Thursday, September 4, 2014

ಪದ್ಯ ಪುರಾಣ ಮತ್ತು ಶಿ(She) ಎಂಬ ಐಕಾನು

ಪದ್ಯ ಪುರಾಣ
---------------------
ಒಮ್ಮೊಮ್ಮೆ ಹೀಗೆ ಲಹರಿಯಲ್ಲಿದ್ದಾಗ ನಾನು ಹಾಡುವ ಪರಿಪಾಠವನ್ನು ಬೆಳೆಸಿಕೊಂಡಿದ್ದೇನೆ(ನನ್ನ ಮಟ್ಟಿಗೆ ನಾನು ಹಾಡುವುದೇ ಆದರೆ ಇತರರಿಗೂ ಅದೇ ಅನುಭವವಾಗುತ್ತದೋ ಇಲ್ಲವೋ ಎನ್ನುವ ಪ್ರಶ್ನೆ ಕೇಳುವ ಸಾಹಸಕ್ಕೆ ನಾನು ಕೈ ಹಾಕುವುದಿಲ್ಲ) , ಮುಖ್ಯವಾಗಿ ಪ್ರಸಿದ್ಧ ಭಾಗವತರ ಧಾಟಿಯಲ್ಲಿ ಹಾಡುತ್ತಿರುವೆ ಎಂದು ಭಾವಿಸಿ ಹಾಡುವ ಮರುಳು, ಹಾಡಿದಾಗ ಸಿಗುವ ಧನ್ಯತಾ ಭಾವವೇ ನನಗೆ ಮುಖ್ಯ ಹೊರತು ಬೇರೇನಲ್ಲ .
ಹಾಡಿ ಅಲ್ಲಿಗೇ ಮುಗಿಸಿದರೆ ಹಾಡುತ್ತಿರುವುದು ಸರಿಯಾಗಿದೆಯೋ ಇಲ್ಲವೋ ಎನ್ನುವ ಬಗ್ಗೆ ತಿಳಿಯಬೇಕಲ್ಲ, ಹಾಗಾಗಿ ಅಭಿಪ್ರಾಯ ಸಂಗ್ರಹವೂ ನನ್ನ ಪಾಲಿಗೆ ಅಷ್ಟೇ ಮುಖ್ಯ.
ಅಭಿಪ್ರಾಯ ಕೇಳುವುದಾದರೂ ಯಾರಲ್ಲಿ ಇದ್ದಾಳಲ್ಲ ನನ್ನವಳು ಅವಳಲ್ಲೇ ಯಾವತ್ತೂ ಪದ್ಯ ಹಾಡಿದ ಬಳಿಕ ಹುಬ್ಬು ಹಾರಿಸಿ ಒಂದು ನೋಟ ಹರಿಸಿ "ಹೇಗೆ ಒಳ್ಳೇದಾಯ್ತ ?" ಅಂತ ಒಂದು ಮುಗುಳ್ನಗೆ ಬೀರುವುದು , ಅವಳಾದರೋ ಸ್ವಲ್ಪ ಯೋಚಿಸಿದವಳಂತೆ ಮಾಡಿ "ಈ ಸಲದ್ದು ಅಷ್ಟು ಒಳ್ಳೆದಾಗ್ಲಿಲ್ಲ ಸ್ವಲ್ಪ ಕಿರುಚುವುದು ಕಡಿಮೆ ಮಾಡಿ ಮೆತ್ತಗೆ ಹೇಳಿದ್ರೆ ಇನ್ನೂ ಚೆನ್ನಾಗಿರ್ತಿತ್ತು ಮೊನ್ನೆ ಹೇಳಿದ್ರಲ್ಲ ಅದು ಒಳ್ಳೆಯದಾಗಿದೆ" ಎನ್ನುವುದು, "ಮೊನ್ನೆಯದ್ದು ಚೆನ್ನಾಗಿತ್ತ ನೀನು ಹೇಳಲೇ ಇಲ್ಲವಲ್ಲ" ಎಂದರೆ, "ಇವತ್ತು ಹಾಡಿದ್ದನ್ನು ಕೇಳಿದ ಮೇಲಲ್ಲವೇ ಮೊನ್ನೆಯದ್ದು ಚೆನ್ನಾಗಿತ್ತು ಅನ್ನಿಸುವುದು" ಅನ್ನಬೇಕೆ. ಏನೇ ಇರಲಿ ನನ್ನ ಸಾಹಸದೆದುರು ಹಿಮಾಲಯ ಪರ್ವತವೇ ಅಡ್ಡ ನಿಂತರೂ ನಾನು ಕದಲುವವನಲ್ಲ ಎಂಬ ದೃಢ ನಿರ್ಧಾರದಿಂದ ಮರಳಿ ಯತ್ನವ ಮಾಡು ಎನ್ನುವಂತೆ ಮತ್ತೆ ತೊಡಗಿಕೊಳ್ಳುವ ಆಸಾಮಿ ನಾನು.
ಎಲ್ಲೋ ಕೇಳಿದ ಒಂದು ಮಾತು ನೆನಪಾಯಿತು "ಉಗುಳಿ ಉಗುಳಿ ರೋಗ , ಬೊಗಳಿ ಬೊಗಳಿ ರಾಗ" ಸರಿ ಪ್ರಾಕ್ಟೀಸ್ ಮೇಕ್ಸ್ ಮ್ಯಾನ್ ಪರ್ಫೆಕ್ಟ್ ಎಂದು ಅಭ್ಯಾಸವನ್ನು ಮತ್ತಷ್ಟು ಹೆಚ್ಚಿಸಿದೆ, ರಾತ್ರಿ ಮಲಗಿದಾಗಲೂ ಮೆಲ್ಲಗೆ ಪದ್ಯಗಳನ್ನು ಹಾಡತೊಡಗಿದೆ, ಒಂದನೇ ದಿನ ನನ್ನವಳ ಪ್ರತಿಕ್ರಿಯೆ ಏನೂ ಇರಲಿಲ್ಲ.
ಎರಡನೇ ದಿನ ಮಲಗಿದ್ದವ ಏನೋ ಯೋಚಿಸುತ್ತಿದ್ದೆ, ನನ್ನವಳು ಕರೆದು "ಏನ್ರೀ ಇವತ್ತು ಪದ್ಯ ಹೇಳ್ಲಿಕ್ಕಿಲ್ವಾ ಅಂತ ನೆನಪಿಸಬೇಕೇ ? !" ಹ್ನೆ ! ಎಲಾ ಇವಳೇ , ಹ ಹ , ನನ್ನ ಹಾಡುಗಾರಿಕೆಯ ಸ್ವಾರಸ್ಯ ಇವಳಿಗೆ ಈಗಲಾದರೂ ಅರ್ಥವಾಯಿತಲ್ಲ, ಒಳ್ಳೆಯದಾಯಿತು" ಎಂದುಕೊಂಡು ಉತ್ಸಾಹದಿಂದ ಗುನುಗುನಿಸಿದೆ.
ಮೂರನೆಯ ದಿನ ನನ್ನಾಕೆ ನಿಜವಾಗಲೂ ನನ್ನ ಹಾಡುಗಾರಿಕೆಯ ಅಭಿಮಾನಿಯಾಗಿದ್ದಾಳೋ ಇಲ್ಲವೋ ಎನ್ನುವುದನ್ನು ಪರೀಕ್ಷಿಸಬೇಕೆಂಬ ಉದ್ದೇಶದಿಂದ ಉದ್ದೇಶಪೂರ್ವಕವಾಗಿಯೇ ಸುಮ್ಮನಿದ್ದೆ. ನನ್ನವಳು ಮೆಲ್ಲನೇ ಕರೆದಳು "ರೀ, ಪದ್ಯ ಹೇಳ್ರೀ" , "ಹೆ ಹೆ ಹೆ, ನನಗಂತೂ ಬಹಳ ಸಂತೋಷವಾಯಿತು, ಈಗಲಾದರೂ ನನ್ನ ನಿಜವಾದ ಪ್ರತಿಭೆ ಇವಳಿಗೆ ಅರ್ಥವಾಯಿತಲ್ಲಾ " ಎಂದುಕೊಂಡು ಹಾಡತೊಡಗಿದೆ. ಕೆಲವಾರು ಹಾಡುಗಳನ್ನು ಹಾಡಿ ನಿಲ್ಲಿಸಿದೆ, ಅಷ್ಟರಲ್ಲಿ "ಎಂತಕ್ಕೆ ನಿಲ್ಲಿಸಿದ್ದು ಹಾಡಿ, ಹಾಡಿ" ಎಂದಳು. ನನಗಂತೂ ಅತ್ಯಾಶ್ಚರ್ಯವಾಗಿತ್ತು, ಛಂಗನೇ ಎದ್ದು ಕುಳಿತು ಉತ್ಸಾದಿಂದ,ಸಂತೋಷದಿಂಡ ಕೇಳಿದೆ "ಏ ... ಆಷ್ಟೂ ಒಳ್ಳೆಯದಾಗ್ತದ ಮಾರಾಯ್ತಿ ನಾನು ಹಾಡುವುದು, ಒಳ್ಳೆ ಸುಧಾರಣೆ ಆಗಿದೆ ಅಲ್ವಾ ಈಗ ನನ್ನ ಹಾಡುಗಾರಿಕೆಯಲ್ಲಿ ಹ್ನೇ ? ?" ಎಂದು...
ಅವಳಿಗೆ ನಿದ್ದೆ ಕಣ್ಣಿಗೆ ಹಿಡಿಯುತ್ತಾ ಇತ್ತೆಂದು ಕಾಣುತ್ತದೆ
"ಹಾಗೇನೂ ಇಲ್ಲ, ಕೇಳ್ತಾ ಇದ್ರೆ ಬೇಗ ನಿದ್ದೆ ಬರ್ತದೆ ಹಾಗೆ ಹೇಳಿದ್ದು, ನನಗೆ ನಿದ್ದೆ ಬರುವ ತನಕ ಹೇಳ್ತಾ ಇರಿ ಆಯ್ತ" ಎನ್ನಬೇಕೆ !!!
---------------------------------------------------

