Monday, August 29, 2011

ಗೋಮಾತೆ...

ತಾಯಂತೆ ಪೂಜಿಪರು ಉತ್ತಮರು ಧರೆಯೊಳಗೆ
ಕಡಿದು ತಿನಲೆಂತು ಮನಬರುವುದಣ್ಣಾ
ಧನ,ಧಾನ್ಯ,,ಜಲ, ಮಣ್ಣ ದೇವರೆಂದೆನ್ನುವೆವು
ಹಾಲುಣಿಸಿದವಳ ನೀ ಕೊಲುವೆ ಹೇಗಣ್ಣಾ ?


ವೇದಪಾದೆಯೊ ಇವಳು, ಹೊರುವಳೋ
ಮೂವತ್ತ ಮೂರು ಕೋಟಿ ದೇವತೆಗಳನು ?
ಗೊತ್ತಿಲ್ಲ ನಾನಿದನು, ಆದರೊಂದನು ಬಲ್ಲೆ
ಬಯಸಿಲ್ಲ ಯಾರಿಗೂ ಕೇಡನಿವಳು

ತಾ ನಡೆದ ಭೂಮಿಯನೆ ನಂದನವ ಮಾಡುವಳು
ನೋಡು ಕಣ್ಣಲಿ ಇವಳ ಮಾತೃತ್ವ ತುಂಬಿಹುದು
ಇವಳ ಮೈ ರೋಮದಲಿ ಸಂಜೀವಿನಿಯೆ ಅಡಗಿಹುದು
ಸುಮ್ಮನ್ಯಾತಕಿವಳ ನೀ ಬಲಿ ಪಡೆವೆಯಣ್ಣಾ ?

ಹುಟ್ಟಿ ಸಾಯುವ ವರೆಗು ಕಪಟವನೆ ಅರಿಯಳು
ನಿನ್ನ ಹೊಟ್ಟೆಗ ತನ್ನಮೃತವ ಸುರಿವಳು
ಕಂದನನು ಸಾಂತ್ವನ ಪಡಿಸುತ್ತ ಪೊರೆವಳು,
ಕೊನೆಗಾಲದಲಿ ಮಾರುವುದೇ ಕಿಲುಬು ಕಾಸಿಗೆ ಇವಳ..

ಬನ್ನಿರೆಲ್ಲರು ಇಂದು ಶಪಥ ಕೈಗೊಳ್ಳೋಣ
ಮಾತೆ ಇವಳನು ನಾವು ಉಳಿಸೋಣ
ಆಕೆ ಕಿವಿಗಳಿಗೆ ಕೇಳುವೊಲು ಕೂಗಿ
ರಕ್ಷಿಪೆವು ನಿನ್ನ ನಾವ್ ಎಲ್ಲ ಒಂದಾಗಿ...

1 comment:

ಅನು said...

ಗೋಮಾತೆಯ ಮೂಕವೇದನೆಗೆ ಧ್ವನಿಯನ್ನಿತ್ತ ಸುಂದರ ಕವನ.
ಹೀಗೇ ಬರೆಯುತ್ತಿರಿ.

ನಿಮ್ಮ ಅಭಿಪ್ರಾಯ