Friday, June 20, 2014

ಊಟಕ್ಕಿಲ್ಲದ ಉಪ್ಪಿನಕಾಯಿಯೂ ಉಪಯೋಗಕ್ಕಿಲ್ಲದ ರೈಲೂ ಎಷ್ಟಿದ್ದರೇನು ಪ್ರಯೋಜನ ಗೌಡರೇ ?

ಬೆಂಗಳೂರು ಮಂಗಳೂರು ರೈಲಲ್ಲಿ ಸೀಟು ಸಿಗುವುದೇ ಕಷ್ಟ, ಮಂಗಳೂರು ರೈಲು ಎಂಬುದು ಕೇವಲ ಹೆಸರಿಗೆ ಮಾತ್ರ ಎಂಬಂತಾಗಿದೆ, ಇಲ್ಲಿಂದ ಅಲ್ಲಿಗೆ ತಲುಪಲು ತೆಗೆದುಕೊಳ್ಳುವ ಸಮಯದಲ್ಲಿ ಎರಡು ಬಾರಿ ಮಂಗಳೂರಿಂದ ಬೆಂಗಳೂರಿಗೆ ಹೋಗಿ ಬರಬಹುದು. ಅರಸೀಕೆರೆಯ ಮೂಲಕ ಇರುವ ನೇರ ಮಾರ್ಗವನ್ನು ಬಿಟ್ಟು ಮೈಸೂರು ಮೂಲಕವಾಗಿ ೧೨ ಘಂಟೆ ಪ್ರಯಾಣ(ಸ) (ಪ)ಮಾಡಬೇಕು. ಇನ್ನು ಮಂಗಳೂರಿನಿಂದ ಹೊರಟರೆ ಮರುದಿನ ಕಛೇರಿ ಸಮಯಕ್ಕಂತೂ ಬೆಂಗಳೂರು ತಲುಪಲು ಸಾಧ್ಯವೇ ಇಲ್ಲ. ರೈಲು ಬೆಂಗಳೂರು ತಲುಪುವಾಗಲೇ ೯ ಘಂಟೆ ಕಳೆದಿರುತ್ತದೆ. ನಗರದ ಹೊರಪ್ರದೇಶದಲ್ಲಿ ಮನೆಯಿದ್ದರಂತೂ ಮಧ್ಯಾಹ್ನವಲ್ಲದೆ ಮನೆಗೆ ತಲುಪಲು ಸಾಧ್ಯವೇ ಇಲ್ಲ. ನಡುವಲ್ಲಿ ಹೊಟ್ಟೆ ಹಸಿವಾಯಿತೆಂದು ಹೋಟೇಲಿಗೆ ನುಗ್ಗಿ ಏನಾದರೂ ತಿಂಡಿ ತಿಂದರೆ ಅಲ್ಲಿಗೆ ಕಥೆ ಮುಗಿಯಿತೆಂದೇ ಅರ್ಥ, ಮರುದಿನವೂ ಕಛೇರಿಗೆ ರಜೆ ಹಾಕಿ ಉತ್ತಮ ವೈದ್ಯರನ್ನು(ಈ ಬೆಂಗಳೂರಿನಲ್ಲಿ ಅಸಲಿ ವೈದ್ಯರು ಯಾರೆಂದು ತಿಳಿಯುವುದೂ ದೊಡ್ಡ ಸಾಹಸವೇ ಸರಿ) ಹುಡುಕಿ ಅಲ್ಲಿ ಸರತಿ ಸಾಲಿನಲ್ಲಿ ನಿಂತು ಔಷಧೋಪಚಾರ ಪಡೆಯುವಷ್ಟರಲ್ಲಿ ಕಾಯಿಲೆ ಏನೆಂದೇ ಮರೆತು ಹೋಗಿರುತ್ತದೆ.
ಮಾನ್ಯ ಸದಾನಂದ ಗೌಡರೆ ಸ್ವಲ್ಪ ಆನಂದ ನಮಗೂ ಇರಲಿ ಸ್ವಾಮಿ ದಯವಿಟ್ಟು ಈ ಊಟಕ್ಕಿಲ್ಲದ ಉಪ್ಪಿನಕಾಯಿ ರೈಲನ್ನು ಒಂದು ಉಪಕಾರಕ್ಕೆ ಆಗುವಂತೆ ಮಾಡಿ ನೀವು ಸ್ವಲ್ಪ ದರ ಏರಿಸಿದ್ರೂ ಆಡ್ಡಿ ಇಲ್ಲ ಆದ್ರೆ ಊರಿಡೀ ನಮ್ಮನ್ನು ಸುತ್ತು ಬರುವಂತೆ ಮಾಡಿ ಮೊದಲೇ ಈ ಬೆಂಗಳೂರಿನ ರಸ್ತೆಗಳಲ್ಲಿ ಮನೆಯಿಂದ ಕಛೇರಿಗೆ ಕಛೇರಿಯಿಂದ ಮನೆಗೆ ಅಲೆದು ಅಲೆದು ಸುಸ್ತಾಗಿರುವ ನಮಗೆ ನಮ್ಮ ಊರು ಸೇರುವುದಕ್ಕೂ ಅಲೆಯುವಂತೆ ಮಾಡಬೇಡಿ, ದಯವಿಟ್ಟು ರೈಲು ನೇರವೇ ಹೋಗಲಿ ಒತ್ತಡಕ್ಕೆ ಮಣಿಯದೇ ಕಾರ್ಯ ಮಾಡಿ ಈಗ ಸಿಕ್ಕಿರುವ ಅವಕಾಶವನ್ನು ಕೈಚೆಲ್ಲಿಕೊಳ್ಳಬೇಡಿ.
ದಯವಿಟ್ಟು ಕ್ರಯ ಏರಿಸುವುದಕ್ಕೆ ಮುಂಚೆ ಈಗಿರುವ ರೈಲು ನಮಗೆ ಎಷ್ಟು ಪ್ರಯೋಜನಕಾರಿಯಾಗಿದೆ ಅಂತ ಒಮ್ಮೆ ಯೋಚಿಸಿ ನೋಡಿ. ರೈಲಿಗೂ ಬಸ್ಸಿಗೂ ಒಂದೇ ಕ್ರಯ ಆದ್ರೆ ಮತ್ತೆ ನಿಮ್ಮ ರೈಲು ಯಾರಿಗೆ ಬೇಕು ಹೇಳಿ. ಮೊದಲು ರೈಲು ಪ್ರಯೋಜನಕ್ಕೆ ಆಗುವಂತೆ ಮಾಡಿ ಮತ್ತೆ ಕ್ರಯ ಹೆಚ್ಚು ಮಾಡಿ.

ನಿಮ್ಮ ಅಭಿಪ್ರಾಯ