ನನ್ನ ಗಣಕದ ಪರದೆಯ ಮೇಲೆ ಕಣ್ಣಾಡಿಸುತ್ತಿದ್ದ ಮಡದೀಮಣಿ, ಒಮ್ಮೆಯೇ ಆಶ್ಚರ್ಯ ತುಂಬಿದ ಅನುಮಾನದ ದನಿಯಿಂದ "ಏನ್ರೀ ಇದು ?!!" ಎಂದು ಸ್ವಾತಂತ್ರ್ಯ ದಿನಾಚರಣೆಯನ್ನು ನೆನಪಿಸುವಂತೆ ಗದರಿಸಬೇಕೇ ?

"ಎಂತದ್ದೇ ನಿನ್ನದ್ದು ?" ಎನ್ನುತ್ತಾ ಕೊರಳೆತ್ತಿ ನೋಡಿದೆ , "ಏನಿದು "She" ಐಕಾನು, ಎಂತ ಉಂಟು ಇದ್ರಲ್ಲಿ ?" ಎಂದು ಗುಡುಗಿದಳು

"ಹ್ನೇ ! ಎಂತ ಶೀ ಐಕಾನು ಮಾರಾಯ್ತಿ ಏನಿದ್ರು "ಯು" ಐಕಾನೇ ಇರಬೇಕಿತ್ತಲ್ಲ, "ಶಿ" ಉಂಟಾ ! ಅಷ್ಟೊಂದು ಐಕಾನುಗಳ ನಡುವೆ ಇದೇ ನಿನ್ನ ಕಣ್ಣಿಗೆ ಬೀಳಬೇಕೆ" ಎಂದೆ.
ನನ್ನ ಡೆಸ್ಕ್ ಟಾಪ್ ಮೇಲೆ ನೂರಾರು ಐಕಾನ್ ಗಳು ಮುಕ್ತಿಗೋಸ್ಕರ ಕಾಯುತ್ತಾ ಕುಳಿತಿರುತ್ತವೆ, ಡೆಸ್ಕ್ ಟಾಪ್ ನಲ್ಲಿ ಇನ್ನು ಜಾಗ ಇಲ್ಲ ಎಂದಾದ ಮೇಲೆ ಎಲ್ಲಕ್ಕೂ ಒಮ್ಮೆಯೇ ಮುಕ್ತಿ ಕಲ್ಪಿಸುವ ಅಭ್ಯಾಸ ನನ್ನದು , ನನಗೂ ನೆನಪಿಲ್ಲ ಇದೆಂತ ಐಕಾನಪ್ಪ ಎಂದು ತಲೆ ಕೆರೆದುಕೊಂಡೆ.

