Sunday, March 24, 2013

ಸಾರ್ಥಕ್ಯ

೩೫ ವರ್ಷಗಳಿಂದ ತಮ್ಮ ಉಸಿರಲ್ಲಿ ಉಸಿರಿನಂತೆ ಬೆರೆತಿದ್ದ ಅಂಗಡಿಯಿಂದ ಹೊರಗೆ ಬಂದ ಭಟ್ಟರು ಕೊನೆಯ ಬಾರಿಗೆ ಎಂಬಂತೆ ಹಿಂತಿರುಗಿ ನೋಡಿ ದೀರ್ಘವಾದ ಉಸಿರೊಂದನ್ನು ಬಿಟ್ಟರು.ಅವರು ತಮ್ಮ ತಂದೆಯಿಂದ ಬಂದಿದ್ದ ವಹಿವಾಟನ್ನು ಸರಸ್ವತೀ ಸೇವೆ ಎಂಬುದಾಗಿ ಭಾವಿಸಿ ಪುಸ್ತಕದ ಮಳಿಗೆಯನ್ನು ನಡೆಸುತ್ತ ಬಂದಿದ್ದರು. ಭಾರೀ ಎಂಬಂತೆ ದೊಡ್ಡದಲ್ಲವಾದರೂ ಸಣ್ಣದೂ ಅಲ್ಲವೆಂಬಂತೆ, ನಗರದ ತುಸು ಹೊರಗೆ ಚೆನ್ನಾಗಿ ವ್ಯವಹಾರ ಬೆಳೆದು ನಿಂತಿತ್ತು. ತಮ್ಮ ಗೆಳೆಯ ದಿನೇಶ ಕಾಮತರ ದೂರದ ಸಂಬಂಧಿಯೊಬ್ಬ ಭಟ್ಟರ ಮಳಿಗೆಯಲ್ಲಿ ಕಾರ್ಯ ನಿರ್ವಹಿಸುತ್ತಿದ್ದ.

ಭಟ್ಟರ ಧರ್ಮಪತ್ನಿ ಭಾರತಿ ಸದ್ಗುಣಿ, ಸರಳ ವ್ಯಕ್ತಿತ್ವದ ನಗುಮುಖದಿಂದ ಎಲ್ಲರನ್ನೂ ಆದರದಿಂದ , ಪ್ರೀತಿಯಿಂದ ಕಾಣುತಿದ್ದರು. ಈರ್ವರು ಮಕ್ಕಳನ್ನು ಪಡೆದಿದ್ದ ದಂಪತಿ, ಮಗಳನ್ನು ವಿವಾಹ ಮಾಡಿ ಕೊಟ್ಟಿದ್ದರು, ಮಗ ಒಳ್ಳೆಯ ವಿದ್ಯಾಭ್ಯಾಸವನ್ನು ಪಡೆದು, ವಿದೇಶದಲ್ಲಿ ಉದ್ಯೋಗದಲ್ಲಿದ್ದ.

