Saturday, September 30, 2017

ಯಕ್ಷಗಾನದ ನಂಟು ಹೆಚ್ಚಿಸಿದ ಅಜ್ಜನ ಮನೆ...

LN Bhat, [11.12.15 20:21]
ಯಕ್ಷಗಾನದ ನಂಟು ಹೆಚ್ಚಿಸಿದ ಅಜ್ಜನ ಮನೆ...
-------------------------------------
ನಾನು ಪ್ರಾಥಮಿಕ ಶಾಲೆಯಲ್ಲಿದ್ದ ಸಮಯ ಬೇಸಿಗೆ ರಜೆಯಲ್ಲಿ ನನ್ನ ಅಜ್ಜನ ಮನೆ ಅಂದರೆ ತಾಯಿಯ ತಂದೆಯ ಮನೆಗೆ ರಜೆ ಕಳೆಯುವುದಕ್ಕಾಗಿ ಹೋಗುತ್ತಿದ್ದೆ. ಬಳಪ ರಕ್ಷಿತಾರಣ್ಯದ ಅಂಚಿನಲ್ಲಿ ದಟ್ಟ ಕಾನನದ ನಡುವೆ ಹೊರಗಿನ ಪ್ರಪಂಚದ ಸಂಪರ್ಕಕ್ಕೆ ಸುಲಭವಾಗಿ ಸಿಗದಂತೆ ಮಾಡಿದ್ದ ಹೊಳೆಯನ್ನು ದಾಟಿ ಪಲ್ಲೋಡಿ ಎಂಬಲ್ಲಿಂದ ಬಸ್ಸಿನಿಂದ ಇಳಿದು ಹೋಗಬೇಕಾಗಿತ್ತು. ಬೇಸಿಗೆಯ ಸಮಯದಲ್ಲಾದರೋ ಹೊಳೆಯಲ್ಲಿ ಸೆಳೆತ ಕಡಿಮೆ ಇರುತ್ತಿದ್ದುದರಿಂದ ಹೊಳೆಯಲ್ಲಿ ಇಳಿದೇ ದಡದಿಂದ ದಾಟಬಹುದಾಗಿತ್ತು. ಮಳೆಗಾಲದ ಸಮಯಕ್ಕೇನಾದರೂ ಅಜ್ಜನ ಮನೆಗೆ ಹೋದರೆ ಆ ಹೊಳೆಯನ್ನು ದಾಟಬೇಕಾದರೆ ಹರ ಸಾಹಸ ಪಡಬೇಕಾಗುತ್ತಿತ್ತು, ಊರವರೆಲ್ಲಾ ಸೇರಿ ಪ್ರತೀ ವರ್ಷ ಅಡಿಕೆ ಮರಗಳಿಂದ ನಿರ್ಮಿಸಿದ ಸೇತುವೆಯನ್ನು(ಸಂಕ) ನಿರ್ಮಾಣ ಮಾಡುತ್ತಿದ್ದರು ಮೂರು ಅಡಕೆ ಮರಗಳನ್ನು ಒಂದರ ಪಕ್ಕ ಒಂದು ಕಟ್ಟಿ ಅದನ್ನು ಭದ್ರವಾಗಿ ಭಂದಿಸಿ ನಾವು ನಡೆದು ಹೋಗಬಹುದಾದ ನಿರ್ಮಾಣವನ್ನು ರಚಿಸುತ್ತಿದ್ದರು, ಬಹುಷ ೩೦-೪೦ ಮೀಟರ್ ಉದ್ದದ ಇಂತಹ ಸೇತುವೆಯ ಮೇಲೆ ಮಳೆಗಾಲದಲ್ಲಿ ಕೆಂಪನೆ ನೀರು ಕೆಳಗೆ ೨೦ ಅಡಿ ಕೆಳಗೆ ವೇಗವಾಗಿ ಹರಿದು ಹೋಗುತ್ತಿದ್ದರೆ ಮೇಲೆ ಸೇತುವೆಯಲ್ಲಿ ನಡೆಯುತ್ತಿದ್ದ ನನಗೆ ಬರುತ್ತಿದ್ದ ಭಾವ ಒಂದೇ "ನಾನೇನಾದರೂ ಕೆಳಗೆ ಬಿದ್ದುಬಿಟ್ಟರೆ !". ದೊಡ್ಡವರೆಷ್ಟೇ ಧೈರ್ಯ ಹೇಳಿ "ಮುಂದಕ್ಕೆ ನೋಡು ಏನೂ ಆಗುವುದಿಲ್ಲ" ಎಂದು ಆಶ್ವಾಸನೆಯನ್ನು ಕೊಟ್ಟರೂ ಕಣ್ಣಿನ ದೃಷ್ಟಿ ಮಾತ್ರ ಹರಿವ ನೀರಿನಿಂದ ಕದಲುವುದಕ್ಕೆ ಒಪ್ಪುತ್ತಲೇ ಇರಲಿಲ್ಲ. ಸಂಕ(ಸೇತುವೆ) ದಾಟದೆ ವಿಧಿಯೂ ಇರಲಿಲ್ಲ.