ನನಗೂ ಕುತೂಹಲ ಉಂಟಾಯಿತು ಇದ್ಯಾವ "ಶಿ" ನನ್ನ ಗಣಕದಲ್ಲಿ ಕುಳಿತಿದೆ ಎಂದು

" ಧೈರ್ಯಮಾಡಿ ತೆರೆದು ನೋಡು, ನನಗೂ ನೆನಪಿಲ್ಲ ಎಂತಾಂತ ನೋಡುವ" ಎಂದೆ

ಮೌಸು ಮಹಾರಾಯನ ಹೃದಯಸ್ಥಂಭನವಾಗುವಂತೆಯೇ ಎರಡು ಬಾರಿ ಕ್ಲಿಕ್ಕಿಸಿದಳು.... !! ನಾನು ಬಂದದ್ದೆಲ್ಲಾ ಬರಲಿ ಗೋವಿಂದನ ದಯವಿರಲಿ ಎಂದು ತಯಾರಾದೆ ...

ಯಾವಾಗಲೋ ಗಡಿಬಿಡಿಯಲ್ಲಿ ಎಲ್ಲಿಂದಲೋ ಡೌನ್ ಲೋಡ್ ಮಾಡಿದ್ದ ಶೇಣಿಯವರ ನಗುಮುಖದ ಭಾವಚಿತ್ರ ಪ್ರಕಟವಾಯಿತು, ನನ್ನ ತಲೆ ಉಳಿಯಿತು... 

----------------------------------------

Friday, June 20, 2014

ಊಟಕ್ಕಿಲ್ಲದ ಉಪ್ಪಿನಕಾಯಿಯೂ ಉಪಯೋಗಕ್ಕಿಲ್ಲದ ರೈಲೂ ಎಷ್ಟಿದ್ದರೇನು ಪ್ರಯೋಜನ ಗೌಡರೇ ?

ಬೆಂಗಳೂರು ಮಂಗಳೂರು ರೈಲಲ್ಲಿ ಸೀಟು ಸಿಗುವುದೇ ಕಷ್ಟ, ಮಂಗಳೂರು ರೈಲು ಎಂಬುದು ಕೇವಲ ಹೆಸರಿಗೆ ಮಾತ್ರ ಎಂಬಂತಾಗಿದೆ, ಇಲ್ಲಿಂದ ಅಲ್ಲಿಗೆ ತಲುಪಲು ತೆಗೆದುಕೊಳ್ಳುವ ಸಮಯದಲ್ಲಿ ಎರಡು ಬಾರಿ ಮಂಗಳೂರಿಂದ ಬೆಂಗಳೂರಿಗೆ ಹೋಗಿ ಬರಬಹುದು. ಅರಸೀಕೆರೆಯ ಮೂಲಕ ಇರುವ ನೇರ ಮಾರ್ಗವನ್ನು ಬಿಟ್ಟು ಮೈಸೂರು ಮೂಲಕವಾಗಿ ೧೨ ಘಂಟೆ ಪ್ರಯಾಣ(ಸ) (ಪ)ಮಾಡಬೇಕು. ಇನ್ನು ಮಂಗಳೂರಿನಿಂದ ಹೊರಟರೆ ಮರುದಿನ ಕಛೇರಿ ಸಮಯಕ್ಕಂತೂ ಬೆಂಗಳೂರು ತಲುಪಲು ಸಾಧ್ಯವೇ ಇಲ್ಲ. ರೈಲು ಬೆಂಗಳೂರು ತಲುಪುವಾಗಲೇ ೯ ಘಂಟೆ ಕಳೆದಿರುತ್ತದೆ. ನಗರದ ಹೊರಪ್ರದೇಶದಲ್ಲಿ ಮನೆಯಿದ್ದರಂತೂ ಮಧ್ಯಾಹ್ನವಲ್ಲದೆ ಮನೆಗೆ ತಲುಪಲು ಸಾಧ್ಯವೇ ಇಲ್ಲ. ನಡುವಲ್ಲಿ ಹೊಟ್ಟೆ ಹಸಿವಾಯಿತೆಂದು ಹೋಟೇಲಿಗೆ ನುಗ್ಗಿ ಏನಾದರೂ ತಿಂಡಿ ತಿಂದರೆ ಅಲ್ಲಿಗೆ ಕಥೆ ಮುಗಿಯಿತೆಂದೇ ಅರ್ಥ, ಮರುದಿನವೂ ಕಛೇರಿಗೆ ರಜೆ ಹಾಕಿ ಉತ್ತಮ ವೈದ್ಯರನ್ನು(ಈ ಬೆಂಗಳೂರಿನಲ್ಲಿ ಅಸಲಿ ವೈದ್ಯರು ಯಾರೆಂದು ತಿಳಿಯುವುದೂ ದೊಡ್ಡ ಸಾಹಸವೇ ಸರಿ) ಹುಡುಕಿ ಅಲ್ಲಿ ಸರತಿ ಸಾಲಿನಲ್ಲಿ ನಿಂತು ಔಷಧೋಪಚಾರ ಪಡೆಯುವಷ್ಟರಲ್ಲಿ ಕಾಯಿಲೆ ಏನೆಂದೇ ಮರೆತು ಹೋಗಿರುತ್ತದೆ.
ಮಾನ್ಯ ಸದಾನಂದ ಗೌಡರೆ ಸ್ವಲ್ಪ ಆನಂದ ನಮಗೂ ಇರಲಿ ಸ್ವಾಮಿ ದಯವಿಟ್ಟು ಈ ಊಟಕ್ಕಿಲ್ಲದ ಉಪ್ಪಿನಕಾಯಿ ರೈಲನ್ನು ಒಂದು ಉಪಕಾರಕ್ಕೆ ಆಗುವಂತೆ ಮಾಡಿ ನೀವು ಸ್ವಲ್ಪ ದರ ಏರಿಸಿದ್ರೂ ಆಡ್ಡಿ ಇಲ್ಲ ಆದ್ರೆ ಊರಿಡೀ ನಮ್ಮನ್ನು ಸುತ್ತು ಬರುವಂತೆ ಮಾಡಿ ಮೊದಲೇ ಈ ಬೆಂಗಳೂರಿನ ರಸ್ತೆಗಳಲ್ಲಿ ಮನೆಯಿಂದ ಕಛೇರಿಗೆ ಕಛೇರಿಯಿಂದ ಮನೆಗೆ ಅಲೆದು ಅಲೆದು ಸುಸ್ತಾಗಿರುವ ನಮಗೆ ನಮ್ಮ ಊರು ಸೇರುವುದಕ್ಕೂ ಅಲೆಯುವಂತೆ ಮಾಡಬೇಡಿ, ದಯವಿಟ್ಟು ರೈಲು ನೇರವೇ ಹೋಗಲಿ ಒತ್ತಡಕ್ಕೆ ಮಣಿಯದೇ ಕಾರ್ಯ ಮಾಡಿ ಈಗ ಸಿಕ್ಕಿರುವ ಅವಕಾಶವನ್ನು ಕೈಚೆಲ್ಲಿಕೊಳ್ಳಬೇಡಿ.
ದಯವಿಟ್ಟು ಕ್ರಯ ಏರಿಸುವುದಕ್ಕೆ ಮುಂಚೆ ಈಗಿರುವ ರೈಲು ನಮಗೆ ಎಷ್ಟು ಪ್ರಯೋಜನಕಾರಿಯಾಗಿದೆ ಅಂತ ಒಮ್ಮೆ ಯೋಚಿಸಿ ನೋಡಿ. ರೈಲಿಗೂ ಬಸ್ಸಿಗೂ ಒಂದೇ ಕ್ರಯ ಆದ್ರೆ ಮತ್ತೆ ನಿಮ್ಮ ರೈಲು ಯಾರಿಗೆ ಬೇಕು ಹೇಳಿ. ಮೊದಲು ರೈಲು ಪ್ರಯೋಜನಕ್ಕೆ ಆಗುವಂತೆ ಮಾಡಿ ಮತ್ತೆ ಕ್ರಯ ಹೆಚ್ಚು ಮಾಡಿ.