ಬೀದಿಗಿಳಿದು, ಪ್ರತಿದಿನವೂ ತಮ್ಮ ಬಜಾಜ್ ಸ್ಕೂಟರನ್ನು ನಿಲ್ಲಿಸುತ್ತಿದ್ದ ಮರದ ಬುಡಕ್ಕೆ ಬಂದ ಭಟ್ಟರು ಸ್ಕೂಟರ್ ಹತ್ತಿ ಮನೆಗೆ ಹೊರಟರು.
ನಗರದಿಂದ ಹೊರಕ್ಕೆ ಬಂದು ತಮ್ಮ ಗ್ರಾಮದೆಡೆಗೆ ತಿರುಗಿ ಕಚ್ಚಾ ರಸ್ತೆಯಲ್ಲಿ ನಿಧಾನವಾಗಿ ಸ್ಕೂಟರ್ ಚಲಾಯಿಸಿಕೊಂಡು ಹತ್ತು ವರ್ಷಗಳ ಹಿಂದಿದ್ದ ತಮ್ಮ ಊರಿಗೂ ಇಂದಿರುವ ತಮ್ಮ ಊರಿಗೂ ಕಾಣುವ ವ್ಯತ್ಯಾಸಗಳನ್ನು ಯೋಚಿಸುತ್ತಾ ತಮ್ಮ ಮನೆಯ ಅಂಗಳವನ್ನು ತಲುಪಿದರು
ಶ್ರೀರಾಮನ ಆದರ್ಶಗಳನ್ನು ಬಾಳಿನಲ್ಲಿ ಅಳವಡಿಸಿಕೊಂಡಿದ್ದ ಹಿರಿಯರು ಭಟ್ಟರ ಊರನ್ನು ಶ್ರೀರಾಮಪುರವೆಂದು ಕರೆಯಲು ಪ್ರಾರಂಭಿಸಿದ್ದರಂತೆ. ಹಳ್ಳಿಯಲ್ಲಿ ಪುರಾತನವಾದ ಶ್ರೀರಾಮ ಮಂದಿರವೊಂದಿತ್ತು, ಊರ ಮಂದಿ ಶ್ರದ್ಧಾ ಭಕ್ತಿಯಿಂದ ಶ್ರೀರಾಮನನ್ನು ನಂಬಿಕೊಂಡು ಬಂದಿದ್ದರು.
ಪ್ರತೀ ಹಳ್ಳಿಯಂತೆ ಅಂಚೆ ಕಛೇರಿ, ಶಾಲೆ , ನಾಲ್ಕಾರು ಅಂಗಡಿಗಳು ಹಾಗೂ ಸದಾ ಶುದ್ಧವಾದ ಸ್ಫಟಿಕ ಜಲದಿಂದ ತುಂಬಿಕೊಂಡು ಊರ ಕಳೆಯನ್ನು ಹೆಚ್ಚಿಸಿದ್ದ ಕೆರೆಯೂ ಇತ್ತು. ಊರಿನಲ್ಲೊಂದು ಗ್ರಂಥಾಲಯವನ್ನು ಸ್ಥಾಪಿಸಬೇಕೆಂಬ ಭಟ್ಟರ ಆಸೆ ಅವರನ್ನು ತಿಳಿದಿದ್ದ ಎಲ್ಲರಿಗೂ ಅರಿವಿತ್ತು. ಭಟ್ಟರು ಯಾರಲ್ಲೂ ಈ ಬಗ್ಗೆ ಗಹನವಾಗಿ ಹೇಳಿಕೊಂಡಿರದಿದ್ದರೂ ಒಮ್ಮೊಮ್ಮೆ ಮಾತಿನ ಮಧ್ಯೆ ಈ ವಿಷಯ ನುಸುಳಿಬಿಡುತ್ತಿತ್ತು.

ಮನೆಗೆ ಬಂದವರೇ ಆರಾಮ ಕುರ್ಚಿಯಲ್ಲಿ ಕುಳಿತು ಗಹನವಾದ ಯೋಚನೆಯಲ್ಲಿ ಮುಳುಗಿದರು. ಮಧ್ಯಾಹ್ನವಾಗುವುದರ ಮುಂಚೆಯೇ ಮರಳಿಬಂದಿದ್ದ ಭಟ್ಟರನ್ನು ಕಂಡ ಅವರ ಪತ್ನಿ ಆಶ್ಚರ್ಯಗೊಂಡರೂ ಏನನ್ನೂ ಕೇಳದೆ ಬಾಯಾರಿಕೆಗೆ ತಣ್ಣಗಿನ ಮಜ್ಜಿಗೆ ನೀರನ್ನು ತಂದು ಕೊಟ್ಟು ಮತ್ತೆ ತಮ್ಮ ದೈನಂದಿನ ಕೆಲಸದಲ್ಲಿ ತಲ್ಲೀನರಾದರು. ಭಟ್ಟರು ಆ ದಿನ ರಾತ್ರಿ ಕುಳಿತು ಪತ್ರವೊಂದನ್ನು ಬರೆಯುತ್ತಿದ್ದರು, ಅವರ ಪತ್ನಿ ಕುತೂಹಲದಿಂದ ಬಳಿಬಂದು ಭಟ್ಟರು ಪತ್ರ ಕೊನೆಗೊಳಿಸುವವರೆಗೆ ಜತೆಗೆ ಕುಳಿತಿದ್ದರು.

