸಬಲ್ಲಂತಹಾ ಕಲಾವಿದ. ಇನ್ನು ಶ್ರೀಕಾಂತ ಸೋಮಯಾಜಿ ಸದಾ ಅಧ್ಯಯನ ಶೀಲತೆಯಿಂದ ಅಂತರ್ಜಾಲ ಮಾಧ್ಯಮವನ್ನು ಸಂಪೂರ್ಣವಾಗಿ ಬಳಸಿಕೊಂಡು ಯಕ್ಷಗಾನದ ವೇಷಗಾರಿಕೆಯ,ಅರ್ಥಗಾರಿಕೆಯ, ಕುಣಿತದ ವಿವಿಧ ಸಾಧ್ಯತೆಗಳನ್ನು ರಂಗದ ಮೇಲೆ  ಆವಿಶ್ಕರಿಸಬಲ್ಲ ಸಮರ್ಥ ಕಲಾವಿದ. ತನ್ನ ಬೀಸುನಡೆಗಳಿಂದ, ಮಾತಿನ ಧಾಟಿಯಿಂದ, ಪಾತ್ರದ ಭಾವನೆಗಳನ್ನು ಸಮರ್ಥವಾಗಿ ಬಿಂಬಿಸುವ ಮೂಲಕ ಪಾತ್ರವನ್ನು ಪುನಃ ಜೀವಂತಗೊಳಿಸಬಲ್ಲ ಕಲಾವಿದ ಎಂದರೂ ತಪ್ಪಾಗಲಾರದು. ಶ್ರೀಕಾಂತನ ಇಂದ್ರಜಿತು, ಏಕಾದಶೀ ದೇವಿಮಹಾತ್ಮೆಯ ಮುರಾಸುರ, ರಕ್ತಬೀಜ ಮುಂತಾದಂತಹ ರಾಜವೇಷದ ಪಾತ್ರಗಳಿಗೆ ಯಾರನ್ನೂ ಅನುಕರಿಸದೇ ತನ್ನದೇ ಆದ ಛಾಪು ಮೂಡುವಂತೆ ಅಭಿನಯಿಸುತ್ತಿರುವುದು ನಿಜಕ್ಕೂ ಅಭಿನಂದನಾರ್ಹ. ಇನ್ನು ನಮ್ಮ ಸಂಘಟನೆಯ ಹರಿಕಾರ ನರಸಿಂಹ ಮಯ್ಯ , ಯಾವುದೇ ಪಾತ್ರಕ್ಕೂ ಸೈ, ಪುಂಡುವೇಷಕ್ಕೆ ಪೂರಕವಾಗಬಲ್ಲ ಮೈಕಟ್ಟಿರುವುದರಿಂದ ಅನಾಯಾಸವಾಗಿ ಮಯ್ಯರು ಧೀಂಗಿಣ ಹಾಕುವ ಸಾಮರ್ಥವನ್ನು ಹೊಂದಿದ್ದು ದಣಿವರಿಯದೆ ರಂಗದ ಮೇಲೆ ಕೆಲಸ ಮಾಡುವ ಸಮರ್ಥರು. ರಾಜವೇಷದ ಗಾಂಭೀರ್ಯದ ನಡೆಯನ್ನು ನರಸಿಂಹ ಮಯ್ಯ ಕರಗತಗೊಳಿಸಿಕೊಂಡಿದ್ದಾರೆ. ಹವ್ಯಾಸಿ ಕಲಾವಿದರಲ್ಲಿ ಪುಂಡುವೇಶವನ್ನು ಸಮರ್ಥವಾಗಿ ಮಯ್ಯರು ನಿಭಾಯಿಸಬಲ್ಲವರು. ಅಗತ್ಯಬಿದ್ದಾಗ ಎಡೆವೇಶಗಳಿಗೂ ಮಯ್ಯರು ತಯಾರು. ಮಾತ್ರವಲ್ಲ ನಮ್ಮ ಸಂಘದ ಇತರ ವೇಷಧಾರಿಗಳಿಗೆ ನಾಟ್ಯ ತರಬೇತಿ ಹಾಗೂ ರಂಗತಂತ್ರಗಳನ್ನು ಹೇಳಿಕೊಡುತ್ತಿರುವವರು ಮಯ್ಯರು.