Thursday, June 12, 2014

ಅಗರಿ-ದೇರಾಜೆ-ಶೇಣಿ-ನೆಡ್ಲೆ-ದಿವಾಣ ಯಕ್ಷಗಾನ ತಾಳಮದ್ದಳೆಗಳು

ಇತ್ತೀಚೆಗೆ ಅಂತರ್ಜಾಲದಲ್ಲಿ ಯಕ್ಷಗಾನಕ್ಕೆ ಸಂಬಂಧಿಸಿದ ಮಾಹಿತಿಗಳನ್ನು ಹುಡುಕುತ್ತಿದ್ದಾಗ ಅನರ್ಘ್ಯ ರತ್ನಗಳೆರಡು ಸಿಕ್ಕವು.. ಬಹುಷಃ ಸಾಧಾರಣ ಯಕ್ಷಗಾನವೆಂಬ ಪದವನ್ನು ಬಳಸಿ ಹುಡುಕಿದಲ್ಲಿ ಇವು ಸಿಗಲಾರವೋ ಎನೋ. ಯಕ್ಷಗಾನ ಪ್ರಿಯರ ಅಸ್ವಾದನೆಗೋಸ್ಕರ ಈ ಎರಡು ತಾಳಮದ್ದಳೆಗಳ ಕೊಂಡಿಯನ್ನು ಮೂಲ ಪ್ರಕಟಿತ ಪುಟದ ಕೊಂಡಿಯೊಡನೆ ಪ್ರಕಟಿಸುತ್ತಿದ್ದೇನೆ.

ಮೂಲಪುಟ: http://deseesaamprathi.blogspot.in/p/yakshagana-thalamaddale.html

1. ಶಲ್ಯ ಸಾರಥ್ಯ
ಅಗರಿ ಶ್ರೀನಿವಾಸ ಭಾಗವತರು -  (Agari Shrinivasa Bhagavatha)
ನೆಡ್ಲೆ ನರಸಿಂಹ ಭಟ್ ( ಚೆಂಡೆ)- (Nedle Narasimha Bhat)
 ದಿವಾಣ ಭೀಮ ಭಟ್ (ಮದ್ದಳೆ) (Divana Bheema Bhat)

 ದೇರಾಜೆ ಸೀತಾರಾಮಯ್ಯ (ಕೌರವ) (Deraje Seetharamayya)
 ಶೇಣಿ ಗೋಪಾಲಕೃಷ್ಣ ಭಟ್ (ಶಲ್ಯ) (Sheni Gopalakrishna Bhat)


http://www.divshare.com/download/19235703-afe

2.ಉತ್ತರನ ಪೌರುಷ (ನಾದಲಹರಿ ಕ್ಯಾಸೆಟ್ಸ್) ದೇರಾಜೆ ಸೀತಾರಾಮಯ್ಯ (ಉತ್ತರ ಕುಮಾರ) 
ಶೇಣಿ ಗೋಪಾಲಕೃಷ್ಣ ಭಟ್ (ಬೃಹನ್ನಳೆ)  
ವಿಟ್ಲ ಗೋಪಾಲಕೃಷ್ಣ ಜೋಷಿ (ಗೋಪಾಲಕ)
ಮೂಡಂಬೈಲು ಗೋಪಾಲಕೃಷ್ಣ ಶಾಸ್ತ್ರಿ (ಉತ್ತರೆ) 
ಪಕಳಕುಂಜ ಶ್ಯಾಮ ಭಟ್ (ಕೌರವ)
ಮಾದೆಕಟ್ಟೆ ಈಶ್ವರ ಭಟ್ (ಭಾಗವತರು).







http://www.divshare.com/download/19235986-af0

Monday, May 26, 2014

ನರೇಂದ್ರ ಮೋದಿ ಅಭಿನಂದನಾ ಗೀತೆ

ನರೇಂದ್ರ ಮೋದಿಯವರ ಪ್ರಮಾಣವಚನ ಸ್ವೀಕಾರ ಸಂದರ್ಭದಲ್ಲಿ ನಮ್ಮದೊಂದು ಅಭಿನಂದನೆ. ಮಿತ್ರರಾದ ರಂಗನಾಥರು ನನ್ನ ಕೋರಿಕೆಯ ಮೇರೆಗೆ ಯಕ್ಷಗಾನೀಯ ಶೈಲಿಯಲ್ಲಿ ಹಾಡಿದ್ದಾರೆ , ಕೇಳಿ ಆನಂದಿಸಿ. ನರೇಂದ್ರ ಮೋದಿ ಅಭಿನಂದನಾ ಗೀತೆ