ಪುತ್ತೂರಿನಿಂದ ಬಹುಷ ಗಂಟೆಗೊಂದರಂತೆ ಬಸ್ಸುಗಳಿದ್ದವು ಬೆಳ್ಳಾರೆ ಅಥವಾ ಕಾಣಿಯೂರು ಮಾರ್ಗವಾಗಿ ಸಾಗುವಾಗ ಪಂಜದ ಬಳಿಕ ಸಿಗುವ ಊರದು. ಅಡಕೆ, ಬಾಳೆ, ತೆಂಗು, ಗೆಣಮೆಣಸು(Pepper),ಕೋಕೋ ಹೀಗೆ ವಾಣಿಜ್ಯ ಬೆಳೆಗಳ ನಡುವೆ ಮಾವು, ಗೇರು, ಹಲಸು ಜತೆಗೆ ಮಳೆಗಾಲದಲ್ಲಿ ತರಕಾರಿಗಳನ್ನೂ ಬೆಳೆಯುತ್ತಿದ್ದರು. ಅಜ್ಜ, ಅಜ್ಜಿ, ನಾಲ್ಕು ಜನ ಮಾವಂದಿರು, ನನ್ನ ಚಿಕ್ಕಮ್ಮ,ನನ್ನ ದೊಡ್ಡ ಮಾವನ ಹೆಂಡತಿ (ಅತ್ತೆ) ಇವರಿಗೆಲ್ಲಾ ನಾನೊಬ್ಬ ಸೆಲೆಬ್ರಿಟಿಯಂತೆ ಬಹಳ ಪ್ರೀತಿಯಿಂದ ನೋಡಿಕೊಳ್ಳುತ್ತಿದ್ದರು. ನನ್ನ ಸಣ್ಣ ಮಾವಂದಿರು ಗೋಪಾಲ ಮತ್ತು ವಿಷ್ಣು ಈರ್ವರೂ ಅವಳಿ ಸಹೋದರರು. ಅವರ ಜತೆಗೆ ಬೆಳಗ್ಗೆಯೇ ಪಕ್ಕದ ಕಾಡಿಗೆ ತೆರಳಿ ಅಲ್ಲಿಂದ ಸೊಪ್ಪು ಸವರಿ ತಂದು ದನದ ಹಟ್ಟಿ(ಕೊಟ್ಟಿಗೆ) ಗೆ ಹಾಕುವ ಸಂಭ್ರಮ. ಕಾಡಿನ ಪೊದರುಗಳಲ್ಲಿ ವಿಚಿತ್ರವಾಗಿ ಬೆಳೆದಿರುತ್ತಿದ್ದ ಬಳ್ಳಿಗಳು , ಬಾನೆತ್ತರಕ್ಕೆ ಬೆಳೆದು ಅಷ್ಟಗಲದ ಕಾಂಡದ ಮರಗಳು, ಝೀರುಂಡೆಯ ಶಬ್ದ, ನೀರಸೆಲೆಗಳಿರುವಲ್ಲಿ ಕಾಲನ್ನೇರಿ ನೆತ್ತರನ್ನು ಕುಡಿದು ದಪ್ಪಗಾಗುತ್ತಿದ್ದ ಉಂಬುಳ(ಜಿಗಣೆ)ಗಳನ್ನು ಕಾಲಿಂದ ಎಳೆದು ತೆಗೆಯುವಾಗ ಆಗುತ್ತಿದ್ದ ನೋವು ಮತ್ತೆ ಅವನ್ನೇ ಹಿಡಿದು ಮನಸೋ ಇಚ್ಛೆ ಬೈದು ದೂರ ಎಸೆಯುತ್ತಿದ್ದುದು. ಬಾಳೆ ಎಲೆಗಳನ್ನು ಕೊಯ್ಯುವುದು, ಹುಲ್ಲು ಮಾಡುವುದು, ಅಡಕೆ ಹೆಕ್ಕುವುದು, ಅಡಕೆ ಮರಗಳಿಗೆ ಔಷಧ ಸಿಂಪಡಿಸುವ ವೇಳೆಯಲ್ಲಿ ಯಂತ್ರಕ್ಕೆ ಗಾಳಿ ಹಾಕುತ್ತಿದ್ದುದು, ಕೋಕೋ, ಗೇರುಬೀಜ ಜತೆಗೆ ಯಾವುದೋ ಮರವೊಂದರ ಹೂಗಳನ್ನು ಸಂಗ್ರಹಿಸುತ್ತಿದ್ದುದು, ನೀರಿನಲ್ಲಿ ನೆನೆಯುತ್ತಾ ನೆನೆಯುತ್ತಾ ತೋಟದ ಸ್ಪಿಂಕ್ಲರ್ ಗಳನ್ನು ಬದಲಿಸಿ ಬದಲಿಸಿ ಹಾಕುವ ಮೋಜು ಎಲ್ಲವೂ ಈಗ ನೆನಪುಗಳಷ್ಟೆ. ನನ್ನ  ಸಣ್ಣ ಮಾವಂದಿರಿಬ್ಬರೂ ಒಬ್ಬರನ್ನೊಬ್ಬರು ಹಿಂಬಾಲಿಸಿದಂತೆ ಅಕಾಲದಲ್ಲಿ ಅಗಲಿದರು, ಆ ಮೇಲೆ ಅಜ್ಜನ ಮನೆಗೆ ಹೋದಾಗಲೆಲ್ಲಾ ಕಾಡಿನ ಸೌಂದರ್ಯವೆಲ್ಲಾ ಮಾಯವಾದಂತೆನಿಸಿತು. ಕಾಡಿನ ಪ್ರತೀ ಎಲೆಯೂ ಅವರ ಕೈಯ ಸ್ಪರ್ಶಕ್ಕಾಗಿ ಕಾದು ಕೂತಿತ್ತೇನೋ ಅನ್ನಿಸುತ್ತಿತ್ತು. ಇಬ್ಬರೂ ಸೇರಿ ಯಾವತ್ತೂ ಜತೆಗೇ ಕೆಲಸ ಮಾಡುವವರು. ಇಬ್ಬರೂ ಸೇರಿ ನಾಲ್ಕಾಳಿನ ಹೊರೆ ಹೊರುವವರು, ನಾಲ್ಕು ಜನರ ಕೆಲಸ ಇಬ್ಬರೇ ನಿಭಾಯಿಸುವವರು. ಇಬ್ಬರೂ ಸೇರಿ 65 ವರ್ಷಗಳ ಆಯಸ್ಸನ್ನು ಜತೆ ಸೇರಿಸಿ ಒಂದು ದಿನವೂ ಸೋಮಾರಿಗಳಂತೆ ಕೂತಿರದೇ ಕೊನೆಯವರೆಗೂ ದುಡಿದು ಅಗಲಿದರು. ಬಹಳಷ್ಟು ಕಾಲ ಅವರ ಅಗಲುವಿಕೆಯ ದುಃಖ ಎಲ್ಲರನ್ನೂ ಕಾಡಿತ್ತು. ಈಗಲೂ ಬಹುವಾಗಿ ನೆನಪಾಗುವ ಶ್ರಮಜೀವಿಗಳು ಅವರು. ಪ್ರತೀ ಸಂದರ್ಭದಲ್ಲೂ ತನ್ನ ಒಡನಾಡಿಯಂತಿದ್ದ ತಮ್ಮ ಅಗಲಿದ ಬಳಿಕ ಅಣ್ಣನಾಗಿದ್ದವನ ದುಃಖ ಯಾರಿಗಾದರೂ ಊಹಿಸುವುದು ಅಸಾಧ್ಯ. ಬಹಳ ಕಾಲ ಪ್ರತೀ ದಿನವೂ ಊಟದ ಹೊತ್ತಿಗೆ ನಾಲ್ಕು ಬಟ್ಟಲುಗಳಿಡುವ ಮನೆಯಲ್ಲಿ ಯೋಚನೆಯೇ ಇಲ್ಲದೆ ಆವತ್ತೂ ಮನೆಯ ಹೆಣ್ಮಕ್ಕಳು ನಾಲ್ಕು ಬಟ್ಟಲನ್ನಿಟ್ಟು, ಒಂದು ಬಟ್ಟಲನ್ನು ಮತ್ತೆ ಪಾತ್ರೆಯ ಕಪಾಟಿಗೆ ಹಿಂದಿರುಗಿಸುವಾಗ ಕಣ್ಣ ನೀರ ಒಂದು ಹನಿಯೂ ಆ ಬಟ್ಟಲ ಜತೆ ಕಪಾಟನ್ನು ಸೇರುತ್ತಿತ್ತು. ತನ್ನ ಮಕ್ಕಳು ತನ್ನ ಜತೆ ಊಟಕ್ಕಾಗಿ ಬರುವುದನ್ನು ಕಾಯುತ್ತಾ ಕುಳಿತಿರುತ್ತಿದ್ದ ಅಜ್ಜನಿಗೆ ಆ ಮಗನ ಹೆಸರನ್ನು ಕರೆಯದೇ ಊಟಕ್ಕೆ ಕುಳಿತು ಎಷ್ಟು ದಿನ ಅನ್ನ ರುಚಿಸಲಿಲ್ಲವೋ ದೇವರಿಗೇ ಗೊತ್ತು. ಅನ್ನದ ಜತೆಗೆ ಬೆರೆತ ಕಣ್ಣ ನೀರ ಲೆಕ್ಕ ಆ ಮನೆಯ ಬಟ್ಟಲುಗಳಿಗೇ ಗೊತ್ತು.ತೀವ್ರ ಅನಾರೋಗ್ಯ ಭಾದಿಸಿ ಎರಡೆರಡು ಬಾರಿ ಜವರಾಯನ ಮನೆಯ ಕದತಟ್ಟಿ ಅಜ್ಜ ಆಸ್ಪತ್ರೆಯಿಂದ ಮನೆಗೆ ಬಂದಿದ್ದರು, ಆದರೆ ಏನೂ ಆಗದೆ ನನ್ನೆರಡು ಮಂದಿ ಮಾವಂದಿರನ್ನೆ ಅಜ್ಜನ ಮನೆಯಿಂದ ಅವ ಕರೆಸಿಕೊಂಡಿದ್ದ. ಅಂತಹ ಅಜ್ಜನ ಮನೆಗೆ ಹೋದಾಗ ಪ್ರತೀ ಬಾರಿಯೂ ಸಂತೋಷ ಮತ್ತು ದುಃಖ ಎರಡು ಭಾವಗಳೂ ಕಾಡದೆ ಇರುವುದಿಲ್ಲ.