ಮಯ್ಯರ ತಂದೆ, ತಾಯಿ, ಅಣ್ಣ ಗಿರೀಶ್ ಹಾಗೂ ತಮ್ಮ ಶರತ್ ಮತ್ತು ಬಂಧುಗಳ, ತ್ಯಾಗ, ಪ್ರೀತಿ ಮತ್ತು ಅತಿಥಿ ಸತ್ಕಾರದ ವೈಖರಿ ಮತ್ತು ಯಕ್ಷಗಾನದ ಮೇಲಣ ಪ್ರೀತಿಯನ್ನು ಕಂಡಾಗ ಮನಸ್ಸು ಉಲ್ಲಸಿತವಾಗುತ್ತದೆ ಮಾತ್ರವಲ್ಲ ತನ್ನಿಂತಾನೆ ಮಯ್ಯರ ಅಭಿಮಾನಿಯಾಗುತ್ತದೆ. ಎಲ್ಲರನ್ನೂ ತಮ್ಮ ಮನೆಯವರಂತೇ ಪ್ರೀತಿಯಿಂದ ಕಾಣುವ ಸ್ವಭಾವ ಮಯ್ಯರ ಮನೆಯವರನ್ನು ಇತರರಿಂದ ವಿಭಿನ್ನವಾಗಿಸಿ ಅವರನ್ನು ಸರ್ವಜನ ಪ್ರಿಯರನ್ನಾಗಿಸುತ್ತದೆ. ಬೇಸರಿಕೆ, ಉದಾಸನ ತೋರದೆ ಎಲ್ಲವನ್ನೂ ಉತ್ಸಾಹದಿಂದ ನಿರ್ವಹಿಸುವ ಮಯ್ಯರಬೈಲು, ಅಲೆತ್ತೂರಿನ ತರುಣ ಬಳಗದ ಸರ್ವ ಯುವಕರೂ ಈ ನಿಟ್ಟಿನಲ್ಲಿ ಪ್ರಶಂಸಾರ್ಹರು. ನಾ ಕಾರಂತರೂ ಒಂದು ಬಾರಿ ನಮ್ಮಲ್ಲಿ ಅತಿಥಿ ಕಲಾವಿದರಾಗಿ ಬಂದು ಶ್ರೀಹರಿಯ ಪಾತ್ರವನ್ನು ನಿರ್ವಹಿಸಿದ್ದರು ಅವರ ಜತೆಗೆ ಪಾತ್ರಮಾಡುವ ಸದವಕಾಶ ನಮಗೆ ಲಭಿಸಿತ್ತು.



ಅಲೆತ್ತೂರು ಹಬ್ಬ ಪ್ರತೀ ವರ್ಷ ನಾವೆಲ್ಲ ಡಿಸೆಂಬರ್ ತಿಂಗಳು ಬರುವುದನ್ನೇ ಕಾಯುವಂತೆ ಮಾಡಿದೆ ಎಂದರೆ ತಪ್ಪಾಗಲಾರದೇನೋ. ನಮ್ಮ ಹೊಸವರ್ಷದ ಆಚರಣೆ ಯಕ್ಷಗಾನ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಆಯೋಜನೆಯ ಮೂಲಕ ಅರ್ಥಪೂರ್ಣವಾಗಿ ನಡೆಯುತ್ತಿದೆ ಎಂದು ಹೇಳಿದರೆ ತಪ್ಪಾಗಲಾರದು. ನಾವೂ ಯಕ್ಷಗಾನ ಕಲಾವಿದರು ಎಂಬಂತಹ ಜಂಭದ ಮಾತುಗಳಲ್ಲ, ಯಕ್ಷಗಾನಕ್ಕಾಗಿ ನಮ್ಮದೂ ಕಿಂಚಿತ್ ಮಾತ್ರದ ಅಳಿಲ ಸೇವೆ ಅಷ್ಟೆ. ಯಕ್ಷಗಾನದ ನಾದ ಕಿವಿಗಳಲ್ಲಿ ಗುಂಯ್ಗುಡುತ್ತಿದ್ದರೆ ಮನದಲ್ಲೇನೋ ಒಂದು ರೀತಿಯ ಆನಂದ, ಯಕ್ಷಗಾನ ಕಲಾವಿದರ ಜತೆಗಿನ ಒಡನಾಟ ಮತ್ತು ಅವರ ಜತೆಗಿನ ಮಾತುಕಥೆ ಅವರ ಹಾವಭಾವಗಳನ್ನು ಗಮನಿಸುವುದು ನಮಗೆ ಸಂತೋಷದ ವಿಷಯ. ನಮ್ಮ ನಾಡಿನ ನಮ್ಮ ಸಂಸ್ಕೃತಿಯನ್ನು ಎತ್ತಿಹಿಡಿಯುವ, ಪುರಾಣಗಳಲ್ಲಿನ ನೀತಿ, ಮೌಲ್ಯ, ಕಥೆಗಳನ್ನು ಬೌಧ್ದಿಕವಾಗಿ ಬೋಧಿಸುವ ಸಾಮರ್ಥವಿರುವ ಕಲೆ ಯಕ್ಷಗಾನ, ದೇಹದ ಜತೆಗೆ ಬುದ್ಧಿಗೂ ಇಲ್ಲಿದೆ ಕೆಲಸ. ಮನರಂಜನೆಯೇ ಕೇಂದ್ರವೆಂದು ಕಂಡರೂ ಸಂಗೀತ, ವಾದನ, ನೃತ್ಯ, ಸಾಹಿತ್ಯಗಳಿಂದ ಸಮೃದ್ಧವಾಗಿ ಸೀಮಾತೀತವಾಗಿ ಕಲ್ಪನಾಲೋಕದಲ್ಲಿ ವಿಹರಿಸುವ ಅವಕಾಶ ಯಕ್ಷಗಾನದಲ್ಲಿದೆ, ಪರಂಪರೆಯ ಕ್ರಮಗಳನ್ನು ಬಿಡದೆ ಹೊಸತನ್ನು ಆವಿಶ್ಕರಿಸಿಕೊಳ್ಳಬಲ್ಲ ವಿಪುಲ ಅವಕಾಶಗಳೂ ಇವೆ. ಯಕ್ಷಗಾನದ ಅಮಲು ಒಂದು ಬಾರಿ ಹಿಡಿದರೆ ಮತ್ತೆ ಅದೇ ನಮ್ಮನ್ನು ಅದರತ್ತ ಎಳೆಯುತ್ತದೆ. ನರಸಿಂಹ ಮಯ್ಯರ ಬಂಧುಗಳಾದ ಸುರೇಶ ಉಪಾಧ್ಯರೇ ಇದಕ್ಕೆ ಸಾಕ್ಷಿ ಕಳೆದ ಬಾರಿ ಹೆಗಲಿಗೆ ಕ್ಯಾಮರಾ ಸಿಕ್ಕಿಸಿ ಬೆಂಗಳೂರಿನಿಂದ ಬಂದಿದ್ದ ಅವರು ಈ ಬಾರಿ ತಮ್ಮ ತಮ್ಮ ಹರೀಶ್ ಉಪಾಧ್ಯರನ್ನೂ ಜತೆಗೆ ಕರೆದುಕೊಂಡು ಬಂದು ನಮ್ಮ ಛಾಯಾಚಿತ್ರಗಳನ್ನು ಸಾಕ್ಷಾತ್ಕರಿಸಿ ನೀಡಿದ್ದಾರೆ.

ಮತ್ತೆ ಎಲ್ಲರ ಜತೆ ಬೆರೆಯುವುದಕ್ಕೆ ಇನ್ನೊಂದು ವರುಷ ಕಾಯಬೇಕು, . ಮಯ್ಯರಬೈಲಿನ ಸ್ನೇಹಿತರ,ಬಂಧುಗಳ ಪ್ರೀತಿ, ವಿಶ್ವಾಸ, ಸ್ನೇಹ ನಿರಂತರವಾಗಿ ಹೀಗೆಯೇ ಇರಲಿ ಎಲ್ಲ ಯುವಕ ಸಂಘದವರಿಗೂ ಆದರ್ಶವಾಗಿ ಇಂತಹಾ ಕಾರ್ಯಕ್ರಮಗಳು ಇನ್ನಷ್ಟು ನಡೆಯಲಿ ಎಂಬ ಬಯಕೆಯೊಂದಿಗೆ.
ಲನಾಭಟ್ಟ...

ನಿಮ್ಮ ಅಭಿಪ್ರಾಯ