ಬಂದನಿಂದು ಭಾರತಾಂಬೆ ಭಾಗ್ಯೋದಯ ಚಂದ್ರನು
ದುಷ್ಟರೊಡಲ ದರ್ಪ ಹರಿವ ಕಾಲರೂಪಿ ಭೀಮನು
ಶಿಷ್ಟ ಜನರ ಪೊರೆದು ಧರ್ಮವನ್ನು ಕಾಯ್ವ ಧೀರನು
ಬಿಂಕದಿಂದ ಮೆರೆವ ಭ್ರಷ್ಟರನ್ನು ತುಳಿವ ರುದ್ರನು
ಸರ್ವ ಜನರ ಮಾನಸದಲಿ ಮೆರೆಯುತಿರುವ ಮನುಜನು
ಭರತ ಭೂಮಿಯುನ್ನತಿಕೆಯ ಕಾಯ್ವೆನೆಂಬ ಆಣೆಯಿಟ್ಟು
ಆರು ವೈರಿಗಳನು ಮಣಿಸಿ ಸರ್ವಶ್ರೇಷ್ಠ ಪದವಿಯತ್ತ
ಈತನಿಂದು ಪಯಣಹೊರಟ ಸರ್ವ ಜನರ ಮತದಲಿ
ಒಂದೆ ಗುರಿಯು ಒಂದೆ ಕರೆಯು ಸ್ವಾರ್ಥರಹಿತ ಕಜ್ಜವು
ಸರ್ವಭಾರತೀಯರೇಳಿ ಚಿಂತೆಗಳನು ದೂರಮಾಡಿ
ಬಂದನಿಂದು ಅಂಬೆ ಮುಕುಟಮಣಿಯ ಕಾಯ್ವ ಸರ್ಪನು
ಇಳೆಯ ಸಕಲ ಕೊಳೆಯತೊಳೆದು ಶುಭ್ರವಸನವುಡಿಸುವಂಥ
ಪರಮ ಋಷಿಯ ಪೋಲ್ವ ಮಹಿಮ ಈತನನ್ನು ಹರಸಿ ಎಲ್ಲ
ಇಂದು ಧರನ ವಾಣಿವರನ ಸಿರಿಯರಸನ ಕರುಣವಿರಲಿ
ಮಾತೆ ಶಾಂಭವಿ ಕಾಯಲಿವನ ಸರ್ವ ಪ್ರಿಯ ನರೇಂದ್ರನ...

ಲನಾಭಟ್ಟ-೨೬-೦೫-೨೦೧೪

Thursday, April 10, 2014

ತೆಂಕುತಿಟ್ಟು ಯಕ್ಷಗಾನದಲ್ಲಿ ನಡೆಯುತ್ತಿರುವ ಬದಲಾವಣೆಗಳ ಬಗ್ಗೆ ಒಂದು ಅನಿಸಿಕೆ !


ಯಕ್ಷಗಾನ ಮೂಲತಃ ಜನಪದ ಕಲೆಯೇ ಆಗಿದ್ದರೂ ಸಾಗುತ್ತಾ ಸಾಗುತ್ತಾ ಕಾಲ ಕಳೆದಂತೆ ಹಲವಾರು
ಬೆಳವಣಿಗೆಗಳು ಮತ್ತು ಬದಲಾವಣೆಗಳು ನಡೆದು ಆವಿಷ್ಕಾರಗಳು ಉಂಟಾಗಿವೆ. ಇತ್ತೀಚೆಗೆ ಯಕ್ಷಗಾನಕ್ಕೆ ಶಾಸ್ತ್ರೀಯ ಕಲೆಯ ಸ್ಥಾನಮಾನ ನೀಡಬೇಕೆಂದು ಹಲವಾರು ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ ಎನ್ನುವುದು ನನಗೆ ತಿಳಿದ ವಿಚಾರ. ಯಕ್ಷಗಾನದಲ್ಲಿ ಮೇಲ್ನೋಟಕ್ಕೆ ಕಾಣುವಂತಹ ಹಲವಾರು ಅಂಶಗಳನ್ನು ನಾವು ಗಮನಿಸಿದಾಗ ಯಕ್ಷಗಾನಕ್ಕೆ ಒಂದು ಅನಿಶ್ಚಿತವಾದಂತಹ ಚೌಕಟ್ಟಂತೂ ಖಂಡಿತಾ ಇದೆ ಎಂಬುದನ್ನು ತಿಳಿಯಬಹುದು, ಯಾಕೆಂದರೆ ಯಕ್ಷಗಾನೀಯ ಮತ್ತು ನಾಟಕೀಯ ಎನ್ನುವಂತಹಾ ವಿಭಾಗ ಮಾಡಲು ಸಾಧ್ಯವಿದ್ದಲ್ಲಿ, ಅದು ಯಕ್ಷಗಾನದ್ದಲ್ಲ ಎನ್ನುವಾಗ ಯಕ್ಷಗಾನದ್ದು ಇನ್ನೊಂದಿದೆ ಎಂಬ ಅರ್ಥವಲ್ಲವೇ ?. ಹಾಗಿದ್ದಲಿ ಅದು ಹೇಗೆ ಎಂಬುದನ್ನು ಬಲ್ಲವರಿಂದ ತಿಳಿದು ಹೀಗಿದ್ದಿರಬಹುದು ಎಂಬ ಊಹೆಯನ್ನಂತೂ ಮಾಡಬಹುದು. ರಾಜವೇಷವನ್ನೇ ನಾವು ಮಾದರಿಯನ್ನಾಗಿ ಇಟ್ಟುಕೊಂಡೆವು ಎಂದಾದಲ್ಲಿ ಆ ವೇಷದ ಆಯವನ್ನು ಗಮನಿಸಿದಾಗ ಯಕ್ಷಗಾನೀಯವಾದ ವೇಷ ಹೀಗಿರಬೇಕು ಎಂಬಂತೆ ಊಹಿಸಬಹುದು. ಇತರ ವೇಷಗಳನ್ನು ಅದೇ ವೇಷದ ಮಾದರಿಯಲ್ಲಿ ಸಿದ್ಧಪಡಿಸಬಹುದು, ಇತರ ವೇಷಗಳ ಸ್ವರೂಪವನ್ನು ಊಹಿಸುವಲ್ಲಿ ಈ ಮಾದರಿ ಸಹಾಯಕವಾದೀತು. ವೇಷದ ಮುಖವರ್ಣಿಕೆ, ಆಭರಣ, ದಗಲೆಗಳು ಇತ್ಯಾದಿಗಳ ವಿವರವನ್ನು ಪಕ್ಕಕ್ಕಿಡೋಣ. ಪೂರ್ವರಂಗ ಯಕ್ಷಗಾನದ ಪಾಠಶಾಲೆ ಎನ್ನುವುದನ್ನು ಸರ್ವರೂ ಅಂಗೀಕರಿಸತಕ್ಕಂತಹಾ ವಿಚಾರ ಎಂದು ನಾನು ಭಾವಿಸುತ್ತೇನೆ. ಆದ್ದರಿಂದ ಯಕ್ಷಗಾನದ ಚೌಕಟ್ಟನ್ನು ನಿರ್ಮಿಸುವುದು ಹೇಗೆ ಎಂಬ ಪ್ರಶ್ನೆಗೆ ಪೂರ್ವರಂಗವೇ ಉತ್ತರ ಕೊಡಬಲ್ಲದು ಅನ್ನಿಸುತ್ತದೆ.
ಪೂರ್ವರಂಗದಲ್ಲಿ ನಾನಾ ವೇಶಗಳ ಮಾದರಿಗಳು ಪ್ರಸ್ತುತವಾಗುವುದನ್ನು ಗಮನಿಸಬಹುದು. ಕ್ಲಾವಿದನೋರ್ವ ಕೋಡಂಗಿ ಪಾತ್ರದಿಂದ ತೊಡಗಿ ಬಣ್ಣದ ವೇಶದವರೆಗೆ ನಾನಾ ಹಂತಗಳಲ್ಲಿ ಬೆಳೆಯುತ್ತಾನೆ. ಹಿಮ್ಮೇಳ ವಾದಕರಿಗೂ ಸಹ ಪೂರ್ವರಂಗವನ್ನೇ ಮಾದರಿಯನ್ನಾಗಿಸಿಕೊಂಡು ಚೌಕಟ್ಟನ್ನು ನಿರ್ಮಿಸಬಹುದು, ನಾನು ಉಲ್ಲೇಖಿಸುವ ಚೌಕಟ್ಟು ಎಂದರೆ ಯಕ್ಷಗಾನವನ್ನು ಯಕ್ಷಗಾನವೇ ಆಗಿ ಉಳಿಸಲು ಮಾಡಬೇಕಾದಂತಹ ಪ್ರಯತ್ನ ಎಂದರ್ಥ. ಇನ್ನು ಕೆಲವೊಮ್ಮೆ ರಂಗದಲ್ಲಿ ನಡೆಯುವ ಪ್ರಕ್ರಿಯೆಗಳು ಪ್ರೇಕ್ಷಕನಿಗೆ ಬೇಸರವನ್ನು ತರಿಸಿದಲ್ಲಿ ಕಥೆಯಲ್ಲಿ ಪ್ರೇಕ್ಷಕನ ಮನಸ್ಸನ್ನು ಹಿದಿದಿಟ್ಟುಕೊಳ್ಳುವಲ್ಲಿ ವಿಫಲವಾದಾಗ ಆ ಸಂಗತಿಗಳನ್ನು ವಿಮರ್ಶಿಸಿ ಸರಿಪಡಿಸಿಕೊಳ್ಳದಿದ್ದಲ್ಲಿ ಆ ಸಂಗತಿಗಳು ಮುಂದುವರಿದಲ್ಲಿ ರಂಗಭೂಮಿಗೆ(ಯಕ್ಷಗಾನದ) ಉಂಟಾಗಬಹುದಾದ ಹಿನ್ನಡೆಗಳ ಬಗ್ಗೆ ಕಲಾವಿದ ಯೋಚಿಸಬೇಕಾಗುತ್ತದೆ.

ಈ ಸಂದರ್ಭದಲ್ಲಿ ಇತ್ತೀಚೆಗೆ ನಾನು ನೋಡಿದ ಪ್ರಸಂಗದ ಬಳಿಕ ಮನಸ್ಸಿನಲ್ಲಿ ಮೂಡಿದಕೆಲವು ಸಂಶಯಗಳನ್ನು ಉಲ್ಲೇಖಿಸಬಯಸುತ್ತೇನೆ
೧. ಯಕ್ಷಗಾನ ಅನೇಕ ಪದ್ಯಗಳು ಕೇವಲ ಕೆಲವು ಒಂದೆರಡು ಸಾಲಿನ ಪದ್ಯಗಳಾಗಿರುತ್ತವೆ ಅವುಗಳನ್ನು ಎರಡಕ್ಕಿಂತ ಹೆಚ್ಚು ಬಾರಿ ಪುನರಾವರ್ತಿಸಬೇಕಾದ ಅವಶ್ಯಕತೆ ಇದೆಯೇ ?
2. ತೆಂಕುತಿಟ್ಟಿ ಗೆ ಬಡಗುತಿಟ್ಟಿನಿಂದ ಹರಿದುಬಂದಿರುವ ಚಾಲೂ ಕುಣಿತದ ವಿಪರೀತ ಪ್ರಯೋಗ ಯಾಕೋ ತೀರಾ ಅತಿಯಾಗಿಯೇ ಬಳಕೆಯಾಗುತ್ತಿದೆ ಅನ್ನಿಸಿತು, ಒಂದು ಸರಳ ಪದ್ಯವನ್ನು ೧೫ ನಿಮಿಷಗಳ ವರೆಗೂ ನರ್ತಿಸುವಂತಹಾ ಅವಶ್ಯಕತೆ ಇದೆಯೇ ? ಯಕ್ಷಗಾನದಲ್ಲಿ ಕೇವಲ ನೃತ್ಯಮಾತ್ರ ಮಾಧ್ಯಮವಲ್ಲ ಮಾತುಗಾರಿಕೆಯೂ ಭಾವಪ್ರಕಟಣೆಗೆ,ಕಥಾಸಂವಹನಕ್ಕೆ ಒಂದು ಪ್ರಧಾನ ಮಾಧ್ಯಮವಾಗಿ ಬಳಕೆಯಾಗುತ್ತದೆಯಾದ್ದರಿಂದ, ಮಾತುಗಾರಿಕೆಯನ್ನು ತೀರಾ ಕಡೆಗಣಿಸಿ ಕೇವಲ ನೃತ್ಯಕ್ಕೇ ಪ್ರಾಧಾನ್ಯತೆ ಕೊಡುವಂತಹಾ ಕ್ರಮ ಎಷ್ಟರಮಟ್ಟಿಗೆ ಸರಿ ಮತ್ತು ಸ್ವೀಕಾರಾರ್ಹ ? ತೆಂಕುತಿಟ್ಟಿನ ಯಕ್ಷಗಾನದಲ್ಲಿ ನನಗೆ ತಿಳಿದಂತೆ ನೃತ್ಯಕ್ರಮಗಳು ಅಷ್ಟೇನೂ ವ್ಯಾಪಕವಾಗಿ ಬಿನ್ನವಾಗಿಲ್ಲ ಮತ್ತು ನಿಖರವಾಗಿ ಗುರುತಿಸಲ್ಪಡುವಂತಹ ವೈವಿಧ್ಯತೆಗಳಿಲ್ಲ. ಕೆಲವು ಮೂಲ ಹೆಜ್ಜೆಗಳನ್ನೇ ಎಲ್ಲಾ ತಾಳಗಳಿಗೆ ಅಳವಡಿಸಿ ನರ್ತಿಸಲಾಗುತ್ತದೆ. ಪದ್ಯಾಭಿನಯದ ಜತೆಗೆ ನರ್ತನ ಮಿಳಿತವಾದಾಗ ಆ ಸಂದರ್ಭದ ಭಾವ ಪ್ರಕಟೀಕರಣ ಮತ್ತು ಕಥಾ ಪ್ರಸಾರವೇ ಬಹುಮುಖ್ಯವಾಗುತ್ತದೆ ಮತ್ತು ಮನರಂಜನೆ ಮತ್ತಿನ ಸ್ಥಾನದಲ್ಲಿ ನಿಲ್ಲುತ್ತದೆ, ನೃತ್ಯದ ಸೀಮಿತ ವ್ಯಾಪ್ತಿ ಕೆಲವೊಮ್ಮೆ ನಮ್ಮ ಗಮನಕ್ಕೆ ಬಂದರೂ ಈ ಕೊರತೆಯನ್ನು ಉಳಿದೆರಡು ಅಂಶಗಳು ಸರಿದೂಗಿಸುತ್ತದೆ. ನೃತ್ಯವನ್ನೇ ಪ್ರಧಾನವಾಗಿಸಿ ಪರಿಧಿಯನ್ನು ಮೀರಿ ನೃತ್ಯದ ಪುನರಾವರ್ತನೆ ನಡೆದಾಗ ಪ್ರೇಕ್ಷಕನ ಸಹನೆಯೂ ಕೆಡಲಾರದೇ ? ನೃತ್ಯಕ್ಕೂ, ಪದ್ಯಕ್ಕೂ, ಕಥೆಗೂ ಸಂಬಂಧವೇ ಕಡಿದು ಹೋಗಿ ಕಥೆಯ ಚಲನೆಗೆ ಭಂಗವುಂಟಾಗುವುದಿಲ್ಲವೇ. ಸಾಮಾನ್ಯ ಪ್ರೇಕ್ಷಕನಾದ ನನ್ನಿಂದಲೇ ಇಂತಹಾ ಯೋಚನೆಗಳು ಹರಿದು ಬರುತ್ತಿವೆ ಎಂದಾದರೆ ಬಹುಷಹ ಕಲಾವಿದರು ಈ ನಿಟ್ಟಿನಲ್ಲಿ ತಮ್ಮನ್ನು ತಾವು ಒರೆಗೆ ಹಚ್ಚಿಕೊಳ್ಳುವುದು ಉಚಿತವಲ್ಲವೇ ?. ಬಡಗುತಿಟ್ಟಿನಿಂದ ತೆಂಕುತಿಟ್ಟಿಗೆ ಬಂದಿರುವ ಪಾತ್ರಧಾರಿಗಳೂ ತೆಂಕಿನ ಸೂಕ್ಷ್ಮಗಳನ್ನು ಅರಿತುಕೊಂಡು ಈ ನಿಟ್ಟಿನಲ್ಲಿ ಯೋಚಿಸಬೇಕೆನಿಸುತ್ತದೆ.
3. ಇನ್ನು ಸ್ತ್ರೀವೇಶಗಳ ಸೌಮ್ಯ ಪದ್ಯಗಳಿಗೂ ಸಹ ಚೆಂಡೆ ವಾದನ ಬೇಕೆ ? ಮದ್ದಳೆಯ ಸೂಕ್ಷ್ಮವಾದ ನುಡಿತಗಳನ್ನು ಚೆಂಡೆಯ ಜತೆಗೆ ಬಾರಿಸುವಾಗ ಕೇಳುವುದಿಲ್ಲ ಆದ್ದರಿಂದ ಚೆಂಡೆಯ ಜತೆ ಮದ್ದಲೆಯನ್ನು ಒತ್ತುವಾದ್ಯವಾಗಿ ಬಳಸಲಾಗುತ್ತದೆ,ಚೆಂಡೆಯ ಜತೆಗೆ ಕೇವಲ ಇಡಿ ಪೆಟ್ಟುಗಳನ್ನು ಮಾತ್ರ ಬಾರಿಸುವ ಕ್ರಮ. ಚೆಂಡೆ ವಾದಕರೂ ಮದ್ದಳೆ ವಾದಕರೂ ಪರಸ್ಪರ ಹೊಂದಾಣಿಕೆಯಿಂದ ಏಕಮನಸ್ಕರಾದಾಗ ಹೊಮ್ಮಬಹುದಾದ ಪ್ರದರ್ಶನ ಅತ್ಯುತ್ಕೃಷ್ಟವಾಗಿರುತ್ತದೆ. ಭಾಗವತರ ಪದ್ಯವನ್ನು ಮತ್ತಷ್ಟು ಅಲಂಕರಿಸಬೇಕಾದದ್ದು ಚೆಂಡೆ ಮದ್ದಳೆ ವಾದಕರ ಧರ್ಮ ಮತ್ತು ಅದರಿಂದಾಗಿ ಪ್ರದರ್ಶನಕ್ಕೆ ಮತ್ತಷ್ಟು ಕಳೆ ಕಟ್ಟುತ್ತದೆ. ಹಳೆಯ ಧ್ವನಿಸುರುಳಿಗಳನ್ನು ಆಲಿಸಿದಾಗ ಈ ಬಗ್ಗೆ ಪ್ರಮಾಣಗಳು ಗೋಚರಿಸುತ್ತವೆ, ಕೆಲವೊಮ್ಮೆ ಚೆಂಡೆಯ ಇರುವಿಕೆಯೇ ನಮಗೆ ಗೊತ್ತಾಗದಂತಿರುತ್ತದೆ ಕೇವಲ ಬಿಡಿತ ಮುಕ್ತಾಯಗಳ ಸಂದರ್ಭದಲ್ಲಿ ಭೋರ್ಗರೆದು ಧುಮ್ಮಿಕ್ಕುವ  ಜಲಪಾತದ ಗಂಭೀರತೆಯಂತೆ ಚೆಂಡೆಯ ನಾದ ಮೆರೆಯುತ್ತದೆ. ಮೇಳದ ಮದ್ದಳೆವಾದಕನಿಗೂ, ಮದ್ದಳೆಯ ನಾದವನ್ನು ಆಲಿಸಲು ಕುತೂಹಲಿಗರಾಗಿರುವ ಬೆರಳೆಣಿಕೆಯ ಪ್ರೇಕ್ಷಕರ ಮನತಣಿಯುವುದಕ್ಕೋಸ್ಕರವಾದರೂ ಸ್ತ್ರೀಪಾತ್ರಗಳ ಪದ್ಯಕ್ಕೆ, ಕರುಣಾರಸದ ಪದ್ಯಗಳಿಗೆ ಮದ್ದಳೆ ಮಾತ್ರ ಬಾರಿಸುವತ್ತ ಗಮನ ಹರಿಸಬೇಕು.

4. ಇನ್ನು ನಾಟಕೀಯ ವೇಶಗಳ ಬಗ್ಗೆ ಹಲವಾರು ವಿಚಾರಗೋಷ್ಟಿಗಳು ಕಮ್ಮಟಗಳು ನಡೆದಿವೆ. ಕಲಾವಿದರು ನಾಟಕೀಯ ವೇಶಗಳನ್ನು ಸಾಧ್ಯವಾದಷ್ಟು ಕಡಿಮೆಗೊಳಿಸಿದಲ್ಲಿ ಯಕ್ಷಗಾನದ ಸ್ವರೂಪ ಉಳಿದುಕೊಳ್ಳಬಹುದೇನೋ?

ಯಕ್ಷಗಾನಕ್ಕೆ ಬೇಕಾಗಿರುವುದು ಯಕ್ಷಗಾನದ ಚೌಕಟ್ಟಿನಲ್ಲಿದ್ದುಕೊಂಡು ಸೃಜನಶೀಲತೆ. ಒಂದು ಪಾತ್ರವನ್ನು ಹಲವು ರೀತಿಯಲ್ಲಿ ಪ್ರಸ್ತುತ ಪಡಿಸುವತ್ತ ಕಲಾವಿದರು ಗಮನಹರಿಸಬೇಕು. ಆ ನಿಟ್ಟಿನಲ್ಲಿ ಹಿರಿಯರ ಆಶೀರ್ವಾದ, ಮಾರ್ಗದರ್ಶನಗಳು ಸದಾ ಅಗತ್ಯ. ಸೃಜನಶೀಲತೆ ಸಾಧ್ಯವಿಲ್ಲವಾದಲ್ಲಿ ಕಲಾವಿದ ರಂಗದಲ್ಲಿ ಸಮಯ ವಿನಿಯೋಗ ಮಾಡದೇ ಕಥೆಯನ್ನು ಮುಂದುವರಿಸುವತ್ತ ಗಮನ ಹರಿಸಿದರೂ ಪ್ರದರ್ಶನ ಯಶಸ್ವಿಯಾಗುವುದರಲ್ಲಿ ಸಂದೇಹವಿಲ್ಲ. ಇದಂತೂ ಖಂಡಿತಾ ಸಾಧ್ಯವಿದೆ, ಕಲಾವಿದ ಪಾತ್ರವನ್ನು ಮೆರೆಸಬೇಕೇ ಹೊರತು ತನ್ನನ್ನು ತಾನು ಮೆರೆಸಬಾರದು , ಪಾತ್ರ ಮೆರೆದರೆ ಕಲಾವಿದನೇ ಮೆರೆದಂತೆ ಮತ್ತು ಅಂತಹ ಹಲವಾರು ಕಲಾವಿದರು ಶಾಶ್ವತವಾಗಿ ಜನಮಾನಸದಲ್ಲಿ ನೆಲೆಯಾಗಿಲ್ಲವೇ ? ಶಾಲಾ ವಾರ್ಷಿಕೋತ್ಸವಕ್ಕೆಂದು ಯಕ್ಷಗಾನದ ಬಗ್ಗೆ ಆಗಷ್ಟೇ ಅರಿತುಕೊಳ್ಳುತ್ತಿರುವ ಪುಟಾಣಿಗಳೂ ಕೆಲವೊಮ್ಮೆ ಅದ್ಭುತವಾಗಿ ಪ್ರದರ್ಶನಗಳನ್ನು ಕೊಡುವುದನ್ನು ನಾವು ಗಮನಿಸಬಹುದು. ಕಂಠಸ್ಥಮಾಡಿ ಒಪ್ಪಿಸುವ ಸಂಭಾಷಣೆಗಳೇ ಆದರೂ ಕಲಾವಿದ ಪಾತ್ರವಾಗಿ ಮಾತನಾಡಿದರೆ, ಸಂಭಾಷಣೆಯನ್ನು ಸೀಮಿತವಾಗಿರಿಸಿ ಪರಿಣಾಮಕಾರಿಯಾಗಿ ಉಪಯೋಗಿಸಿದಲ್ಲಿ ಪ್ರೇಕ್ಷಕನ ಮನಸ್ಸು ಕಥೆಯಲ್ಲಿ ನೆಡುವುದರಲ್ಲಿ ಸಂಶಯವಿಲ್ಲ. 

Video: Madhusoodana Alewooraya
ಬಲಿಪ ಭಾಗವತರ ಮಾತುಗಳನ್ನು ಕೇಳಿದಲ್ಲಿ ನಾನು ಹೆಸರಿಸಿದ ಅಂಶಗಳಿಗೆ ಸಾಮೀಪ್ಯತೆಯನ್ನು ಕಾಣಬಹುದು...
ಯಕ್ಷಗಾನಕ್ಕೆ ಬೇಕಾಗಿರುವುದು ಸನ್ನಿವೇಶ ನಿರ್ಮಾಣದ ಸೂಕ್ಷ್ಮಗಳ ತಿಳುವಳಿಗೆ ಮತ್ತು ಅಗಾಧವಾದ ಕಲ್ಪನಾ ಸಾಮರ್ಥ್ಯ. ಯಕ್ಷಗಾನ ಇತರ ಕಲೆಗಳ ಮಟ್ಟಕ್ಕೆ ಬೆಳೆದು ನಿಲ್ಲಲಿ ಎನ್ನುವ ಹಾರೈಕೆಯೊಂದಿಗೆ ಈ ಬರಹ, ಇದರಿಂದಾಗಿ ಯಾರ ಮನಸಿಗಾದರೂ ನೋವಾದಲ್ಲಿ ಕ್ಷಮೆಯಿರಲಿ. ಇದು ನನ್ನ ವೈಯಕ್ತಿಕ ಅಭಿಪ್ರಾಯ ಆದ್ದರಿಂದ ಇದನ್ನು ಒಪ್ಪುವ , ಬಿಡುವ ನಿರ್ಧಾರ ಓದುಗನಿಗೆ ಸೇರಿದ್ದು.

Saturday, January 25, 2014

ವೈರ ಹರಿದು...

 

ಬದ್ಧ ವೈರವು ಹರಿದು ಸಿದ್ಧಿಸಿದೆ ಗೆಳೆತನವು,
ಬೆಚ್ಚನೆಯ ಆಸನವ ಏರಿ ಕುಳಿತಿರುವೆ,
ನಾವು ಮಾನವರಲ್ಲ, ದ್ವೇಷ ರೋಷಗಳಿಲ್ಲ,
ಪ್ರೀತಿ ವಿಶ್ವಾಸದಲಿ ಬಾಳುವೆವು ನೋಡು ಕೂಡಿ....
 

Nov 2014
 

ನಿಮ್ಮ ಅಭಿಪ್ರಾಯ