ಏನೇ ಇರಲಿ ಕಾಡುಮೇಡು, ತೋಟ ,ಜೇನು , ದನ ಕರು ಇವೆಲ್ಲದರ ಜತೆಗಿನ ಒಡನಾಟದ ಸುಖದ ಜತೆಯಲ್ಲಿ, ಅಲ್ಲಿದ್ದ ಮತ್ತೆರಡು ಪ್ರಮುಖ ಆಕರ್ಷಣೆಗಳೆಂದರೆ ನನ್ನ ದೊಡ್ಡಮಾವನ ಪ್ರೀತಿ ಪಾತ್ರವಾಗಿದ್ದ ಒಂದು ರೀಡಿಯೋ ಮತ್ತು ಇನ್ನೊಂದು ಟೇಪ್ ರೆಕಾರ್ಡರ್. ಪ್ರತೀ ದಿನವೂ ಸಂಜೆಯವೇಳೆಗೆ ಪ್ರಸಾರವಾಗುತ್ತಿದ್ದ ಪ್ರದೇಶ ಸಮಾಚಾರ ಮತ್ತು ಅದರ ಬಳಿಕದ ವಾರ್ತೆ ಇವೆರಡನ್ನು ಯಾವತ್ತೂ ನನ್ನ ಮಾವ ಬಿಟ್ಟದ್ದೇ ಇಲ್ಲ ಅನ್ನಿಸುತ್ತದೆ. ಪ್ರತೀ ಬುಧವಾರ ರಾತ್ರಿ ಪ್ರಸಾರವಾಗುತ್ತಿದ್ದ ತಾಳಮದ್ದಳೆಯೂ ಅಶ್ಟೇ. ಸಂಜೆ ಆರಕ್ಕೋ ಆರೂವರೆಗೋ ಸರಿಯಾಗಿ ಸ್ನಾನ ಮುಗಿಸಿ ಬಂದು ಮನೆಯ ಮೂಲೆಯ ಕಪಾಟೊಂದರಲ್ಲಿ ಮೌನವಾಗಿರುತ್ತಿದ್ದ ರೇಡಿಯೋದ ಮೌನ ಮುರಿದು ಆ ಹಳ್ಳಿಯನ್ನು ಪ್ರಪಂಚದ ಜತೆಗೆ ಬೆಸೆಯ



ುವ ಕಾರ್ಯ ಯಾವತ್ತೂ ನಡೆಯುತ್ತಿತ್ತು. ಆಗೊಮ್ಮೆ ಈಗೊಮ್ಮೆ ಬಂದು ಹೋಗಿ ತುಂಟತನ ಮೆರೆಯುತ್ತಿದ್ದ ಕರೆಂಟಿನ ನಂಟನ್ನು ಬೆಸೆಯದೆಯೂ ರೇಡಿಯೋ ನಡೆಯುತ್ತಿತ್ತು. ಮಳೆಗಾಲದಲ್ಲಿ ಆಕಾಶವೇ ಹರಿದಂತೆ ಸುರಿಯುವ ಮಳೆಯ ಹೊರತು ಪ್ರತಿದಿನವೂ ಈ ಫಿಲಿಪ್ಸ್ ರೇಡಿಯೋ ತನ್ನ ಕರ್ತವ್ಯವನ್ನು ಚಾಚೂತಪ್ಪದೆ ನಿಭಾಯಿಸುವಲ್ಲಿ ಆ ಮನೆಯ ಪ್ರತಿಯೊಬ್ಬ ವ್ಯಕ್ತಿಯ ಪ್ರಾಮಾಣಿಕತೆಯ ಜತೆ ತನ್ನನ್ನು ತಾನೂ ಸೇರಿಸಿಕೊಂಡಿತ್ತು. ಇನ್ನು ಟೇಪ್ ರೆಕಾರ್ಡರ್. ನಮ್ಮ ಮನೆಯಲ್ಲಿ ಟೇಪ್ ರೆಕಾರ್ಡರ್ ಎನ್ನುವ ವಸ್ತು