Sunday, April 10, 2016

ಕರ್ಣ

ಹೀಗೇ ದೊರಕಿದ ಪ್ರೇರಣೆಯಿಂದ ರಚಿಸಿದ ಭಾಮಿನಿಗಳೆರಡು.

ಭಾಮಿನಿ
ಇತ್ತ ಮದಗಜ ಸಿಂಹ ಹತಿಯೊಳು|
ತತ್ತರಿಸಿ ಕೆಡೆವಂತೆ ಬಿದ್ದನು|
ಬಿತ್ತರಿಪುದೇನ್ ಕರ್ಣ ರಣದಲಿ ಪಾರ್ಥನಸ್ತ್ರದಲಿ ||
ಮತ್ತೆ ಸುಳಿದವು ತನ್ನ ಜೀವದ|
ಸುತ್ತ ಸುತ್ತಿದ ಹಲವು ಭಾವಗ
ಳತ್ತಲೀಂಟುತ ಕಮಲಮಿತ್ರನ  ತನುಜ ನುಸಿರುಗ|ಳ||

ಮದಗಜವೊಂದು ಸಿಂಹದ ಹತಿಯಿಂದ ಮೂರ್ಛೆಗೊಂಡು ಧರೆಗುರುಳುವಂತೆ, ಅರ್ಜುನನ ಅಸ್ತ್ರಗಳ ಪ್ರಭಾವದಿಂದ ಕರ್ಣ ಧರೆಗುರುಳಿದ್ದಾನೆ. ತನ್ನ ಮರಣ ಸನ್ನಿಹಿತವಾಗುತ್ತಿದೆಯೆಂಬ ಅರಿವಾತನಿಗಾಗತೊಡಗುತ್ತದೆ, ಅವನ ಜೀವನದಲ್ಲಿ ನಡೆದಂತಹ ಘಟನಾವಳಿಗಳ ನೆನಪುಗಳೂ ಸಹಾ ಅರ್ಜುನನ ಅಸ್ತ್ರಗಳಂತೆಯೇ ಕಮಲಮಿತ್ರ ಸೂರ್ಯನ ಮಗನ ಜೀವವನ್ನು ಹೀರುವುದಕ್ಕಾಗಿಯೋ ಎಂಬಂತೆ ಸುಳಿದು ಸುಳಿದು ಬರುತ್ತಾ ಇವೆ.

ತರಣಿ ತರಳನೆ ಮಡಿಲೊಳೊರಗಿರೆ|
ತರುಣಿ ಮೊಗದಲಿ ಬೆಳಕು ಬರದೈ|
ಕರುಣದಲಿ ನಿರುಕಿಸುತ ಕುಂತಿಯು ಅಳುವ ಜೀವವನು|
ತರಳ ನಿನ್ನನು ಪೊರೆವ ಭಾಗ್ಯವ |
ತರಳತನಕಿದೊ ಬಲಿಯಗೊಟ್ಟೆನು |
ಹರನೆ ಪೊರೆಯಲೆನುತ್ತ ನಡೆದಳು ನದಿಯತಟಿಗಂದು||

ಸೂರ್ಯನ ಮಗನೇ ಮಡಿಲಲ್ಲಿ ಮಲಗಿದ್ದರೂ, ಕುಂತಿಯ ಮುಖದಲ್ಲಿ ಸಂತೋಷವಿಲ್ಲ. ಇನ್ನೇನು ಮಾಡುವುದೆಂದು ಅಳುತ್ತಿರುವ ಕೂಸನ್ನು ಕರುಣೆಯಿಂದ  ನೋಡುತ್ತಾ ಮಗನೇ ನಿನ್ನನ್ನು ಲಾಲಿಸುವ ಪಾಲಿಸುವ ಭಾಗ್ಯವನ್ನು ನಾನು ಕಳಕೊಂಡಿದ್ದೇನೆ, ಮಕ್ಕಳಾಟಿಕೆಯಿಂದಾಗಿ ನಿನ್ನ ಜೀವನವನ್ನು ಬಲಿಕೊಟ್ಟಿದ್ದೇನೆ. ಇನ್ನು ನಿನ್ನನ್ನು ಆ ಹರನೇ ಕಾಯಲಿ, ಅವನೇ ಪೊರೆಯೆಲಿ ಎನ್ನುತ್ತಾ ನದಿಯ ತೀರಕ್ಕೆ ಬಂದಳು.

ನಿಮ್ಮ ಅಭಿಪ್ರಾಯ