ಆರು ತಿಂಗಳ ಬಳಿಕ ಭಟ್ಟರ ಊರಿನಲ್ಲಿ ಗ್ರಂಥಾಲಯದ ಉದ್ಘಾಟನೆ ನಡೆಯಿತು, ಭಟ್ಟರ ಸಂಗ್ರಹದಲ್ಲಿದ್ದ ನೂರಾರು ಪುಸ್ತಕಗಳು ಗ್ರಂಥಾಲಯದ ಕಪಾಟುಗಳಲ್ಲಿ ಆನಂದವಾಗಿ ನಗುತ್ತಿದ್ದಂತೆ ಕಂಡುಬರುತ್ತಿತ್ತು. ಭಟ್ಟರ ಪತ್ನಿ ಮಗ ಹಾಗೂ ಮಗಳು ತಮ್ಮದೇ ಮನೆಯ ಕಾರ್ಯಕ್ರಮದಂತೆ ಸಂಭ್ರಮದಿಂದ ಉಸ್ತುವಾರಿ ವಹಿಸಿಕೊಂಡು ಪಾಲ್ಗೊಂಡರು. ಭಟ್ಟರ ಪುಸ್ತಕಾಲಯದಲ್ಲಿ ಕೆಲಸ ಮಾಡುತ್ತಿದ್ದ ದಿನೇಶ ಕಾಮತರ ಸಂಬಂಧಿ ಗ್ರಂಥಪಾಲಕರಾಗಿ ನೇಮಕಗೊಂಡಿದ್ದರು. ಸರ್ಕಾರದಿಂದ ಗ್ರಂಥಾಲಯಕ್ಕಾಗಿ ೫೦ ಸಾವಿರ ರೂ ಧನಸಹಾಯ ದೊರಕಿತ್ತು. ಕೆಲವು ವರುಷಗಳ ಹಿಂದೆ ಭಟ್ಟರು ಶ್ರೀರಾಮಪುರದ ಶಾಲೆಯ ಬಳಿ ೫ ಸೆಂಟ್ಸ್ ಜಾಗವನ್ನು ಖರೀದಿಸಿದ್ದರು. ನಗರದಲ್ಲಿದ್ದ ಭಟ್ಟರ ಪುಸ್ತಕ ಮಳಿಗೆಯನ್ನು ಮಾರಾಟ ಮಾಡಿ ಬಂದಿದ್ದ ಹಣದಿಂದ ಗ್ರಂಥಾಲಯದ ಕಟ್ಟದ ನಿರ್ಮಾಣ ಮಾಡಲಾಗಿತ್ತು. ಭಟ್ಟರ ಮಗ ಉಳಿದ ಇನ್ನಿತರ ವೆಚ್ಚಗಳನ್ನು ನಿರ್ವಹಿಸಿದ್ದರು.

ಭಟ್ಟರು ಆದಿನ ಬರೆದ ಕಾಗದವನ್ನು ಅವರ ಪತ್ನಿ ಮರುದಿನ ಅಂಚೆಯಲ್ಲಿ ಕಳುಹಿಸಿದ್ದರು. ಕೆಲವಾರು ಅಮೂಲ್ಯವಾದ ಪುಸ್ತಕಗಳನ್ನು ಗ್ರಂಥಾಲಯಕ್ಕಾಗಿ ಕಳಿಸಿಕೊಡುವಂತೆ ಪ್ರಕಾಶಕರೋರ್ವರಿಗೆ ಭಟ್ಟರು ಹೇಳಿ ಕಳುಹಿಸಿದ್ದ ಪತ್ರವದು. ೩ ತಿಂಗಳ ಬಳಿಕ ಪುಸ್ತಕಗಳನ್ನು ಸಂಗ್ರಹಿಸಿ ಭಟ್ಟರ ವಿಳಾಸಕ್ಕೆ ಪ್ರಕಾಶಕರು ಕಳುಹಿಸಿಕೊಟ್ಟಿದ್ದರು.

ಗ್ರಂಥಾಲಯದ ಗೋಡೆಯ ಮೇಲೆ ತೂಗುಹಾಕಲ್ಪಟ್ಟಿದ್ದ ಭಟ್ಟರ ಚಿತ್ರಪಟಕ್ಕೆ ಹೂಹಾರ ಹಾಕಲಾಗಿತ್ತು. ನೆರೆದಿದ್ದ ಊರಿನ ಹಿರಿಯರ ಮಕ್ಕಳ ಹೆಂಗಳೆಯರ ಸಂತಸವನ್ನು ಕಂಡ ಭಟ್ಟರು ತಮ್ಮ ಕನಸು ನನಸಾದ ಸಾರ್ಥಕತೆಯಿಂದ ಧನ್ಯತೆಯ ಮಂದಹಾಸವನ್ನು ಬೀರುತ್ತಿದ್ದಂತೆ ಕಂಡುಬಂತು.