ಇರಲಿಲ್ಲ ಅಂತಹದ್ದೊಂದು ಇದೆ ಎನ್ನುವ ಕಲ್ಪನೆಯೂ ನನ್ನಲ್ಲಿರಲಿಲ್ಲ. ನಾನು ಮೂರನೆಯಲ್ಲೋ ನಾಲ್ಕನೆಯಲ್ಲೋ ಇದ್ದಿರಬೇಕು ರಜೆಯಲ್ಲಿ ಅಜ್ಜನ ಮನೆಗೆ ಹೋದವನಿಗೆ ಆಶ್ಚರ್ಯವನ್ನುಂಟು ಮಾಡಿದ ವಸ್ತು ಈ ಟೇಪ್ ರೆಕಾರ್ಡರ್. ಮೊದಲಬಾರಿ ನಾನು ಕೇಳಿದ್ದ ಧ್ವನಿಸುರುಳಿಗಳು ಬಲಿಪ ಭಾಗವತರ ಕರ್ಣಭೇದನ, ಕುಂಭಕರ್ಣ ಕಾಳಗ, ಪೊಲ್ಯ ಶೆಟ್ರ ಬಪ್ಪನಾಡು ಕ್ಷೇತ್ರ ಮಹಾತ್ಮೆ, ದಿನೇಶ್ ಅಮ್ಮಣ್ಣಾಯರ ಹೆಡ್ಡಧೂಮ. ಈ ಧ್ವನಿಸುರುಳಿಗಳನ್ನು ಮತ್ತೆ ಮತ್ತೆ ಕೇಳುವುದರಲ್ಲಿ ಏನೋ ಆನಂದ ಜೀವನ ಪರ್ಯಂತ ಎಲ್ಲಿ ಕೇಳಿದರೂ ಆ ಅರ್ಥಧಾರಿಗಳು, ಭಾಗವತರು ಅವರೇ ಎನ್ನುವ ಪರಿಚಯವೂ ಈ ಮೂಲಕವೇ ಗಟ್ಟಿಯಾಯ್ತು. ಕ್ಯಾಸೆಟ್ ಕವರ್ ಗಳನ್ನು ನೋಡಿ ಓದಿಯೇ ಧ್ವನಿಯನ್ನು ಪರಿಚಯಿಸುತ್ತಾ ಬೆಳೆದೆ, ಬಲಿಪರ ಚಿತ್ರಗಳೂ ಧ್ವನಿಸುರುಳಿಗಳಲ್ಲಿದ್ದುದರಿಂದ ಬಲಿಪ ಭಾಗವತರು ಅತ್ಯಂತ ಅಪ್ಯಾಯಮಾನರೆನಿಸಿದರು. ಎಲವೊ ಪಾತಕಿ ಬರಿದೆ ಸಾಯದಿರೊಲಿದು ಪಾಂಡವರುಗಳ ಕೂಡಿಕೊ ಎನ್ನುತ್ತಾ ಬಲಿಪರ ಕಂಠದ ದನಿ ಆ ಕ್ಯಾಸೆಟ್ ನಿಂದ ಹರಿದಾಗ ಬಲಿಪರ ಪದ್ಯಕ್ಕಾದರೂ ಕೌರವ ಐದು ಗ್ರಾಮಗಳನ್ನು ಕೊಟ್ಟಾನೋ ಎನ್ನುವ ಆಶಾಭಾವ ಮೂಡುತ್ತಿತ್ತು.  ಆ ಮೇಲೆ ಎಲ್ಲಿಯಾದರೂ ನಮ್ಮೂರಿಗೆ ಕಟೀಲು ಮೇಳ ಬಂದಾಗ ಆ ಧ್ವನಿಸುರುಳಿಯಲ್ಲಿ ಕೇಳಿದ ಬಲಿಪ ಭಾಗವತರ ದನಿ ಕೇಳೀತೋ ಎಂದು ಹುಡುಕುತ್ತಿದೆ. ನಮ್ಮ ಊರಿಗೆ ನನಗೆ ನೆನಪಿರುವ ಹಾಗೆ ಒಂದು ಬಾರಿಯೂ ಬಲಿಪರು ಬರಲಿಲ್ಲ, ಭಾಗವತ,ರಾಮಾಯಣ,ಮಹಾಭಾರತದ ಕಥೆಗಳನ್ನು ಜನಮಾನಸದಲ್ಲಿ ಅಚ್ಚೊತ್ತುವಂತೆ ರಸಭಾವಗಳನ್ನು ಸಾಕ್ಷಾತ್ಕರಿಸುತ್ತಿದ್ದ ಆ ಪುಣ್ಯ ಜೀವಿಯ ಪಾದಸ್ಪರ್ಶ ಮಾಡಿಸಿಕೊಳ್ಳುವ ಯೋಗ ನನ್ನ ಊರಿನ ಮಣ್ಣಿಗೆ ಇಲ್ಲದೇ ಹೋಯ್ತು. ಇನ್ನು ಪೊಲ್ಯದವರ ಗಾನ ಸುಧೆಗೆ ತಲೆಯಾಡಿಸುತ್ತಾ ಬಪ್ಪನಾಡಿನ ಕಥೆಯನ್ನು ತಿಳಿದುಕೊಂಡದ್ದು, ಯಾವುದೇ ಪುಸ್ತಕ ಓದಿಲ್ಲ. ಯಾರೇ ಮುಸಲ್ಮಾನರು ಕಂಡರೂ ನೆನಪಾಗುತ್ತಿದ್ದವ ಬಪ್ಪಬ್ಯಾರಿಯೇ, ನಮ್ಮ ಊರಿನ ಮೀನು ಮಾರುವ ಬ್ಯಾರಿಯಲ್ಲೂ ಬಪ್ಪನೇ ಇದ್ದ, ನನ್ನ ತರಗತಿಯ ಸಹಪಾಠಿಗಳೂ ಬಪ್ಪನ ಜಾತಿಯವರೇ ಅನ್ನುವ ಹೆಮ್ಮೆ. ಕಾಲ ಕಾಲಕ್ಕೂ ಅಜ್ಜನ ಮನೆಯ ಭೇಟಿ ಯಕ್ಷಗಾನದ ಹುಚ್ಚನ್ನು ಮತ್ತಷ್ಟು ಹೆಚ್ಚಿಸುತ್ತಿತ್ತು. ಅಜ್ಜನ ಮನೆಯಲ್ಲಿ ಮಾತ್ರ ಟೇಪ್ರೆಕಾರ್ಡರ್ ಇದ್ದುದರಿಂದ ಅಲ್ಲಿ ಮಾತ್ರವೇ ಯಕ್ಷಗಾನದ ನಾದ ಬೇಕಾದಾಗ ಕೇಳಬೇಕಿತ್ತು. ಮತ್ತೆ ನನ್ನಪ್ಪನೂ ಒಂದು ಟೇಪ್ ರೆಕಾರ್ಡರ್ ಕೊಂಡು ತಂದರು, ಬಲಿಪ, ತೆಂಕಬೈಲು, ಪದ್ಯಾಣ, ಪುತ್ತಿಗೆ ಇವರ ಪರಿಚಯವೂ ಬೆಳೆಯುತ್ತಾ ಹೋಯಿತು. ಕ್ಯಾಸೆಟ್ ಗಳ ಸಂಖ್ಯೆ ಏರುತ್ತಾ ಹೋಯಿತು, ಅಪ್ಪ ಹೊಸ ಕ್ಯಾಸೆಟ್ ಕೊಂಡು ತಂದಾಗಲೆಲ್ಲ ನಾಲ್ಕಾರು ದಿನ ಆ ಕ್ಯಾಸೆಟ್ ಗಳನ್ನು ಹಾಕಿ ಕೇಳುವುದೇ ಅಭ್ಯಾಸವಾಯ್ತು. ಕ್ಯಾಸೆಟ್ ಹಾಕಿ ಪದ್ಯಗಳಿಗೆ ಕುಣಿದು ಅಭ್ಯಸಿಸುವುದು, ಇದು ಆ ತಾಳ ಇದು ಈ ತಾಳ ಎನ್ನುವುದಾಗಿ ತಾಳಗಳನ್ನು ಗುರುತಿಸಿ ಸಂತೋಷಪಡುವುದು. ಆ ಗಮ್ಮತ್ತೇ ಗಮ್ಮತ್ತು, ೧೯೮೫ ರಲ್ಲಿ ಬಿಡುಗಡೆಯಾಗಿದ್ದ ಬಲಿಪ ಭಾಗವತರ ತೆಂಕುತಿಟ್ಟು ಹಿಮ್ಮೇಳ ಎನ್ನುವ ಹಳೇ ಕ್ಯಾಸೆಟ್ ಎಷ್ಟು ಬಾರಿ ಕೇಳಿದರೂ ಮನಸ್ಸು ಹುಚ್ಚೆದ್ದು ಕುಣಿಯುವಂತಿತ್ತು, ಬಲಿಪ ಪುತ್ತಿಗೆಯವರು ಮೊದಲಬಾರಿ ಜತೆಯಾಗಿ ದ್ವಂದ್ವದಲ್ಲಿ ಕಾಣಿಸಿಕೊಂಡದ್ದು ಬಹುಷಃ ಕುಮಾರವಿಜಯದ ಕ್ಯಾಸೆಟ್ ಇರಬಹುದು, ಇವರಿಗೂ ಆ ಪದ್ಯಗಳನ್ನು ಕೇಳಿದಾಗ ಅತ್ಯಂತ ರೋಮಾಂಚನವಾಗುತ್ತದೆ. ಆ ಮೇಲೆ ನಮ್ಮ ಮನೆಗೆ ಕಂಪ್ಯೂಟರ್ ಬಂದ ಮೇಲೆ ಕೆಲವಾರು ಕ್ಯಾಸೆಟ್ ಗಳನ್ನು ಎಮ್ ಪಿ ತ್ರಿ ಮಾಡಿ ಇಟ್ಟಿದ್ದೆ, ಆ ಬಳಿಕ ವೀಡಿಯೋ ಸಿಡಿಗಳೂ ಬರಲಾರಂಭಿಸಿದವು. ಆದರೆ ಕ್ಯಾಸೆಟ್ ಯುಗದ ಸೊಗಸೇ ಬೇರೆ ಅಲ್ಲಿನ ಹಿಮ್ಮೇಳದ ನಾದಕ್ಕೆ ಏನೋ ಅದಮ್ಯ ಶಕ್ತಿಯಿದ್ದಂತೆನಿಸುತ್ತದೆ. ಈಗಿನ ಹಿಮ್ಮೇಳದಲ್ಲಿರುವ ಕೊರತೆಗಳು ಆಗಿನ ಒಂದು ಪದ್ಯ ಕೇಳಿದಾಗ ಎದ್ದು ಕಾಣುತ್ತವೆ. ಅಲ್ಲಿ ಮದ್ದಳೆ ಚೆಂಡೆ ಹರಟೆ ಎನ್ನಿಸುತ್ತಿರಲಿಲ್ಲ, ಪದ್ಯ ಯಾಕಪ್ಪಾ ಒಮ್ಮೆ ಮುಗಿಯುವುದಿಲ್ಲ ಅನ್ನಿಸುತ್ತಿರಲ್ಲ, ವೈಯಕ್ತಿಕ ಅಭಿಮಾನಗಳಿರುತ್ತಿರಲಿಲ್ಲ. ಏಕಾಮೇವಾದ್ವಿತೀಯ ಕಲಾವಿದರೇ ಎಲ್ಲರೂ, ಅವರವರ ಪ್ರತಿಭೆ ಸಾಮರ್ಥ್ಯಗಳು ವಿಭಿನ್ನವಾಗಿದ್ದವು. ಪ್ರತಿಯೊಂದು ಧ್ವನಿಸುರುಳಿಯೂ ಅನನ್ಯವೆನಿಸಿತ್ತು.

ಯಕ್ಷಗಾನಂ ಗೆಲ್ಗೆ.

No comments:

ನಿಮ್ಮ ಅಭಿಪ್ರಾಯ