Wednesday, March 6, 2013

ಹಾಚಿ ಎಂಬ ಶ್ವಾನದ ಕಥೆ

ನೀವು ಸಾಕು ಪ್ರಾಣಿಗಳನ್ನು ಅದರಲ್ಲೂ ಶ್ವಾನ ಪ್ರಿಯರಾಗಿದ್ದಲ್ಲಿ ನೋಡಲೇಬೇಕಾದಂತಹ ಅತ್ಯಂತ ಅದ್ಭುತ ಚಿತ್ರ ಹಾಚಿ ಎ ಡಾಗ್ಸ್ ಟೇಲ್( ಹಾಚಿ ಎಂಬ ಶ್ವಾನದ ಕಥೆ). ಈ ಕಥೆಯು ನೈಜ ಘಟನೆಯನ್ನು ಆಧಾರವಾಗಿಟ್ಟುಕೊಂಡು ಚಿತ್ರಿಸಲಾಗಿದ್ದು, ಮನಕಲಕುವಂತಹಾ ಸಂಭಾಷಣೆ, ಭಾವನಾತ್ಮಕ ಅಭಿನಯ ಹಾಗೂ ಸನ್ನಿವೇಶಗಳಿಂದ ಕೂಡಿ ಐ ಎಮ್ ಡಿ ಬಿ(www.imdb.com) ಪುಟದಲ್ಲಿ ೮ ಅಂಕಗಳನ್ನು ಗಳಿಸಿರುವುದು ಈ ಚಿತ್ರ ಎಷ್ಟು ಪರಿಣಾಮಕಾರಿಯಾಗಿದೆ ಎಂದು ತೋರಿಸುತ್ತದೆ.

ಈ ಕಥೆಯ ಪೂರ್ವಾರ್ಧ ಹಾಚಿ ಮತ್ತು ಅದರ ಯಜಮಾನನ ನಡುವಿನ ಪ್ರೀತಿಯನ್ನು ಸಮರ್ಪಕವಾಗಿ ತೋರಿಸಿದರೆ, ಅನಿರೀಕ್ಷಿತವಾದ ತಿರುವಿನಿಂದಾಗಿ ಚಿತ್ರದ ಎರಡನೇ ಭಾಗ ಅದ್ಭುತವಾಗಿ ಮೂಡಿಬರುತ್ತದೆ.
ಚಿತ್ರವೀಕ್ಷಿಸುತ್ತಾ ಮುಂದೆ ಸಾಗುತ್ತಿದ್ದಂತೆ ಒಂದೊಮ್ಮೆಗೆ, ಚಿತ್ರದ ಕಥೆ ಸಪ್ಪೆಯೋ ಎಂಬ ಸಂದೇಹ ನನ್ನನ್ನು ಕಾಡತೊಡಗಿತು ಆದರೆ ಕೆಲವೇ ನಿಮಿಷಗಳಲ್ಲಿ ಆ ಸಂದೇಹ ನಿವಾರಣೆಯಾಗಲ್ಪಟ್ಟಿತು.

ಈ ಚಿತ್ರದಲ್ಲಿ ಶಿಲ್ಪಾ ಶೆಟ್ಟಿಗೆ ಹಿಂದೊಮ್ಮೆ ಮುತ್ತಿಟ್ಟು (ಕು)ಖ್ಯಾತರಾದ ರಿಚರ್ಡ್ ಗೆರೆ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಮಾತ್ರವಲ್ಲ, ಪ್ರೊಫೆಸರ್ ಪಾತ್ರವನ್ನು ಸಮರ್ಪಕವಾಗಿ ನಿಭಾಯಿಸಿದ್ದಾರೆ.
ಅಕೀಟಾ ಎಂಬ ಜಪಾನ್ ತಳಿಯ ನಾಯಿಮರಿಯೊಂದು ರೈಲ್ವೇ ಸ್ಟೇಷನ್ ನಲ್ಲಿ ಅನಿರೀಕ್ಷಿತವಾಗಿ ಪ್ರೊಫೆಸರ್ ಅವರಿಗೆ ಸಿಗುತ್ತದೆ. ಮುದ್ದಾದ ನಾಯಿಮರಿಯ ವಾರಸುದಾರರು ಯಾರೆಂದು ಹುಡುಕುವ ಪ್ರೊಫೆಸರ್ ರವರ ಪ್ರಯತ್ನ ಯಶಸ್ವಿಯಾಗದಿದ್ದಾಗ ನಾಯಿಮರಿಯನ್ನು ಸಾಕುವುದಕ್ಕಾಗಿ ಮುಂದೆಬಂದವರಿಗೆ ದತ್ತು ಕೊಡುವುದು ಎಂದು ಪ್ರೊಫೆಸರ್ ಹಾಗೂ ಅವರ ಪತ್ನಿ ತೀರ್ಮಾನಿಸುತ್ತಾರೆ. ಪ್ರೊಫೆಸರ್ ರವರಿಗಂತೂ ನಾಯಿಮರಿ ಬಹಳಷ್ಟು ಅಚ್ಚುಮೆಚ್ಚಿನದ್ದಾಗಿರುತ್ತದೆ, ಆದರೆ ಅವರ ಪತ್ನಿಗೆ ನಾಯಿಮರಿ ಅವರ ಮನೆಯಲ್ಲಿರುವುದು ಎಳ್ಳಷ್ಟೂ ಇಷ್ಟವಿರುವುದಿಲ್ಲ.  ನಾಯಿಮರಿ ಮತ್ತು ಪ್ರೊಫೆಸರ್ ರ ಆತ್ಮೀಯತೆಯನ್ನು ಕಂಡು ಪ್ರೊಫೆಸರ್ ನಾಯಿಮರಿಯ ಜತೆಗೆ ಮಕ್ಕಳಂತೆ ಆಟವಾಡುತ್ತಾ ಸಂತೋಷವಾಗಿರುವುದನ್ನು ಕಂಡ ಅವರ ಪತ್ನಿ ನಾಯಿಮರಿಯನ್ನು ತಮ್ಮ ಕುಟುಂಬದಲ್ಲಿ ಸೇರಿಸಿಕೊಳ್ಳುವುದಕ್ಕೆ ಒಪ್ಪಿಗೆಯನ್ನು ನೀಡುತ್ತಾರೆ.
ಮುಂದೆ ನಾಯಿಮರಿ ಬೆಳೆದು ದೊಡ್ಡದಾಗುತ್ತದೆ. ಪ್ರೊಫೆಸರ್ ಜತೆಗೆ ದಿನವೂ ಬೆಳಗ್ಗೆ ಅವರು ಕಾಲೇಜಿಗೆ ತೆರಳುವ ವೇಳೆಯಲ್ಲಿ ರೈಲ್ವೇಸ್ಟೇಷನ್ ತನಕ ಬರುವುದು ಹಾಗೂ ಅವರು ಸಂಜೆ ಮರಳುವ ಹೊತ್ತಿನಲ್ಲಿ ಪುನಃ ಬಂದು ಅವರಿಗಾಗಿ ಕಾದು ಅವರ ಜತೆ ಆಟವಾಡುತ್ತಾ ಮನೆಗೆ ಮರಳುವ ಪರಿಪಾಠವನ್ನು ಬೆಳೆಸಿಕೊಳ್ಳುತ್ತದೆ. ಮುಂದೆ ಪ್ರೊಫೆಸರ್ ಮಗಳಿಗೆ ಮದುವೆ ನೆರವೇರುತ್ತದೆ ಹಾಚಿಯೂ ಮದುವೆಯ ಸಂಭ್ರಮದಲ್ಲಿ ಪಾಲ್ಗೊಳ್ಳುತ್ತದೆ.
ಮುಂದೆ ಚಿತ್ರದಲ್ಲಿನ ಅನೀರೀಕ್ಷಿತ ತಿರುವಿನಿಂದಾಗಿ ಕೊನೆಯವರೆಗೆ ಹಾಚಿ ನಮ್ಮನ್ನು ಸಂಪೂರ್ಣವಾಗಿ ಆವರಿಸಿಕೊಳ್ಳುತ್ತದೆ.
ನನಗಂತೂ ಎಂದೆಂದೂ ಮರೆಯಲಾಗದ ಚಿತ್ರವಾಗಿ ಹಾಚಿಯ ಕಥೆ ಮನಃಪಟಲದಲ್ಲಿ ನೆಲೆಗೊಂಡಿದೆ.
ನೀವೂ ನೋಡಿ ಏನನ್ನಿಸಿತು ಹೇಳಿ....

Click here to download Hachi a Dog's tale via torrent.

ನಿಮ್ಮ ಅಭಿಪ್ರಾಯ